ಕಲಬುರಗಿ: ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಯುವಕನೊಬ್ಬ ಬರ್ಬರವಾಗಿ ಹತ್ಯೆಯಾಗಿದ್ದಾನೆ. ವಿಕ್ಕಿ (28) (Murder Case) ಹತ್ಯೆಯಾದವನು. ಇಲ್ಲಿನ ಅಫಜಲಪುರ ತಾಲೂಕಿನ ಚೌಡಾಪುರ ಬಳಿ ವಿಕ್ಕಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾರೆ. ಮನೆಯಿಂದ ಊಟ ಮಾಡಿ ಹೋದ ಮಗ ಇನ್ನಿಲ್ಲ ಎಂಬ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಹತ್ಯೆಯಾದ ವಿಕ್ಕಿ ಕೋರಂಟಿ ತಾಂಡಾದ ತಾರಪೈಲ್ ನಿವಾಸಿ ಎಂದು ತಿಳಿದು ಬಂದಿದೆ.
ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ವಿಕ್ಕಿ, ಭಾನುವಾರ ರಾತ್ರಿ ಕೋರಂಟಿ ತಾಂಡಾದ ತಾರಪೈಲ್‌ನಿಂದ ಹೋಗಿದ್ದ. ಹೀಗೆ ಹೊರ ಹೋದವನು ಹೆಣವಾಗಿ ಪತ್ತೆಯಾಗಿದ್ದಾನೆ. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಣಗಾಪುರ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದ್ದು, ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಶೀಲ ಶಂಕಿಸಿ ಪತ್ನಿಯ ಮರ್ಮಾಂಗಕ್ಕೆ ಚೂರಿಯಿಂದ ಇರಿದ!
ಬೆಂಗಳೂರು: ಪತ್ನಿಯ ನಡತೆಯ ಬಗ್ಗೆ ಅನುಮಾನ ಪಟ್ಟಿರುವ ರೌಡಿಶೀಟರ್ ಗಂಡನೊಬ್ಬ ಪತ್ನಿಯ ಮರ್ಮಾಂಗಕ್ಕೇ ಚಾಕುವಿನಿಂದ ಇರಿದಿದ್ದಾನೆ. ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬಜಾರ್ ಸ್ಟ್ರೀಟ್‌ನಲ್ಲಿ ಭಾನುವಾರ ರಾತ್ರಿ 9.45ರ ಸುಮಾರಿಗೆ ಘಟನೆ ನಡೆದಿದೆ. ರೌಡಿಶೀಟರ್ ದಯಾನಂದ ಅಲಿಯಾಸ್ ನಂದ ಎಂಬಾತ ಪತ್ನಿ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.
ನೀಲಸಂದ್ರದ ಈ ಕೇಡಿ ದಯಾನಂದ, ಪ್ರಿಯಾಂಕ ಎಂಬಾಕೆಯನ್ನು ಮದುವೆಯಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಯಾವುದೋ ಅಪರಾಧ ಪ್ರಕರಣದಲ್ಲಿ ಜೈಲಿನಲ್ಲಿದ್ದ ಈತ ಮೂರು ದಿನದ ಹಿಂದೆಯಷ್ಟೇ ಪರಪ್ಪನ ಅಗ್ರಹಾರದಿಂದ ಹೊರಬಂದಿದ್ದ. ಈತ ಹಿಂದೆ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣದಲ್ಲಿಯೂ ಜೈಲಿಗೆ ಹೋಗಿ ಬಂದಿದ್ದ. ಅದೇ ಠಾಣೆಯಲ್ಲಿ ರೌಡಿಶೀಟ್ ಕೂಡ ಈತನ ಹೆಸರಿನಲ್ಲಿ ಓಪನ್ ಆಗಿತ್ತು. ಇಂತಹ ದಯಾನಂದ ಪದೇ ಪದೆ ಹಲ್ಲೆ ರೀತಿಯ ಕೃತ್ಯಗಳನ್ನು ಎಸಗಿ ಜೈಲಿಗೆ ಹೋಗಿ ಬರುವುದಲ್ಲದೆ, ಮನೆಯಲ್ಲಿಯೂ ಪತ್ನಿಗೆ ಹಿಂಸೆ ನೀಡುತ್ತಿದ್ದ.
ಸದಾ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಈತ ಪತ್ನಿ ಮೇಲೆ ಅನುಮಾನ ಪಟ್ಟು ತಕರಾರು ತೆಗೆಯುತ್ತಿದ್ದ. ಪತ್ನಿ ಫೋನ್‌ನಲ್ಲಿ ಮಾತಾಡುತ್ತಾಳೆ ಎಂದು ಕಿರಿಕ್ ತೆಗೆಯುತ್ತಿದ್ದ. ಪತ್ನಿ ಕೆಲಸಕ್ಕೆ ಹೋಗುತ್ತಿದ್ದ ಸ್ಥಳದಲ್ಲಿ ಬೇರೊಬ್ಬನ ಜತೆ ಅಕ್ರಮ ಸಂಬಂಧ ಇದೆ ಎಂದು ಅನುಮಾನ ಪಟ್ಟು ಜಗಳ ಮಾಡಿದ್ದ. ಭಾನುವಾರ ರಾತ್ರಿ ಕೂಡಾ ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದ ದಯಾನಂದ, ಮಲಗಿದ್ದ ಪತ್ನಿಗೆ ಏಕಾಏಕಿ ಜಗಳ ತೆಗೆದು ಅಡುಗೆ ಕೋಣೆಯಲ್ಲಿದ್ದ ಚಾಕು ತೆಗೆದುಕೊಂಡು ಬಂದು, ಮಕ್ಕಳ ಮುಂದೆಯೇ ಪತ್ನಿಯ ಹೊಟ್ಟೆ ಹಾಗೂ ಗುಪ್ತಾಂಗಕ್ಕೆ ಇರಿದಿದ್ದಾನೆ.
ಇದನ್ನೂ ಓದಿ: Honey trapped: ಹನಿಟ್ರ್ಯಾಪ್‌ನಲ್ಲಿ Money ಕಳೆದುಕೊಂಡ ಶಿವಮೊಗ್ಗದ ಅರಣ್ಯಾಧಿಕಾರಿ!
ಪತ್ನಿಗೆ ರಕ್ತಸ್ರಾವವಾಗಿ ಕಿರುಚಾಡುತ್ತಿದ್ದಂತೆ ಗಂಡ ಕಾಲ್ಕಿತ್ತಿದ್ದಾನೆ. ಸ್ಥಳೀಯರು 112ಗೆ ಕರೆ ಮಾಡಿದ್ದು, ಕೂಡಲೇ ಸ್ಥಳಕ್ಕೆ ಬಂದ ಹೊಯ್ಸಳ ಪೊಲೀಸರು ಗಾಯಾಳು ಪ್ರಿಯಾಂಕಳನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ