Site icon Vistara News

Murugha Seer | ಮುರುಘಾ ಮಠಕ್ಕೆ ಆಡಳಿತಾಧಿಕಾರಿಯಾಗಿ ಪಿ.ಎಸ್. ವಸ್ತ್ರದ್ ನೇಮಕ

murugha matt vastrad mutt ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ

ಚಿತ್ರದುರ್ಗ: ಚಿತ್ರದುರ್ಗ ಮುರುಘಾಮಠದ ಮುರುಘಾಶ್ರೀ (Murugha Seer) ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿ ಅವರು, ಕಳೆದ 3 ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿರುವ ಕಾರಣ ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್. ವಸ್ತ್ರದ್ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಸರ್ಕಾರದ ಉಪ ಕಾರ್ಯದರ್ಶಿ ಟಿ.ಸಿ.ಕಾಂತರಾಜ್ ಆದೇಶಿಸಿದ್ದಾರೆ.

ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿರುವ ಆರೋಪಿ ಶಿವಮೂರ್ತಿ ಮುರುಘಾ ಶರಣರು ನ್ಯಾಯಾಂಗ ಬಂಧನದಲ್ಲಿರುವುದರಿಂದ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ. ಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡುವ ಸಂಬಂಧ ಸರ್ಕಾರದ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯವನ್ನು ಪಡೆದಿರುವುದಾಗಿ ರಾಜ್ಯ ಸರ್ಕಾರ ಆದೇಶ ಪ್ರತಿಯಲ್ಲಿ ಉಲ್ಲೇಖಿಸಿದೆ.

ಇಬ್ಬರ ಅಭಿಪ್ರಾಯದ ಮೇಲೆ ಈ ಕ್ರಮ
ಮಠದ ಟ್ರಸ್ಟಿಯಾಗಿರುವ ಶಿವಮೂರ್ತಿ ಮುರುಘಾ ಶರಣರು ನ್ಯಾಯಾಂಗ ಬಂಧನದಲ್ಲಿರುವುದರಿಂದ ಟ್ರಸ್ಟಿನ ಸ್ವತ್ತನ್ನು ರಕ್ಷಿಸುವ ದೃಷ್ಟಿಯಿಂದ ಭಾರತ ಸಂವಿಧಾನದ ಅನುಚ್ಛೇದ 52ರನ್ವಯ ಸರ್ಕಾರವು ಸದರಿ ಸಂಸ್ಥೆಗೆ ಆಡಳತಾಧಿಕಾರಿಯನ್ನು ನೇಮಿಸಬಹುದೆಂದು ಅಡ್ವೊಕೇಟ್‌ ಜನರಲ್‌ ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ | ಮೂರೂ ಕಡೆಯಿಂದ ಲಾಕ್‌ ಆದ ಸಿದ್ದರಾಮಯ್ಯ; ಮಗನ ಕ್ಷೇತ್ರದಲ್ಲೇ ಸ್ಪರ್ಧಿಸಲು ತೀರ್ಮಾನ?

ಅಲ್ಲದೆ, ಈ ಬಗ್ಗೆ ಸ್ಪಷ್ಟ ಅಭಿಪ್ರಾಯವನ್ನು ನೀಡುವಂತೆ ಚಿತ್ರದುರ್ಗ ಜಿಲ್ಲಾಧಿಕಾರಿ ಅವರನ್ನೂ ರಾಜ್ಯ ಸರ್ಕಾರ ಕೇಳಿತ್ತು. ಅವರೂ ಸಹ ಮುರುಘಾ ಶರಣರು ನ್ಯಾಯಾಂಗ ಬಂಧನದಲ್ಲಿರುವುದರಿಂದ ಮಠದ ಒಟ್ಟು ಸ್ಥಿರಾಸ್ತಿಗೆ ಮತ್ತು ಮಠದ ಹಣಕಾಸು ನಿರ್ವಹಣೆಯನ್ನು ನೋಡಿಕೊಳ್ಳುವುದು ಕಷ್ಟವಾಗುತ್ತದೆ. ಜತೆಗೆ ಈ ಟ್ರಸ್ಟ್ ಸಾರ್ವಜನಿಕ ಟ್ರಸ್ಟ್‌ ಆಗಿರುವುದರಿಂದ ಆಸ್ತಿಗಳ ನಿರ್ವಹಣೆಗೆ ತೊಡಕುಂಟಾಗುತ್ತಿದೆ. ಅಲ್ಲದೆ, ದುರಾಡಳಿತ ಹಾಗೂ ಹಣಕಾಸು ದುರುಪಯೋಗ ಆದಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗುವ ಸಂಭವ ಇರುತ್ತದೆ. ಇದರಿಂದ ಟ್ರಸ್ಟ್ ಮತ್ತು ವಿದ್ಯಾಸಂಸ್ಥೆಯ ನಿರ್ವಹಣೆಗೂ ತೊಂದರೆ ಉಂಟಾಗುತ್ತದೆ. ಅಲ್ಲದೆ, ಸದರಿ ಸಂಸ್ಥೆಗೆ ಶಿವಮೂರ್ತಿ ಮುರುಘಾ ಶರಣರು ಮಠದ ಆಜೀವ ಪೀಠಾಧಿಪತಿ ಹಾಗೂ ವಿದ್ಯಾ ಸಂಸ್ಥೆಗೆ ಆಜೀವ ಅಧ್ಯಕ್ಷರೂ ಆಗಿದ್ದಾರೆ. ಹೀಗಾಗಿ ಮಠದ ಹಾಗೂ ವಿದ್ಯಾ ಸಂಸ್ಥೆಗಳ ಅನನುಕೂಲಗಳನ್ನು ತಪ್ಪಿಸಲು ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಕಾನೂನು ರೀತ್ಯ ಕ್ರಮ ಕೈಗೊಳ್ಳುವುದು ಅವಶ್ಯಕತೆ ಇದೆ ಎಂದು ಚಿತ್ರದುರ್ಗ ಜಿಲ್ಲಾಧಿಕಾರಿ ವರದಿಯಲ್ಲಿ ತಿಳಿಸಿದ್ದರು ಎಂಬುದನ್ನು ಸರ್ಕಾರ ಈಗ ಹೊರಡಿಸಿರುವ ಆದೇಶ ಪ್ರತಿಯಲ್ಲಿ ಉಲ್ಲೇಖಿಸಿದೆ.

ಮುಂದಿನ ಆದೇಶದವರೆಗೆ ನೇಮಕ
ಮುರುಘಾ ಶರಣರು ನ್ಯಾಯಾಂಗ ಬಂಧನದಲ್ಲಿರುವುದರಿಂದ ಸದರಿ ಸಂಸ್ಥೆಯ ನಿರ್ವಹಣೆಯಲ್ಲಿ ಈ ಸಂಸ್ಥೆಯ ದಿನನಿತ್ಯದ ಕಾರ್ಯಚಟುವಟಿಕೆಗೆ ಹಾಗೂ ಮೇಲುಸ್ತುವಾರಿ ನಡೆಸಲು ಸಾರ್ವಜನಿಕ ಹಿತದೃಷ್ಟಿಯಿಂದ ಮಠದ ಚರಾ-ಸ್ಥಿರ ಆಸ್ತಿಗಳನ್ನು ಸಂರಕ್ಷಿಸುವ ಹಿತದೃಷ್ಟಿಯಿಂದ ಹಾಗೂ ಸಂಸ್ಥೆಯ ಹಣ ದುರುಪಯೋಗ ಆಗದಂತೆ ಲೆಕ್ಕಪತ್ರಗಳನ್ನು ನಿರ್ವಹಿಸುವ ಹಾಗೂ ಒಟ್ಟಾರೆ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಡೆಸುವ ಹಿತದೃಷ್ಟಿಯಿಂದ ಪಿ.ಎಸ್.ವಸ್ತ್ರದ್ ಅವರನ್ನು ಮುಂದಿನ ಆದೇಶದವರೆಗೆ ಸದರಿ ಟ್ರಸ್ಟ್ ಮತ್ತು ಶಿಕ್ಷಣ ಸಂಸ್ಥೆಗೆ ಆಡಳತಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಿದೆ.

ಈ ಮೊದಲು ನಿವೃತ್ತ ನ್ಯಾಯಮೂರ್ತಿ ಎಸ್‌.ಬಿ. ವಸ್ತ್ರದಮಠ ಅವರನ್ನು ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿಯನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿತ್ತು.

ಇದನ್ನೂ ಓದಿ | Karnataka Politics | ಜನಾರ್ದನ ರೆಡ್ಡಿ ಹೊಸ ಪಕ್ಷ ಪ್ರಸ್ತಾಪ; ಬಿಜೆಪಿ ಮೇಲೆ ಒತ್ತಡ ತಂತ್ರವೇ?

Exit mobile version