ಬೆಂಗಳೂರು: ಚಿತ್ರದುರ್ಗ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ (Murugha Shri) ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿರುವ ಸಂತ್ರಸ್ತ ಬಾಲಕಿಯರನ್ನು ಭಾನುವಾರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಅವರ ಹೇಳಿಕೆಯನ್ನು ದಾಖಲಿಸಲು ಸೋಮವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತಿದೆ. ಈ ವೇಳೆ, ಶ್ರೀಗಳು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಸಂತ್ರಸ್ತ ಬಾಲಕಿಯರು ಹೇಳಿಕೆಯನ್ನು ದಾಖಲಿಸಿದರೆ ಶ್ರೀಗಳ ಬಂಧನ ನಡೆಯುವ ಸಾಧ್ಯತೆ ಇರುತ್ತದೆ. ಶ್ರೀಗಳ ವಿರುದ್ಧ ಪ್ರಕರಣವು ಶನಿವಾರ ದಾಖಲಾಗುತ್ತಿದ್ದಂತೆ ಭಾರೀ ಸಂಚನಲನ ಸೃಷ್ಟಿಸಿದ ಈ ಪ್ರಕರಣವು ಅನೇಕ ತಿರುವುಗಳನ್ನು ಪಡೆದುಕೊಂಡಿದೆ.
ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಭಾನುವಾರ ಸತತ ಒಂದು ಗಂಟೆ ಕಾಲ ಸಂತ್ರಸ್ತ ಬಾಲಕಿಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಡಾ. ಉಮಾ ಅವರು ಸಂತ್ರಸ್ತ ಬಾಲಕಿಯರ ಮೆಡಿಕಲ್ ಟೆಸ್ಟ್ ಪೂರೈಸಿದರು. ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನಿಯಮಗಳ ಅನುಸಾರ ಸಂತ್ರಸ್ತೆಯರನ್ನು ಮೊದಲಿಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಬಾಲಕಿಯರ ವೈದ್ಯಕೀಯ ಪರೀಕ್ಷೆ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲಾ ಎಸ್‌ಪಿ ಪಿ ಕೆ ಪರಶುರಾಮ್ ಅವರು ಭೇಟಿ ನೀಡಿ, ತನಿಖಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಸೋಮವಾರ ಜಡ್ಜ್ ಮುಂದೆ ಹೇಳಿಕೆ ದಾಖಲು
ವೈದ್ಯಕೀಯ ಪರೀಕ್ಷೆಯನ್ನು ಪೂರೈಸಿರುವ ಸಂತ್ರಸ್ತ ಬಾಲಕಿಯರನ್ನು ನಾಳೆ ಅಂದರೆ, ಸೋಮವಾರ ನ್ಯಾಯಾಧೀಶರ ಮುಂದೆ ಹಾಜರಪಡಿಸಲಾಗುತ್ತಿದೆ. ವಾಸ್ತವದಲ್ಲಿ ಮೆಡಿಕಲ್ ಟೆಸ್ಟ್ ಪೂರ್ತಿಗೊಂಡ ಬಳಿಕವೇ ಭಾನುವಾರವೇ ಬಾಲಕಿಯರಿಂದ ಹೇಳಿಕೆ ದಾಖಲಿಸುವುದಕ್ಕಾಗಿ ನ್ಯಾಯಾಧೀಶರದಿಂದ ಹಾಜರುಪಡಿಸಲು ಯೋಜಿಸಲಾಗಿತ್ತು. ಆದರೆ, ಈಗ ಗೊತ್ತಾಗಿರುವ ಮಾಹಿತಿಗಳ ಪ್ರಕಾರ, ಸಂತ್ರಸ್ತ ಬಾಲಕಿಯರನ್ನು ಸೋಮವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಅವರಿಂದ ಸೆಕ್ಷನ್ 164 ಅಡಿ ಸ್ಟೇಟ್ಮೆಂಟ್ ದಾಖಲಿಸಲು ತನಿಖಾಧಿಕಾರಿಗಳು ಮುಂದಾಗಿದ್ದಾರೆ.
ಶ್ರೀಗಳ ಭವಿಷ್ಯ ನಿರ್ಧರಿಸಲಿದೆ ಹೇಳಿಕೆ
ಜಡ್ಜ್ ಮುಂದೆ ಹಾಜರಾಗಿ ಸಂತ್ರಸ್ತ ಬಾಲಕಿಯರು ಯಾವ ಹೇಳಿಕೆಯನ್ನು ನೀಡಲಿದ್ದಾರೆಂಬುದರ ಆಧಾರದ ಮೇಲೆ ಮುರುಘಾ ಶರಣರ ಭವಿಷ್ಯ ನಿರ್ಧಾರವಾಗಲಿದೆ. ಒಂದೊಮ್ಮೆ ಶ್ರೀಗಳಿಂದ ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಸಂತ್ರಸ್ತ ಬಾಲಕಿಯರು ಹೇಳಿದರೆ, ಶ್ರೀಗಳಿಗೆ ಕಷ್ಟ ತಪ್ಪಿದ್ದಲ್ಲ. ತನಿಖಾಧಿಕಾರಿಗಳು ಕೂಡಲೇ ಶ್ರೀಗಳನ್ನು ಬಂಧಿಸಿ, ವಿಚಾರಣೆ ನಡೆಸಬೇಕಾಗುತ್ತದೆ. ಒಂದೊಮ್ಮೆ ಬಾಲಕಿಯರು, ಶ್ರೀಗಳಿಂದ ಯಾವುದೇ ತಪ್ಪು ನಡೆದಿಲ್ಲ ಎಂದು ಹೇಳಿದರೆ, ಬಂಧನದಿಂದ ಪಾರಾಗಲಿದ್ದಾರೆ. ಹಾಗಾಗಿ, ಸೋಮವಾರ ನಡೆಯುವ ಬೆಳವಣಿಗೆಗಳ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ.
ಮಹಿಮಾ ಪಟೇಲ್ ಭೇಟಿ
ಮಾಜಿ ಶಾಸಕರಾದ ಮಹಿಮಾ ಪಟೇಲ್ ಅವರು ಮಠಕ್ಕೆ ಭೇಟಿ ನೀಡಿ, ಮುರುಘಾಶ್ರೀಗಳ ಜತೆ ಚರ್ಚೆ ಮಾಡಿದರು. ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀಗಳ ಮೇಲಿನ ಆಪಾದನೆಯಿಂದ ನಾಡಿಗೆ ಆಘಾತ ತಂದಿದೆ. ಶ್ರೀಗಳನ್ನು ಭೇಟಿ ನೀಡಿ ಆತ್ಮಸ್ಥೈರ್ಯ ತುಂಬಿದೆವು. ಅವರು ಶಾಂತಚಿತ್ತದಿಂದ ಇದ್ದಾರೆ. ಆರೋಪಗಳಿಂದ ಶೀಘ್ರವೇ ಅವರಿಗೆ ಮುಕ್ತಿ ಸಿಗಲಿದೆ. ಮುರುಘಾಮಠಕ್ಕೆ ನಾಡಿನಲ್ಲಿ ಒಳ್ಳೆಯ ಹೆಸರಿದೆ. ದುರುದ್ದೇಶದಿಂದ ಆಪಾದನೆ ಬಂದಿದ್ದರೆ ಮಾತುಕತೆಯಿಂದ ಬಗೆ ಹರಿಯಲಿ ಎಂದು ಅವರು ತಿಳಿಸಿದರು.
ಇದನ್ನೂ ಓದಿ | ಮುರುಘಾ ಶ್ರೀಗಳ ವಿರುದ್ಧದ ಪ್ರಕರಣದಲ್ಲಿ ವಿಚಾರಣೆ ದಾರಿ ತಪ್ಪುತ್ತಿದೆ ಎಂದ ದೂರುದಾರರು