ಬಾಗಲಕೋಟೆ: ಪಂಚಮಸಾಲಿ ಮೀಸಲಾತಿ ಹೋರಾಟ ಮುಖ್ಯಮಂತ್ರಿಗಳ ಅಂತಿಮ ಭರವಸೆಯ ಬಳಿಕ ಸ್ವಲ್ಪ ತಣ್ಣಗಾಗಿದೆ. ಆದರೆ, ಅದೇ ಹೊತ್ತಿಗೆ ನಾಯಕರು-ಸ್ವಾಮೀಜಿಗಳ ನಡುವಿನ ಮಾತಿನ ಅಬ್ಬರ ಜೋರಾಗಿದೆ. ರಾಜ್ಯದ ಕೈಗಾರಿಕಾ ಸಚಿವರಾಗಿರುವ ಮುರುಗೇಶ್ ನಿರಾಣಿ ಅವರು ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮೀಸಲಾತಿ ಹೋರಾಟದ ಭಾಗವಾಗಿ ಸಮಾವೇಶಗಳನ್ನು ನಡೆಸುತ್ತಿರುವ, ಪಾದಯಾತ್ರೆ ಮಾಡುತ್ತಿರುವ ಕೂಡಲಸಂಗಮ ಪೀಠದ ಶ್ರೀ ಜಯಮೃತ್ಯುಂಜಯ ಶ್ರೀಗಳ ವಿರುದ್ಧ, ಅವರಿಗೆ ಬೆನ್ನೆಲುಬಾಗಿ ನಿಂತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಕಾಂಗ್ರೆಸ್‌ನ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಯತ್ನಾಳ್ ಅವರು ಕಳೆದ ದಿಲ್ಲಿಗೆ ಹೋಗಿ ಶೋಭಾ ಕರಂದ್ಲಾಜೆ ಕಾಲಿಗೆ ಬಿದ್ದಿದ್ದಾರೆ ಎಂದು ನಿರಾಣಿ ಲೇವಡಿ ಮಾಡಿದ್ದಾರೆ.
ಮುರುಗೇಶ್ ನಿರಾಣಿ ಅವರು ಟಿಕೆಟ್‌ಗಾಗಿ ನನ್ನ ಮನೆ ಕಾಯುತ್ತಿದ್ದರು ಎಂದು ಇತ್ತೀಚೆಗೆ ಯತ್ನಾಳ್ ಹೇಳಿದ್ದರು. ಅದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ನಿರಾಣಿ ಯತ್ನಾಳ್ ಅವರು ಶೋಭಾ ಕರಂದ್ಲಾಜೆ ಅವರ ಕಾಲಿಗೆ ಬಿದ್ದಿದ್ದಾರೆ ಎಂದಿದ್ದಾರೆ.
ʻʻನಾನು ಟಿಕೆಟ್‌ಗಾಗಿ ಯತ್ನಾಳ್ ಅವರ ಮನೆಗೆ ಹೋಗಿರಬಹುದು. ಯಾಕೆಂದರೆ ನಾನು ತುಂಬಾ ಜನರ ಮನೆ ಬಾಗಿಲಿಗೆ ಹೋಗಿದ್ದೇನೆ. ಇವರ ಮನೆ ಬಾಗಿಲಿಗೂ ಹೋಗಿರಬಹುದು. ಯಾಕೆಂದರೆ, ಯಾಕೆಂದರೆ ನಾನು ಅಷ್ಟು ದೊಡ್ಡ ವ್ಯಕ್ತಿಯಲ್ಲʼʼ ಎಂದು ಹೇಳಿರುವ ಅವರು, ಅದರೆ, ಇವರು ಇವರು ಟಿಕೆಟ್‌ಗಾಗಿ, ಮಂತ್ರಿ ಆಗೋದಕ್ಕಾಗಿ ಯಾರ್ಯಾರ ಮನೆ ಬಾಗಿಲಿಗೆ ಹೋಗಿದ್ದಾರೆ ಅಂತ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಲೇವಡಿ ಮಾಡಿದ್ದಾರೆ.
ʻʻಅವರು ಯಾರ್ಯಾರ ಕಾಲಿಗೆ ಬೀಳ್ತಾರೆ ಅಂತ ಸ್ಟೇಜ್ ಮೇಲೆನೇ ನೋಡಿದಿರಲ್ಲ. ಹೋದ ವಾರ ಡೆಲ್ಲಿಗೆ ಹೋದಾಗ ಅವರು ಶೋಭಾ ಕರಂದ್ಲಾಜೆ ಕಾಲಿಗೆ ಬಿದ್ದು ಬಂದಿದ್ದಾರೆ. ನನ್ನನ್ನು ಹಾಗೂ ಯಡಿಯೂರಪ್ಪ ಅವರನ್ನು ಒಂದು ಮಾಡಿ ಅಂತ ಗೋಗರೆದಿದ್ದಾರೆʼʼ ಎಂದು ಮುರುಗೇಶ್ ನಿರಾಣಿ ಹೇಳಿದರು.
ʻʻಮೀಸಲಾತಿ ಎಲ್ಲರಿಗೂ ಬೇಕು. ಮರಾಠಿಗರಿಗೆ, ಕುರುಬರಿಗೆ, ವಾಲ್ಮೀಕಿಯವ್ರಿಗೆ ಸಿಗಬೇಕು, ಇನ್ನೊಬ್ಬರಿಗೂ ಸಿಗಬೇಕು. ಏನು ಎಲ್ಲವನ್ನೂ ನೀವೇ ಗುತ್ತಿಗೆ ತೆಗೆದುಕೊಂಡಿದ್ದಿರಾ? ಆ ಸಮಾಜದವ್ರು ಯಾರೂ ಇಲ್ವಾ? ನಾವು ಮನಸ್ಸು ಮಾಡಿದ್ರೆ ಸರ್ಕಾರ ತರ್ತೀವಿ, ಸರ್ಕಾರ ಕೆಡವ್ತೀವಿ ಅಂತೀರಿ. ಈ ರೀತಿ ಉದ್ಧಟತನದ ಮಾತುಗಳು ಯಾರಿಗೂ ಬರಬಾರದುʼʼ ಎಂದು ಯತ್ನಾಳ್‌ಗೆ ಕಿವಿಮಾತು ಹೇಳಿದರು.
ಬಿಜೆಪಿಯಲ್ಲಿದ್ದಾಗ ಹಿಂದುತ್ವ, ಜೆಡಿಎಸ್‌ನಲ್ಲಿದ್ದಾಗ ಟೋಪಿ!
ʻʻನನಗೆ ಗೊತ್ತಿದೆ, ನಾಳೆ ನೀವು ಬಾಯಿ ಚಪಲಕ್ಕೆ ಏನೇನೋ ಮಾತಾಡ್ತೀರಿ. ಅದು ಗೊತ್ತಿದ್ದೇ ನಾನು ಇವತ್ತು ಮಾತಾಡ್ತಿದ್ದೀನಿ. ಮಾತಾಡಿ.. ಜನ ಗಮನಿಸ್ತಾರೆʼʼ ಎಂದು ಹೇಳಿದ ಯತ್ನಾಳ್, ʻʻನಾನು ಬಿಜೆಪಿಯಲ್ಲೇ ಹುಟ್ಟಿದ್ದು, ಬಿಜೆಪಿಯಲ್ಲೇ ಸಾಯೋದು. ಆ ಕಡೆ ಈ ಕಡೆ ಹೋಗಲ್ಲ. ನಿಮ್ಮ ಹಾಗೆ ಬಿಜೆಪಿಯಲ್ಲಿದ್ದಾಗ ಹಿಂದುತ್ವದ ಬಣ್ಣ ಹಚ್ಚಿಕೊಳ್ಳೋದು. ಜೆಡಿಎಸ್‌ನಲ್ಲಿದ್ದಾಗ ಟೋಪಿ ಹಾಕೊಂಡು, ಟಿಪ್ಪು ಸುಲ್ತಾನ್ ಬಗ್ಗೆ ಹೊಗಳುವುದು, ಇನ್ನೊಂದೆಡೆ ಇದ್ದಾಗ ಎರಡೂ ಪಕ್ಷಗಳನ್ನು ಬೈಯೋದು. ಹೊತ್ತು ಬಂದಂಗ ಛತ್ರಿ ಹಿಡಿಯೋದು ಮುರುಗೇಶ ನಿರಾಣಿ ಜಾಯಮಾನ ಅಲ್ಲ. ನಾನ ಬಿಜೆಪಿನೇ, ನನ್ನದು ಹಿಂದೂತ್ವನೇʼʼ ಎಂದು ಹೇಳಿದರು.
ʻʻನಾನು ಬಿಜೆಪಿ ಪಕ್ಷಕ್ಕೆ ನಿಷ್ಠಾನಾಗಿರ್ತೇನೆ, ಈ ಸಮಾಜಕ್ಕೆ ನಿಷ್ಠನಾಗಿರ್ತೇನೆ. ನನಗೆ ಸಮಾಜ ಮತ್ತು ಪಕ್ಷ ತಾಯಿ ಇದ್ದ ಹಾಗೆ. ತಾಯಿಗೆ ಎಂದೂ ದ್ರೋಹ ಮಾಡೋದಿಲ್ಲʼʼ ಎಂದು ಹೇಳಿದ ಅವರು, ಯಡಿಯೂರಪ್ಪ ನಮ್ಮ ತಂದೆ ಸಮಾನ. ನಮ್ಮ ಪಕ್ಷದಲ್ಲಿ ಐದಾರು ದಶಕದಿಂದ ಕೆಲಸ ಮಾಡಿದ್ದಾರೆ. ಅವರ ಆಶೀರ್ವಾದ ಹಾಗೂ ಅನಂತಕುಮಾರ, ಹಿರಿಯರಿಂದಾಗಿ ದಕ್ಷಿಣ ಭಾರತದಲ್ಲಿ ಸರ್ಕಾರ ಬಂದಿದೆ ಎಂದು ನೆನಪಿಸಿಕೊಂಡರು. ʻʻಇವತ್ತು ಯಡಿಯೂರಪ್ಪ ಅವರ ಬಗ್ಗೆ ಮಾತಾಡೋರು ಅವರ ಆಶೀರ್ವಾದದಿಂದ ಮಂತ್ರಿ ಆಗಿದ್ದನ್ನು ಮರೆಯಬಾರದುʼʼ ಎಂದು ಕೆಣಕಿದರು.
ಇದನ್ನೂ ಓದಿ | Motivational story: ಅಪ್ಪನ ಆಸೆಯಂತೆಯೇ ಅವಳು ಡಾಕ್ಟರ್ ಆಗಿ ಮರಳಿದ್ದಳು.. ಆದರೆ..