ಚಿಕ್ಕಬಳ್ಳಾಪುರ: ನಗರದಲ್ಲಿ ರಂಜಾನ್ ಹಿನ್ನೆಲೆಯಲ್ಲಿ ಈದ್ಗಾ ಮೈದಾನಕ್ಕೆ ತೆರಳಿದ ಸಚಿವ ಕೆ.ಸುಧಾಕರ್ (K Sudhakar) ಅವರಿಗೆ ಮುಸ್ಲಿಮರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಚಿಕ್ಕಬಳ್ಳಾಪುರದ ಈದ್ಗಾ ಮೈದಾನಕ್ಕೆ ಶನಿವಾರ ಬೆಳಗ್ಗೆ ಸುಧಾಕರ್ ಅವರು ಭೇಟಿ ನೀಡಿದ್ದಾರೆ. ಇದೇ ವೇಳೆ ಒಂದಷ್ಟು ಮುಸ್ಲಿಮರು ಸಚಿವರನ್ನು ಸ್ವಾಗತಿಸಿದ್ದಾರೆ. ಆದರೆ, ಇದೇ ವೇಳೆ ಎರಡು ಗುಂಪುಗಳ ಮಧ್ಯೆ ವಾಗ್ವಾದ ನಡೆದಿದ್ದು, ಸುಧಾಕರ್ ಅವರು ಬಂದಿರುವ ಕಾರಣದಿಂದಾಗಿಯೇ ಗಲಾಟೆ ಆರಂಭವಾಗಿದೆ ಎಂದು ತಿಳಿದುಬಂದಿದೆ.
ರಂಜನ್ ಹಬ್ಬದ ಪ್ರಯುಕ್ತ ಸಾಮೂಹಿಕ ನಮಾಜ್ ಸಂದರ್ಭದಲ್ಲಿ ಸುಧಾಕರ್ ಅವರು ಬಂದಿದ್ದು ಏಕೆ ಎಂದು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಒಂದಷ್ಟು ಜನ ಸುಧಾಕರ್ ಪರ ಮಾತನಾಡಿದ್ದಾರೆ. ಹಾಗೆಯೇ, ಸುಧಾಕರ್ ಬೆಂಬಲಿಗರು ಕೂಡ ಇದೇ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ್ದಾರೆ. ಆಗ ವಾಗ್ವಾದ ನಡೆದು, ಮಾತಿನ ಚಕಮಕಿ ನಡೆದಿದೆ.
ಇಲ್ಲಿವೆ ಸುಧಾಕರ್ ಭೇಟಿ, ಗಲಾಟೆಯ ವಿಡಿಯೊ
ಮುಸ್ಲಿಮರು ನಮಾಜ್ ಮಾಡಿ, ಸಂಭ್ರಮಾಚರಿಸುವ ವೇಳೆ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್, ಜೆಡಿಎಸ್ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ ತೆರಳಿ, ಅವರಿಗೆ ಶುಭ ಕೋರಿದರು. ಆಗ ಯಾವ ಮುಸ್ಲಿಮರೂ ವಿರೋಧ ವ್ಯಕ್ತಪಡಿಸಿರಲಿಲ್ಲ. ಆದರೆ, ಸಚಿವ ಸುಧಾಕರ್ ಅವರು ತೆರಳುತ್ತಲೇ ವಿರೋಧವಾಗಿದೆ ಎಂದು ತಿಳಿದುಬಂದಿದೆ. ಆದರೂ, ಒಂದಷ್ಟು ಮುಸ್ಲಿಮರು ಸುಧಾಕರ್ ಅವರ ಜತೆ ಕುಳಿತು ಮಾತನಾಡುತ್ತಿರುವ ವಿಡಿಯೊ ಲಭ್ಯವಾಗಿವೆ.
ಇದನ್ನೂ ಓದಿ: Karnataka Elections 2023: ಚಿಕ್ಕಬಳ್ಳಾಪುರದಲ್ಲಿ ಡಾ. ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್; ಜಾಲಪ್ಪ ಮೊಮ್ಮಗ ಬಂಡಾಯ!
ರಾಜ್ಯಾದ್ಯಂತ ಮುಸ್ಲಿಮರು ರಂಜಾನ್ ಆಚರಣೆ ಮಾಡಿದ್ದಾರೆ. ಈದ್ಗಾ ಮೈದಾನಕ್ಕೆ ತೆರಳಿ, ಪ್ರಾರ್ಥನೆ ಸಲ್ಲಿಸಿದ್ದಾರೆ. ಇದೇ ವೇಳೆ ತುಂಬ ರಾಜಕಾರಣಿಗಳು ಕೂಡ ಮುಸ್ಲಿಮರಿಗೆ ರಂಜಾನ್ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಪ್ರಾರ್ಥನಾ ಸ್ಥಳಗಳಿಗೆ ತೆರಳಿ ಶುಭ ಕೋರಿದ್ದಾರೆ.