ಚಿತ್ರದುರ್ಗ: ಮುರುಘಾ ಮಠದ ಮುರುಘಾ ಶರಣರ ಮೇಲೆ ದಾಖಲಾಗಿರುವ ೨ನೇ ಪೋಕ್ಸೋ ಪ್ರಕರಣ ಸಂಬಂಧ ಇಬ್ಬರು ಸಂತ್ರಸ್ತ ಬಾಲಕಿಯರಿಗೆ ಶುಕ್ರವಾರ (ಅ. ೨೮) ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಅಲ್ಲದೆ, ಮುರುಘಾ ಮಠದಲ್ಲಿ ಬಾಲಕಿಯರ ಸಮ್ಮುಖದಲ್ಲಿ ಸ್ಥಳ ಮಹಜರು ಮಾಡಲಾಗಿದೆ. ಇನ್ನು ಈ ಪ್ರಕರಣದ ೬ ಮತ್ತು ೭ನೇ ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿಯು ಮುಂದೂಡಿಕೆಯಾಗಿದೆ.
ಚಿತ್ರದುರ್ಗದ ಜಿಲ್ಲಾ ನ್ಯಾಯಾಲಯಕ್ಕೆ ಮಂಗಳವಾರ (ಅ. ೨೫) ಈ ಸಂತ್ರಸ್ತ ಬಾಲಕಿಯರಿಬ್ಬರನ್ನು ಹಾಜರುಪಡಿಸಲಾಗಿತ್ತು. ಬಳಿಕ ಸ್ಥಳ ಮಹಜರಿಗಾಗಿ ಮುರುಘಾ ಮಠಕ್ಕೆ ಕರೆದೊಯ್ಯಲಾಗಿತ್ತು. ಆದರೆ, ಅಲ್ಲಿ ವಿದ್ಯಾಪೀಠದ ಕಾರ್ಯದರ್ಶಿಯವರಾದ ನಿವೃತ್ತ ನ್ಯಾ. ಎಸ್.ಬಿ. ವಸ್ತ್ರದ ಮಠದ ಅವರು ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳಿದ್ದರಿಂದ ವಾಪಸಾಗಲಾಗಿತ್ತು. ಇದೇ ವೇಳೆ ಅಲ್ಲಿನ ಮಕ್ಕಳ ರಕ್ಷಣಾ ಇಲಾಖೆ ಅಡಿಯ ಬಾಲಮಂದಿರದಲ್ಲಿ ಇರಲು ಸಂತ್ರಸ್ತ ಬಾಲಕಿಯರು ಒಪ್ಪದ ಕಾರಣ ಅವರನ್ನು ವಾಪಸ್ ಮೈಸೂರಿನ ಒಡನಾಡಿ ಸಂಸ್ಥೆಯ ಸುಪರ್ದಿಗೆ ಒಪ್ಪಿಸಲಾಗಿತ್ತು. ಶುಕ್ರವಾರ ಇವರನ್ನು ಪುನಃ ಚಿತ್ರದುರ್ಗಕ್ಕೆ ಕರೆತರಲಾಗಿದೆ. ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಸಂತ್ರಸ್ತೆಯರನ್ನು ಕರೆತಂದ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ವೈದ್ಯಾಧಿಕಾರಿ ರೂಪಶ್ರೀ ನೇತೃತ್ವದಲ್ಲಿ ಟೆಸ್ಟ್ ಪ್ರಕ್ರಿಯೆ ನಡೆದಿದೆ.
ಮುರುಘಾ ಮಠದಲ್ಲಿ ಸ್ಥಳ ಮಹಜರು
ಇದೇ ವೇಳೆ ಮುರುಘಾಮಠಕ್ಕೆ ಮಠದ ಪೂಜಾ ಕೈಂಕರ್ಯ ಉಸ್ತುವಾರಿ ಬಸವಪ್ರಭು ಶ್ರೀ ಆಗಮಿಸಿದ್ದಾರೆ. ಅವರು ಮುರುಘಾಶ್ರೀ ಕಚೇರಿ, ವಿಶ್ರಾಂತಿ ಕೊಠಡಿ ಬೀಗದ ಕೀಯನ್ನು ಪೊಲೀಸರಿಗೆ ನೀಡಿದ್ದಾರೆ. ಮುರುಘಾಶ್ರೀ ವಿರುದ್ಧದ 2ನೇ ಫೋಕ್ಸೋ ಪ್ರಕರಣ ಸಂಬಂಧ ಇಬ್ಬರು ಸಂತ್ರಸ್ತ ಬಾಲಕಿಯರು ಹಾಗೂ ಅವರ ತಾಯಿ (ಮಠದ ಅಡುಗೆ ಸಹಾಯಕಿ) ಅವರನ್ನು ಮರುಘಾ ಮಠಕ್ಕೆ ಕರೆದೊಯ್ದಿದ್ದು, ಮುರುಘಾಶ್ರೀ ಕಚೇರಿ, ವಿಶ್ರಾಂತಿ ಕೊಠಡಿಗೆ ತೆರಳಿ ಸ್ಥಳ ಮಹಜರು ಮಾಡಿದ್ದಾರೆ.
ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ನೀಲಕಂಠೇಶ್ವರ ದೇಗುಲದಲ್ಲಿ ಕೊನೆಗೂ ಮುರುಘಾಶರಣರ ಫೋಟೊ ತೆರವು
ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಸಂತ್ರಸ್ತ ಬಾಲಕಿಯರಿಬ್ಬರ ಸಮ್ಮುಖದಲ್ಲಿ ಸ್ಥಳ ಮಹಜರು ಮಾಡಿದ್ದು, ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ತನಿಖಾಧಿಕಾರಿ ಸಿಪಿಐ ಬಾಲಚಂದ್ರ ನಾಯ್ಕ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ. ಅ.13ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅ.14ಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ಪ್ರಕರಣವನ್ನು ವರ್ಗಾವಣೆ ಮಾಡಲಾಗಿತ್ತು.
ಜಾಮೀನು ಅರ್ಜಿ ಮುಂದಕ್ಕೆ
ಮುರುಘಾಶ್ರೀ ವಿರುದ್ಧ ಅ.13 ರಂದು ದಾಖಲಾಗಿರುವ 2ನೇ ಪೋಕ್ಸೋ ಪ್ರಕರಣದಲ್ಲಿ ಸಹಕಾರ ನೀಡಿದ ಆರೋಪದಲ್ಲಿ ಆರನೇ ಆರೋಪಿಯಾಗಿರುವ ಮುರುಘಾಶ್ರೀ ಸಹಾಯಕ ಮಹಾಲಿಂಗ ಹಾಗೂ ಏಳನೇ ಆರೋಪಿಯಾಗಿರುವ ಅಡುಗೆ ಭಟ್ಟ ಕರಿಬಸ್ಸಪ್ಪ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಮುಂದೂಡಲ್ಪಟ್ಟಿದೆ.
ಪ್ರಕರಣದ ವಿಚಾರಣೆ ನಡೆಸಿದ ಚಿತ್ರದುರ್ಗ ಜಿಲ್ಲಾ 2ನೇ ಅಪರ ಮತ್ತು ಸತ್ರ ನ್ಯಾಯಾಲಯವು, 6 ಮತ್ತು 7ನೇ ಆರೋಪಿಗಳಿಬ್ಬರ ಜಾಮೀನು ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 31ಕ್ಕೆ ಮುಂದೂಡಲಾಗಿದೆ.
ಮತ್ತೆ ಮೈಸೂರಿಗೆ?
ಮಂಗಳವಾರ (ಅ. ೨೫) ಚಿತ್ರದುರ್ಗಕ್ಕೆ ಬಂದಿದ್ದ ಸಂದರ್ಭದಲ್ಲಿ ಬಾಲ ಮಂದಿರದಲ್ಲಿ ವಾಸ್ತವ್ಯ ಮಾಡಲು ಸಂತ್ರಸ್ತ ಬಾಲಕಿಯರು ಒಪ್ಪಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ಪುನಃ ಮೈಸೂರಿಗೆ ಕರೆದೊಯ್ದು ಬಿಡಲಾಗಿತ್ತು. ಶುಕ್ರವಾರವೂ ಈ ಬಗ್ಗೆ ಚರ್ಚೆ ನಡೆದಿದ್ದು, ಒಂದು ವೇಳೆ ಬಾಲಕಿಯರು ಒಪ್ಪದೇ ಇದ್ದರೆ ಅವರನ್ನು ಮೈಸೂರಿಗೆ ವಾಪಸ್ ಕರೆದೊಯ್ದು ಬಿಡಲಾಗುವುದು. ಆದರೆ, ಚಿತ್ರದುರ್ಗದಲ್ಲಿರಲು ಒಪ್ಪುವ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಲಾಗಿದೆ.
ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಚಿತ್ರದುರ್ಗದ ಸಿಡಬ್ಲ್ಯೂಸಿಯಲ್ಲಿ ಇರಲೊಪ್ಪದ ಸಂತ್ರಸ್ತ ಬಾಲಕಿಯರು