ಶಿರಸಿ: ಯಲ್ಲಾಪುರದ ವಿಶ್ವದರ್ಶನ ಕೇಂದ್ರೀಯ ಶಾಲೆಯಲ್ಲಿ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ತರಗತಿಯನ್ನು (Music Class) ಪ್ರಾಂಶುಪಾಲೆ ಮಹಾದೇವಿ ಭಟ್ಟ ಉದ್ಘಾಟಿಸುವ ಮೂಲಕ ಪ್ರಾರಂಭಿಸಿದರು. ಇನ್ನು ಶಾಲೆಯಲ್ಲಿ ಸಂಗೀತ ತರಗತಿ ಸಹ ನಡೆಯಲಿದೆ.
ಬಳಿಕ ಮಾತನಾಡಿದ ಪ್ರಾಂಶುಪಾಲೆ ಮಹಾದೇವಿ, ಮಕ್ಕಳಿಗೆ ಸಂಗೀತದ ಮಹತ್ವದ ಬಗ್ಗೆ ತಿಳಿ ಹೇಳುವುದರ ಜತೆಗೆ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುವ ಕೆಲಸ ಮಾಡುತ್ತಿದೆ. ಅನೇಕ ವರ್ಷಗಳ ಕಾಲ ಸಂಗೀತ ಅಭ್ಯಾಸವನ್ನು ಮಾಡಿ ಎಷ್ಟೋ ಮಕ್ಕಳನ್ನು ಸಂಗೀತದಲ್ಲಿ ತರಬೇತುಗೊಳಿಸಿರುವ ಗುರುಗಳಾದ ಪುಷ್ಪ ವಿ ಭಟ್ಟ ಅವರು ವಿದ್ಯಾರ್ಥಿಗಳಿಗೆ ಲಭಿಸಿರುವುದು ಪುಣ್ಯದ ವಿಷಯ. ಅಲ್ಲದೆ, ಅವರು ಸಂಗೀತ ಕ್ಷೇತ್ರಕ್ಕೆ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿದ್ದು, ಆಸಕ್ತಿ ವಹಿಸಿ ಅವರಿಂದ ಕಲಿಯಬೇಕು ಎಂದು ಕಿವಿಮಾತು ಹೇಳಿದರು.
ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಕಿ ಪುಷ್ಪಾ ಭಟ್ ಶಾರದಾ ಸ್ತುತಿಯೊಂದಿಗೆ ತರಗತಿಯನ್ನು ಪ್ರಾರಂಭಿಸಿದರು. ಪ್ರತಿ ಶನಿವಾರ ಮಧ್ಯಾಹ್ನ ೨.೩೦ಕ್ಕೆ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ತರಗತಿಯು ವಿಶ್ವದರ್ಶನ ಕೇಂದ್ರೀಯ ಶಾಲೆಯಲ್ಲಿ ನಡೆಯಲಿದೆ.