Site icon Vistara News

ನೂಪುರ್‌ ಶರ್ಮಾ ಬಂಧನ ಆಗ್ರಹಿಸಿ ರಾಜ್ಯದ ಹಲವೆಡೆ ಪ್ರತಿಭಟನೆ, ಬೆಳಗಾವಿಯಲ್ಲಿ ಪ್ರತಿಕೃತಿಗೆ ಗಲ್ಲು

nupur sharma

ಬೆಳಗಾವಿ: ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಹಾಗೂ ಮುಖಂಡ ನವೀನ್‌ ಜಿಂದಾಲ್‌ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಮುಸ್ಲಿಂ ಸಂಘಟನೆಗಳಿಂದ ಶುಕ್ರವಾರ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಯಿತು. ನೂಪುರ್‌ ಶರ್ಮಾ ಬಂಧನಕ್ಕೆ ಒತ್ತಾಯಿಸಲಾಯಿತು.

ಬೆಳಗಾವಿ ನಗರದ ಫೋರ್ಟ್‌ ರಸ್ತೆಯಲ್ಲಿ ನೂಪುರ್ ಶರ್ಮಾ ಪ್ರತಿಕೃತಿಯನ್ನು ಗಲ್ಲಿಗೇರಿಸುವ ರೀತಿಯಲ್ಲಿ ವಿದ್ಯುತ್‌ ಕಂಬಕ್ಕೆ ಕಟ್ಟಿ ಮುಸ್ಲಿಮರು ಆಕ್ರೋಶ ವ್ಯಕ್ತಪಡಿಸಿದರು. ನಡುರಸ್ತೆಯಲ್ಲಿ ಗುರುವಾರ ರಾತ್ರಿ ಕಿಡಿಗೇಡಿಗಳು ಪ್ರತಿಕೃತಿ ಗಲ್ಲಿಗೇರಿಸಿದ್ದಾರೆ. ಈಗಾಗಿ ಮುಂಜಾನೆ ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿತ್ತು. ಕಿಡಿಗೇಡಿಗಳ ಕೃತ್ಯಕ್ಕೆ ಹಿಂದೂಪರ ಸಂಘಟನೆಗಳು ಶುಕ್ರವಾರ ಬೆಳಗ್ಗೆ ತೀವ್ರ ಆಕ್ರೋಶ ಹೊರಹಾಕಿದ್ದು, ಹಿಂದೂ ಜಾಗರಣಾ ವೇದಿಕೆ ಹಾಗೂ ಶ್ರೀರಾಮ ಸೇನೆ ಹಾಗೂ ಪಾಲಿಕೆ ಸದಸ್ಯರು ದುಷ್ಕೃತ್ಯದ ವಿರುದ್ಧ ಕಿಡಿಕಾರಿದರು. ಪ್ರತಿಕೃತಿ ತೆರವುಗೊಳಿಸದಿದ್ದರೆ ನಾವೇ ತೆಗೆಯುವುದಾಗಿ ಹೇಳಿದ್ದರಿಂದ ಪೊಲೀಸರು ತೆರವು ಮಾಡಿದರು.

ಶಹಾಪುರದಲ್ಲಿ ಪ್ರತಿಭಟನೆ
ಅದೇ ರೀತಿ ಚಿಕ್ಕಮಗಳೂರು ನಗರದ ಆಝಾದ್ ಪಾರ್ಕ್ ಬಳಿ ಆರ್‌ಎಸ್‌ಎಸ್‌, ಬಿಜೆಪಿ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ ನಡೆಸಿತು. ಬಿಜೆಪಿ ನಾಯಕರು ಪ್ರವಾದಿ ಮುಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು, ಅವರನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ 500ಕ್ಕೂ ಅಧಿಕ ಎಸ್‌ಡಿಪಿಐ ಕಾರ್ಯಕರ್ತರು ಭಾಗಿಯಾಗಿದ್ದರು.

ಮೈಸೂರಿನಲ್ಲಿ ಎಸ್‌ಡಿಪಿಐ ಆಕ್ರೋಶ
ಮೈಸೂರಿನಲ್ಲೂ ಎಸ್‌ಡಿಪಿಐ ಬೃಹತ್‌ ಪ್ರತಿಭಟನೆ ನಡೆಸಿದ್ದು, ಇಲ್ಲಿನ ಮೈಸೂರಿನ ಮಿಲಾದ್‌ ಪಾರ್ಕ್‌ನಲ್ಲಿ ನೂರಾರು ಕಾರ್ಯಕರ್ತರು ಭಾಗಿಯಾಗಿ ಇಬ್ಬರು ಬಿಜೆಪಿ ನಾಯಕರನ್ನು ಬಂಧಿಸಲು ಆಗ್ರಹಿಸಿದರು. ಸ್ಥಳದಲ್ಲಿ ನರಸಿಂಹರಾಜ ಠಾಣಾ ಪೊಲೀಸರಿಂದ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್‌ ಅಜೀಜ್‌, ದೇವನೂರು ಪುಟ್ಟನಂಜಯ್ಯ, ರಫತ್‌ ಖಾನ್‌, ಮೊಹಮ್ಮದ್‌ ಸಫೀವುಲ್ಲಾ ಮತ್ತಿತರರು ಇದ್ದರು.

ಮಂಗಳೂರಿನ ಮುಡಿಪುವಿನಲ್ಲಿ
ಪ್ರವಾದಿಯ ಕುರಿತಾದ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಮಂಗಳೂರಿನಲ್ಲೂ ಪ್ರ ತಿಭಟನೆ ನಡೆಯಿತು. ಮಂಗಳೂರು ಹೊರವಲಯದ ಮುಡಿಪು ಬಳಿ ಎಸ್‌ಡಿಪಿಐ ಕಾರ್ಯಕರ್ತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರವಾದಿ ಬಗ್ಗೆ ಅಸಭ್ಯವಾಗಿ ಮಾತನಾಡಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು.

ಇದನ್ನೂ ಓದಿ | ನೂಪುರ್ನೂಪುರ್, ಚಕ್ರತೀರ್ಥ, ಕಾಶ್ಮೀರ ಹಿಂದೂಗಳಿಗೆ ನಮ್ಮ ಬೆಂಬಲ: ಪ್ರಮೋದ್‌ ಮುತಾಲಿಕ್

Exit mobile version