ಚಿತ್ರದುರ್ಗ: ಮಠದ ಹಾಸ್ಟೆಲ್‌ನಲ್ಲಿದ್ದ ಇಬ್ಬರು ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೀಡಾಗುವ ವೇಳೆ ಮುರುಘಾಶರಣರು ಶಾಂತಚಿತ್ತದಲ್ಲಿಯೇ ಇದ್ದರು. ಪೊಲೀಸರು ಬಂಧನಕ್ಕೂ ಮುನ್ನ ಶ್ರೀಗಳ ವಿಚಾರಣೆ ನಡೆಸಿದ್ದು, ವಿಚಾರಣೆಗೆ ಅವರು ಸ್ಪಂದಿಸಿದರು. ಹಾಗೆಯೇ, ಪೊಲೀಸರು ಬಂಧಿಸುವ ತೀರ್ಮಾನ ಪ್ರಕಟಿಸಿದಾಗ, ಶಾಂತ ಚಿತ್ತದಿಂದಲೇ ಶ್ರೀಗಳು ಬಿಳಿ ಶಾಲು ಹೊದ್ದು ವಾಹನ ಹತ್ತಿದ್ದಾರೆ.
ಶ್ರೀಗಳ ಬಂಧನದಿಂದ ನಗರದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವ ಸಾಧ್ಯತೆ ಇದ್ದ ಕಾರಣ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಅದರಂತೆ, ಯಾವುದೇ ಏರುಪೇರಾಗದಂತೆ ನೋಡಿಕೊಳ್ಳಲು ಶ್ರೀಗಳನ್ನು ಮಠದ ಹಿಂಬಾಗಿಲಿನಿಂದ ಪೊಲೀಸರು ಕರೆದೊಯ್ದರು.
ಮುಂದೇನಾಗುತ್ತದೆ?
ಶ್ರೀಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಇದು ಲೈಂಗಿಕ ದೌರ್ಜನ್ಯ ಪ್ರಕರಣವಾದ ಕಾರಣ ಶ್ರೀಗಳ ಡಿಎನ್‌ಎ ಸ್ಯಾಂಪಲ್ ಪಡೆಯಬಹುದು. ಅಲ್ಲದೆ, ಘಟನಾ ಸ್ಥಳಕ್ಕೆ ಹೋಗಿ ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಮಹಜರು ಮಾಡುವ ಸಾಧ್ಯತೆ ಇದೆ. ಮಹಜರ್ ವೇಳೆ ಬಟ್ಟೆ, ಕೂದಲು, ರಕ್ತದ ಹಾಗೂ ಮೂತ್ರದ ಸ್ಯಾಂಪಲ್ ಪಡೆಯಬಹುದು.
ಹೀಗೆ ಪಡೆದ ಎಲ್ಲ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಸಾಧ್ಯತೆ ಇದೆ. ಇದರ ಜತೆಗೆ ಘಟನಾ ಸ್ಥಳದಲ್ಲಿ ಅಳವಡಿಸಲಾದ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಲಾಗುತ್ತದೆ. ಹಾಗೆಯೇ, ಹಾಸ್ಟೆಲ್ ಸಿಬ್ಬಂದಿಯನ್ನೂ ವಿಚಾರಣೆ ನಡೆಸುವ ಸಾಧ್ಯತೆ ಇದೆ.