Site icon Vistara News

Video| ಅಮ್ಮ ನನಗಾಗಿ ಸನ್​ಸ್ಕ್ರೀನ್​ ಕಳಿಸಿಕೊಟ್ಟಿದ್ದಾರೆ, ಆದರೆ ನಾನು ಬಳಸುತ್ತಿಲ್ಲ; ಯಾತ್ರೆ ಮಧ್ಯೆ ರಾಹುಲ್​ ಗಾಂಧಿ ಮಾತುಕತೆ

Rahul Gandhi On Life Partner

ಬಳ್ಳಾರಿ: ಕಾಂಗ್ರೆಸ್ ಆಯೋಜಿಸಿರುವ ಭಾರತ್ ಜೋಡೋ ಯಾತ್ರೆ ಸದ್ಯ ಕರ್ನಾಟಕದಲ್ಲಿ ನಡೆಯುತ್ತಿದೆ. ರಾಹುಲ್​ ಗಾಂಧಿ ನೇತೃತ್ವದಲ್ಲಿ ಯಾತ್ರಿಗಳು ಹೆಜ್ಜೆ ಹಾಕುತ್ತಿದ್ದಾರೆ. ಈ ಭಾರತ್​ ಜೋಡೋ ಯಾತ್ರೆಗೆ ಸೋಮವಾರ (ಅಕ್ಟೋಬರ್​ 17) ಬಿಡುವಿತ್ತು. ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ಯಾತ್ರೆಯನ್ನು ಒಂದು ದಿನದ ಮಟ್ಟಿಗೆ ನಿಲ್ಲಿಸಲಾಗಿತ್ತು. ಈ ವೇಳೆ ರಾಹುಲ್​ ಗಾಂಧಿ, ತಮ್ಮೊಂದಿಗೆ ಹೆಜ್ಜೆ ಹಾಕುತ್ತಿರುವ ಒಂದಷ್ಟು ಯಾತ್ರಿಗಳೊಂದಿಗೆ ಸ್ನೇಹಪರವಾಗಿ ಮಾತುಕತೆ ನಡೆಸಿದ ವಿಡಿಯೋಗಳು ವೈರಲ್ ಆಗಿವೆ.

ಬಿಸಿಲು -ಮಳೆಯ ಮಧ್ಯೆ ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ. ಅದರಲ್ಲೂ ಬಳ್ಳಾರಿ ಕಡೆ ಬಿಸಿಲು ಇರುವುದರಿಂದ ರಾಹುಲ್ ಗಾಂಧಿ ಮತ್ತು ಸಹಯಾತ್ರಿಗಳು ಉಷ್ಣತೆ ಬಗ್ಗೆ ಮಾತುಕತೆ ನಡೆಸಿದ್ದಾರೆ. ಆಗ ಯುವಕನೊಬ್ಬ ರಾಹುಲ್ ಗಾಂಧಿ ಬಳಿ ‘ಇಷ್ಟೆಲ್ಲ ಬಿಸಿಲಿನ ಮಧ್ಯೆ ನಡೆದರೂ, ನಿಮ್ಮ ಮುಖದ ಹೊಳಪು ಕಡಿಮೆಯಾಗಿಲ್ಲ, ನೀವು ಯಾವ ಸನ್​ಸ್ಕ್ರೀನ್​ ಉಪಯೋಗಿಸುತ್ತೀರಿ?’ ಎಂದು ಕೇಳುತ್ತಾನೆ. ಆಗ ನಾಚಿಕೊಳ್ಳುತ್ತ ನಕ್ಕ ರಾಹುಲ್​ ಗಾಂಧಿ ‘ಇಲ್ಲ ಇಲ್ಲ, ನಾನು ಯಾವುದೇ ಸನ್​ಸ್ಕ್ರೀನ್​ ಬಳಸುತ್ತಿಲ್ಲ ಎಂದು ತಮ್ಮ ಟೀ-ಶರ್ಟ್​ ತೋಳನ್ನೆಲ್ಲ ಎತ್ತಿ ತೋರಿಸಿದ್ದಾರೆ. ಅಷ್ಟೇ ಅಲ್ಲ, ‘ನನ್ನ ಅಮ್ಮ ನನಗಾಗಿ ಸನ್​ಸ್ಕ್ರೀನ್​ ಕೊಟ್ಟು ಕಳಿಸಿದ್ದಾರೆ. ಆದರೆ ನಾನದನ್ನು ಬಳಸುತ್ತಿಲ್ಲ’ ಎಂದೂ ಹೇಳಿದ್ದಾರೆ. ಅಷ್ಟರಲ್ಲೊಬ್ಬರು ಯುವತಿ, ‘ನೀವು ಟ್ಯಾನ್​ ಆಗಿದ್ದೀರಿ’ ಎನ್ನುವುದನ್ನೂ ಕೇಳಬಹುದು.

ಹಾಗೇ ಇನ್ನೊಬ್ಬರು ಪ್ರಶ್ನೆ ಕೇಳಿ ‘ಈ ಯಾತ್ರೆಯಲ್ಲಿ ನಿಮಗೆ ವಿವಿಧ ಪ್ರದೇಶದ, ಬೇರೆಬೇರೆ ಭಾಷೆಗಳನ್ನು ಮಾತನಾಡುವ ಜನರು ಎದುರು ಸಿಗುತ್ತಿದ್ದಾರೆ. ಆ ಭಾಷೆ ನಿಮಗೆ ಅರ್ಥವಾಗದೆ ಇದ್ದರೂ ನೀವು ಅವರ ಮಾತುಗಳನ್ನು ಸಮಾಧಾನವಾಗಿ ಕೇಳುತ್ತೀರಿ. ಇದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ ‘ಹೀಗೆ ಮಾರ್ಗದಲ್ಲಿ ಸಿಗುವ ಜನರ ಮಾತನ್ನು ನಾನು ಅಲಿಸದೆ ಮುಂದೆ ಹೋದರೆ, ಅವರಿಗೆ ಪ್ರೀತಿ-ಕಾಳಜಿ ತೋರಿಸದೆ ಹೋದರೆ, ಈ ಯಾತ್ರೆಗೆ ಏನು ಅರ್ಥ ಬಂದಂತಾಯಿತು?’ ಎಂದು ರಾಹುಲ್ ಗಾಂಧಿ ಕೇಳಿದ್ದಾರೆ. ಅಲ್ಲದೆ, ಅವರು ಹೇಳಿದ್ದು ನನಗೆ ಅರ್ಥವಾಗದೆ ಇದ್ದರೂ, ನಾನು ಅವರೊಂದಿಗೆ ಇದ್ದೇನೆ ಎಂಬ ಭರವಸೆ ಮೂಡಿಸುವುದು ತುಂಬ ಮುಖ್ಯವಾಗುತ್ತದೆ ಎಂದೂ ಅವರು ಹೇಳಿದ್ದಾರೆ.

ಸಮಯ ಕಳೆಯಲು ಏನು ಮಾಡ್ತೀರಿ?
ಪ್ರತಿದಿನ ಯಾತ್ರೆ 7-7.30ಕ್ಕೆ ಮುಕ್ತಾಯವಾಗುತ್ತದೆ. ಮತ್ತೆ ಮರುದಿನ ಮುಂಜಾನೆ 6.30ಕ್ಕೆ ಪಾದಯಾತ್ರೆ ಶುರುವಾಗುತ್ತದೆ. ನೀವು ಸಂಜೆ ಪಾದಯಾತ್ರೆ ಮುಗಿದ ಬಳಿಕ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ ‘ನಾನು ಸ್ವಲ್ಪ ವ್ಯಾಯಾಮ ಮಾಡುತ್ತೇನೆ. ಪುಸ್ತಕ ಓದುತ್ತೇನೆ. ನನ್ನ ತಾಯಿಗೆ ಆರೋಗ್ಯ ಸರಿಯಿಲ್ಲ. ಅವರಿಗೆ ಕರೆ ಮಾಡಿ ಮಾತನಾಡುತ್ತೇನೆ. ಅಷ್ಟೇ ಅಲ್ಲ, ನನ್ನ ಸೋದರಿ (ಪ್ರಿಯಾಂಕಾ ಗಾಂಧಿ), ಕೆಲವು ಸ್ನೇಹಿತರಿಗೂ ಫೋನ್​ ಮಾಡುತ್ತೇನೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇಂದು ಭಾರತ್‌ ಜೋಡೋ ಯಾತ್ರೆ ರಾಜ್ಯ ಪ್ರವೇಶ, 21 ದಿನ ಹೆಜ್ಜೆ ಹಾಕಲಿರುವ ರಾಹುಲ್‌ ಗಾಂಧಿ

Exit mobile version