ಚಿತ್ರದುರ್ಗ: ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾಶರಣರನ್ನು ಬಂಧಿಸಲಾಗಿದೆ. ಶ್ರೀಗಳನ್ನು ಬಿಗಿ ಭದ್ರತೆ ಮಧ್ಯೆಯೇ ಬಂಧಿಸಲಾಗಿದ್ದು, ಸದ್ಯ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ. ಶ್ರೀಗಳ ವಿರುದ್ಧ ದೂರು ದಾಖಲಾದ ಆರು ದಿನಗಳ ಬಳಿಕ ಅವರನ್ನು ಬಂಧಿಸಲಾಗಿದೆ. ಬಂಧನದ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಮಠದ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿನಿಯರ ಮೇಲೆ ಶ್ರೀಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಪ್ರಕರಣವು ಕೆಲವು ದಿನಗಳಿಂದ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಪೋಕ್ಸೊ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾದರೂ ಬಂಧಿಸದ ಕುರಿತು ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಶ್ರೀಗಳನ್ನು ಬಂಧಿಸಲಾಗಿದೆ. ಪೋಕ್ಸೊ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾದರೂ ಮುರುಘಾ ಶ್ರೀಗಳನ್ನು ಬಂಧಿಸಬೇಕು ಎಂದು ರಾಜ್ಯದ ಹಲವೆಡೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಎದುರೂ ಪ್ರತಿಭಟನೆ ನಡೆಸಲಾಗಿತ್ತು.
ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿ ಪೋಕ್ಸೊ ಕಾಯಿದೆ ಅಡಿ ದಾಖಲಾದ ಪ್ರಕರಣದಲ್ಲಿ ಅಕ್ಕಮಹಾದೇವಿ ವಸತಿ ನಿಲಯದ ವಾರ್ಡನ್ ರಶ್ಮಿ ಅವರು ಎರಡನೇ ಆರೋಪಿಯಾಗಿದ್ದಾರೆ. ಹಾಗೆಯೇ, ಶ್ರೀಗಳ ಆಪ್ತ ಪರಮಶಿವಯ್ಯ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಶ್ರೀಗಳು ತಮ್ಮ ಬಂಧನದ ವಿರುದ್ಧ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರಾದರೂ ಕೋರ್ಟ್ ಇನ್ನೂ ಅದರ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿಲ್ಲ.
ಏನಿದು ಪ್ರಕರಣ?
ಮಠದ ಅಧೀನದಲ್ಲಿರುವ ಹೈಸ್ಕೂಲ್‌ನಲ್ಲಿ ೧೦ನೇ ತರಗತಿಯಲ್ಲಿ ಕಲಿಯುತ್ತಿರುವ, ಮಠದ್ದೇ ಹಾಸ್ಟೆಲ್‌ನಲ್ಲಿ ತಂಗಿದ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಮುರುಘಾಶರಣರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪದಲ್ಲಿ ಶ್ರೀಗಳ ವಿರುದ್ಧ ಕೇಸ್ ದಾಖಲಾದ ಪ್ರಕರಣ ಇದಾಗಿದೆ. ಕೆಲವು ದಿನಗಳ ಹಿಂದೆ ಮೈಸೂರಿನ ನಜರ್ ಬಾದ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಮುರುಘಾಶರಣರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂದು ಸಂತ್ರಸ್ತೆಯರು ಆರೋಪಿಸಿದ್ದರು.
ಮುರುಘಾಶರಣರಿಗೆ ಹಾಸ್ಟೆಲ್ ವಾರ್ಡನ್ ರಶ್ಮಿ ಮತ್ತು ಇತರ ಮೂವರು ಸಹಕರಿಸಿದ್ದಾರೆ ಎಂದು ದೂರಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಎಫ್‌ಐಆರ್ ದಾಖಲಾಗಿ ಅದು ಚಿತ್ರದುರ್ಗ ಗ್ರಾಮೀಣ ಪೊಲೀಸ್ ಠಾಣೆಗೆ ರವಾನೆಯಾಗಿತ್ತು.
ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಮುರುಘಾ ಮಠದ ಆಡಳಿತಾಧಿಕಾರಿ ಮಾಜಿ ಶಾಸಕ ಎಸ್.ಕೆ. ಬಸವರಾಜನ್‌ಗೆ ಗೇಟ್‌ಪಾಸ್!