ಶಿವಮೊಗ್ಗ: ಪೋಕ್ಸೊ ಪ್ರಕರಣದಲ್ಲಿ ಮುರುಘಾ ಶ್ರೀಗಳ ಬಂಧನವಾಗಿ ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಈಗ ಪ್ರಕರಣದ ಎರಡನೇ ಆರೋಪಿ ರಶ್ಮಿಯನ್ನು ಚಿತ್ರದುರ್ಗದಿಂದ ಶಿವಮೊಗ್ಗ ಮಹಿಳಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಶುಕ್ರವಾರ ರಾತ್ರಿ 9.30ಕ್ಕೆ ಆರೋಪಿ ರಶ್ಮಿಯನ್ನು ಶಿವಮೊಗ್ಗ ಕಾರಾಗೃಹಕ್ಕೆ ಚಿತ್ರದುರ್ಗ ಪೊಲೀಸರು ಕರೆತಂದಿದ್ದಾರೆ.
ಮುರುಘಾಶ್ರೀಗಳ ಬೆನ್ನಲ್ಲೇ ಮಠದ ಹಾಸ್ಟೆಲ್ ವಾರ್ಡನ್ ಆಗಿರುವ ರಶ್ನಿ ಅವರನ್ನು ಚಿತ್ರದುರ್ಗ ಪೊಲೀಸರು ಬಂಧಿಸಿದ್ದರು. ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಬಳಿಕ ಗುರುವಾರ ರಾತ್ರಿ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಲೈಂಗಿಕ ದೌರ್ಜನ್ಯಕ್ಕೆ ಸಹಕಾರ ನೀಡಿದ ಆರೋಪ ವಾರ್ಡನ್ ರಶ್ಮಿ ಮೇಲಿದ್ದು, ಅವರನ್ನು ೧೩ ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಚಿತ್ರದುರ್ಗದಲ್ಲಿ ಮುರುಘಾ ಶ್ರೀಗಳನ್ನು ವಿಚಾರಣೆಗಾಗಿ ತನಿಖಾಧಿಕಾರಿ ಹಾಗೂ ಡಿವೈಎಸ್‌ಪಿ ಕಚೇರಿಯಲ್ಲಿ ಶುಕ್ರವಾರ ಉಳಿಸಿಕೊಳ್ಳಲಾಗಿದೆ. ಸಂತ್ರಸ್ತೆಯರಿಂದ ಸಿಆರ್‌ಪಿಸಿ 164 ಸೆಕ್ಷನ್ ಅಡಿಯಲ್ಲಿ ಹೇಳಿಕೆ ದಾಖಲಾದ ಬೆನ್ನಲ್ಲೇ ಮುರುಘಾ ಶ್ರೀಗಳ ವಿಚಾರಣೆ ಚುರುಕು ಪಡೆದಿದೆ.
ತನಿಖಾಧಿಕಾರಿ ಅನಿಲ್ ಕುಮಾರ್ ಅವರು ಶನಿವಾರ ವಿವಿಧ ಆಯಾಮದಲ್ಲಿ ಮುರುಘಾ ಶ್ರೀಗಳನ್ನು ವಿಚಾರಣೆ ನಡೆಸಲಿದ್ದಾರೆ. ಸಂತ್ರಸ್ತ ಯುವತಿಯರ 164 ಹೇಳಿಕೆ ಹಾಗೂ ಮುರುಘಾಶ್ರೀಗಳ ಹೇಳಿಕೆಗಳನ್ನು ಪರಿಶೀಲಿಸುವ ಸಾಧ್ಯತೆ ಇದೆ. ಅಕಸ್ಮಾತ್ ಶ್ರೀಗಳ ಆರೋಗ್ಯದಲ್ಲಿ ಏನಾದರೂ ವ್ಯತ್ಯಾಸವಾದರೆ ನ್ಯಾಯಾಧೀಶರ ಅನುಮತಿ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡುವ ಸಾಧ್ಯತೆ ಇದೆ.