Site icon Vistara News

Murugha Seer | ಮುರುಘಾ ಮಠದ ಹಾಸ್ಟೆಲ್‌ನಲ್ಲಿದ್ದ ಅನಾಥ ಮಕ್ಕಳ ದಾಖಲಾತಿ, ಪೋಷಣೆ, ಬಿಡುಗಡೆ ತನಿಖೆಗೆ ಆದೇಶ

murugha mutt ಹಾಸ್ಟೆಲ್‌ನಲ್ಲಿ ಅನಾಥ ಮಕ್ಕಳ ತನಿಖೆ

ಚಿತ್ರದುರ್ಗ: ಮುರುಘಾ ಮಠದಲ್ಲಿ ಮುರುಘಾ ಶರಣರ (Murugha Seer) ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಠದ ಆಡಳಿತಕ್ಕೊಳಪಟ್ಟಿರುವ ಬಸವೇಶ್ವರ ನಿರ್ಗತಿಕ ಮಕ್ಕಳ ಕುಟೀರ ಹಾಗೂ ಅಕ್ಕಮಹಾದೇವಿ ವಸತಿನಿಲಯದಲ್ಲಿನ ಅನಾಥ ಮಕ್ಕಳ ದಾಖಲಾತಿ, ಪೋಷಣೆ ಮತ್ತು ಬಿಡುಗಡೆ ಪ್ರಕ್ರಿಯೆಗಳ ತನಿಖೆ ನಡೆಸುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಅಪರ ಜಿಲ್ಲಾಧಿಕಾರಿ ಬಾಲಕೃಷ್ಣ ಸೂಚನೆ ನೀಡಿದ್ದಾರೆ.

ಚಿತ್ರದುರ್ಗದ ಮುರುಘಾ ಮಠವು ಶೋಷಣೆಗಳ ತಾಣವಾಗಿದ್ದು, ಅನೇಕ ವರ್ಷಗಳಿಂದ ಅನಾಥ ಮಕ್ಕಳಿಗೆ ಆಶ್ರಯ ನೀಡುತ್ತಾ ಬಂದಿದೆ. ಹೀಗೆ ಅನಾಥ ಮಕ್ಕಳ ಪೋಷಣೆ ಮಾಡುವ ಯಾವುದೇ ವ್ಯಕ್ತಿ ಇಲ್ಲವೇ ಸಂಸ್ಥೆಯು ಜುವೆನೈಲ್‌ ಜಸ್ಟಿಸ್‌ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ ೨೦೧೫ರ ಕನಿಷ್ಠ ಮಾರ್ಗಸೂಚಿಯನ್ನು ಪಾಲನೆ ಮಾಡಬೇಕು. ಇಲ್ಲಿ ಈ ಮಾರ್ಗಸೂಚಿಯನ್ನು ಪಾಲನೆ ಮಾಡಲಾಗಿದೆಯೇ ಎಂದು ಕೇಳಿ ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಪರಶುರಾಮ್‌ ಎಂ.ಎಲ್.‌ ಚಿತ್ರದುರ್ಗದ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಅಪರ ಜಿಲ್ಲಾಧಿಕಾರಿ ಬಾಲಕೃಷ್ಣ ಅವರು ಸಮಗ್ರ ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ.

ಒಡನಾಡಿ ಸಂಸ್ಥೆಯ ದೂರಿನಲ್ಲೇನಿತ್ತು?
ಮುರುಘಾ ಮಠವು ೨೨ ಅನಾಥ ಮಕ್ಕಳಿಗೆ ಆಶ್ರಯವನ್ನು ಕಲ್ಪಿಸಿದ್ದು, ಇವರಲ್ಲಿ ೭ ಮಕ್ಕಳು ದಾಖಲಾತಿ ಪಡೆಯುವ ವೇಳೆ ೬ ವರ್ಷಗಳಿಂದ ಕಡಿಮೆ ವಯೋಮಾನದವರಾಗಿರುತ್ತಾರೆ. ಪ್ರಸ್ತುತ ೨೦೨೨ಕ್ಕೆ ೫ ಮಕ್ಕಳು ೧೮ ವರ್ಷಕ್ಕಿಂತ ಕಡಿಮೆ ವಯೋಮಾನದವರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಕೆಳಗಿನ ಅಂಶಗಳ ಮೇಲೆ ತನಿಖೆ ನಡೆಸಬೇಕು ಎಂದು ಒಡನಾಡಿ ಸಂಸ್ಥೆಯು ದೂರಿನಲ್ಲಿ ಉಲ್ಲೇಖಿಸಿತ್ತು.

೧. ಅನಾಥ ಮಕ್ಕಳ ಸ್ಥಿತಿಗತಿ
೨. ಅನಾಥರಾದರೆ ಅವರ ತಂದೆ-ತಾಯಿಗಳ ಪತ್ತೆಗಾಗಿ ಕೈಗೊಂಡ ಕ್ರಮಗಳು ಮತ್ತು ಅವುಗಳ ವಿವರಣೆ
3. ಯಾವ ಕಾರಣಗಳಿಂದ ಆ ಮಕ್ಕಳು ಅನಾಥರಾದವರು ಮತ್ತು ಅದರ ಬಗ್ಗೆ ವರದಿ
೪. ಮುರುಘಾ ಮಠವು ಜುವೆನೈಲ್ ಜಸ್ಟಿಸ್‌ ಕಾಯ್ದೆ ಅನ್ವಯ ನೋಂದಣಿ ಮಾಡಿಕೊಂಡಿದೆಯೇ?
೫. ಕಾಯ್ದೆ ಅನ್ವಯ ಅನಾಥ ಮಕ್ಕಳ ದಾಖಲಾತಿ ಪ್ರಕ್ರಿಯೆಯನ್ನು ಮಾಡಿಕೊಳ್ಳಲಾಗುತ್ತಿದೆಯೇ?
೬. ೭ ಮಕ್ಕಳು 6 ವರ್ಷಕ್ಕಿಂತ ಕಡಿಮೆ ವಯೋಮಾನದವರಾಗಿದ್ದು, ದತ್ತು ಪಡೆಯಲು ವಿಶೇಷ ಸೌಲಭ್ಯಗಳ ಅವಶ್ಯಕತೆಗಳಿವೆ. ಅವುಗಳನ್ನು ಅನುಸರಿಸಲಾಗಿದೆಯೇ?
7. ಮಕ್ಕಳ ಕಲ್ಯಾಣ ಸಮಿತಿಯವರು ಕಾಯ್ದೆಯಲ್ಲಿ ತಿಳಿಸಿರುವಂತೆ ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆಯೇ, ನಿಭಾಯಿಸಿದಲ್ಲಿ ಅವುಗಳ ವರದಿಗಳು
೮. ಒಂದು ವೇಳೆ ಜುವೆನೈಲ್ ಜಸ್ಟಿಸ್ ಕಾಯ್ದೆಯ 3 ಅಧಿನಿಯಮದಲ್ಲಿ ಮಠವು ನೋಂದಣಿ ಆಗಿದ್ದಲ್ಲಿ ಮಠವು ಮಾರ್ಗಸೂಚಿಯಂತೆ ಮಕ್ಕಳ ಪುನರ್ವಸತಿ ಮತ್ತು ಮರುಸಮೀಕರಣ ಪ್ರಕ್ರಿಯೆಯಲ್ಲಿ ಸೇವೆಗಳನ್ನು ಒದಗಿಸಲಾಗುತ್ತಿತ್ತೇ?
೯. ಚಾಲನ ಸಮಿತಿಯ ಪ್ರಾಧಿಕಾರದ ಕಾರ್ಯವೈಖರಿ
10. ಸಂಸ್ಥೆಯಲ್ಲಿ ಮಠದಲ್ಲಿ) ವ್ಯವಸ್ಥಾಪಕ ಸಮಿತಿ ರಚನೆ ಮತ್ತು ಕಾರ್ಯಗಳ ವರದಿ
೧೧. ಪತಿ ವರ್ಷಕ್ಕೊಮ್ಮೆ ವಿಶೇಷ ದತ್ತಕದ ಏಜೆನ್ಸಿ (ಮಠದ) ತಪಾಸಣೆ
12. ಸರ್ಕಾರಕ್ಕೆ ವರದಿಯೊಂದಿಗೆ ದತ್ತಿ ಪ್ರಕ್ರಿಯೆಗೆ ಏಕೆ ಒಳಗಾಗಲಿಲ್ಲ?
೧೩. ಈ ಅನಾಥ ಮಕ್ಕಳ ಬಿಡುಗಡೆಗಾಗಿ ಸಿಡಬ್ಲ್ಯೂಸಿ ಕೈಗೊಂಡ ಕ್ರಮಗಳೇನು?

ಈ ಎಲ್ಲ ಅಂಶಗಳನ್ನೊಳಗೊಂಡಂತೆ ಒಡನಾಡಿ ಸಂಸ್ಥೆಯು ತನಿಖೆಗೆ ಆಗ್ರಹಿಸಿದ್ದು, ಮುಖ್ಯವಾಗಿ ಅನಾಥ ಮಕ್ಕಳ ಬದುಕಿನ ವಿಷಯದಲ್ಲಿ ದಯಮಾಡಿ ನಿರ್ದಿಷ್ಟ ಕ್ರಮಗಳನ್ನು ಜರುಗಿಸಬೇಕೆಂದು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಮಕ್ಕಳ ರಕ್ಷಣಾ ಘಟಕಕ್ಕೆ ದೂರು ನೀಡಿ ಒತ್ತಾಯ ಮಾಡಿದೆ.

ಇದನ್ನೂ ಓದಿ | Mudhol murder | ಅಪ್ಪನನ್ನು ಕೊಂದು 4 ದಿನದ ಬಳಿಕ ತಾಯಿ-ಅಣ್ಣನ ಬಳಿ ಬಾಯಿ ಬಿಟ್ಟಿದ್ದ ವಿಠಲ ಕುಳಲಿ!

Exit mobile version