Site icon Vistara News

ಮುರುಘಾಶ್ರೀ ಪ್ರಕರಣ| ಶ್ರೀಗಳಿಗೆ ಸೆ.5ರವರೆಗೆ ಜಾಮೀನಿಲ್ಲ, ಉಳಿದ 3 ಆರೋಪಿಗಳ ಬಂಧನಕ್ಕೆ ತಲಾಶ್‌

murugha swameeji court

ಚಿತ್ರದುರ್ಗ: ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಬಂಧಿತರಾಗಿರುವ ಇಲ್ಲಿನ ಮುರುಘಾಮಠದ ಶ್ರೀ ಶಿವಮೂರ್ತಿ ಮುರುಘಾಶರಣರ ಪರವಾಗಿ ಕೋರ್ಟ್‌ನಲ್ಲಿ ಜಾಮೀನು ಆರ್ಜಿ ಸಲ್ಲಿಸಲಾಗಿದೆ. ಶ್ರೀಗಳ ಪರವಾಗಿ ವಕೀಲ ಉಮೇಶ್‌ ಅವರು ಚಿತ್ರದುರ್ಗ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ನ್ಯಾಯಾಲಯವು ಅವರ ಜಾಮೀನು ಅರ್ಜಿಯನ್ನು ಪುರಸ್ಕರಿಸುವ ಸಾಧ್ಯತೆ ಇಲ್ಲ.

ಶ್ರೀಗಳನ್ನು ಸೆಪ್ಟೆಂಬರ್‌ ೧ರಂದು ರಾತ್ರಿ ಬಂಧಿಸಲಾಗಿತ್ತು. ಅಂದೇ ರಾತ್ರಿ ಅವರನ್ನು ಕೋರ್ಟ್‌ಗೆ ಹಾಜರುಪಡಿಸಿದಾಗ ೧೪ ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಸೆಪ್ಟೆಂಬರ್‌ ೨ರಂದು ಅವರನ್ನು ನಾಲ್ಕು ದಿನಗಳ ಅವಧಿಗೆ ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದೆ. ಅಪರ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕೋಮಲ ಅವರು ಶ್ರೀಗಳನ್ನು ಆಸ್ಪತ್ರೆಗೆ ಸೇರಿಸಲೂ ಅವಕಾಶ ನೀಡದೆ ಪೊಲೀಸರ ಸುಪರ್ದಿಗೆ ಒಪ್ಪಿಸಿದ್ದಾರೆ. ಪೊಲೀಸರ ಬೇಡಿಕೆ ಪ್ರಕಾರ ಅವರು ಸೆಪ್ಟೆಂಬರ್‌ ೫ರವರೆಗೆ ಕಸ್ಟಡಿಯಲ್ಲಿರಬೇಕಾಗುತ್ತದೆ.

ಈ ನಡುವೆ ಶ್ರೀಗಳ ಪರವಾಗಿ ಜಾಮೀನು ಆರ್ಜಿ ಸಲ್ಲಿಕೆಯಾಗಿದೆ. ಆದರೆ, ನಿನ್ನೆಯಷ್ಟೇ ಅವರನ್ನು ಪೊಲೀಸ್‌ ಕಸ್ಟಡಿಗೆ ಒಪ್ಪಿಸಿರುವುದರಿಂದ ತಕ್ಷಣವೇ ಜಾಮೀನು ನೀಡುವ ಸಾಧ್ಯತೆಗಳು ಕಡಿಮೆ. ಜತೆಗೆ ಪೊಲೀಸ್‌ ಕಸ್ಟಡಿಯಲ್ಲಿರುವಾಗ ಜಾಮೀನು ನೀಡುವುದು ಕಡಿಮೆ. ನ್ಯಾಯಾಂಗ ಬಂಧನದಲ್ಲಿರುವಾಗಲಷ್ಟೇ ಜಾಮೀನಿನ ಅಂಶ ಹೆಚ್ಚು ಮಹತ್ವ ಪಡೆಯುತ್ತದೆ. ಅದರ ಜತೆಗೆ ಶ್ರೀಗಳಿಂದ ಇನ್ನು ಹಲವು ಮಾಹಿತಿ ಪಡೆಯಬೇಕಾಗಿದೆ. ಪರೀಕ್ಷೆಗಳು ನಡೆಯಬೇಕಾಗಿದೆ ಎಂದು ಪೊಲೀಸರು ಹೇಳಿದ್ದರು. ಈ ನಿಟ್ಟಿನಲ್ಲಿ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್‌ ೫ಕ್ಕೆ ನಿಗದಿಗೊಳಿಸುವ ಸಾಧ್ಯತೆ ಕಂಡುಬಂದಿದೆ.

ಮೂವರ ಬಂಧನಕ್ಕೆ ಹುಡುಕಾಟ
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಶ್ರೀಗಳು ಮತ್ತು ಮಠದ ಹಾಸ್ಟೆಲ್‌ನ ವಾರ್ಡನ್‌ ರಶ್ಮಿಯನ್ನು ಬಂಧಿಸಲಾಗಿದೆ. ಆದರೆ, ಪ್ರಕರಣದಲ್ಲಿ ಇನ್ನೂ ಮೂವರಿದ್ದಾರೆ. ಮಠದ ಮರಿ ಸ್ವಾಮಿಗಳಾದ ಬಸವಾದಿತ್ಯ, ಪರಮಶಿವಯ್ಯ ಮತ್ತು ಗಂಗಾಧರಯ್ಯ ಅವರು ಮೂರು, ನಾಲ್ಕು ಮತ್ತು ಐದನೇ ಆರೋಪಿಗಾಗಿ ಗುರುತಿಸಲ್ಪಟ್ಟಿದ್ದಾರೆ. ಈ ಮೂರೂ ಮಂದಿ ನಿರೀಕ್ಷಣಾ ಜಾಮೀನು ಪಡೆಯುವ ಯತ್ನದಲ್ಲಿದ್ದಾರಾದರೂ ಕೋರ್ಟ್‌ ಅವರ ಕೋರಿಕೆಯನ್ನು ಮನ್ನಿಸುವ ಸಾಧ್ಯತೆಗಳಿಲ್ಲ.

ಈ ನಡುವೆ, ಪೊಲೀಸರು ಈ ಮೂವರ ಬಂಧನಕ್ಕೆ ತಂಡವೊಂದನ್ನು ರಚಿಸಿದ್ದಾರೆ ಎಂದು ತಿಳಿದುಬಂದಿದೆ. ಇಂದು ಸಂಜೆ ಇಲ್ಲವೇ ನಾಳೆಯೊಳಗೆ ಅವರನ್ನು ಬಂಧಿಸುವ ಸಾಧ್ಯವಿದೆ.

ಮಠದಲ್ಲಿ ಮಹಜರು
ಲೈಂಗಿಕ ದೌರ್ಜನ್ಯ ಮಠದಲ್ಲಿ ನಡೆದಿದೆ ಎಂಬ ಆಪಾದನೆಗಳಿರುವುದರಿಂದ ಅಲ್ಲಿ ಮಹಜರು ನಡೆಸಬೇಕಾಗಿದೆ. ಶ್ರೀಗಳನ್ನೇ ಕರೆದುಕೊಂಡು ಬಂದು ಮಹಜರು ನಡೆಯಬೇಕಾಗಿದೆ. ಅದಕ್ಕೆ ಪೂರ್ವಭಾವಿಯಾಗಿ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್‌ ಬಾಲಚಂದ್ರ ನಾಯ್ಕ್, ಮೊಳಕಾಲ್ಮೂರು ಠಾಣೆ ಇನ್‌ಸ್ಪೆಕ್ಟರ್‌ ಸತೀಶ್ ಅವರು ಶನಿವಾರ ಮಠಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಎರಡನೇ ಆರೋಪಿ ರಶ್ಮಿ ಶಿವಮೊಗ್ಗ ಜೈಲಿಗೆ ಶಿಫ್ಟ್‌

Exit mobile version