ಚಿತ್ರದುರ್ಗ: ಮುರುಘಾ ಮಠದ ಮುರುಘಾ ಶರಣರ ಮೇಲೆ ಕೇಳಿಬಂದಿರುವ ಎರಡನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿನ ಸಂತ್ರಸ್ತ ಬಾಲಕಿಯರನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಬಾಲಕಿಯರ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ.
ಈಗಾಗಲೇ ಪೋಕ್ಸೋ ಕಾಯ್ದೆಯಡಿ ಬಂಧನವಾಗಿರುವ ಮುರುಘಾ ಶ್ರೀಗಳ ಮೇಲೆ ಮತ್ತೊಂದು ಅತ್ಯಾಚಾರ ಕೇಸ್ ಮೈಸೂರಿನಲ್ಲಿ ದಾಖಲಾಗಿತ್ತು. ಮಠದಲ್ಲಿ ಅಡುಗೆ ಸಹಾಯಕಿಯಾಗಿದ್ದ ಮಹಿಳೆಯೊಬ್ಬರು ತಮ್ಮ ಇಬ್ಬರು ಮಕ್ಕಳು ಸೇರಿದಂತೆ ಮತ್ತಿಬ್ಬರು ಹೆಣ್ಣು ಮಕ್ಕಳ ಮೇಲೆ ಮುರುಘಾ ಶರಣರು ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ದೂರು ನೀಡಿದ್ದರು.
ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲು
ದೂರು ನೀಡಿದ ಅಡುಗೆ ಸಹಾಯಕಿ ಹಾಗೂ ಅವರ ಮಕ್ಕಳು ಮೈಸೂರಿನಲ್ಲಿಯೇ ಇದ್ದು, ಈಗ ಅವರು ದೂರಿನಲ್ಲಿ ಉಲ್ಲೇಖಿಸಿದ ಇಬ್ಬರು ಬಾಲಕಿಯರನ್ನು ಸೋಮವಾರ ಒಂದನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರ ಎದುರು ಸಿಆರ್ಪಿಸಿ 164 ಅಡಿ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ.
ಲೈಂಗಿಕ ದೌರ್ಜನ್ಯವೇ ನಡೆದಿಲ್ಲ ಎಂದಿದ್ದ ಪೋಷಕರು
ಇನ್ನು ಸೋಮವಾರ ನ್ಯಾಯಾಲಯದ ಮುಂದೆ ಹಾಜರಾಗಿದ್ದ ಬಾಲಕಿಯರ ಪೋಷಕರು ಈಚೆಗೆ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ವಿಚಾರಣೆ ನಡೆಸುವಾಗ ತಮ್ಮ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೇ ನಡೆದಿಲ್ಲ ಎಂದು ಹೇಳಿದ್ದಾರೆನ್ನಲಾಗಿದೆ.
ಮಾಜಿ ಸಚಿವ ಏಕಾಂತಯ್ಯ ಜಿಲ್ಲಾ ಕಾರಾಗೃಹಕ್ಕೆ ಭೇಟಿ
ಪೋಕ್ಸೋ ಪ್ರಕರಣ ಹಿನ್ನೆಲೆ ಮುರುಘಾಶ್ರೀ ನ್ಯಾಯಾಂಗ ಬಂಧನದಲ್ಲಿ ಇರುವ ಕಾರಣಕ್ಕೆ ಸೋಮವಾರ ಮಾಜಿ ಸಚಿವ ಏಕಾಂತಯ್ಯ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದ್ದಾರೆ. ಈ ಹಿಂದೆ ವೀರಶೈವ ಲಿಂಗಾಯತ ಸಮಾಜದ ಸಭೆ ನಡೆಸಿದ್ದ ಏಕಾಂತಯ್ಯ ಅವರ ಈ ಭೇಟಿ ಕುತೂಹಲ ಕೆರಳಿಸಿದೆ. ಇವರು ಮುರುಘಾಶ್ರೀಗಳ ಪೀಠತ್ಯಾಗಕ್ಕೆ ಆಗ್ರಹ ವ್ಯಕ್ತಪಡಿಸಿದ್ದರು. ಆದರೆ, ತಾವು ಮುರುಘಾಶ್ರೀಗಳ ಭೇಟಿಗೆ ಬಂದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ | Murugha Sree case | ಬಸವಪ್ರಭು ಶ್ರೀಗಳಿಗೆ ಮುರುಘಾಮಠದ ಪೂಜಾ ಕೈಂಕರ್ಯ ಉಸ್ತುವಾರಿ
ಪ್ರಕರಣದ ಸಾರಾಂಶ
ಈಗಾಗಲೇ ಲೈಂಗಿಕ ದೌರ್ಜನ್ಯ ಪ್ರಕರಣವೊಂದರಲ್ಲಿ ಮುರುಘಾಶರಣರು ಜೈಲಿನಲ್ಲಿ ಇರುವ ಬೆನ್ನಲ್ಲೇ ಶುಕ್ರವಾರ (ಅ.೧೪) ಮೈಸೂರಲ್ಲಿ ಮಠದ ಅಡುಗೆ ಸಹಾಯಕಿಯೊಬ್ಬರು ತನ್ನಿಬ್ಬರು ಮಕ್ಕಳು ಸೇರಿದಂತೆ ಮತ್ತಿಬ್ಬರು ಮಕ್ಕಳ ಮೇಲೆ ಮುರುಘಾಶ್ರೀಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ದಾಖಲು ಮಾಡಿದ್ದರು. ಈ ವೇಳೆ ಪೊಲೀಸರು ಹಾಗೂ ಸಿಡಬ್ಲ್ಯೂಸಿ ಅಧಿಕಾರಿಗಳು ಆಕೆಯ ಹಾಗೂ ಒಬ್ಬಳು ಮಗಳ ಹೇಳಿಕೆಯನ್ನು ಪಡೆದುಕೊಂಡಿದ್ದರು. ನಾಲ್ಕು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ತಾಯಿ ಹೇಳಿದ್ದಾರೆ. “ಪತಿ ಇಲ್ಲದ ಕಾರಣ ತಾನು ಮಠದಲ್ಲಿ ಅಡುಗೆ ಕೆಲಸ ಮಾಡುತ್ತಿದ್ದೆ. ನನ್ನ ಮಕ್ಕಳು ಮಠದ ವಸತಿ ಶಾಲೆಯಲ್ಲಿ ಓದುತ್ತಿದ್ದರು. ನನ್ನ ಇಬ್ಬರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಮುರುಘಾ ಶರಣರು ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಪ್ರಭಾವ ಹೊಂದಿರುವ ಕಾರಣ ತಡವಾಗಿ ದೂರು ನೀಡುತ್ತಿದ್ದೇನೆ” ಎಂದೂ ಸಹ ಸಂತ್ರಸ್ತ ಬಾಲಕಿಯರಿಬ್ಬರ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದರು.
ಈ ಸಂಬಂಧ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಒಟ್ಟು 7 ಮಂದಿ ಮೇಲೆ ಕೇಸ್ ಹಾಕಲಾಗಿತ್ತು. ಸ್ವಾಮೀಜಿಯವರ ಸಹಾಯಕರಾದ ಮಹಾಲಿಂಗ, ಅಡುಗೆ ಸಹಾಯಕ ಕರಿಯಪ್ಪ ಎಂಬ ಇಬ್ಬರ ಮೇಲೆ ಹೊಸದಾಗಿ ಎಫ್ಐಆರ್ ದಾಖಲಾದಂತಾಗಿತ್ತು.
ಶಿವಮೂರ್ತಿ ಮುರುಘಾ ಶರಣರು ಮೊದಲ ಆರೋಪಿಯಾಗಿದ್ದು, ಉಳಿದವರಾದ ಲೇಡಿ ಹಾಸ್ಟೆಲ್ ವಾರ್ಡನ್, ಮಠದ ಉತ್ತರಾಧಿಕಾರಿ, ಮಠದ ಕಾರ್ಯದರ್ಶಿ ಪರಮಶಿವಯ್ಯ, ವಕೀಲ ಗಂಗಾಧರಯ್ಯ, ಮುರುಘಾಶ್ರೀ ಸಹಾಯಕ ಮಹಾಲಿಂಗ, ಮುರುಘಾಶ್ರೀ ಅಡುಗೆಭಟ್ಟ ಕರಿಬಸಪ್ಪ ವಿರುದ್ಧ ಕ್ರಮವಾಗಿ ಕೇಸ್ ದಾಖಲಾಗಿದೆ.
ಏನಿದು ಮೊದಲ ಲೈಂಗಿಕ ಕಿರುಕುಳ ಪ್ರಕರಣ?
ಚಿತ್ರದುರ್ಗ ಜಿಲ್ಲೆಯ ಮುರುಘಾ ಮಠದ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಸ್ವಾಮೀಜಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂಬ ಆರೋಪ ಕೇಳಿಬಂದಿತ್ತು. ವಸತಿ ಶಾಲೆಯಲ್ಲಿದ್ದ ಈ ಈ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ್ದಾರೆಂದು ದೂರು ನೀಡಲಾಗಿತ್ತು. ಅಲ್ಲದೆ, ಇದಕ್ಕೆ ಅಲ್ಲಿನ ವಾರ್ಡನ್ ಸೇರಿ ಹಲವರು ಸಹಕಾರ ನೀಡುತ್ತಿದ್ದಾರೆ ಎಂದು ಆಗಸ್ಟ್ ೨೭ರಂದು ಇಬ್ಬರು ವಿದ್ಯಾರ್ಥಿನಿಯರು ಒಡನಾಡಿ ಸಂಸ್ಥೆಯ ಮೂಲಕ ಮೈಸೂರಿನ ನಜರ್ಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಒಬ್ಬಳು ವಿದ್ಯಾರ್ಥಿನಿ ಮೇಲೆ ೩ ವರ್ಷದಿಂದ ಹಾಗೂ ಇನ್ನೊಬ್ಬ ವಿದ್ಯಾರ್ಥಿನಿಯ ಮೇಲೆ ಕಳೆದ ಒಂದೂವರೆ ವರ್ಷದಿಂದ ಲೈಂಗಿಕ ದೌರ್ಜನ್ಯವನ್ನು ನಡೆಸುತ್ತಾ ಬರಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಯಾರೆಲ್ಲ ಭಾಗಿಗಳು?
ಡಾ. ಶಿವಮೂರ್ತಿ ಮುರುಘಾಶರಣರ ಮೇಲೆ ಅತ್ಯಾಚಾರ ಆರೋಪವನ್ನು ಹೊರಿಸಲಾಗಿದ್ದು, ಅವರಿಗೆ ಸಹಕಾರ ನೀಡಿದ ಆರೋಪದಡಿ ವಸತಿ ಶಾಲೆಯ ವಾರ್ಡನ್ ರಶ್ಮಿ, ಮಠದ ಮರಿಸ್ವಾಮಿ ಬಸವಾದಿತ್ಯ, ಕಾರ್ಯದರ್ಶಿ ಪರಮಶಿವಯ್ಯ, ವಕೀಲ ಗಂಗಾಧರ್ ಮೇಲೆ ದೂರು ದಾಖಲಾಗಿತ್ತು. ಈ ಇಬ್ಬರು ವಿದ್ಯಾರ್ಥಿನಿಯರನ್ನು ಒತ್ತಾಯಪೂರ್ವಕವಾಗಿ ಸ್ವಾಮೀಜಿ ಬಳಿ ಕಳುಹಿಸಲಾಗುತ್ತಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಲೈಂಗಿಕ ಕ್ರಿಯೆಗೆ ಒಪ್ಪದೇ ಇದ್ದರೆ ಹಣ್ಣು, ಸಿಹಿಯಲ್ಲಿ ಮತ್ತುಬರುವ ಔಷಧವನ್ನು ಬೆರೆಸಿ ಅತ್ಯಾಚಾರ ನಡೆಸಲಾಗುತ್ತದೆ ಎಂದೂ ಹೇಳಲಾಗಿದೆ.
ಬಂಧನದ ಬಳಿಕ
ಆಗಸ್ಟ್ ೨೭ರಂದು ದೂರು ದಾಖಲಾಗಿತ್ತಾದರೂ ಮುಂದಿನ ನಾಲ್ಕು ದಿನಗಳ ಕಾಲ ಕಾನೂನು ಪ್ರಕ್ರಿಯೆಯನ್ನು ತೆಗೆದುಕೊಂಡಿರಲಿಲ್ಲ. ಸೆಪ್ಟೆಂಬರ್ ೧ರಂದು ರಾತ್ರಿ ಸ್ವಾಮೀಜಿಯನ್ನು ಬಂಧನ ಮಾಡಲಾಯಿತು. ಎರಡನೇ ಆರೋಪಿ, ಹಾಸ್ಟೆಲ್ ವಾರ್ಡನ್ ರಶ್ಮಿಯನ್ನು ಸಹ ಬಳಿಕ ಬಂಧನ ಮಾಡಿ ಶಿವಮೊಗ್ಗದ ಜೈಲಿಗೆ ಕಳುಹಿಸಲಾಗಿದೆ. ಇದರ ಜತೆಗೆ ಉಳಿದ ಆರೋಪಿಗಳ ಪೈಕಿ ಬಸವಾದಿತ್ಯ ಮತ್ತು ಪರಮಶಿವಯ್ಯ ತಲೆಮರೆಸಿಕೊಂಡಿದ್ದು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ, ಕೋರ್ಟ್ ಅದನ್ನು ಪುರಸ್ಕರಿಸದೆ ವಿಚಾರಣೆಯನ್ನು ಮುಂದೂಡುತ್ತಲೇ ಬಂದಿದೆ. ಇದರ ನಡುವೆ, ವಕೀಲರಾಗಿರುವ ಗಂಗಾಧರಯ್ಯ ಅವರನ್ನು ಪೊಲೀಸರು ವಿಚಾರಣೆ ನಡೆಸಿ, ಕರೆದಾಗ ಬರುವ ಷರತ್ತಿನೊಂದಿಗೆ ಬಿಟ್ಟುಕಳುಹಿಸಲಾಗಿದೆ.
ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಎಸ್ಜೆಎಂ ವಿದ್ಯಾಪೀಠದ ಕಾರ್ಯದರ್ಶಿಗೆ ಮುರುಘಾ ಶರಣರ ಪವರ್ ಆಫ್ ಅಟಾರ್ನಿ