ಚಿತ್ರದುರ್ಗ: ಇಬ್ಬರು ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾಶರಣರಿಗೆ ನ್ಯಾಯಾಲಯವು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದೆ. ನ್ಯಾಯಾಲಯದ ಆದೇಶದಿಂದಾಗಿ ಮುರುಘಾಶರಣರು ೧೪ ದಿನ ಜೈಲಿನಲ್ಲಿಯೇ ಇರಬೇಕಾಗುತ್ತದೆ.
ಪೋಕ್ಸೊ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿ, ಸಂತ್ರಸ್ತೆಯರು ಹೇಳಿಕೆ ನೀಡಿದ ಬಳಿಕ ಗುರುವಾರ ರಾತ್ರಿ ೧೦ ಗಂಟೆ ಸುಮಾರಿಗೆ ಶ್ರೀಗಳನ್ನು ಬಂಧಿಸಿದ ಪೊಲೀಸರು ರಾತ್ರೋರಾತ್ರಿ ಚಳ್ಳಕೆರೆ ಡಿವೈಎಸ್‌ಪಿ ಕಚೇರಿಯಲ್ಲಿ ವಿಚಾರಣೆ ನಡೆಸಿದರು. ವಿಚಾರಣೆ ನಡೆಸಿದ ನಂತರ ಶ್ರೀಗಳನ್ನು ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಯಿತು.
ವೈದ್ಯಕೀಯ ತಪಾಸಣೆಯ ವರದಿ ಬಂದ ಬಳಿಕ ರಾತ್ರಿ ೨.೩೦ರ ಸುಮಾರಿಗೆ ಮುರುಘಾ ಮಠದ ಶ್ರೀಗಳನ್ನು ಚಿತ್ರದುರ್ಗದ ೧ನೇ ಹೆಚ್ಚುವರಿ ಸೇಷನ್ಸ್ ಕೋರ್ಟ್ ನ್ಯಾಯಾಧೀಶೆ ಕೋಮಲಾ ಅವರ ಎದುರು ಹಾಜರುಪಡಿಸಲಾಯಿತು. ಶ್ರೀಗಳ ವಿರುದ್ಧದ ಕೇಸ್ ಹಾಗೂ ವೈದ್ಯಕೀಯ ತಪಾಸಣೆ ವರದಿ ಪರಿಶೀಲಿಸಿದ ನ್ಯಾಯಾಧೀಶರು ಶ್ರೀಗಳನ್ನು ನ್ಯಾಯಾಂಗ ಬಂಧನಕ್ಕೆ ವಹಿಸಿದರು.
ಮುರುಘಾ ಮಠದ ಹಾಸ್ಟೆಲ್‌ನಲ್ಲಿ ಓದುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಶ್ರೀಗಳು ಲೈಂಗಿಕ ದೌರ್ಜನ್ಯ ಎಸಗಿದ ಆರೋಪವಿದೆ. ಅವರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಕೇಸ್ ಗಂಭೀರ ಸ್ವರೂಪ ಪಡೆದಿದೆ.
ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಬಿಳಿ ಶಾಲು ಹೊದ್ದು ಶಾಂತವಾಗಿಯೇ ಇದ್ದ ಶ್ರೀಗಳು, ಹೇಗಿದ್ದವು ಬಂಧನದ ಕ್ಷಣಗಳು?