ಚಿತ್ರದುರ್ಗ: ಮಠದ ಹಾಸ್ಟೆಲ್‌ನಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಮುರುಘಾ ಶರಣರು ಬಂಧಿತರಾಗಿರುವ ಹಿನ್ನೆಲೆಯಲ್ಲಿ ನಗರದ ನೀಲಕಂಠೇಶ್ವರ ದೇಗುಲದಲ್ಲಿನ ಮುರುಘಾಶ್ರೀ ಭಾವಚಿತ್ರವನ್ನು ತೆರವುಗೊಳಿಸಲಾಗಿದೆ.
ನಗರದಲ್ಲಿರುವ ನೀಲಕಂಠೇಶ್ವರ ದೇಗುಲಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ, ಪೂಜಾ ಕಾರ್ಯದಲ್ಲಿ ತೊಡಗುತ್ತಾರೆ. ಇಂತಹ ಸಂದರ್ಭದಲ್ಲಿ ದೇವಸ್ಥಾನದ ಗರ್ಭಗುಡಿ ಮುಂಭಾಗದ ಗೋಡೆ ಮೇಲೆ ಅವರ ಫೋಟೊವನ್ನು ಹಾಕಲಾಗಿರುವುದು ಸರಿಯಲ್ಲ. ಇದು ಭಕ್ತರಿಗೆ ಮುಜುಗರವನ್ನುಂಟು ಮಾಡುತ್ತದೆ. ಅಲ್ಲದೆ, ಮಹಿಳಾ ಭಕ್ತರಿಗೂ ಇದು ಇರಿಸುಮುರಿಸನ್ನು ತಂದೊಡ್ಡುತ್ತದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಹಾಕಲಾಗಿರುವ ಮುರುಘಾಶರಣರ ಫೋಟೊವನ್ನು ಕೂಡಲೇ ತೆರವುಗೊಳಿಸಬೇಕು ಎಂದು ಅಕ್ಟೋಬರ್ 18ರಂದು ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕವು ಆಗ್ರಹಿಸಿತ್ತು. ಅಲ್ಲದೆ, ದೇಗುಲ ಸಮಿತಿ ಮತ್ತು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿತ್ತು.
ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದಿಂದ ಆಗ್ರಹ ವ್ಯಕ್ತವಾದಾಗಲೂ ದೇವಸ್ಥಾನ ಆಡಳಿತ ಮಂಡಳಿಯವರು ತತ್ ಕ್ಷಣದ ಕ್ರಮವನ್ನು ತೆಗೆದುಕೊಂಡಿರಲಿಲ್ಲ. ಹೀಗಾಗಿ ಫೋಟೊ ತೆರವಿಗೆ ಒತ್ತಡಗಳು ಬರುತ್ತಲೇ ಇದ್ದವು. ಈ ಹಿನ್ನೆಲೆಯಲ್ಲಿ ಶನಿವಾರ (ಅ. ೨೨) ನೀಲಕಂಠೇಶ್ವರ ದೇಗುಲದಲ್ಲಿನ ಮುರುಘಾಶ್ರೀ ಭಾವಚಿತ್ರವನ್ನು ತೆರವುಗೊಳಿಸಲಾಗಿದೆ. ಅಲ್ಲದೆ, ಆ ಜಾಗಕ್ಕೆ ಮುರುಘಾ ಮಠದ ಹಿಂದಿನ ಸ್ವಾಮೀಜಿಯವರಾದ ಶಾಂತವೀರ ಶ್ರೀಗಳ ಫೋಟೊವನ್ನು ಅಳವಡಿಕೆ ಮಾಡಲಾಗಿದೆ.
ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಮಠದ ವಿದ್ಯಾರ್ಥಿನಿಲಯದಲ್ಲಿದ್ದ ಅಷ್ಟೂ ಹೆಣ್ಣು ಮಕ್ಕಳ ಆಪ್ತ ಸಮಾಲೋಚನೆಗೆ ಆದೇಶ
ನ್ಯಾಯಾಂಗ ಬಂಧನ ವಿಸ್ತರಣೆ
ಪ್ರಕರಣದಲ್ಲಿ ಬಂಧಿತರಾಗಿರುವ ಮುರುಘಾಶರಣರು ಜಾಮೀನು ಕೋರಿ ಚಿತ್ರದುರ್ಗ 2ನೇ ಅಪರ & ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲವು ನವೆಂಬರ್ 3ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿತ್ತು. ಇನ್ನು ಈ ಪ್ರಕರಣದಲ್ಲಿ 2ನೇ ಆರೋಪಿಯಾಗಿರುವ ಮಹಿಳಾ ವಾರ್ಡನ್ ರಶ್ಮಿ ನ್ಯಾಯಾಂಗ ಬಂಧನವೂ ವಿಸ್ತರಣೆಯಾಗಿದ್ದು, ಈ ಮೂಲಕ ಇನ್ನೂ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಸ್ತರಿಸಿದಂತಾಗಿದೆ.
ಪ್ರಕರಣದ ಸಾರಾಂಶ
ಈಗಾಗಲೇ ಲೈಂಗಿಕ ದೌರ್ಜನ್ಯ ಪ್ರಕರಣವೊಂದರಲ್ಲಿ ಮುರುಘಾಶರಣರು ಜೈಲಿನಲ್ಲಿ ಇರುವ ಬೆನ್ನಲ್ಲೇ ಶುಕ್ರವಾರ (ಅ.೧೪) ಮೈಸೂರಲ್ಲಿ ಮಠದ ಅಡುಗೆ ಸಹಾಯಕಿಯೊಬ್ಬರು ತನ್ನಿಬ್ಬರು ಮಕ್ಕಳು ಸೇರಿದಂತೆ ಮತ್ತಿಬ್ಬರು ಮಕ್ಕಳ ಮೇಲೆ ಮುರುಘಾಶ್ರೀಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ದಾಖಲು ಮಾಡಿದ್ದರು. ಈ ವೇಳೆ ಪೊಲೀಸರು ಹಾಗೂ ಸಿಡಬ್ಲ್ಯೂಸಿ ಅಧಿಕಾರಿಗಳು ಆಕೆಯ ಹಾಗೂ ಒಬ್ಬಳು ಮಗಳ ಹೇಳಿಕೆಯನ್ನು ಪಡೆದುಕೊಂಡಿದ್ದರು. ನಾಲ್ಕು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ತಾಯಿ ಹೇಳಿದ್ದಾರೆ. “ಪತಿ ಇಲ್ಲದ ಕಾರಣ ತಾನು ಮಠದಲ್ಲಿ ಅಡುಗೆ ಕೆಲಸ ಮಾಡುತ್ತಿದ್ದೆ. ನನ್ನ ಮಕ್ಕಳು ಮಠದ ವಸತಿ ಶಾಲೆಯಲ್ಲಿ ಓದುತ್ತಿದ್ದರು. ನನ್ನ ಇಬ್ಬರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಮುರುಘಾ ಶರಣರು ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಪ್ರಭಾವ ಹೊಂದಿರುವ ಕಾರಣ ತಡವಾಗಿ ದೂರು ನೀಡುತ್ತಿದ್ದೇನೆ” ಎಂದೂ ಸಹ ಸಂತ್ರಸ್ತ ಬಾಲಕಿಯರಿಬ್ಬರ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದರು.
ಈ ಸಂಬಂಧ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಒಟ್ಟು 7 ಮಂದಿ ಮೇಲೆ ಕೇಸ್ ಹಾಕಲಾಗಿತ್ತು. ಸ್ವಾಮೀಜಿಯವರ ಸಹಾಯಕರಾದ ಮಹಾಲಿಂಗ, ಅಡುಗೆ ಸಹಾಯಕ ಕರಿಯಪ್ಪ ಎಂಬ ಇಬ್ಬರ ಮೇಲೆ ಹೊಸದಾಗಿ ಎಫ್‌ಐಆರ್ ದಾಖಲಾದಂತಾಗಿತ್ತು.
ಶಿವಮೂರ್ತಿ ಮುರುಘಾ ಶರಣರು ಮೊದಲ ಆರೋಪಿಯಾಗಿದ್ದು, ಉಳಿದವರಾದ ಲೇಡಿ ಹಾಸ್ಟೆಲ್ ವಾರ್ಡನ್, ಮಠದ ಉತ್ತರಾಧಿಕಾರಿ, ಮಠದ ಕಾರ್ಯದರ್ಶಿ ಪರಮಶಿವಯ್ಯ, ವಕೀಲ ಗಂಗಾಧರಯ್ಯ, ಮುರುಘಾಶ್ರೀ ಸಹಾಯಕ ಮಹಾಲಿಂಗ, ಮುರುಘಾಶ್ರೀ ಅಡುಗೆಭಟ್ಟ ಕರಿಬಸಪ್ಪ ವಿರುದ್ಧ ಕ್ರಮವಾಗಿ ಕೇಸ್ ದಾಖಲಾಗಿದೆ.
ಏನಿದು ಮೊದಲ ಲೈಂಗಿಕ ಕಿರುಕುಳ ಪ್ರಕರಣ?
ಚಿತ್ರದುರ್ಗ ಜಿಲ್ಲೆಯ ಮುರುಘಾ ಮಠದ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಸ್ವಾಮೀಜಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂಬ ಆರೋಪ ಕೇಳಿಬಂದಿತ್ತು. ವಸತಿ ಶಾಲೆಯಲ್ಲಿದ್ದ ಈ ಈ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ್ದಾರೆಂದು ದೂರು ನೀಡಲಾಗಿತ್ತು. ಅಲ್ಲದೆ, ಇದಕ್ಕೆ ಅಲ್ಲಿನ ವಾರ್ಡನ್ ಸೇರಿ ಹಲವರು ಸಹಕಾರ ನೀಡುತ್ತಿದ್ದಾರೆ ಎಂದು ಆಗಸ್ಟ್ ೨೭ರಂದು ಇಬ್ಬರು ವಿದ್ಯಾರ್ಥಿನಿಯರು ಒಡನಾಡಿ ಸಂಸ್ಥೆಯ ಮೂಲಕ ಮೈಸೂರಿನ ನಜರ್‌ಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಒಬ್ಬಳು ವಿದ್ಯಾರ್ಥಿನಿ ಮೇಲೆ ೩ ವರ್ಷದಿಂದ ಹಾಗೂ ಇನ್ನೊಬ್ಬ ವಿದ್ಯಾರ್ಥಿನಿಯ ಮೇಲೆ ಕಳೆದ ಒಂದೂವರೆ ವರ್ಷದಿಂದ ಲೈಂಗಿಕ ದೌರ್ಜನ್ಯವನ್ನು ನಡೆಸುತ್ತಾ ಬರಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಯಾರೆಲ್ಲ ಭಾಗಿಗಳು?
ಡಾ. ಶಿವಮೂರ್ತಿ ಮುರುಘಾಶರಣರ ಮೇಲೆ ಅತ್ಯಾಚಾರ ಆರೋಪವನ್ನು ಹೊರಿಸಲಾಗಿದ್ದು, ಅವರಿಗೆ ಸಹಕಾರ ನೀಡಿದ ಆರೋಪದಡಿ ವಸತಿ ಶಾಲೆಯ ವಾರ್ಡನ್ ರಶ್ಮಿ, ಮಠದ ಮರಿಸ್ವಾಮಿ ಬಸವಾದಿತ್ಯ, ಕಾರ್ಯದರ್ಶಿ ಪರಮಶಿವಯ್ಯ, ವಕೀಲ ಗಂಗಾಧರ್ ಮೇಲೆ ದೂರು ದಾಖಲಾಗಿತ್ತು. ಈ ಇಬ್ಬರು ವಿದ್ಯಾರ್ಥಿನಿಯರನ್ನು ಒತ್ತಾಯಪೂರ್ವಕವಾಗಿ ಸ್ವಾಮೀಜಿ ಬಳಿ ಕಳುಹಿಸಲಾಗುತ್ತಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಲೈಂಗಿಕ ಕ್ರಿಯೆಗೆ ಒಪ್ಪದೇ ಇದ್ದರೆ ಹಣ್ಣು, ಸಿಹಿಯಲ್ಲಿ ಮತ್ತುಬರುವ ಔಷಧವನ್ನು ಬೆರೆಸಿ ಅತ್ಯಾಚಾರ ನಡೆಸಲಾಗುತ್ತದೆ ಎಂದೂ ಹೇಳಲಾಗಿದೆ.
ಬಂಧನದ ಬಳಿಕ
ಆಗಸ್ಟ್ ೨೭ರಂದು ದೂರು ದಾಖಲಾಗಿತ್ತಾದರೂ ಮುಂದಿನ ನಾಲ್ಕು ದಿನಗಳ ಕಾಲ ಕಾನೂನು ಪ್ರಕ್ರಿಯೆಯನ್ನು ತೆಗೆದುಕೊಂಡಿರಲಿಲ್ಲ. ಸೆಪ್ಟೆಂಬರ್ ೧ರಂದು ರಾತ್ರಿ ಸ್ವಾಮೀಜಿಯನ್ನು ಬಂಧನ ಮಾಡಲಾಯಿತು. ಎರಡನೇ ಆರೋಪಿ, ಹಾಸ್ಟೆಲ್ ವಾರ್ಡನ್ ರಶ್ಮಿಯನ್ನು ಸಹ ಬಳಿಕ ಬಂಧನ ಮಾಡಿ ಶಿವಮೊಗ್ಗದ ಜೈಲಿಗೆ ಕಳುಹಿಸಲಾಗಿದೆ. ಇದರ ಜತೆಗೆ ಉಳಿದ ಆರೋಪಿಗಳ ಪೈಕಿ ಬಸವಾದಿತ್ಯ ಮತ್ತು ಪರಮಶಿವಯ್ಯ ತಲೆಮರೆಸಿಕೊಂಡಿದ್ದು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ, ಕೋರ್ಟ್ ಅದನ್ನು ಪುರಸ್ಕರಿಸದೆ ವಿಚಾರಣೆಯನ್ನು ಮುಂದೂಡುತ್ತಲೇ ಬಂದಿದೆ. ಇದರ ನಡುವೆ, ವಕೀಲರಾಗಿರುವ ಗಂಗಾಧರಯ್ಯ ಅವರನ್ನು ಪೊಲೀಸರು ವಿಚಾರಣೆ ನಡೆಸಿ, ಕರೆದಾಗ ಬರುವ ಷರತ್ತಿನೊಂದಿಗೆ ಬಿಟ್ಟುಕಳುಹಿಸಲಾಗಿದೆ.
ಇದನ್ನೂ ಓದಿ | ಮುರುಘಾ ಶ್ರೀ | ಒಡನಾಡಿ ಸೇವಾ ಸಂಸ್ಥೆಯಿಂದ ಮತ್ತೊಂದು ದೂರು