ಚಿತ್ರದುರ್ಗ: ಮಠದ ಹಾಸ್ಟೆಲ್‌ನಲ್ಲಿ ಆಶ್ರಯ ಪಡೆದಿದ್ದ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಇಲ್ಲಿನ ಮುರುಘಾಮಠದ ಶ್ರೀ ಶಿವಮೂರ್ತಿ ಮುರುಘಾಶರಣರು ಬುಧವಾರ ಮಠದ ಆಪ್ತ ಸಿಬ್ಬಂದಿ ಜತೆ ಸಮಾಲೋಚನೆ ನಡೆಸಿದರು. ಅವರ ಜತೆಗೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನಾಲ್ಕನೇ ಆರೋಪಿಯಾಗಿ ನಮೂದಾಗಿರುವ ಮಠದ ಕಾರ್ಯದರ್ಶಿ ಪರಮ ಶಿವಯ್ಯ ಅವರು ಕೂಡಾ ಇದ್ದರು.
ಬುಧವಾರ ಮಠದಲ್ಲೇ ಇದ್ದ ಶ್ರೀಗಳು ಆತ್ಮೀಯರೊಂದಿಗೆ ಮಾತ್ರ ಮಾತುಕತೆ ನಡೆಸಿದ್ದರು. ಸಂಜೆಯ ಹೊತ್ತಿಗೆ ಸ್ವಾಮೀಜಿ ಮತ್ತು ಪರಮಶಿವಯ್ಯ ಅವರು ಅಲ್ಲಮಪ್ರಭು ಸಂಶೋಧನಾ ಕೇಂದ್ರದ ಒಳಗೆ ತೆರಳಿ ಸಭೆ ನಡೆಸಿದರು.
ಮಠದಿಂದ ಸ್ಕೈವಾಕ್ ಮೂಲಕ ಅಲ್ಲಮ ಪ್ರಭು ಸಂಶೋಧನಾ ಕೇಂದ್ರಕ್ಕೆ ತೆರಳಿದ್ದು, ಸುಮಾರು 10 ಜನಕ್ಕೂ ಹೆಚ್ಚು ಮಂದಿ ಸಿಬ್ಬಂದಿಗಳ ಜೊತೆಗೆ ಮಾತುಕತೆ ನಡೆಸಿದರು.
ನಾಳೆ ಏನಾಗಲಿದೆ?
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಅತ್ಯಂತ ನಿರ್ಣಾಯಕವಾಗಲಿದೆ. ಒಂದು ಕಡೆ ಅಪರಾಧ ದಂಡ ಸಂಹಿತೆಯ ಸೆಕ್ಷನ್ ೧೬೪ರ ಅಡಿ ನ್ಯಾಯಾಧೀಶರ ಮುಂದೆ ಸಂತ್ರಸ್ತ ವಿದ್ಯಾರ್ಥಿನಿಯರು ನೀಡಿದ ಹೇಳಿಕೆಯನ್ನು ಆಧರಿಸಿ ತನಿಖಾಧಿಕಾರಿಗಳು ಗುರುವಾರ ಸ್ವಾಮೀಜಿಗಳಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ. ಅದರ ಜತೆಗೆ, ಮುರುಘಾ ಶ್ರೀಗಳು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಕೂಡಾ ಸೆಪ್ಟೆಂಬರ್ ೧ರಂದೇ ನಡೆಯಲಿದೆ.
ಮಾದಾರ ಚೆನ್ನಯ್ಯ ಶ್ರೀಗಳ ಸ್ಪಷ್ಟನೆ
ಈ ನಡುವೆ, ಚಿತ್ರದುರ್ಗದ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರು ಶ್ರೀಗಳ ಮೇಲೆ ಕೇಳಿಬಂದಿರುವ ಆರೋಪಕ್ಕೆ ಸಂಬಂಧಿಸಿ ತಮ್ಮ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ʻʻನಾವು ಮೊದಲು ಮಠ ಮತ್ತು ಪರಂಪರೆ ಜೊತೆಗಿರ್ತೇವೆ ಎಂದಿದ್ದೆವು. ಅಂದರೆ, ಮಾದಾರ ಚೆನ್ನಯ್ಯ ಶ್ರೀ ಮಠ ಮತ್ತು ಪರಂಪರೆ ಜೊತೆಗಿರುತ್ತದೆ ಎನ್ನುವುದು ನಮ್ಮ ನಿಲುವಾಗಿತ್ತು. ಆದರೆ, ಕೆಲವರು ನಾವು ಅನ್ಯಾಯಕ್ಕೊಳಗಾದ ದಲಿತ ಸಂತ್ರಸ್ತೆ ಪರ ಇಲ್ಲ ಎಂಬ ರೀತಿಯಲ್ಲಿ ವ್ಯತಿರಿಕ್ತ ಪ್ರಚಾರ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಸ್ಪಷ್ಟೀಕರಣ ನೀಡುತ್ತಿದ್ದೇವೆ. ಯಾವುದೇ ಹೆಣ್ಣು ಮಕ್ಕಳಿಗೆ ಅನ್ಯಾಯವಾಗಿದ್ದರೆ ಅವರಿಗೆ ನ್ಯಾಯ ಸಿಗಲಿ ಎನ್ನುವುದು ನಮ್ಮ ಪ್ರಾಮಾಣಿಕ ಮಾತು. ಬಾಲಕಿಯರು ನ್ಯಾಯ ಸಿಗಬೇಕು ಎನ್ನುತ್ತಿದ್ದಾರೆ. ಪ್ರಕರಣ ನ್ಯಾಯಾಲಯದ ಮೆಟ್ಟಿಲಿನಲ್ಲಿದೆ. ಕಾನೂನು ಪ್ರಕಾರ ತೀರ್ಪು ಬರುವವರೆ ಕಾಯಬೇಕಾಗಿದೆʼʼ ಎಂದು ಮಾದಾರ ಚನ್ನಯ್ಯ ಶ್ರೀಗಳು ಹೇಳಿದ್ದಾರೆ.
ಇದನ್ನೂ ಓದಿ| ಮುರುಘಾಶ್ರೀ ಕೇಸ್| ಬಸವರಾಜ್ ವಿರುದ್ಧದ ಅತ್ಯಾಚಾರ ಯತ್ನ ಪ್ರಕರಣದಲ್ಲಿ ಹಾಸ್ಟೆಲ್‌ನಲ್ಲಿ ಮಹಜರು