ಬೆಳಗಾವಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಮೊಬೈಲ್ ನಂಬರ್‌ಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಲ್ಲದೆ, ಪ್ರಾಣ ಬೆದರಿಕೆ ಒಡ್ಡಿದ್ದು, ಹಿಂಡಲಗಾ ಜೈಲಿನಲ್ಲಿರುವ ಕೊಲೆ ಅಪರಾಧಿ ಎಂಬುದು ಗೊತ್ತಾಗಿದೆ. ಈಗ ಆತನ ಡೈರಿಯನ್ನು ವಶಕ್ಕೆ ಪಡೆದುಕೊಂಡಿರುವ ಮಹಾರಾಷ್ಟ್ರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಮಹಾರಾಷ್ಟ್ರದ ಧನತೋಲಿ ಪೊಲೀಸ್ ಠಾಣೆಗೆ ನಿತಿನ್ ಗಡ್ಕರಿ ಕಚೇರಿ ಸಿಬ್ಬಂದಿ ಜಿತೇಂದ್ರ ಶರ್ಮಾ ಎಂಬುವವರು ಶನಿವಾರ ದೂರು ನೀಡಿದ್ದ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ಪೊಲೀಸರ ತಂಡ ಹಿಂಡಲಗಾ ಜೈಲಿಗೆ ಭೇಟಿ ನೀಡಿತ್ತು. ಎರಡು ದಿನಗಳ ಸತತ ಕಾರ್ಯಾಚರಣೆ, ವಿಚಾರಣೆ ಬಳಿಕ ಕೊಲೆ ಅಪರಾಧಿ ಜಯೇಶ್ ಪೂಜಾರಿ ಕರೆ ಮಾಡಿದ್ದು ತಿಳಿದುಬಂದಿದೆ.
ಅಪರಾಧಿ ಹಿನ್ನೆಲೆ ಏನು?
2008ರಲ್ಲಿ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಮತ್ತು ದರೋಡೆ ಪ್ರಕರಣದಲ್ಲಿ ಜಯೇಶ ಜೈಲು ಸೇರಿದ್ದ. 2016ರಲ್ಲಿ ಮಂಗಳೂರು ಐದನೇ ಸೆಷನ್ಸ್ ನ್ಯಾಯಾಲಯ ಜಯೇಶ್ ಪೂಜಾರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಜಯೇಶ್ ಪೂಜಾರಿ ಮೂಲತಃ ಕಡಬಾ ತಾಲೂಕು ಶಿರಾಡಿ ನಿವಾಸಿ. 2017ರಲ್ಲಿ ಈತನ ವಿರುದ್ಧ ಇದ್ದ ಗಲ್ಲು ಶಿಕ್ಷೆ ಜೀವಾವಧಿ ಶಿಕ್ಷೆಯಾಗಿ ಮಾರ್ಪಾಡಾಗಿತ್ತು.
ಇದನ್ನೂ ಓದಿ | Murder Case | ಮಾವನ ಸಂಸಾರ ಸರಿಪಡಿಸಲು ಮಾತುಕತೆಗೆ ಕರೆದ ಅಳಿಯ; ಎಣ್ಣೆ ಗಲಾಟೆಯು ಕೊಲೆಯಲ್ಲಿ ಅಂತ್ಯ
ಹಿಂಡಲಗಾ ಜೈಲಿನಲ್ಲಿದ್ದ ಕೈದಿ ಜಯೇಶ್ ಬಳಿಯಲ್ಲಿನ ಡೈರಿಯನ್ನೂ ಸಹ ಮಹಾರಾಷ್ಟ್ರ ಪೊಲೀಸರು ಜಪ್ತಿ ಮಾಡಲಾಗಿದೆ. ಜೈಲು ಅಧಿಕಾರಿಗಳ ಅನುಮತಿ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆತನಿಗೆ ಗಲ್ಲು ಶಿಕ್ಷೆ ಪ್ರಕಟವಾಗಿತ್ತು. ಜೈಲಿನಿಂದ ತಪ್ಪಿಸಿಕೊಳ್ಳಲು ಸಹ ಯತ್ನಿಸಿದ್ದ ಎಂಬುದು ಗೊತ್ತಾಗಿದೆ ಎಂದು ನಾಗ್ಪುರ ನಗರ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಫೋನ್ ಮಾಡಿ ಬೆದರಿಕೆ
“ನಾನು ದಾವೂದ್ ಗ್ಯಾಂಗ್‌ನಿಂದ ಮಾತನಾಡುತ್ತಿದ್ದೇನೆ. ‘ಗಡ್ಕರಿಗೆ ಹೇಳಿ ನೂರು ಕೋಟಿ ರೂಪಾಯಿ ನಗದು ಕಳುಹಿಸಿ. ಇಲ್ಲವಾದರೆ ಗಡ್ಕರಿ ಎಲ್ಲಿ ಸಿಗುತ್ತಾರೋ ಅಲ್ಲಿ ಬಾಂಬ್ ಸ್ಫೋಟಿಸಿ ಸಾಯಿಸುತ್ತೇವೆ. ನನಗೆ ಅವರ ಕಚೇರಿ ಗೊತ್ತು” ಎಂದು ಜಯೇಶ್ ಹಿಂದಿ ಭಾಷೆಯಲ್ಲಿ ಮಾತನಾಡಿ ಬೆದರಿಕೆ ಹಾಕಿದ್ದ. ಆಗ ಕಚೇರಿ ಸಿಬ್ಬಂದಿ ಹಣ ಎಲ್ಲಿಗೆ ಕಳುಹಿಸಬೇಕೆಂದು ವಿಚಾರಿಸಿದಾಗ ಕರ್ನಾಟಕದ ಬೆಂಗಳೂರಿಗೆ ಕಳುಹಿಸಿ ಎಂದು ಪೋನ್ ಕಟ್ ಮಾಡಿದ್ದ.
ಬಳಿಕ 11.37ಕ್ಕೆ ಮತ್ತೊಮ್ಮೆ ಕರೆ ಮಾಡಿ ಗಡ್ಕರಿಗೆ ನಾನು ಮೊಬೈಲ್ ನಂಬರ್ ಕೊಡುತ್ತೇನೆ, ಅವರಿಗೆ ಕಾಂಟ್ಯಾಕ್ಟ್ ಮಾಡಲು ಹೇಳಿ ಎಂದು ಹೇಳಿ 8139923258 ನಂಬರ್ ಅನ್ನು ಸಹ ಜಯೇಶ್ ನೀಡಿದ್ದ. ಈ ವಿಚಾರ ಪೊಲೀಸರಿಗೆ ತಿಳಿಸಿದರೆ ನಿಮ್ಮ ಕಚೇರಿಯನ್ನು ಸ್ಫೋಟಿಸುತ್ತೇವೆ ಎಂದು ಹೇಳಿ ಫೋನ್ ಕಟ್ ಮಾಡಿದ್ದ. ಮತ್ತೆ 12.29ಕ್ಕೆ ಕರೆ ಮಾಡಿದ್ದ ಜಯೇಶ್, ನನ್ನ ಮೆಸೇಜ್ ಅನ್ನು ಗಡ್ಕರಿ ಅವರಿಗೆ ಹೇಳಿದ್ದೀರಾ ಎಂದು ಪ್ರಶ್ನೆ ಮಾಡಿದ್ದ. ಆಗ ಸಾಹೇಬರು ಬ್ಯುಸಿ ಇದ್ದಾರೆ. ನೀನು ನಿನ್ನ ಹೆಸರು, ವಿಳಾಸ ತಿಳಿಸು ಎಂದು ಸಿಬ್ಬಂದಿ ಹೇಳಿದ್ದಾರೆ. ಅದಕ್ಕೆ ಜಯೇಶ್, ನೀವು ಕ್ಯಾಶ್ ಅನ್ನು ಮೊದಲು ಕರ್ನಾಟಕಕ್ಕೆ ಕಳುಹಿಸಿ, ಅಲ್ಲಿಂದ ಉಳಿದ ಮಾಹಿತಿಯನ್ನು ಹೇಳುತ್ತೇವೆ ಎಂದು ಹೇಳಿದ್ದ.
ಈ ಎಲ್ಲ ವಿವರವನ್ನು ನಾಗ್ಪುರದ ಧನತೋಲಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಐಪಿಸಿ ಸೆಕ್ಷನ್ 1860ರ ಕಲಂ 385, 387, 506/2, 507ರಡಿ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿತ್ತು.
೨೦೧೮ರಲ್ಲಿ ಅಲೋಕ್ ಕುಮಾರ್‌ಗೆ ಬೆದರಿಕೆ ಹಾಕಿದ್ದ
2018ರಲ್ಲೂ ಇದೇ ಜಯೇಶ್ ಅಂದಿನ ಉತ್ತರ ವಲಯ ಐಜಿಪಿ ಅಲೋಕ್ ಕುಮಾರ್‌ಗೆ ಜೀವ ಬೆದರಿಕೆ ಕರೆ ಮಾಡಿದ್ದ. ಹೀಗಾಗಿ ಈತನನ್ನು 2019ಕ್ಕೆ ಮೈಸೂರು ಜೈಲಿಗೆ ಸ್ಥಳಾಂತರಗೊಳಿಸಲಾಗಿತ್ತು. ಬಳಿಕ 2021ರಲ್ಲಿ ಜಯೇಶ್‌ನನ್ನು ಮರಳಿ ಬೆಳಗಾವಿ ಹಿಂಡಲಗಾ ಜೈಲಿಗೆ ಸ್ಥಳಾಂತರಗೊಳಿಸಲಾಗಿತ್ತು. ಜೈಲಿನಲ್ಲಿ ಫೋನ್ ಬಳಕೆಯಾಗುತ್ತಿದ್ದು, ಅಧಿಕಾರಿಗಳ ಬಗ್ಗೆಯೂ ಅನುಮಾನ ಮಾಡತೊಡಗಿದೆ.
ಇದನ್ನೂ ಓದಿ | Santro Ravi : ಪಿಂಪ್‌ಗಳಿಂದ ಹಣ ಮಾಡಿಕೊಳ್ಳುವ ಸಂದರ್ಭ ಬಂದರೆ ಆತ್ಮಹತ್ಯೆ ಮಾಡಿಕೊಳ್ಳುವೆ: ಆರಗ ಜ್ಞಾನೇಂದ್ರ