Site icon Vistara News

Murugesh Nirani | ಸನ್ಯಾಸತ್ವ ಬಿಟ್ಟು ರಾಜಕಾರಣಕ್ಕೆ ಬನ್ನಿ: ಜಯಮೃತ್ಯುಂಜಯ ಶ್ರೀಗಳಿಗೆ ಸಚಿವ ನಿರಾಣಿ ಸವಾಲು

Jaya mruthyunjaya swameeji- murugesh nirani

ಬಾಗಲಕೋಟೆ: ʻʻನಮ್ಮ ಸಮಾಜದ ಒಬ್ಬ ಸಚಿವರಿಂದ ೨ಎ ಮೀಸಲಾತಿ ಘೋಷಣೆ ತಪ್ಪಿತುʼʼ ಎಂಬ ಪಂಚಮಸಾಲಿ ಸಮುದಾಯದ ಕೂಡಲ ಸಂಗಮ ಪೀಠದ ಮುಖ್ಯಸ್ಥರಾದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆಗೆ ಕೈಗಾರಿಕಾ ಸಚಿವ ಮರುಗೇಶ್‌ ನಿರಾಣಿ ಫುಲ್‌ ಗರಂ ಆಗಿದ್ದಾರೆ. ಜತೆಗೆ ಬಿಜೆಪಿ ಶಾಸಕರಾಗಿರುವ ಬಸನಗೌಡ ಪಾಟೀಲ್‌ ಯತ್ನಾಳ್‌, ಕಾಂಗ್ರೆಸ್‌ನ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್‌ ಅವರ ಮೇಲೂ ಸಿಟ್ಟಿಗೆದ್ದಿದ್ದಾರೆ.

ಸ್ವಾಮೀಜಿ ಮೇಲೆ ಸಿಕ್ಕಾಪಟ್ಟೆ ಸಿಟ್ಟಾಗಿರುವ ನಿರಾಣಿ, ʻʻನಾನೆಲ್ಲಾದರೂ ಮೀಸಲಾತಿ ಘೋಷಣೆ ತಪ್ಪಿಸುವ ರೀತಿಯಲ್ಲಿ ಮಾತನಾಡಿದ್ದರೆ ಯಾರ ಮುಂದಾದರೂ ಈ ರೀತಿಯಾಗಿ ಹೇಳಿದ್ದರೆ ನಾನು ಇವತ್ತೇ ಮಂತ್ರಿ ಸ್ಥಾನಕ್ಕೆ‌ ರಾಜಿನಾಮೆ ಕೊಡ್ತೇನೆ. ನೀವುನನ್ನ ಮೇಲಿನ ಆರೋಪವನ್ನು ಸಾಬೀತುಪಡಿಸದೆ ಹೋದರೆ ಸನ್ಯಾಸತ್ವ ತ್ಯಜಿಸಿ ರಾಜಕಾರಣಕ್ಕೆ ಬರಬೇಕುʼʼ ಎಂದು ನೇರವಾಗಿ ಸವಾಲು ಹಾಕಿದ್ದಾರೆ. ಡಿಸೆಂಬರ್‌ ೨೨ರಂದೇ ಪಂಚಮಸಾಲಿ ಮೀಸಲಾತಿ ಘೋಷಣೆ ಆಗುವ ಸಾಧ್ಯತೆ ಇತ್ತು. ನಮ್ಮದೇ ಸಮಾಜದ ಸಚಿವರೊಬ್ಬರು ಅದಕ್ಕೆ ಅಡ್ಡಗಾಲು ಹಾಕಿದರು ಎಂದು ಬಸವ ಜಯ ಮೃತ್ಯುಂಜಯ ಶ್ರೀಗಳು ಹೇಳಿದ್ದಾರೆನ್ನಲಾಗಿದೆ.

ʻʻಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ಬಗ್ಗೆ ನನಗೆ ಅಪಾರ ಗೌರವವಿದೆ. ರಾಜ್ಯದಲ್ಲಿ ಸಮಾಜದ ಜನಸಂಖ್ಯೆ ೮೦ ಲಕ್ಷಕ್ಕಿಂತಲೂ ಹೆಚ್ಚಿರುವುದರಿಂದ ಎರಡು ಪೀಠಗಳನ್ನು ಮಾಡಿದ್ದೆವು. ಮೂರನೇ ಪೀಠವನ್ನೂ ನಾನೇ ಮಾಡಿದ್ದೇನೆ, ಇನ್ನೂ ಎರಡು ಪೀಠಗಳನ್ನ ಮಾಡ್ತೇನೆ. ಐದು ಪೀಠಗಳು ಅಣ್ಣ-ತಮ್ಮಂದಿರ ರೀತಿ ಇರಲಿ ಎನ್ನುವ ಉದ್ದೇಶದಿಂದ ಮಾಡುತ್ತಿದ್ದೇನೆʼʼ ಎಂದು ಅವರು ಹೇಳಿದರು. ʻʻಪೀಠ ಹುಟ್ಟುವ ಮೊದಲೇ ನಾನು ಮಂತ್ರಿಯಾಗಿದ್ದೆʼʼ ಎಂದು ನುಡಿದರು ನಿರಾಣಿ.

ಸೋಲಿಸೋದು ಬಿಡಿ ನಿಮಗೆ ಗೆಲ್ಲಿಸೋಕೇ ಆಗಿಲ್ಲ!
ʻʻನಾವು ಮನಸ್ಸು ಮಾಡಿದ್ರೆ ಇಡೀ ರಾಜ್ಯದಲ್ಲಿ ಅವರನ್ನು ಸೋಲಿಸುತ್ತೇವೆ, ಇವರನ್ನು ಸೋಲಿಸುತ್ತೇವೆʼʼ ಎನ್ನುವ ಸ್ವಾಮೀಜಿ ಹೇಳಿಕೆಗೆ ಕಿಡಿಕಿಡಿಯಾದ ಸಚಿವ ನಿರಾಣಿ ನಿಮಗೆ ಸೋಲಿಸೋದು ಬಿಡಿ, ಗೆಲ್ಲಿಸೋಕೂ ಆಗಿಲ್ಲ ಎಂದು ಲೇವಡಿ ಮಾಡಿದರು.

ʻʻ2013ರಲ್ಲಿ ನಿಮ್ಮ ಪೀಠ ಇರುವ ಕ್ಷೇತ್ರದಲ್ಲೇ (ಹುನಗುಂದದಲ್ಲಿ) ಕಾಂಗ್ರೆಸ್‌ನ ವಿಜಯಾನಂದ ಕಾಶಪ್ಪನವರ ಅವರನ್ನು ಎಂಎಲ್‌ಎ ಮಾಡಲು ನಿಮಗೆ ಆಗಿಲ್ಲ. ಹಾಗಿರುವಾಗ ನಿಮ್ಮ ಶಕ್ತಿ ಎಷ್ಟು ಎನ್ನುವುದು ಗೊತ್ತಾಗುತ್ತದೆ. 2014ರಲ್ಲಿ ನಿಮ್ಮ‌ದೇ ಕ್ಷೇತ್ರದಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್‌ನ ವೀಣಾ ಕಾಶಪ್ಪನವರ ಅವರನ್ನು ಗೆಲ್ಲಿಸಲು ಆಗಲಿಲ್ಲʼʼ ಎಂದು ಪ್ರಶ್ನಿಸಿದರು ಮುರುಗೇಶ್‌ ನಿರಾಣಿ.

ʻʻಧಾರವಾಡದಲ್ಲಿ‌ ನಮ್ಮ ಸಮಾಜದ ವಿನಯ ಕುಲಕರ್ಣಿ ಅವರನ್ನು ಗೆಲ್ಲಿಸಲು ಹಗಲು ರಾತ್ರಿ ಅಡ್ಡಾಡಿದ್ರಿ. ಏನಾಯ್ತು ರಿಸಲ್ಟ್‌? 2014ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ (ಲಕ್ಷ್ಮೀ ಹೆಬ್ಬಾಳ್ಕರ್) ಪರವಾಗಿ ಹಗಲು ರಾತ್ರಿ ಅಡ್ಡಾಡಿದ್ರಿ, ಪ್ರಕಾಶ ಹುಕ್ಕೇರಿ ಕ್ಷೇತ್ರದಲ್ಲಿ ಅಡ್ಡಾಡಿದ್ರಿ… ಏನಾಯ್ತು ರಿಸಲ್ಟ್?ʼʼ ಎಂದು ಕುಹಕದಿಂದ ಪ್ರಶ್ನಿಸಿದ ಅವರು, ಸ್ವಾಮಿಗಳೇ ನಾವು ಸೋಲೋದು ಗೆಲ್ಲೋದು ಮತದಾರರ ಕೈಯಲ್ಲಿದೆ. ಇವತ್ತು ಲಕ್ಷಾಂತರ ಜನರು ಬಂದಿದ್ದಾರೆ ಅಂದ್ರೆ ನಮಗೆ 2ಎ ಮೀಸಲಾತಿ ಸಿಗಬೇಕು ಅಂತ ಬಂದಿದ್ದಾರೆ. ನಿಮ್ಮ ನಡತೆ, ನಡವಳಿಕೆ ನೋಡಿ ಅಲ್ಲ. ದೊಡ್ಡ ಸ್ಥಾನದಲ್ಲಿ ಇದ್ದೀರಿ. ಬಾಯಿ ಚಪಲಕ್ಕೆ ಯಾರ ಬಗ್ಗೆಯೂ ಮಾತನಾಡಬಾರದು. ಮಾತನಾಡುವಾಗ ಒಬ್ಬರ ಮನಸ್ಸಿಗೆ ಎಷ್ಟು ನೋವು ಆಗುತ್ತೆ ತಿಳಿದುಕೊಳ್ಳಬೇಕುʼʼ ಎಂದು ನಿರಾಣಿ ಹೇಳಿದರು.

ಆಗ ಎಲ್ಲೋಗಿತ್ತು ನಿಮ್ಮ ಬಾರ್‌ಕೋಲು!?: ಕಾಶಪ್ಪನವರ್‌ಗೆ ಸವಾಲು
ಪಂಚಮಸಾಲಿಗಳಿಗೆ ೨ಎ ಮೀಸಲಾತಿ ನೀಡದೆ ಹೋದರೆ ಬಾರಕೋಲು ಚಳುವಳಿ ಮಾಡ್ತೀನಿ ಎಂಬ ವಿಜಯಾನಂದ ಕಾಶಪ್ಪನವರ ಹೇಳಿಕೆಗೆ ಹೆಸರು ಹೇಳದೆ ಪ್ರತಿಕ್ರಿಯಿಸಿದ ಮುರುಗೇಶ್‌ ನಿರಾಣಿ, ನಿಮ್ಮ ತಂದೆಯವರೇ ಮಂತ್ರಿ ಆಗಿದ್ರು, ಸಮಾಜದ ರಾಜ್ಯಾಧ್ಯಕ್ಷರು ಆಗಿದ್ರು. ಆ ಟೈಮ್‌ನಲ್ಲಿ ನೀನು ಯಾಕೆ ಮಾಡ್ಲಿಲ್ಲಪ್ಪ? ಆಗ ಸರ್ಕಾರ ಇತ್ತು, ಮಂತ್ರಿನೂ ಇದ್ರು. ೩ಬಿ, ೨ಎಗೆ ಯಾಕೆ ಸೇರಿಸಲಿಲ್ಲ? ಆವಾಗ ಎಲ್ಲಿತ್ತು ನಿನ್ನ ಬಾರುಕೋಲುʼʼ ಎಂದು ಕೇಳಿದರು.

ನನ್ನನ್ನು ಗೆಲ್ಲಿಸೋದು, ಸೋಲಿಸೋದು ಕ್ಷೇತ್ರದ ಜನ
ʻʻʻನನ್ನನ್ನ ಸೋಲಿಸಿಯೇ ತೀರ್ತೀನಿ ಎಂದು ಕೆಲವರು ಸವಾಲು ಹಾಕಿದ್ದಾರೆ. ನನ್ನ ಸೋಲಿಸುವುದು, ಗೆಲ್ಲಿಸುವುದು ನನ್ನ ಬೀಳಗಿ ವಿಧಾನಸಭಾ ಕ್ಷೇತ್ರದ ಜನ. ಬೀಳಗಿ ಮತದಾರರ ಆಶೀರ್ವಾದದಿಂದ ನಾನು ಗೆದ್ದಿದ್ದೀನಿ. ನಾನು ಮಂತ್ರಿ ಆಗಿದ್ದು ಪಕ್ಷದ ಹಿರಿಯರಿಂದ. ಎಂಎಲ್ಎ ಆಗಿದ್ದು ಬೀಳಗಿ ವಿಧಾನಸಭಾ ಮತದಾರರಿಂದ. ನನ್ನ ಸೋಲಿಸುವುದು ಮತದಾರರ ಕಡೆ ಇದೆ. ಬಾಯಿ ಚಪಲಕ್ಕೆ ಮಾತನಾಡುವವರ ಕಡೆ ಇಲ್ಲ. ನೀನು ಕಾಂಗ್ರೆಸ್ ನಲ್ಲಿದಿಯಾ, ನಾನು ಬಿಜೆಪಿಯಲ್ಲಿದೀನಿ. ಪಕ್ಷ ಅಂತಾ ಬಂದಾಗ ನೀನು ನನ್ನನ್ನು ವಿರೋಧಿಸಬಹುದು, ನೀನು ನನ್ನನ್ನು ಸೋಲಿಸಬಹುದು, ಅಥವಾ ನಾನು ನಿನ್ನನ್ನು ಹೋಲಿಸಬಹುದು. ಅದನ್ನ ನಾನು ಚಾಲೆಂಜ್ ಅಗಿ ತಗೊಳ್ತೀನಿ, ನೀನೂ ಅದನ್ನು ಮುಂದುವರಿಸಬಹುದುʼʼ ಎಂದು ಸವಾಲ್‌ ಹಾಕಿದರು.

ಸಿದ್ದರಾಮಯ್ಯಗೆ ಏನ್‌ ಹೇಳ್ತೀಯಪ್ಪಾ?
ʻʻಬಾಯಿ ಚಪಲಕ್ಕೆ ಏನೇನೋ ಮಾತನಾಬಾರದು. ಇಂತವ್ರನ್ನೇ ನಾನು ಮೂರನೇ ಫ್ಲೋರ್‌ನಲ್ಲಿ ನೋಡ್ತೀನಿ ಅಂತಾ ಹೇಳ್ತಿಯಲ್ಲ. ಕಡಿಮೆ ಅವಧಿಯಲ್ಲಿ ಯತ್ನಾಳ್‌ ಅವರು ೩ನೇ ಫ್ಲೋರ್‌ನಲ್ಲಿ ಕೂರ್ತಾರೆ ಅಂತಾ ಹೇಳ್ತಿಯಲ್ಲ. ಹಾಗಾದ್ರೆ ನೀನು ಸಿದ್ದರಾಮಯ್ಯ ಅವರಿಗೆ ಏನ್ ಹೇಳ್ತಿಯಪಾ? ನಿಮ್ಮ ಪಕ್ಷದಲ್ಲೇ ಇರುವ ಡಿ.ಕೆ ಶಿವಕುಮಾರ್‌ಗೆ ಏನ್ ಹೇಳ್ತಿಯಾ? ನಿಮ್ಮ ಪಕ್ಷದ ಮುಂದಿನ ಸಿಎಂಗೆ ಏನ್ ಉತ್ತರ ಕೊಡ್ತಿಯಾ? ನೀನು ಮತ್ತೊಬ್ಬರನ್ನು ೩ನೇ ಫ್ಲೋರ್‌ನಲ್ಲಿ ಕೂರಿಸುವಷ್ಟು ಶಕ್ತಿವಂತನಾಗಿದ್ರೆ. ನೀನ್ಯಾಕೆ ಬಂದು ಇಲ್ಲಿ ಕೂರ್ತಿದ್ದೆ ಇಷ್ಟು ದಿನ? ಎಂಪಿನೂ ಮಾಡಲಿಕ್ಕಾಗಲಿಲ್ಲ, ಎಂಎಲ್‌ಎನೂ ಆಗಲಿಲ್ಲ. ನೀನು ಮೊದಲು ನಿನ್ನ ಬಾಡಿ ಲಾಂಗ್ವೆಜ್ ಬದಲಾವಣೆ ಮಾಡಿಕೋʼʼ ಎಂದು ವಾಗ್ದಾಳಿ ನಡೆಸಿದರು ನಿರಾಣಿ.

ಇದನ್ನೂ ಓದಿ | Vachananda Swamiji | ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲು, ಸಹಕರಿಸಲು ಯಡಿಯೂರಪ್ಪಗೆ ಮನವಿ

Exit mobile version