ಹೂವಿನಹಡಗಲಿ: ಪ್ರತಿ ವರ್ಷದ ಪದ್ಧತಿಯಂತೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ಸುಕ್ಷೇತ್ರ ಐತಿಹಾಸಿಕ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ಕಾರ್ಣಿಕ ನುಡಿದಿದ್ದಾರೆ. 14 ಅಡಿ ಎತ್ತರದ ಬಿಲ್ಲನ್ನೇರಿ ಗೊರವಯ್ಯ ರಾಮಪ್ಪ ‘ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್ʼ ಎಂದು ಕಾರ್ಣಿಕ ಭವಿಷ್ಯ ನುಡಿದಿದ್ದಾರೆ.
ಭಕ್ತಾದಿಗಳು ಹೆಗಲ ಮೇಲೆ ಬಿಲ್ಲನ್ನು ಹೊತ್ತು ತಂದು ಡೆಂಕನಮರಡಿಯಲ್ಲಿ ಏರಿಸಿದರು. ಕಾರ್ಣಿಕ ಭವಿಷ್ಯ ನುಡಿಯುವ ಗೊರವಪ್ಪ ರಾಮಣ್ಣ ಅವರು ಬಿಲ್ಲನ್ನು ಏರಿ ಆಕಾಶದೆಡೆಗೆ ಮೌನವಾಗಿ ದಿಟ್ಟಿಸಿ ಸದ್ದಲೇ ಎಂದು ಕೂಗಿ “ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್” ಎಂದು ಕಾರ್ಣಿಕ ನುಡಿದು ಬಿಲ್ಲನ್ನು ಕೈಬಿಟ್ಟರು.
ಡೆಂಕಣಮರಡಿಯಲ್ಲಿ ಕಾರ್ಣಿಕ ವಿಶ್ಲೇಷಣೆ ಮಾಡಿದ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಅವರು, ರಾಜಕೀಯಕ್ಕೆ ಸಂಬಂಧಪಟ್ಟಂತೆ ಪ್ರಾಮಾಣಿಕವಾಗಿ, ನಿಷ್ಠೆಯಿಂದ ಇರುವ ವ್ಯಕ್ತಿ ರಾಜ್ಯ ಹಾಗೂ ರಾಷ್ಟ್ರವನ್ನಾಳುತ್ತಾನೆ ಎಂಬುವುದಾಗಿ ಭಗವಂತ ದೈವವಾಣಿ ಮೂಲಕ ತಿಳಿಸಿರುವುದಾಗಿ ಹೇಳಿದರು.
ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಲ್ಲಿ ನಿಷ್ಠೆಯಿಂದಿರುವ ನಾಯಕರಿಗೆ ರಾಜ್ಯದ ಪಟ್ಟ ಸಿಗುತ್ತದೆ. ಪರೋಕ್ಷವಾಗಿ ಕುರುಬ ಸಮುದಾಯದ ವ್ಯಕ್ತಿಯೇ ರಾಜ್ಯವನ್ನಾಳುತ್ತಾರೆ ಎಂದು ಹೇಳಿದ್ದದರಿಂದ ರಾಜಕೀಯ ವಲಯದಲ್ಲಿ ಕಾರ್ಣಿಕ ನುಡಿ ತೀವ್ರ ಕುತೂಹಲ ಹುಟ್ಟುಹಾಕಿದೆ.
ರೈತಾಪಿ ವರ್ಗಕ್ಕೆ ಸಂಬಂಧಿಸಿದಂತೆ ಈ ವರ್ಷ ಮಳೆ ಬೆಳೆ ಸಮೃದ್ಧಿಯಾಗಿ ಕೃಷಿ ಚಟುವಟಿಕೆಗಳಿಗೆ ಯಾವುದೇ ಲೋಪದೋಷ ಉಂಟಾಗುವುದಿಲ್ಲ ಎಂಬುವುದು ವಾರ್ಷಿಕ ಕಾರ್ಣಿಕದ ತಾತ್ಪಾರ್ಯವಾಗಿದೆ.
ಜಿಲ್ಲಾಡಳಿತ ಹಾಗೂ ಹಿಂದು ಧಾರ್ಮಿಕ ದತ್ತಿ ಇಲಾಖೆಯಿಂದ ಶ್ರೀ ಕ್ಷೇತ್ರ ಮೈಲಾರ ಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಸಂಜೆ 5.30ಕ್ಕೆ ಮೈಲಾರ ಗ್ರಾಮದಲ್ಲಿ ನಡೆದ ಕಾರ್ಣಿಕೋತ್ಸವ ಕಾರ್ಯಕ್ರಮ ಸಂಪನ್ನವಾಗಿ ನೆರವೇರಿತು.
ಮಧ್ಯಾಹ್ನದಿಂದಲೇ ಡೆಂಕನ ಮರಡಿಯತ್ತ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಧಾವಿಸಿದ್ದರು. ಜಿಲ್ಲಾಡಳಿತ ಹಾಗೂ ಹಿಂದೂ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿತ್ತು. ವಿಶೇಷ ಪೊಲೀಸ್ ವ್ಯವಸ್ಥೆ, ಬಂದೋಬಸ್ತ್ ಸಹ ಏರ್ಪಡಿಸಲಾಗಿತ್ತು. ದೇವಸ್ಥಾನದ ವಂಶಪಾರಂಪರ್ಯ ಧರ್ಮಕರ್ತ ಶ್ರೀಗುರು ವೆಂಕಪ್ಪಯ್ಯ ಒಡೆಯರ್ ಕುದುರೆ ಮೇಲೆ ಮೆರವಣಿಗೆ ಮೂಲಕ ಡೆಂಕನಮರಡಿಗೆ ಆಗಮಿಸಿ ಪೂಜೆ ನೆರವೇರಿಸಿದರು.
ಜಾತ್ರಾ ಮಹೋತ್ಸವಕ್ಕೆ ಅಗತ್ಯ ವ್ಯವಸ್ಥೆ
ಕಾರ್ಣಿಕೋತ್ಸವದ ಸಿದ್ಧತೆಯನ್ನು ಪರಿಶೀಲಿಸಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಅವರು, 6-7 ಲಕ್ಷ ಜನ ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿಂದ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಹಾಗೂ ಇತರೆ ಮೂಲಭೂತ ಸೌಕರ್ಯ ಸಹ ಒದಗಿಸಿ ಯಾವುದೇ ರೀತಿಯಾದ ತೊಂದರೆಯುಂಟಾಗದಂತೆ ನಿಗಾ ವಹಿಸಲಾಗಿದೆ ಎಂದರು.
ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಮಾತನಾಡಿ ಜ.28ರಿಂದ ಆರಂಭಗೊಂಡ ಜಾತ್ರಾ ಮಹೋತ್ಸವಕ್ಕೆ ಸುಗಮ ಸಂಚಾರಕ್ಕೆ ಅನುವು, ಸೂಕ್ತ ಭದ್ರತೆ, ಪಾರ್ಕಿಂಗ್ ವ್ಯವಸ್ಥೆ ಸಲುವಾಗಿ 650 ಪೊಲೀಸ್ ಸಿಬ್ಬಂದಿ ಸೇರಿದಂತೆ 5 ಕೆಎಸ್‌ಆರ್‌ಪಿ ತುಕಡಿ, 4 ಜನ ಡಿವೈಎಸ್ಪಿ, 9 ಜನ ಇನ್ಸ್‌ಪೆಕ್ಟರ್, 21 ಜನ ಸಬ್ ಇನ್ಸ್‌ಪೆಕ್ಟರ್ ನಿಯೋಜನೆಗೊಂಡಿದ್ದರು. ಕಾರ್ಣಿಕೋತ್ಸವ ನಂತರವೂ ಮೂರು ದಿನಗಳ ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ | ನಾಡದೇವಿ ಚಿತ್ರ ಈಗ ಅಧಿಕೃತ; ಶಾಲೆ-ಕಾಲೇಜು-ಕಚೇರಿಯಲ್ಲಿ ಅಳವಡಿಕೆ ಕಡ್ಡಾಯ: ಮುಖದಲ್ಲಿ ಬದಲಾವಣೆ ಮಾಡಿ ಸರ್ಕಾರದ ಆದೇಶ
ಮತದಾನದ ಕುರಿತು ಅರಿವು
ಕಾರ್ಣಿಕೋತ್ಸವ ನಡೆಯುವ ಸ್ಥಳ ಡೆಂಕನ ಮರಡಿಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮತದಾನದ ಕುರಿತು ಜಾಗೃತಿ ಹಾಗೂ ಅರಿವನ್ನು ಧ್ವನಿವರ್ಧಕದ ಮೂಲಕ ಭಕ್ತರಿಗೆ ನೀಡಲಾಯಿತು.
ಆರೋಗ್ಯ ಇಲಾಖೆ, ಜೆಸ್ಕಾಂ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಣಿಕೋತ್ಸವ ಸ್ಥಳದಲ್ಲಿ ಉಪಸ್ಥಿತಿ ವಹಿಸಿದ್ದರು. ಹೂವಿನ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ, ಸಂಸದ ದೇವೇಂದ್ರಪ್ಪ, ಐಜಿ ಲೋಕೇಶ್ ಕುಮಾರ್, ಹೂವಿನಹಡಗಲಿ ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್, ತಹಸೀಲ್ದಾರ್ ಶರಣಮ್ಮ, ಹಿಂದು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಎಚ್.ಎಂ.ಪ್ರಕಾಶ್ ರಾವ್, ಮೈಲಾರಲಿಂಗ ಸ್ವಾಮಿ ದೇವಸ್ಥಾನದ ಇಒ ಕೃಷ್ಣಪ್ಪ ಬಿ.ಎಂ. ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.