Site icon Vistara News

ಮುರುಘಾಶ್ರೀ ಪ್ರಕರಣ | ಸುದ್ದಿಯಲ್ಲಿ ಮುರುಘಾ ಮಠ; ಇದರ ಇತಿಹಾಸವೇನು ಗೊತ್ತೇ?

ಮುರುಘಾಶ್ರೀ ಪ್ರಕರಣ

ಮೂರು ಶತಮಾನಗಳಿಂದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ರಾಜ್ಯದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುತ್ತಾ ಬಂದಿರುವ ಚಿತ್ರದುರ್ಗದ ಶ್ರೀ ಮುರುಘಾಮಠ ಈಗ ಶ್ರೀಗಳ ಬಂಧನದಿಂದ ಸುದ್ದಿಯಲ್ಲಿದೆ.

ಲಿಂಗಾಯಿತ ಮಠಗಳಲ್ಲಿ ಅತ್ಯಂತ ಪ್ರಮುಖ ಮಠವಾಗಿರುವ ಮುರುಘಾಮಠ ಹತ್ತಾರು ಜಾತಿಯ ಮಠಗಳ ಕೇಂದ್ರವಾಗಿಯೂ ಕೆಲಸ ಮಾಡುತ್ತಿತ್ತು. ರಾಜ್ಯದ ಅತ್ಯಂತ ಪ್ರಗತಿಪರ ಮಠ ಎಂದು ಹೆಸರು ಮಾಡಿತ್ತು. ಹಲವು ಕ್ರಾಂತಿಕಾರಕ ಆಚರಣೆಗಳನ್ನು ಜಾರಿಗೆ ತಂದಿತ್ತು.

ಭವ್ಯ ಇತಿಹಾಸ ಹೊಂದಿದ ಮಠ

ಶ್ರೀ ಮುರುಘಾಮಠವು ಶೂನ್ಯ ತತ್ವದ ಪ್ರತಿಪಾದಿಸುವ ಮಠವಾಗಿದೆ. 12ನೇ ಶತಮಾತನದ ಶರಣ ಅಲ್ಲಮ ಪ್ರಭುವಿನ ವಿಚಾರಧಾರೆಗಳಿಂದ ಶೂನ್ಯ ತ್ವತದ ಪರಂಪರೆ ಸೃಷ್ಟಿಯಾಗಿತ್ತು. 16ನೇ ಶತಮಾನದಲ್ಲಿ ತೋಂಟದ ಸಿದ್ದಲಿಂಗ ಶ್ರೀಗಳ ಪರಿಶ್ರಮದಿಂದಾಗಿ ಇದು ವಿರಕ್ತ ಪರಂಪರೆಯ ಸ್ವರೂಪವನ್ನು ಪಡೆದುಕೊಂಡಿತ್ತು. ಚಿತ್ರದುರ್ಗದ ಬೃಹನ್ಮಠವೂ ಈ ಪರಂಪರೆಗೆ ಸೇರಿದ ಮಠವಾಗಿದೆ.

ಚಿತ್ರದುರ್ಗವನ್ನಾಳಿದ ಪ್ರಸಿದ್ದ ಪಾಳೆಯಗಾರರಲ್ಲಿ “ಬಿಚ್ಚುಗತ್ತಿ ಭರಮಣ್ಣನಾಯಕ”ನೂ ಒಬ್ಬ. ಕ್ರಿ.ಶ.1689 ರಿಂದ 1721 ರವರೆಗೆ ಈತ ಆಳ್ವಿಕೆ ಮಾಡಿದ್ದ ಎಂದು ಇತಿಹಾಸ ಹೇಳುತ್ತದೆ. ಚಿತ್ರದುರ್ಗದ ಬೃಹನ್ಮಠದ ಪರಂಪರೆಯಲ್ಲಿನ ಎಂಟನೇ ಪಟ್ಟಾಧಿಕಾರಿಗಳಾಗಿದ್ದ ಮುರಿಘೇಂದ್ರ ರಾಜೇಂದ್ರರು (ಕ್ರಿ.ಶ.1640-1710) ದನಗಾಹಿ ಬಿಚ್ಚುಗತ್ತಿ ಭರಮಣ್ಣ ನಾಯಕನಿಗೆ  “ಮುಂದೇ ನೀನು ಚಿತ್ರದುರ್ಗದ ರಾಜನಾಗುತ್ತಿಯೆಂದು”. ಆರ್ಶೀವಾದ ಮಾಡಿದ್ದರಂತೆ. ನಂತರ ಅವರು ಪ್ರವಾಸ ಕೈಗೊಂಡಿದ್ದರು.

 ನಂತರದಲ್ಲಿ ಪ್ರವಾಸದಿಂದ ಶ್ರೀಗಳು ಮರಳಿ ಬರುವ ವೇಳೆಗೆ, ಭರಮಣ್ಣನಾಯಕನ ಚಿತ್ರದುರ್ಗದ ರಾಜನಾಗಿದ್ದ. ಮೊದಲೇ ರಾಜನಾಗುತ್ತೀಯ ಎಂದು ಆಶೀರ್ವಾದ ಮಾಡಿದ ಗುರುಗಳನ್ನು ಕಂಡು ಆತ ಬಹಳ ಸಂತೋಷಗೊಂಡಿದ್ದ. ಗುರುಗಳನ್ನು ಕಂಡು ಹರ್ಷಿತಗೊಂಡ ಅವನು ಅದ್ಧೂರಿಯಾಗಿ ಶ್ರೀಗಳಿಗೆ ಸ್ವಾಗತ ನೀಡಿದ್ದನಂತೆ.

ತನ್ನ ಭಕ್ತಿಯ ಕಾಣಿಕೆಯೆಂಬಂತೆ ಬೆಟ್ಟದ ಮೇಲಿರುವ ಸಂಪಿಗೆ ಸಿದ್ದೇಶ್ವರ ದೇವಸ್ಥಾನದ ಪಕ್ಕದಲ್ಲಿ 360 ಅಂಕಣಗಳ ವಿಸ್ತಾರವಾದ ದೊಡ್ಡಮಠವೊಂದನ್ನು ಕಟ್ಟಿಸಿಕೊಟ್ಟ. ಅನಂತರ ಬೆಟ್ಟದಿಂದ ದೂರದಲ್ಲಿರುವ ಸ್ಥಳದಲ್ಲಿ ಇನ್ನೊಂದು ಮಠವನ್ನು ನಿರ್ಮಿಸಿದ. ಮಠಕ್ಕೆ ಅವನು ಅರ್ಪಿಸಿದ ವಸ್ತುಗಳಲ್ಲಿ ಗಂಟೆಯೂ ಒಂದು. ಅದರಲ್ಲಿ ಅವರ ಹೆಸರಿದೆ. ಹೀಗಾಗಿ ಶ್ರೀ ಮುರಿಗೇಂದ್ರ ರಾಜೇಂದ್ರರೇ ಈ ಪೀಠದ ಮೂಲ ಸ್ಥಾಪಕರಾಗಿದ್ದಾರೆ. ಈಗ ಬೆಟ್ಟದ ಮೇಲಿರುವ ಮಠ ಬಳಕೆಯಲಿಲ್ಲದೆ ಕೇವಲ ಒಂದು ಸ್ಮಾರಕವಾಗಿದೆ. ಅವರ  ಐಕ್ಯಸ್ಥಳ ಈಗ ‘ಕತೃಗದ್ದಿಗೇ’ ಎಂದು ಕೆರೆಯಲ್ಪಡುತ್ತಿದೆ. ಆಗಿನಿಂದ ಆ ಮತ ‘ಮುರಿಘೆ ಮಠ’ ಎಂಬ ಹೆಸರನ್ನು ಹೊಂದಿ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಅಭಿವೃದ್ಧಿ ಹೊಂದಿತು.

ಅರಮನೆಯಂತಹ ಹೊಸ ಮಠ

ಮುಂದೆ ದೊರೆಗೆ ಈ ಮಠದಿಂದಾಗಿ ಶಾಂತಿಗೆ ಭಂಗವಾಗುತ್ತಿದೆ ಎಂಬ ಕಾರಣಕ್ಕೆ ಮಠವನ್ನು ಸ್ಥಳಾಂತರಿಸಲಾಗುತ್ತದೆ. ಈಗಿರುವ ಮುರುಘಾಮಠವು ಚಿತ್ರದುರ್ಗ-ದಾವಣಗೆರೆ ಹೆದ್ದಾರಿಯಲ್ಲಿ ಚಿತ್ರದುರ್ಗದಿಂದ ಸುಮಾರು 3 ಕಿ.ಮೀ. ದೂರದಲ್ಲಿದೆ. ಈ ಮಠ ಕ್ರಿ.ಶ. 1703ರ ಸುಮಾರಿನಲ್ಲಿ ನಿರ್ಮಾಣವಾಗಿರಬಹುದೆಂದು ಹೇಳಲಾಗುತ್ತಿದೆ. ವಿಶಾಲವಾದ ಸ್ಥಳದಲ್ಲಿ ಭವ್ಯವಾದ ಅರಮನೆಯನ್ನು ಹೋಲುವಂತಹ ಕಟ್ಟಡವನ್ನು ಹೊಂದಿರುವ ಈ ಬೃಹನ್ಮಠ ಸ್ಥಾಪನೆಯಾದಗಿನಿಂದ ಪಾಳೆಯಗಾರರಿಂದ ಇನ್ನಿತರ ಸಂಸ್ಥಾನಗಳವರಿಂದ ಎಲ್ಲಕ್ಕಿಂತ ಹೆಚ್ಚಾಗಿ ಜನಸಾಮಾನ್ಯರಿಂದ ಗೌರವಾದರಗಳನ್ನು ಪಡೆಯುತ್ತಾ ಬಂದಿದೆ.

ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ

“ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ” ಎಂಬ ಬಸವಣ್ಣನವರ ವಾಣಿಯಂತೆ ಶಿಕ್ಷಣ ಪ್ರಸಾರದಿಂದಲೇ ಸಮಾಜದ ಏಳಿಗೆ ಎಂದು ಈ ಶ್ರೀ ಬೃಹನ್ಮಠವು ಬಲವಾಗಿ ನಂಬಿಕೊಂಡೇ ಬಂದಿತ್ತು. ಈಗಿನ ಪಟ್ಟಾಧಿಕಾರಿಗಳಾದ ಶ್ರೀ ಶಿವಮೂರ್ತಿ ಸ್ವಾಮಿಗಳವರ ಆಶ್ರಯದಲ್ಲಿ ಅನೇಕ ವಿದ್ಯಾಸಂಸ್ಥೆಗಳು ನಡೆಯುತ್ತಿವೆ. ಚಿತ್ರದುರ್ಗ ವಿದ್ಯಾಕೇಂದ್ರವಾಗಿಯೂ ಅಭಿವೃದ್ಧಿ ಹೊಂದಿದೆ.

ಮಠದ ಅಂಗಸಂಸ್ಥೆಯಾದ ‘ಎಸ್.ಜೆ.ಎಂ. ವಿದ್ಯಾಪೀಠ’ವು ಶಿಶುವಿಹಾರಗಳು, ಪ್ರಾಥಮಿಕ-ಮಾಧ್ಯಮಿಕ-ಪ್ರೌಢಶಾಲೆಗಳು ಪದವಿಪೂರ್ವ ಮತ್ತು ಕಲಾ, ವಿಜ್ಞಾನ, ವಾಣಿಜ್ಯ, ಕಾನೂನು, ಲಲಿತಕಲಾ ಪದವಿ ಕಾಲೇಜುಗಳು; ಚಿತ್ರಕಲಾ, ಶುಶ್ರೂಷೆ ಮತ್ತಿತರ ವೃತ್ತಿ ಶಿಕ್ಷಣದ ವಿವಿಧ ವಿದ್ಯಾಲಯಗಳು; ತಂತ್ರಜ್ಞಾನ, ದಂತವೈದ್ಯಕೀಯ, ಔಷಧಿ ವಿಜ್ಞಾನ ಮಹಾವಿದ್ಯಾಲಯಗಳು; ಅಂಗವಿಕಲ ಮಕ್ಕಳ ವಸತಿಯುತ ಶಾಲೆಗಳು, ಈ ಮುಂತಾದುವುಗಳನ್ನು ಪ್ರಾರಂಭಿಸಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.

ಈ ವಿದ್ಯಾಪೀಠದ ವಿವಿಧ ವಿದ್ಯಾಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಸುಮಾರು ಮುಕ್ಕಾಲು ಪಾಲು ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಎಂಬುದು ಗಮನಾರ್ಹ ಸಂಗತಿ. ಈಗ ಮಠದ ಶ್ರೀಗಳೇ ಆರೋಪ ಹೊತ್ತು  ಜೈಲು ಸೇರಿರುವುದು ವಿಪರ್ಯಾಸ.

ಡಾ. ಶಿವಮೂರ್ತಿ ಮುರುಘಾ ಶರಣರು

ಹೊಸ ಇತಿಹಾಸ ಸೃಷ್ಟಿಸಿದ್ದ ಮುರುಘಾ ಶರಣರು
ಶ್ರೀ ಮುರುಘಾ ಮಠದ ಈ ಹಿಂದಿನ ಪೀಠಾಧಿಪತಿಗಳಾಗಿದ್ದ  ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಮಠದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದರು. ಶ್ರೀ ಜಗದ್ಗುರು ಮುರುಘರಾಜೇಂದ್ರ ವಿದ್ಯಾಪೀಠವನ್ನು ಸ್ಥಾಪಿಸಿ, ಅನೇಕ ಶಾಲಾ ಕಾಲೇಜುಗಳನ್ನು ಆರಂಭಿಸಿದ್ದರು. ಶ್ರೀಮಠದ ಪ್ರಕಾಶನವನ್ನು ಪ್ರಾರಂಭಿಸಿ ಅನೇಕ ಗ್ರಂಥಗಳನ್ನು ಪ್ರಕಟಿಸಿದ್ದರು. ಬೇರೆಕಡೆ ನಡೆಯುತ್ತಿದ್ದ ದಸರಾ ಮಹೋತ್ಸವವನ್ನು ಚಿತ್ರದುರ್ಗದಲ್ಲೇ ನಡೆಯುವಂತೆ ಮಾಡಿದ್ದರು.
ಅವರ ನಂತರ ಪೀಠಕ್ಕೆ ಬಂದವರು ಶ್ರೀ ಶಿವಮೂರ್ತಿ ಸ್ವಾಮಿಗಳು  (ಡಾ. ಶಿವಮೂರ್ತಿ ಮುರುಘಾ ಶರಣರು) ಶರಣ ತತ್ತ್ವಾದರ್ಶಗಳಿಗೆ ಮನಸೋತು ಜಗದ್ಗುರು ಉಪಾಧಿಯನ್ನು ತೊರೆದು ತಮ್ಮನ್ನು ಶರಣರು ಎಂದು ಕರೆದುಕೊಂಡಿದ್ದರು. ಅಡ್ಡಪಲ್ಲಕ್ಕಿ ಚಿನ್ನದ ಕಿರೀಟ, ಬೆಳ್ಳಿಯ ಸಿಂಹಾಸನ ಇವನ್ನು ಬಿಟ್ಟು ಸಮಾಜ ಸುಧಾರಣೆ, ನವಜಾಗೃತಿಯ ಸಂದೇಶ ನೀಡುವ ಹಲವು ರೂಪಕಗಳನ್ನು ರಚಿಸಿ ಪ್ರದರ್ಶಿಸಿ, ರಾಜ್ಯದ ಗಮನ ಸೆಳೆದಿದ್ದರು. ಅತ್ಯಂತ ಪ್ರಗತಿಪರ ಮಠವೆಂದು ಈ ಮಠ ಹೆಸರು ಮಾಡಲು ಕಾರಣರಾಗಿದ್ದರು.
ಎಲ್ಲಾ ಜಾತಿಯ ಜನರಿಗೆ ಪ್ರತಿತಿಂಗಳು ಉಚಿತ ಸರಳ ಸಾಮೂಹಿಕ ವಿವಾಹಗಳನ್ನು ಏರ್ಪಡಿಸಿಕೊಂಡು ಬಂದಿದ್ದರು.. ವಿವಿಧ ಜಾತಿಯ ಜನರ ಕೋರಿಕೆಯಂತೆ ಅವರ ಜಾತಿಯ ಏಳಿಗೆಯ ಸಲುವಾಗಿ ಲಿಂಗದೀಕ್ಷೆ ನೀಡಿ ಸ್ವಾಮಿಗಳನ್ನು ಮಾಡಿಕೊಟ್ಟು ಮಠ ನಿರ್ಮಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದರು. ಅನೇಕ ಬಾರಿ ವಿದೇಶ ಪ್ರವಾಸ ಮಾಡಿರುವ ಇವರು ವಚನ ಸಾಹಿತ್ಯದ ಅಭ್ಯಾಸಕ್ಕೆ ಉತ್ತೇಜನ ಕೊಡಲು ವಚನಕಮ್ಮಟ ಪರೀಕ್ಷೆಗಳನ್ನು ಪ್ರಾಂಭಿಸಿದ್ದರು. ಬಸವೇಶ್ವರ ವೈದ್ಯಕೀಯ ಕಾಲೇಜು ಇವಲ್ಲದೆ ಬಸವತತ್ತ್ವ ಮಹಾವಿದ್ಯಾಲಯ ಗುರುಕುಲ ಅಲ್ಲಮಪ್ರಭು ಸಂಶೋಧನ ಕೇಂದ್ರಗಳುನ್ನು ಪ್ರಾಂಭಿಸಿದ್ದರು.
ದಸರಾ ಉತ್ಸವಕ್ಕೆ ಶರಣ ಸಂಸ್ಕೃತಿ ಉತ್ಸವ ಎಂದು ಹೆಸರಿಟ್ಟು ಹೊಸರೂಪ ಕೊಟ್ಟಿದ್ದಾರೆ. ಸಮಾಜ ಸುಧಾರಣಾ ಕಾರ್ಯ ವಚನ ಸಾಹಿತ್ಯ ಕುರಿತ ಉತ್ತಮ ಕೃತಿ ಇವುಗಳಿಗಾಗಿ ಬಸವಶ್ರೀ ಎಂಬ ಪ್ರತಿಷ್ಠಿತ ಪ್ರಶಸ್ತಿಯೊಂದನ್ನು ಸ್ಥಾಪಿಸಿ ವಿವಿಧ ಗಣ್ಯರಿಗೆ ನೀಡುತ್ತಾ ಬಂದಿದ್ದಾರೆ. ಮುರುಘವನ ನಿರ್ಮಾಣ, ವಸ್ತು ಸಂಗ್ರಾಲಯ ಸ್ಥಾಪನೆ, ವಿವಿಧೆಡೆ ಬಸವ ಕೇಂದ್ರಗಳ ಸ್ಥಾಪನೆ, ಮೂಢ ನಂಬಿಕೆಗಳನ್ನು ತೊಲಗಿಸಲು ವಿವಿಧ ಕಾರ್ಯಕ್ರಮ ಹೀಗೆ ಹಲವಾರು ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿದ್ದರು. ಅನೇಕ ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಶ್ರೀಮಠದ ಉಜ್ಜ್ವಲ ಪರಂಪರೆಯನ್ನು ಹೊಸರೀತಿಯಲ್ಲಿ ಮುಂದುವರಿಸುತ್ತಾ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ.

ಸಮಾಜ ಸೇವೆಯಲ್ಲಿ ಮುಂಚೂಣಿ

ಶ್ರೀ ಮಠವು ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಮಠವೆನಿಸಿದೆ. ಹಲವು ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಶ್ರೀಮಠಕ್ಕೆ ಪರಸ್ಥಳಗಳಿಂದ ಬಂದು ಹೋಗುವ ಜನರಿಗೆ ನಿತ್ಯದಾಸೋಹ ನಡೆಯುತ್ತದೆ. ಬಡವಿದ್ಯಾರ್ಥಿಗಳಿಗಾಗಿ ಹಲವೆಡೆ ಉಚಿತ ವಿದ್ಯಾರ್ಥಿ ನಿಲಯಗಳನ್ನು ತೆರೆಯಲಾಗಿದೆ.

ಆಶ್ರಯವಿಲ್ಲದ ಬಡವರಿಗೆ, ಹಿಂದುಳಿದವರಿಗೆ ಹಾಗೂ ದಲಿತರಿಗೆ ಮಠವು ನಿವೇಶನಗಳನ್ನಾಗಿ ಮಾಡಿ, ಉಚಿತವಾಗಿ ಹಂಚಿದೆ. ಹೀಗೆ ಹತ್ತು ಕೆಲವು ಜನಪರ ಕಾರ್ಯಗಳೊಂದಿಗೆ ಈ ಬೃಹನ್ಮಠವು ಆಧ್ಯಾತ್ಮಿಕದೊಂದಿಗೆ ಸಾಮಾಜಿಕ ಕಳಕಳಿಯನ್ನು ಹೊಂದಿದ ಮಠ ವೆನಿಸಿದೆ.

ಇದನ್ನೂ ಓದಿ| ಮುರುಘಾಶ್ರೀ ಪ್ರಕರಣ | ಶರಣರು ಈಗ ಕೈದಿ ನಂಬರ್‌ 2261

Exit mobile version