ಚಿತ್ರದುರ್ಗ: ಮುರುಘಾ ಮಠದ ಹಾಸ್ಟೆಲ್‌ನಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕಿಯರಿಬ್ಬರ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಎದುರಿಸುತ್ತಿರುವ ಮುರುಘಾ ಶರಣರಿಗೆ ೨ನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪುರುಷತ್ವ ಪರೀಕ್ಷೆ ನಡೆಸಲಾಗಿದೆ. ಈ ಮೂಲಕ ಶ್ರೀಗಳಿಗೆ ಎರಡನೇ ಬಾರಿ ಪುರುಷತ್ವ ಪರೀಕ್ಷೆ ನಡೆಸಿದಂತೆ ಆಗಿದೆ. ಕಳೆದ ಸೆಪ್ಟೆಂಬರ್ ೩ರಂದು ನಡೆದಿದ್ದ ವೈದ್ಯಕೀಯ ಪರೀಕ್ಷೆಯಲ್ಲಿ ಶ್ರೀಗಳ ಪುರುಷತ್ವ ಸಾಬೀತಾಗಿತ್ತು.
ಚಿತ್ರದುರ್ಗ ಜಿಲ್ಲಾಸ್ಪತ್ರೆ ವೈದ್ಯ ಡಾ.ವೇಣು ಹಾಗೂ ಡಾ. ಲೀಲಾ ರಾಘವನ್ ನೇತೃತ್ವದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಇದೇ ವೇಳೆ ಶ್ರೀಗಳ ಕೂದಲು, ಉಗುರು ಮತ್ತು ರಕ್ತದ ಮಾದರಿಯನ್ನೂ ಸಂಗ್ರಹ ಮಾಡಲಾಗಿದೆ. ಜತೆಗೆ ಮತ್ತಿತರ ವೈದ್ಯಕೀಯ ಪರೀಕ್ಷೆಗೆ ಅವರನ್ನು ಒಳಪಡಿಸಲಾಗಿದೆ. ಸತತ ಒಂದು ಗಂಟೆಗಳ ಕಾಲ ಪರೀಕ್ಷೆ ನಡೆಸಲಾಗಿದ್ದು, ಪೂರ್ಣಗೊಂಡ ಬಳಿಕ ಅವರನ್ನು ಡಿವೈಎಸ್ಪಿ ಕಚೇರಿಗೆ ಕರೆದೊಯ್ಯಲಾಯಿತು.
ಸಿಪಿಐ ಬಾಲಚಂದ್ರ ನಾಯ್ಕ್ ನೇತೃತ್ವದಲ್ಲಿ ಮುರುಘಾಶ್ರೀ ವಿಚಾರಣೆ ನಡೆಯುತ್ತಿದೆ. ನವೆಂಬರ್ ೫ರವರೆಗೆ ಮಾತ್ರ ಪೊಲೀಸ್ ಕಸ್ಟಡಿಗೆ ವಹಿಸಲಾಗಿರುವುದರಿಂದ ಶ್ರೀಗಳಿಂದ ೨ನೇ ಪ್ರಕರಣದಲ್ಲಿ ಹೆಚ್ಚಿನ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಅಡುಗೆ ಸಹಾಯಕಿಯೊಬ್ಬರು ಅಕ್ಟೋಬರ್ ೧೩ರಂದು ನೀಡಿದ್ದ ದೂರಿನನ್ವಯ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ಮುರುಘಾ ಶರಣರನ್ನು ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಮುರುಘಾಶ್ರೀ ತಪಾಸಣೆ ಬಳಿಕ ಅವರನ್ನು ಮುರುಘಾಮಠಕ್ಕೆ ಕರೆದೊಯ್ದ ಶ್ರೀಗಳು, ಅಲ್ಲಿ ಸ್ಥಳ ಮಹಜರು ನಡೆಸಿದ್ದಾರೆ. ಈ ಹಿಂದೆ ಸಂತ್ರಸ್ತ ಬಾಲಕಿಯರನ್ನು ಮುರುಘಾ ಮಠಕ್ಕೆ ಕರೆದೊಯ್ದು ಮುರುಘಾ ಶರಣರ ಕೊಠಡಿ ಹಾಗೂ ಕಚೇರಿಯಲ್ಲಿ ಸ್ಥಳ ಮಹಜರು ಮಾಡಲಾಗಿತ್ತು. ಈಗ ಬಾಲಕಿಯರ ಹೇಳಿಕೆಯನ್ವಯ ಶ್ರೀಗಳನ್ನೂ ಕರೆದೊಯ್ದು ಸ್ಥಳ ಮಹಜರು ಮಾಡಲಾಗುತ್ತಿದೆ.
ನಾಳೆ ಕಸ್ಟಡಿ ಅಂತ್ಯ
ಶನಿವಾರ (ನ.೫) ಸಂಜೆ ೪ ಗಂಟೆಗೆ ಮುರುಘಾಶ್ರೀ ಪೊಲೀಸ್ ಕಸ್ಟಡಿ ಅಂತ್ಯಗೊಳ್ಳಲಿರುವ ಹಿನ್ನೆಲೆಯಲ್ಲಿ ವಿಚಾರಣೆ ಮುಂದುವರಿದಿದೆ. ಒಂದು ವೇಳೆ ಶ್ರೀಗಳಿಂದ ನಿರೀಕ್ಷಿತ ಸ್ಪಂದನೆ ಸಿಗದೇ ಇದ್ದರೆ ಅಥವಾ ಹೆಚ್ಚಿನ ವಿಚಾರಣೆ ಅಗತ್ಯವಿದೆ ಎಂದು ಪೊಲೀಸರಿಗೆ ಅನ್ನಿಸಿದರೆ ಮತ್ತೆ ಅವಧಿ ವಿಸ್ತರಣೆಗೆ ನ್ಯಾಯಾಲಯದಲ್ಲಿ ಮನವಿ ಮಾಡಬಹುದಾಗಿದೆ.
ಅನುಮಾನ ಮೂಡಿಸಿದ ಶ್ರೀಗಳ ಆಪ್ತನ ನಡೆ
ಮುರುಘಾಶ್ರೀ ವಿರುದ್ಧ 2ನೇ ಪೋಕ್ಸೋ ಪ್ರಕರಣದಲ್ಲಿ ವಿಚಾರಣೆ ನಡೆಯುತ್ತಿರುವ ಡಿವೈಎಸ್‌ಪಿ ಕಚೇರಿಗೆ ಶ್ರೀಗಳ ಆಪ್ತ, ಜಿಪಂ ಮಾಜಿ ಸದಸ್ಯ ಎಸ್.ಎಂ.ಎಲ್. ತಿಪ್ಪೇಸ್ವಾಮಿ ಭೇಟಿ ನೀಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಗುರುವಾರ ರಾತ್ರಿ 8 ಗಂಟೆ ವೇಳೆಗೆ ಡಿವೈಎಸ್‌ಪಿ ಕಚೇರಿಗೆ ಭೇಟಿ ನೀಡಿದ್ದ ತಿಪ್ಪೇಸ್ವಾಮಿ ಕೆಲಹೊತ್ತು ಅಲ್ಲಿಯೇ ಇದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ಮುರುಘಾಶ್ರೀ ಅವರನ್ನು ಈ ವೇಳೆ ಭೇಟಿಯಾಗಿದ್ದಾರಾ ಎಂಬ ಅನುಮಾನ ಮೂಡಿದೆ. ಇದಕ್ಕೆ ಪೊಲೀಸರು ಹೇಗೆ ಮತ್ತು ಏಕೆ ಅವಕಾಶ ಕೊಟ್ಟರು ಎಂಬ ಪ್ರಶ್ನೆಗಳೂ ಮೂಡಿವೆ. ಇನ್ನು ಡಿವೈಎಸ್‌ಪಿ ಕಚೇರಿ ಆವರಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.
ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | 2ನೇ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಮುರುಘಾಶರಣರು ಮೂರು ದಿನ ಪೊಲೀಸ್ ಕಸ್ಟಡಿಗೆ