ಮೈಸೂರು: ತಮ್ಮ ಮೇಲೆ ಕೇಳಿಬಂದಿರುವ ವಿದ್ಯಾರ್ಥಿಗಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಮುಚ್ಚಿ ಹಾಕಲು ಮುರುಘಾ ಮಠದ ಮುರುಘಾ ಶರಣರು (Murugha Seer) ಯತ್ನಿಸಿದ್ದು, ಸಂತ್ರಸ್ತ ಬಾಲಕಿ ಹೇಳಿಕೆ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ತನಿಖೆಗೆ ಆದೇಶ ನೀಡಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಒಡನಾಡಿ ಸೇವಾ ಸಂಸ್ಥೆ ನಿರ್ದೇಶಕ ಸ್ಟ್ಯಾನ್ಲಿ ಪತ್ರ ಬರೆದು ಕೋರಿದ್ದಾರೆ.
ಈಗಾಗಲೇ ಪೋಕ್ಸೋ ಕಾಯ್ದೆ ಅಡಿ ಬಂಧಿತರಾಗಿರುವ ಮುರುಘಾ ಶರಣರು ಪ್ರಕರಣದಿಂದ ಹೊರಗೆ ಬರಲು ಆಮಿಷಗಳನ್ನು ಒಡ್ಡಿದ್ದಾರೆ. ಇದರ ಭಾಗವಾಗಿ ಸಂತ್ರಸ್ತ ಬಾಲಕಿಯೊಬ್ಬಳ ತಂದೆಗೆ ಹಣ ನೀಡಿ ಬಾಯಿ ಮುಚ್ಚಿಸಲಾಗಿದೆ. ಆ ಬಾಲಕಿಗೆ ಇಷ್ಟವಿಲ್ಲದಿದ್ದರೂ ತಂದೆ ಮತ್ತು ಚಿಕ್ಕಪ್ಪನ ಜತೆಗೆ ಚಿತ್ರದುರ್ಗದ ಸಿಡಬ್ಲ್ಯೂಸಿಯವರು ಕಳುಹಿಸಿ ಕೊಟ್ಟಿದ್ದರು. ಇದು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ವಿರೋಧ ಮಾಡಿದ್ದ ಬಾಲಕಿ
ಈ ಎಲ್ಲ ವೃತ್ತಾಂತವು ಚಿತ್ರದುರ್ಗದ ಮಕ್ಕಳ ರಕ್ಷಣಾ ಸಮಿತಿ ಸುಪರ್ದಿಯಲ್ಲಿದ್ದಾಗ ನಡೆದಿದೆ ಎನ್ನಲಾಗಿದೆ. ಅಲ್ಲಿನ ಬಾಲ ಮಂದಿರದ ಸುಪರ್ದಿಯಲ್ಲಿ ಮಕ್ಕಳು ಇದ್ದಾಗ ಒಮ್ಮೆ ಬಾಲ ಮಂದಿರದ ಸಿಬ್ಬಂದಿಗೆ ಕರೆ ಬಂದಿದೆ. ಆಗ ಅವರು ಲೌಡ್ ಸ್ಪೀಕರ್ ಮೂಲಕ ಸಂತ್ರಸ್ತ ಬಾಲಕಿ ಬಳಿ ಮಾತನಾಡಿಸಿದ್ದಾರೆ. ಆ ಕಡೆಯಿಂದ ಬಾಲಕಿಯ ತಂದೆ ಮಾತನಾಡಿದ್ದು, ಸ್ವಾಮೀಜಿ ನಮಗೆ ಹಣ ಕೊಟ್ಟಿದ್ದಾರೆ. ದೂರು ನೀಡುವುದು ಬೇಡ ಎಂದಿದ್ದರು. ಇದನ್ನು ಇನ್ನೊಬ್ಬ ಸಂತ್ರಸ್ತ ಬಾಲಕಿ ಖುದ್ದಾಗಿ ಕೇಳಿಸಿಕೊಂಡಿದ್ದಾಗಿ ಹೇಳಿಕೆ ನೀಡಿದ್ದಾಳೆಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ | Murugha seer Case| ಶ್ರೀಗಳ ವಿರುದ್ಧ ಪಿತೂರಿ ಮಾಡಿದ ಎಸ್.ಕೆ. ಬಸವರಾಜನ್, ಬಸವರಾಜೇಂದ್ರ ಜೈಲಿಗೆ
ಪತ್ರದಲ್ಲೇನಿದೆ?
ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಶರಣರಿಂದ ಸತತ ಅತ್ಯಾಚಾರಕ್ಕೊಳಪಟ್ಟು ಸದ್ಯ ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತ ಬಾಲಕಿಯು ಆಪ್ತ ಸಮಾಲೋಚನೆಯ ಸಂದರ್ಭದಲ್ಲಿ ಗುರುತರವಾದ ಮಾಹಿತಿಯನ್ನು ನಮ್ಮ ಮುಂದೆ ಹಂಚಿಕೊಂಡಿರುತ್ತಾಳೆ. ಈ ಹಿಂದೆ ಚಿತ್ರದುರ್ಗದ ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಯಲ್ಲಿ ಇದ್ದಂತಹ ಸಂದರ್ಭದಲ್ಲಿ ಮುರುಘಾ ಶರಣರಿಂದ ದೌರ್ಜನ್ಯಕ್ಕೊಳಪಟ್ಟ ತನ್ನ ಜತೆಗಾರ್ತಿ ಬಾಲಕಿಗೆ ಒಂದು ದಿನ ಮುಸ್ಸಂಜೆಯ ಹೊತ್ತು ಆಕೆಯ ತಂದೆಯಿಂದ ಕರೆ ಬಂದಿದೆ.
ಬಾಲ ಭವನದ ದೂರವಾಣಿಗೆ ಆಕೆಯ ತಂದೆ ಕರೆ ಮಾಡಿದ್ದರು. ಕರೆ ಬಂದಾಗ ಅದನ್ನು ಸ್ವೀಕರಿಸಿದ ಬಾಲ ಭವನದ ಸಿಬ್ಬಂದಿ ಲೌಡ್ ಸ್ಪೀಕರ್ ಆನ್ ಮಾಡಿ ಮಾತನಾಡಿಸಿದರು. ಅಲ್ಲಿ ಇಬ್ಬರು ಮಹಿಳಾ ಸಿಬ್ಬಂದಿ ಇದ್ದರು. ನಾನು ಸಹ ಜತೆಗಿದ್ದೆ. ಆ ಕಡೆಯಿಂದ ಕರೆ ಮಾಡಿದ್ದ ನನ್ನ ಗೆಳತಿಯ ತಂದೆ “ಸ್ವಾಮಿಗಳು ನಮ್ಮನ್ನು ನೋಡಿಕೊಂಡಿದ್ದಾರೆ. ಹಣವನ್ನು ಕೊಟ್ಟಿದ್ದಾರೆ. ನೀನು ಯಾವ ಕೇಸನ್ನೂ ಮುಂದುವರಿಸುವುದು ಬೇಡ. ದೂರನ್ನು ವಾಪಸು ತೆಗೆದುಕೊಂಡು ನನ್ನ ಜತೆ ಬರಲು ನೋಡು” ಎಂದು ಹೇಳಿದ್ದರು. ಇದನ್ನು ತಾನು ಕಿವಿಯಾರೆ ಕೇಳಿಸಿಕೊಂಡಿದ್ದೆ ಎಂದು ನಮ್ಮ ರಕ್ಷಣೆಯಲ್ಲಿರುವ ಸಂತ್ರಸ್ತ ಬಾಲಕಿ ಹೇಳಿಕೆ ನೀಡಿದ್ದಾಳೆ.
ಆದರೆ, ಆ ಬಾಲಕಿಯು ತನ್ನ ಮೇಲೆ ಆಗಿದ್ದ ದೌರ್ಜನ್ಯವನ್ನು ಪ್ರಬಲವಾಗಿ ಪ್ರತಿಭಟಿಸುತ್ತಲೇ ಬಂದಿದ್ದಳು. ತನ್ನನ್ನು ಯಾವುದೇ ರೀತಿಯಲ್ಲಿ ನೋಡಿಕೊಳ್ಳದೆ ತೊಂದರೆಗೊಳಪಡಿಸುತ್ತಿದ್ದ ಕುಡುಕ ತಂದೆ ಹಾಗೂ ಚಿಕ್ಕಪ್ಪನ ವಿರುದ್ಧ ಬಹಿರಂಗವಾಗಿಯೇ ತನ್ನ ಅಸಮಾಧಾನವನ್ನು ವ್ಯಕ್ತಪಡಿಸುತ್ತಲೇ ಇದ್ದುದಲ್ಲದೆ ಒಂದು ಹಂತದಲ್ಲಿ ಅವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲೂ ದೂರನ್ನು ದಾಖಲಿಸಿರುತ್ತಾಳೆ. ನನ್ನನ್ನು ದಯಮಾಡಿ ಮೈಸೂರಿನ ಒಡನಾಡಿ ಸಂಸ್ಥೆಗಾದರೂ ಕಳುಹಿಸಿಕೊಡಿ. ಆದರೆ, ನನ್ನ ತಂದೆ ಅಥವಾ ಚಿಕ್ಕಪ್ಪನೊಂದಿಗೆ ಕಳುಹಿಸಬೇಡಿ ಎಂದು ದೂರಿನಲ್ಲಿ ವಿನಂತಿಸಿಕೊಂಡಿದ್ದಳು.
ಇದನ್ನೂ ಓದಿ | Murugha Seer | ಮುರುಘಾಶ್ರೀ ವಿರುದ್ಧ ಸುಳ್ಳು ದೂರಿಗೆ ಪಿತೂರಿ; ಮಠದ ಅಡುಗೆ ಸಹಾಯಕಿ ಬಂಧನ
ಆದರೂ, ಬಾಲ ನ್ಯಾಯ ಕಾಯ್ದೆಯ ವಿರುದ್ಧ, ಮಗುವಿನ ಇಚ್ಛೆ ಹಾಗೂ ಹಿತಾಸಕ್ತಿಯನ್ನು ತಿರಸ್ಕರಿಸಿ ಆರೋಪಿಯ ಪರ ನಿಂತಿದ್ದ ಚಿಕ್ಕಪ್ಪ ಹಾಗೂ ತಂದೆಯೊಡನೆ ಚಿತ್ರದುರ್ಗದ ಸಿಡಬ್ಲ್ಯೂಸಿ ಮಗುವನ್ನು ಕಳುಹಿಸಿ ಕೊಟ್ಟಿದ್ದು ಅನುಮಾನ ಮೂಡಿಸಿದೆ. ಇವರ ಈ ಹೆಜ್ಜೆಗೆ ಮತ್ತೊಬ್ಬ ಬಾಲಕಿ ನೀಡಿರುವ ಹೇಳಿಕೆಯು ಪೂರಕವಾಗಿ ನಿಂತಿದೆ.
ಮಕ್ಕಳ ಮೇಲೆ ಹೀನಾತಿಹೀನವಾಗಿ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಹಣದ ಆಮಿಷ ಒಡ್ಡಿ ಮುಚ್ಚಿಹಾಕಲು ಆರೋಪಿಗಳು ಪ್ರಯತ್ನಿಸುತ್ತಿರುವುದು ಇದರಿಂದ ಸ್ಪಷ್ಟವಾಗುತ್ತಿದೆ. ಆದುದರಿಂದ ಈ ಪತ್ರವನ್ನು ದಯಮಾಡಿ ಗಂಭೀರವಾಗಿ ಪರಿಗಣಿಸಿ ಆಯೋಗದ ಮೂಲಕ ಒಂದು ವಿಶೇಷ ತನಿಖಾ ಸಮಿತಿಯನ್ನು ರಚಿಸಿ ಚಿತ್ರದುರ್ಗ ಸಿಡಬ್ಲ್ಯೂಸಿ ಅಧ್ಯಕ್ಷರನ್ನು, ಸಿಬ್ಬಂದಿಯನ್ನು, ಶೋಷಣೆಗೊಳಪಟ್ಟ ಮಕ್ಕಳನ್ನು ಹಾಗೂ ಆ ಹುಡುಗಿಯ ತಂದೆ ಹಾಗೂ ಚಿಕ್ಕಪ್ಪನನ್ನು ವಿಚಾರಣೆಗೊಳಪಡಿಸಬೇಕಾಗಿ ಸಾಮಾಜಿಕ ಕಾಳಜಿಯೊಡನೆ ಕೇಳಿಕೊಳ್ಳುತ್ತಿದ್ದೇನೆ.
ಇದರಷ್ಟೇ ಮುಖ್ಯವಾಗಿ ಆರೋಪಿಗಳಿಂದ ಅತ್ಯಾಚಾರಕ್ಕೊಳಪಟ್ಟ ಅಪ್ರಾಪ್ತ ಸಹೋದರಿಯರ ತಾಯಿಯ ಮೇಲೆ ಸುಳ್ಳು ದೂರನ್ನು ಹೊರಿಸಿ, ವಿಚಾರಣೆಯ ನೆಪದಲ್ಲಿ ಚಿತ್ರದುರ್ಗ ಪೊಲೀಸರು ಆಕೆಯನ್ನು ಕರೆದುಕೊಂಡು ಹೋಗಿ ಒಂದು ವಾರವಾಗಿದೆ. ಪೊಲೀಸರ ಈ ಅಮಾನವೀಯ ನಡೆಯಿಂದ ದೂರುದಾರಳಾದ ಮಹಿಳೆ ಆತಂಕದಲ್ಲಿದ್ದಾಳೆ. ಅಲ್ಲದೆ ಆಕೆಯ ಮಕ್ಕಳಿಬ್ಬರೂ ತಾಯಿಯಿಂದ ದೂರವಾಗಿ ಮಾನಸಿಕ ಕ್ಷೋಭೆಗೆ ಒಳಗಾಗಿರುತ್ತಾರೆ. ಹಾಗಾಗಿ ಅವರೊಡನೆ ಸರ್ಕಾರ ಸದಾ ಇರುತ್ತದೆ ಎಂಬ ಭರವಸೆಯನ್ನು ನೀಡುವುದು ಅತ್ಯಗತ್ಯವಾಗಿರುತ್ತದೆ. ಆದುದರಿಂದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರಾದ ತಾವು ನಮ್ಮ ಈ ಮನವಿಯನ್ನು ಪರಿಗಣಿಸಿ ಮೇಲ್ಮಟ್ಟದ ಸಮಾಲೋಚನಾ ಹಾಗೂ ಸತ್ಯಶೋಧನಾ ಸಮಿತಿಯೊಂದನ್ನು ಒಡನಾಡಿಗೆ ಕಳುಹಿಸಿ, ಮಕ್ಕಳೊಂದಿಗೆ ಆಪ್ತ ಸಮಾಲೋಚನೆ ನಡೆಸಿ, ಸಾಂತ್ವನ ಹಾಗೂ ಧೈರ್ಯ ತುಂಬುವ ಕಾರ್ಯವನ್ನು ಮಾಡುವುದರ ಮೂಲಕ ಪಡೆದ ಸತ್ಯಶೋಧನಾ ವರದಿಯನ್ನು ಸರ್ಕಾರ ಹಾಗೂ ನ್ಯಾಯಾಂಗದ ಮುಂದೆ ಮಂಡಿಸಬೇಕಾಗಿ ವಿನಮ್ರ ಮನವಿ ಎಂದು ಸ್ಟ್ಯಾನ್ಲಿ ಕೆ.ವಿ. ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ | Murugha Seer | ಪ್ರಚೋದನೆ, ಕಳವು ಪ್ರಕರಣದಲ್ಲಿ ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಬಂಧನ; 4 ದಿನ ಕಸ್ಟಡಿಗೆ