ಚಿತ್ರದುರ್ಗ: ಇಲ್ಲಿನ ಪ್ರತಿಷ್ಠಿತ ಮುರುಘಾಮಠದ ಶ್ರೀ ಶಿವಮೂರ್ತಿ ಮುರುಘಾಶರಣರ ವಿರುದ್ಧ ದಾಖಲಾಗಿರುವ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ ಹಲವು ಬೆಳವಣಿಗೆಗಳು ನಡೆದವು. ಒಂದು ಕಡೆ ಸಂತ್ರಸ್ತ ಬಾಲಕಿಯರನ್ನು ಕರೆದುಕೊಂಡು ಹೋಗಿ ಮುರುಘಾಮಠದಲ್ಲಿ ಮಹಜರು ನಡೆಸಲಾದರೆ ಇನ್ನೊಂದು ಕಡೆ ಶ್ರೀಗಳು ತಮ್ಮ ಬಂಧನದ ವಿರುದ್ಧ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದರು.
ಮುರುಘಾಮಠಕ್ಕೆ ಸೇರಿದ ಹೈಸ್ಕೂಲ್‌ನಲ್ಲಿ ೧೦ನೇ ತರಗತಿಯಲ್ಲಿ ಕಲಿಯುತ್ತಿರುವ ಇಬ್ಬರು ವಿದ್ಯಾರ್ಥಿನಿಯರು ಮಾಡಿರುವ ಆರೋಪ ಶ್ರೀಗಳನ್ನು ಬಂಧನದ ಸಾಧ್ಯತೆಯ ಬಾಗಿಲಿಗೆ ತಂದು ನಿಲ್ಲಿಸಿದೆ. ಒಂದು ಹಂತದಲ್ಲಿ ಬಂಧನವೇ ನಡೆದುಹೋಯಿತು ಎಂಬಂತೆ ಬಿಂಬಿತವಾಯಿತು. ಕೊನೆಗೆ ಸ್ವತಃ ಶ್ರೀಗಳೇ ಸ್ಪಷ್ಟೀಕರಣ ನೀಡಬೇಕಾಯಿತು.
ಶ್ರೀಗಳು ಮತ್ತು ನಾಲ್ವರ ವಿರುದ್ಧ ಮೈಸೂರು ಠಾಣೆಯಲ್ಲಿ ದಾಖಲಾದ ಪ್ರಕರಣ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾವಣೆಗೊಂಡಿದ್ದು, ಇಡೀ ಚಿತ್ರದುರ್ಗದ ಪೊಲೀಸ್ ಇಲಾಖೆ ಪ್ರಕರಣದ ಹಿಂದೆ ಬಿದ್ದಂತಿದೆ. ಸೋಮವಾರ ಡಿವೈಎಸ್‌ಪಿ ಅನಿಲ್ ಅವರ ನೇತೃತ್ವದಲ್ಲಿ ವಿದ್ಯಾರ್ಥಿನಿಯರನ್ನು ಮಠಕ್ಕೆ ಕರೆದುಕೊಂಡು ಹೋಗಿ ಮಹಜನರು ನಡೆಸಲಾಯಿತು. ವಿದ್ಯಾರ್ಥಿನಿಯರ ಮೇಲೆ ಮಠದಲ್ಲಿ ದೌರ್ಜನ್ಯ ನಡೆದಿದೆ ಎಂಬ ಆರೋಪ ಇರುವುದರಿಂದ ಅಲ್ಲೇ ಮಹಜರು ನಡೆಸಲಾಗಿದೆ. ಹಲವು ಗಂಟೆಗಳ ಕಾಲ ನಡೆದ ಮಹಜರಿನ ಬಳಿಕ ಈಗ ವಿದ್ಯಾರ್ಥಿನಿಯರನ್ನು ಪರಿವೀಕ್ಷಣಾಲಯಕ್ಕೆ ಕಳುಹಿಸಲಾಗಿದೆ. ಅವರಿಗೆ ಬಾಲಭವನದಲ್ಲಿ ರಾತ್ರಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದ್ದು, ಅದಕ್ಕೆ ವಿಶೇಷ ಭದ್ರತಾ ವ್ಯವಸ್ಥೆ ಸಜ್ಜುಗೊಳಿಸಲಾಗಿದೆ.
ನಾಳೆ ಹೇಳಿಕೆ ದಾಖಲು ಸಾಧ್ಯತೆ
ಸಂತ್ರಸ್ತ ವಿದ್ಯಾರ್ಥಿನಿಯರನ್ನು ಮಂಗಳವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಸಿಆರ್‌ಪಿಸಿ ಸೆಕ್ಷನ್ ೧೬೪ರ ಅಡಿ ಹೇಳಿಕೆ ದಾಖಲು ಮಾಡುವ ಸಾಧ್ಯತೆ. ಇದು ಪೂರ್ಣ ಪ್ರಮಾಣದಲ್ಲಿ ಇನ್ ಕ್ಯಾಮರಾ ಆಗಿರಲಿದೆ. ಚಿತ್ರದುರ್ಗ ಎರಡನೇ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಹೇಳಿಕೆ ದಾಖಲು ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಈ ನಡುವೆ, ಮುರುಘಾಶ್ರೀಗಳು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಸೆಪ್ಟೆಂಬರ್ ೧ರಂದು ನಡೆಯಲಿದೆ. ಹೀಗಾಗಿ ಮಂಗಳವಾರ ಮತ್ತು ಬುಧವಾರ ಏನೇನು ವಿದ್ಯಮಾನಗಳು ನಡೆಯಲಿವೆ ಎನ್ನುವುದು ಕುತೂಹಲ ಕೆರಳಿಸಿವೆ. ವಿದ್ಯಾರ್ಥಿನಿಯರ ಹೇಳಿಕೆ ದಾಖಲಾದ ಬಳಿಕ ಮುಂದಿನ ಹೆಜ್ಜೆಗಳು ನಿರ್ಧಾರವಾಗಲಿವೆ ಎಂದು ಹೇಳಲಾಗಿದೆ.
ಇದನ್ನೂ ಓದಿ| ಮುರುಘಾಶ್ರೀ ವಿರುದ್ಧದ ಪೋಕ್ಸೊ ಪ್ರಕರಣ ಬೇರೆ ರಾಜ್ಯಕ್ಕೆ ವರ್ಗಾಯಿಸಲು ಬಿಜೆಪಿ ಸಂಸದ ಲೆಹರ್ ಸಿಂಗ್ ಸಲಹೆ