ಧಾರವಾಡ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ನಾಯಕರಾಗಿದ್ದ ದಿ. ಮುಲಾಯಂ ಸಿಂಗ್ ಯಾದವ್ ಅವರಿಗೆ ಕೇಂದ್ರ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ (Padmavibhushana Award) ಘೋಷಣೆ ಮಾಡಿದ್ದನ್ನು ಶ್ರೀರಾಮ ಸೇನೆ ಸಂಚಾಲಕ ಪ್ರಮೋದ್ ಮುತಾಲಿಕ್ ತೀವ್ರವಾಗಿ ಆಕ್ಷೇಪಿಸಿದ್ದಾರೆ. ಮುಲಾಯಂ ಸಿಂಗ್ ಯಾದವ್ ಅವರು ಅಯೋಧ್ಯೆಯ ಕರಸೇವಕರ ಮೇಲೆ ಗುಂಡು ಹಾರಿಸಿದವರು, ಅಂಥವರಿಗೆ ಪ್ರಶಸ್ತಿ ನೀಡುವ ಮೂಲಕ ಕೆಟ್ಟ ಪರಂಪರೆಗೆ ನಾಂದಿ ಹಾಡಲಾಗಿದೆ ಎನ್ನುವುದು ಮುತಾಲಿಕ್ ಆಕ್ಷೇಪ.
ʻʻಮುಲಾಯಂ ಸಿಂಗ್ ಯಾದವ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಫೋಷಣೆ ಮಾಡಿರುವುದು ಅಪರಾಧ. ಅವರಿಗೆ ಯಾವ ಕಾರಣಕ್ಕೂ ಪ್ರಶಸ್ತಿ ನೀಡಬಾರದು. ಅವರಿಗೆ ಪ್ರಶಸ್ತಿ ಘೋಷಿಸುವ ಮೂಲಕ ಪದ್ಮ ಪ್ರಶಸ್ತಿ ಸಮಿತಿ ಕೆಟ್ಟ ಪರಂಪರೆಯನ್ನು ಹುಟ್ಟುಹಾಕಿದೆʼʼ ಎಂದು ಮುತಾಲಿಕ್ ಹೇಳಿದರು.
೧೯೯೨ರ ಡಿಸೆಂಬರ್ ೬ರಂದು ದೇಶಾದ್ಯಂತದಿಂದ ಬಂದ ಕರಸೇವಕರು ಅಯೋಧ್ಯೆಯ ವಿವಾದಿತ ಕಟ್ಟಡವನ್ನು ಕೆಡವಿದ ಘಟನೆ ಮತ್ತು ಕರಸೇವಕರ ಮೇಲೆ ಅಲ್ಲಿನ ಸರ್ಕಾರ ಗುಂಡು ಹಾರಿಸಿದ್ದನ್ನು ನೆನಪು ಮಾಡಿಕೊಂಡಿರುವ ಮುತಾಲಿಕ್, ʻʻಮುಲಾಯಂ ಸಿಂಗ್ ಅವರು ಅಂದು ಕರಸೇವಕರ ಮೇಲೆ ಗುಂಡು ಹಾಕಿಸಿದರು. ಅತ್ಯಂತ ಶಾಂತಿಯುತ ಪ್ರತಿಭಟನಾಕಾರರ ಮೇಲೆ ಗುಂಡು ಹಾಕಿಸಿದ ಅತ್ಯಂತ ಕ್ರೂರಿ ಅವರು. ರಾಮ ವಿರೋಧಿ, ಧರ್ಮ ವಿರೋಧಿ, ದೇಶದ್ರೋಹಿ. ಹೀಗೆ ಕರಸೇವಕರ ಮೇಲೆ ಗುಂಡು ಹಾಕಿ, ಲಾಠಿ ಚಾರ್ಜ್ ಮಾಡಿದವನಿಗೆ ಪದ್ಮವಿಭೂಷಣ ನೀಡುತ್ತಿರುವುದು ಪದ್ಮವಿಭೂಷಣಕ್ಕೆ ಕಳಂಕ ತಂದಂತೆ. ಇದು ಅತ್ಯಂತ ಶ್ರೇಷ್ಠ ಪ್ರಶಸ್ತಿಗೆ ಕಪ್ಪು ಚುಕ್ಕೆʼʼ ಎಂದಿದ್ದಾರೆ.
ʻʻಪ್ರಶಸ್ತಿಗೆ ಆಯ್ಕೆ ಮಾಡುವ ಸಮಿತಿಗೆ ನನ್ನ ಧಿಕ್ಕಾರವಿದೆ. ಸಮಿತಿ ಕೂಡಲೇ ದೇಶದ ಜನರ ಭಾವನೆಗಳನ್ನು ಗೌರವಿಸಿ ಮುಲಾಯಂ ಸಿಂಗ್ ಕೊಟ್ಟ ಪ್ರಶಸ್ತಿಯನ್ನ ಹಿಂಪಡೆಯಬೇಕುʼʼ ಎಂದಿರುವ ಅವರು, ಉತ್ತರ ಪ್ರದೇಶದ ಈಗಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಜೈಲಿಗೆ ಕಳಿಸಿದ ವ್ಯಕ್ತಿಗೆ ಈ ಪ್ರಶಸ್ತಿ ಕೊಡಬಾರದು ಎಂದರು.
ಇದನ್ನೂ ಓದಿ | Padma Awards 2023: ಜನಸಾಮಾನ್ಯರಿಂದ ಹಿಡಿದು ಅಸಾಮಾನ್ಯ ಸಾಧಕರಿಗೆ ಪದ್ಮ ಗೌರವ, ಇಲ್ಲಿದೆ ಪಟ್ಟಿ