ಮಂಗಳೂರು: ಕಾರ್ಗಿಲ್ (Kargil War) ಎಂಬ ಹೆಸರು ಕೇಳಿದರೆ ಸಾಕು ರೋಮಾಂಚನವಾಗುತ್ತದೆ. ಭಾರತೀಯ ಯೋಧರ ಮಹಾಸಾಹಸದ ಕಥೆಗಳನ್ನು, ಪ್ರಾಣದ ಹಂಗು ತೊರೆದು ನಡೆಸಿದ ಹೋರಾಟವನ್ನು ನಮ್ಮ ಕಣ್ಣಮುಂದೆಯೇ ಕಟ್ಟಿ ನಿಲ್ಲಿಸಿದ ಮಹಾಯುದ್ಧವದು. ಹಿಂದಿನ ಯುದ್ಧವನ್ನು ನಾವು ಕಥೆಯಾಗಿ ಕೇಳಿದ್ದೆವು. ಆದರೆ, ಕಾರ್ಗಿಲ್ ಕದನವನ್ನು ನಾವು ಕಣ್ಣಾರೆ ಕಂಡಿದ್ದೇವೆ. ಈ ಕಾರಣಕ್ಕಾಗಿ ಇದು ನಮ್ಮೊಳಗೆ ದೇಶಭಕ್ತಿಯನ್ನು ಪುಟಿದೇಳುವಂತೆ ಮಾಡುತ್ತದೆ. ಪ್ರತಿಯೊಬ್ಬ ಭಾರತೀಯನಿಗೂ 1999ರಲ್ಲಿ ಮಹಾ ಕದನ ನಡೆದ ಆ ಜಾಗವನ್ನೊಮ್ಮೆ ನೋಡಬೇಕು ಅನ್ನುವ ಆಸೆ ಇರುತ್ತದೆ. ಅದೆಷ್ಟೋ ಜನ ನೋಡಿಬಂದಿದ್ದಾರೆ ಕೂಡಾ.
ಇದೀಗ ಮಂಗಳೂರಿನಿಂದ ದಂಪತಿ ಜೋಡಿಯೊಂದು (Muslim couple) ಕಾರ್ಗಿಲ್ ನತ್ತ ಹೊರಟಿದೆ. ಮೊನ್ನೆ ಜುಲೈ 26ರ ಕಾರ್ಗಿಲ್ ವಿಜಯೋತ್ಸವದಂದು (Kargil Vijay Diwas) ಮಂಗಳೂರಿನಿಂದ ಹೊರಟ ಈ ಜೋಡಿ ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು (Independence day) ಕಾರ್ಗಿಲ್‌ನಲ್ಲಿ ರಾಷ್ಟ್ರ ಧ್ವಜ (Flag hoisting at Kargil) ಹಾರಿಸಲಿದೆ. ಅದರ ಜತೆಗೆ ಕರ್ನಾಟಕದ ಬಾವುಟ (Karnataka Flag) ಮತ್ತು ತುಳುನಾಡ ಧ್ವಜವೂ (Tulunadu Flag) ಅಲ್ಲಿ ಹಾರಾಡಲಿದೆ.
ಅಂದ ಹಾಗೆ ಅವರು ಹೊರಟಿರುವುದು ಬೈಕ್‌ನಲ್ಲಿ. ಇನ್ನೊಂದು ವಿಶೇಷವೆಂದರೆ ಹಾಗೆ ಹೊರಟಿದ್ದು ಮುಸ್ಲಿಂ ದಂಪತಿ. ಇನ್ನೊಂದು ಸಂಗತಿ ಎಂದರೆ ಬೈಕ್‌ನಲ್ಲಿ ಕಾರ್ಗಿಲ್ಗೆ ತೆರಳಿದ ಮೊದಲ ಮುಸ್ಲಿಂ ದಂಪತಿ ಎಂಬ ಹೆಗ್ಗಳಿಕೆ ಇವರದು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕುಲಶೇಖರದ ಕಲ್ಪನೆಯ ನಿವಾಸಿಯಾಗಿರೋ ಸೈಫ್ ಸುಲ್ತಾನ್ ಹಾಗೂ ಅವರ ಪತ್ನಿ ಅದೀಲಾ ಫರ್ಹಿನಾ ಅವರೇ ಈ ಸಾಹಸಿಗಳು
ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸೈಫ್ ಸುಲ್ತಾನ್ ಮತ್ತು ಪತ್ನಿ ಅದೀಲಾ ಫರ್ಹೀನಾ ಈ ಬೈಕ್ ಪ್ರಯಾಣ ಆರಂಭಿಸಿದ್ದು, ಬಿಎಂಡಬ್ಲ್ಯು. ಜಿಎಸ್310 ಬೈಕ್‌ನಲ್ಲಿ ಇವರ ಪ್ರಯಾಣ ಆಗಸ್ಟ್ 15 ರಂದು ಕಾರ್ಗಿಲ್ ತಲುಪಲಿದೆ.
ಸೈಫ್ ಸುಲ್ತಾನ್ ಜೀವರಕ್ಷಕ ಕಲೆಯ ಕೋಚ್ ಆಗಿದ್ದು, ಪ್ರೇರಣಾದಾಯಕ ಭಾಷಣಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ.
ಮಂಗಳೂರಿನಿಂದ ಕಾರ್ಗಿಲ್ ತಲುಪಲು 18 ದಿನಗಳು ಬೇಕಾಗಿದ್ದು, 3800 ಕಿಲೋ ಮೀಟರ್ ಬೈಕ್ ರೈಡ್ ಮಾಡಬೇಕಿದೆ. ಈ ನಡುವೆ ತಮ್ಮ ಭಾಷಣಗಳ ಮೂಲಕ ಜನರಲ್ಲಿ ರಕ್ತದಾನದ ಬಗ್ಗೆ ಜಾಗೃತಿಯನ್ನು ಮೂಡಿಸುವ ಪ್ರಯತ್ನ ಈ ದಂಪತಿ ಮಾಡಲಿದ್ದಾರೆ.
ಮೊದಲ ರಕ್ತದಾನದ ಕ್ಯಾಂಪನ್ನು ಮಂಗಳೂರಲ್ಲೇ ಪೂರೈಸಿರುವ ಈ ದಂಪತಿ ಮುಂದಕ್ಕೆ ಹೊನ್ನಾವರ, ಬೆಳಗಾವಿ, ಪುಣೆ, ಮುಂಬೈ, ಸೂರತ್, ಅಹ್ಮದಾಬಾದ್, ಉದಯಪುರ, ಜೈಪುರ, ದಿಲ್ಲಿ, ಅಮೃತಸರ, ಜಮ್ಮು, ಶ್ರೀನಗರದಲ್ಲಿ ಬ್ಲಡ್ ಕ್ಯಾಂಪ್ ಮಾಡುತ್ತಾ ಸಾಗಲಿದ್ದಾರೆ.
ಆಗಸ್ಟ್ 15ರಂದು ಬೆಳಗ್ಗೆ ಕಾರ್ಗಿಲ್ ತಲುಪಲಿದ್ದು ಅಲ್ಲಿಯೂ ರಕ್ತದಾನ ಶಿಬಿರದಲ್ಲಿ ನಡೆಸಲಿದ್ದಾರೆ. ಸುಮಾರು ಒಂಬತ್ತು ರಾಜ್ಯಗಳನ್ನು ದಾಟಿ ಹೋಗುವ ಈ ದಂಪತಿ ಪ್ರಯಾಣದ ವೇಳೆ ರಾಷ್ಟ್ರಧ್ವಜ, ಕನ್ನಡದ ಬಾವುಟ ಹಾಗೂ ತುಳುನಾಡಿನ ಬಾವುಟವನ್ನು ತಮ್ಮೊಂದಿಗೆ ಒಯ್ದಿದ್ದು, ಅದನ್ನು ಕಾರ್ಗಿಲ್ ನಲ್ಲಿ ಕರ್ನಲ್ ಅಭಿಮನ್ಯು ಅವರಿಗೆ ನೀಡಲಿದ್ದಾರೆ.
ಅವರು ಈ ಬಾವುಟಗಳನ್ನು ಕಾರ್ಗಿಲ್ ನಲ್ಲಿ ಹಾರಿಸಲಿದ್ದಾರೆ. ಮುಸ್ಲಿಂ ಸಮುದಾಯದಿಂದ ಇದೇ ಮೊದಲ ಬಾರಿಗೆ ಜೋಡಿಯೊಂದು ಹಿಜಾಬ್ ಧರಿಸಿ ಕಾರ್ಗಿಲ್ ನತ್ತ ಬೈಕ್ ರೈಡಿಂಗ್ ಮಾಡುತ್ತಿರುವುದು ವಿಶೇಷ.
ಇದನ್ನೂ ಓದಿ: Kargil Memory : ಕಾರ್ಗಿಲ್ ಯೋಧರಿಗೆ ನಮನ ಸಲ್ಲಿಸಲು 3200 ಕಿ.ಮೀ ಸೈಕಲ್ ತುಳಿದ ಬೆಂಗಳೂರಿನ ಹುಡುಗ್ರು!