Site icon Vistara News

Muslim college | ವಕ್ಫ್‌ ಅಧ್ಯಕ್ಷರ ಹೇಳಿಕೆ ವೈಯಕ್ತಿಕ, ಮಹಿಳಾ ಕಾಲೇಜಿನ ಪ್ರಸ್ತಾಪವಿಲ್ಲ ಎಂದ ವಕ್ಫ್‌ ಸಚಿವೆ ಶಶಿಕಲಾ ಜೊಲ್ಲೆ

ಶಶಿಕಲಾ ಜೊಲ್ಲೆ

ಬೆಂಗಳೂರು: ಪ್ರತ್ಯೇಕ ಮುಸ್ಲಿಂ ಮಹಿಳಾ ಕಾಲೇಜು ಪ್ರಾರಂಭಿಸುವ ಯಾವುದೇ ಪ್ರಸ್ತಾಪ ಸರಕಾರದ ಮುಂದೆ ಇಲ್ಲ ಎಂದು ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರಾದ ಶಶಿಕಲಾ ಜೊಲ್ಲೆ ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ೧೦ ಮುಸ್ಲಿಂ ಮಹಿಳಾ ಕಾಲೇಜು ಸ್ಥಾಪನೆಗೆ ಉದ್ದೇಶಿಸಲಾಗಿದೆ ಎಂಬ ವಕ್ಫ್‌ ಮಂಡಳಿ ಅಧ್ಯಕ್ಷ ಮೌಲಾನಾ ಶಫಿ ಸಅದಿ ಅವರ ಹೇಳಿಕೆಯ ಬಳಿಕ ಹುಟ್ಟಿಕೊಂಡ ಚರ್ಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೆರೆ ಎಳೆಯಲು ಯತ್ನಿಸಿದ ಬಳಿಕ ಸಚಿವೆ ಶಶಿಕಲಾ ಜೊಲ್ಲೆ ಅವರು ಕೂಡಾ ಧ್ವನಿಗೂಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ಮುಸ್ಲಿಂ ಮಹಿಳೆಯರಿಗಾಗಿಯೇ ಪ್ರತ್ಯೇಕ ಕಾಲೇಜು ಪ್ರಾರಂಭಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ಯಾವುದೇ ಪ್ರಸ್ತಾವನೆಗಳು ಇಲ್ಲ. ಕಾಲೇಜುಗಳ ಪ್ರಾರಂಭದ ಬಗ್ಗೆ ವಕ್ಫ್‌ ಬೋರ್ಡ್‌ ಅಧ್ಯಕ್ಷರ ಹೇಳಿಕೆಯು ಅವರ ವೈಯಕ್ತಿಕ ಹೇಳಿಕೆಯಾಗಿದೆ. ಈ ವಿಷಯದ ಕುರಿತು ನಾನು ಈಗಾಗಲೇ ವಕ್ಫ್‌ ಬೋರ್ಡ್‌ ಅಧ್ಯಕ್ಷರ ಜೊತೆ ಮಾತನಾಡಿದ್ದು, ಇದರ ಬಗ್ಗೆ ಎದ್ದಿರುವ ಊಹಾಪೋಹಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ.

ಆರಂಭದಲ್ಲಿ ಸುದ್ದಿಯಾಗಿದ್ದೇನು?
ರಾಜ್ಯದಲ್ಲಿ ಮುಸ್ಲಿಂ ಹೆಣ್ಮಕ್ಕಳಿಗಾಗಿಯೇ ಪ್ರತ್ಯೇಕ 10 ಕಾಲೇಜುಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ವಕ್ಫ್‌ ಬೋರ್ಡ್‌ ಸರಕಾರ ನೀಡುವ ಅನುದಾನದಲ್ಲಿ ಪ್ರತಿ ಕಾಲೇಜಿಗೆ ೨.೫ ಕೋಟಿ ರೂ. ನೀಡುವ ಬಗ್ಗೆ ನಿರ್ಧಾರ ಮಾಡಲಾಗಿದೆ ಎಂದು ಸುದ್ದಿಯಾಗಿತ್ತು.

ಉಡುಪಿಯಲ್ಲಿ ಹಿಜಾಬ್‌ ವಿವಾದ ಉದ್ಭವಿಸಿದ ಬಳಿಕ ತರಗತಿಯಲ್ಲಿ ಹಿಜಾಬ್‌ ಧರಿಸದಂತೆ ಸರ್ಕಾರ ಆದೇಶ ಹೊರಡಿಸಿತ್ತು. ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ವಿಷಯವಾಗಿ ಬಹುತೇಕ ಮುಸ್ಲಿಂ ಸಂಘ, ಸಂಸ್ಥೆಗಳು ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದವು. ಇದೀಗ ಚುನಾವಣೆಯ ಪರ್ವ ಕಾಲದಲ್ಲಿ ಸರ್ಕಾರವೇ ಮುತುವರ್ಜಿ ವಹಿಸಿ ಮುಸ್ಲಿಂ ಹೆಣ್ಮಕ್ಕಳಿಗಾಗಿ ಪ್ರತ್ಯೇಕ ಕಾಲೇಜು ಸ್ಥಾಪನೆಗೆ ಮುಂದಾಗಿದೆ ಎಂದು ಹೇಳಲಾಗಿತ್ತು. ಹಿಜಾಬ್‌ ವಿವಾದದ ಬಳಿಕ ರಾಜ್ಯಾದ್ಯಂತ ಸುಮಾರು ಏಳೆಂಟು ಸಾವಿರ ಮುಸ್ಲಿಂ ವಿದ್ಯಾರ್ಥಿನಿಯರು ಒಂದೋ ಶಿಕ್ಷಣದಿಂದಲೇ ವಿಮುಖರಾಗಿದ್ದಾರೆ, ಇಲ್ಲವೇ ಮುಸ್ಲಿಂ ಆಡಳಿತದ ಕಾಲೇಜುಗಳಿಗೆ ಹಾಗೂ ಹಿಜಾಬ್‌ಗೆ ಅವಕಾಶವಿರುವ ಖಾಸಗಿ ಕಾಲೇಜುಗಳಿಗೆ ಸೇರ್ಪಡೆಯಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಇಂಥವರಿಗೆ ಒಂದು ಸುರಕ್ಷಿತ ಅವಕಾಶವಾಗಿ ಕಾಲೇಜು ಸ್ಥಾಪನೆಗೆ ವಕ್ಫ್‌ ಮಂಡಳಿ ಮುಂದಾಗಿದೆ ಎನ್ನಲಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯಾರ್‌ ಕಣ್ಣೂರಿನ 16 ಎಕರೆ ಜಾಗದಲ್ಲಿ ಮುಸ್ಲಿಂ ಮಹಿಳಾ ಕಾಲೇಜು ಸ್ಥಾಪನೆಗೆ ಜಾಗ ಗುರುತಿಸಲಾಗಿದೆ. ಉಳಿದಂತೆ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಉತ್ತರ ಕರ್ನಾಟಕ, ಹೈದ್ರಾಬಾದ್‌ ಕರ್ನಾಟಕದ ಕೆಲವೆಡೆ ಕಾಲೇಜು ಆರಂಭವಾಗಲಿದೆ ಎಂದು ಹೇಳಲಾಗಿತ್ತು.

ಪ್ರತ್ಯೇಕ ಮುಸ್ಲಿಂ ಮಹಿಳಾ ಕಾಲೇಜು ಸ್ಥಾಪನೆಯನ್ನ ಪ್ರಮೋದ್‌ ಮುತಾಲಿಕ್‌ ಸೇರಿದಂತೆ ಹಲವು ಹಿಂದೂ ಮುಖಂಡರು ಆಕ್ಷೇಪಿಸಿದ್ದರು. ಇದು ಮುಸ್ಲಿಮರನ್ನು ಪ್ರತ್ಯೇಕಗೊಳಿಸುವುದಲ್ಲದೆ, ಅರೇಬಿಕ್‌ ಶಿಕ್ಷಣ ಸಂಸ್ಥೆಗಳಂತೆ ಅಲ್ಲಿ ಏನು ನಡೆಯುತ್ತದೆ ಎಂದು ತಿಳಿಯದೆ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿದ್ದರು.

ಸರಕಾರದ ಚಿಂತನೆಯಲ್ಲಿಲ್ಲ ಎಂದ ಸಿಎಂ
ಈ ಮಧ್ಯೆ ಗುರುವಾರ ಬೆಳಗ್ಗೆ ವಿಧಾನ ಸೌಧದ ಎದುರು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ʻʻಪ್ರತ್ಯೇಕ ಕಾಲೇಜು ಬಗ್ಗೆ ನಮ್ಮ ಸರ್ಕಾರದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಇದು ನಮ್ಮ ಸರ್ಕಾರದ ನಿಲುವು ಕೂಡಾ ಆಗಿಲ್ಲ. ಇಂಥ ಯಾವುದಾದರೂ ಪ್ರಸ್ತಾವನೆ ಇದ್ರೆ ವಕ್ಫ್ ಬೋರ್ಡ್ ಅಧ್ಯಕ್ಷರೇ ಬಂದು ನನ್ನ ಜತೆ ಚರ್ಚೆ ಮಾಡಲಿʼʼ ಎಂದು ಹೇಳಿದರು.

ವಕ್ಫ್‌ ಬೋರ್ಡ್‌ ಅಧ್ಯಕ್ಷರು ಹೇಳುವುದೇನು?
ವಕ್ಫ್‌ ಬೋರ್ಡ್‌ನಿಂದ ಮಹಿಳಾ ಕಾಲೇಜು ಸ್ಥಾಪನೆಯ ತಮ್ಮ ಹೇಳಿಕೆಯನ್ನು ಅಧ್ಯಕ್ಷ ಮಹಮ್ಮದ್‌ ಶಾಫಿ ಸಅದಿ ಅವರು ಪುನರುಚ್ಚರಿಸಿದ್ದಾರೆ. ವಕ್ಫ್‌ ಮಂಡಳಿಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಪ್ರಸ್ತಾವನೆಯನ್ನೂ ಸಿದ್ಧಪಡಿಸಿದ್ದೇವೆ. ಅದನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗಿದೆ ಎಂದು ಹೇಳಿದರು.

ʻʻವಕ್ಫ್ ಬೋರ್ಡ್‌ ಅಧೀನದಲ್ಲಿ ಚರ್ಚೆ ಮಾಡಿದ್ದೇವೆ. ಇದನ್ನು ಸರ್ಕಾರದ ಮಟ್ಟಕ್ಕೆ ನಾವಿನ್ನೂ ತೆಗೆದುಕೊಂಡು ಹೋಗಿಲ್ಲ. ಶಾಲಾ, ಕಾಲೇಜು ಆರಂಭ ಮಾಡಲು ಸರ್ಕಾರದಿಂದ ಅನುಮತಿ ಬೇಕು. ಸರ್ಕಾರಕ್ಕೆ ಪ್ರಸ್ತಾವನೆ ನೀಡಲು ಈಗಾಗಲೇ ವರದಿ ಸಿದ್ಧ ಮಾಡುತ್ತಿದ್ದೇವೆʼʼ ಎಂದು ವಕ್ಫ್‌ ಮಂಡಳಿ ಅಧ್ಯಕ್ಷ ಶಾಫಿ ಸಅದಿ ಹೇಳಿದರು.

ಇದನ್ನೂ ಓದಿ | Muslim college | ವಕ್ಫ್‌ ಬೋರ್ಡ್‌ನಲ್ಲಿ ಚರ್ಚೆ ಆಗಿದೆ, ಕಾಲೇಜು ಮುಸ್ಲಿಂ ಹೆಣ್ಮಕ್ಕಳಿಗೆ ಸೀಮಿತವಲ್ಲ ಎಂದ ವಕ್ಫ್‌ ಅಧ್ಯಕ್ಷ

Exit mobile version