ರಂಗಸ್ವಾಮಿ ಎಂ, ಮೈಸೂರು
ರಾಜ್ಯದ ಚರಿತ್ರೆಯಲ್ಲಿ ಅಚ್ಚಳಿಯದಂತೆ ಹೆಸರು ಮಾಡಿದ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮ ದಿನ ಇಂದು (ಜೂನ್ 4).
ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ ಅವರ ಜಯಂತಿಯನ್ನು ಮೈಸೂರಿನಲ್ಲಿ ಆಚರಿಸಲಾಯಿತು. ನಗರದ ಹೃದಯಭಾಗವಾದ ಕೆ.ಆರ್.ವೃತ್ತದಲ್ಲಿರುವ ರಾಜರ್ಷಿಯ ಪ್ರತಿಮೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಜನಪ್ರತಿನಿಧಿಗಳು ಮಾಲಾರ್ಪಣೆ ಮಾಡಿದರು. ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರತ್ಯೇಕವಾಗಿ ಗೌರವ ಸಲ್ಲಿಸಿದರು. ಜಯಂತಿ ಅಂಗವಾಗಿ ಅರಮನೆ ನಗರಿಯಲ್ಲಿ ಹಲವು ಕಾರ್ಯಕ್ರಮಗಳೂ ನಡೆದವು.
ನಾಲ್ವಡಿ ಕೃಷ್ಣರಾಜ ಒಡೆಯರ್ ಹುಟ್ಟಿದ್ದು ಜೂನ್ 4, 1884ರಂದು. ಹತ್ತನೇ ವಯಸ್ಸಿನಲ್ಲೇ ಪಟ್ಟಾಭಿಷಕ್ತರಾಗಿ ತಾಯಿ ಕೆಂಪನಂಜಮ್ಮಣ್ಣಿ ವಾಣಿ ವಿಲಾಸ ಅವರ ಮಾರ್ಗದರ್ಶನದಲ್ಲಿ ಬೆಳೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಹತ್ತಾರು ಮೊದಲುಗಳ ಸರದಾರ ಎನಿಸಿದ್ದಾರೆ. ಬ್ರಿಟೀಷರ ಆಧಿಪತ್ಯದ ಆಡಳಿತಾತ್ಮಕ ‘ಇತಿ-ಮಿತಿ’ಗಳನ್ನೂ ಮೀರಿ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ರಾಜಕೀಯ ಮೈಲುಗಲ್ಲುಗಳನ್ನು ಸ್ಥಾಪಿಸಿದ ಗಟ್ಟಿಗ ದೊರೆ. ಸಾಧಾರಣ ಮೈಕಟ್ಟಿನ ನಾಲ್ವಡಿ ಕೃಷ್ಣರಾಜರು ಮಾಡಿದ್ದೆಲ್ಲವೂ ಅಸಾಧಾರಣ ಸಾಧನೆಯೇ ಆಗಿವೆ.
ಮೈಸೂರು ರಾಜ್ಯದ ಸರ್ವತೋಮಖ ಅಭಿವೃದ್ದಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಬದ್ಧರಾಗಿದ್ದರು. ಆದ್ದರಿಂದಲೇ ನಮ್ಮ ದೇಶದ ಯಾವ ಸಂಸ್ಥಾನವೂ ಕಾಣದ ಅಭಿವೃದ್ದಿಯನ್ನು ಮೈಸೂರು ರಾಜ್ಯ ಸಾಧಿಸಲು ಸಾಧ್ಯವಾಯಿತು. ಮೈಸೂರು ಸಂಸ್ಥಾನಕ್ಕೆ ‘ಮಾದರಿ ಮೈಸೂರುʼಎಂಬ ಕೀರ್ತಿ ಪ್ರಾಪ್ತವಾಯಿತು.
ನಾಲ್ವಡಿ ಆಡಳಿತದಲ್ಲಿ ಜನತೆ ಪಾಲ್ಗೊಳ್ಳುವಿಕೆ ಪರಿಚಯಿಸಿದ ಪ್ರಥಮ ಜನಾನುರಾಗಿ ರಾಜ. ಅವರ ಕಾಲದಲ್ಲಿ ಮೈಸೂರು ರಾಜ್ಯದಲ್ಲಿ ಹೆಸರಿಗೆ ಮಾತ್ರ ಇದ್ದ ‘ಪ್ರಜಾ ಪ್ರತಿನಿಧಿ ಸಭೆʼ ನೂತನ ರೂಪವನ್ನು ಪಡೆದು, ನಿಜವಾದ ಜನ ಪ್ರತಿನಿಧಿ ಸಭೆಯಾಗಿ ಪರಿವರ್ತನೆಯಾಯಿತು. ಇದರ ಜತೆಗೆ ‘ನ್ಯಾಯ ವಿಧಾಯಕ’ ಸಭೆಯನ್ನೂ ಸಹ ಸ್ಥಾಪಿಸಲಾಯಿತು. ರಾಜ್ಯದ ಸಣ್ಣ ಸಣ್ಣ ಪಟ್ಟಣಗಳಲ್ಲಿಯೂ ಸಹ ಮುನಿಸಿಪಾಲಿಟಿಗಳು ರಚನೆಯಾದವು. ಹಳ್ಳಿಗಳಲ್ಲಿ ಪ್ರಥಮ ಬಾರಿಗೆ ಗ್ರಾಮ ಪಂಚಾಯಿತಿಗಳು ಕಾರ್ಯ ನಿರ್ವಹಿಸಲು ಆರಂಭ ಮಾಡಿದವು. ಇದೆಲ್ಲವೂ ಈಗಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಥಾವತ್ತಾಗಿ ಜಾರಿಯಲ್ಲಿವೆ. ಅಂದರೆ ನಾಲ್ವಡಿ ಅವರ ದೂರದೃಷ್ಟಿತ್ವ ಎಂಥದ್ದು ಎಂಬುದನ್ನು ಮನಗಾಣಬೇಕು.
ಕನ್ನಂಬಾಡಿ ಅಣೆಕಟ್ಟು ಕಟ್ಟಲು ಮೈಸೂರು ಸಂಸ್ಥಾನದಲ್ಲಿ ಹಣವಿರಲಿಲ್ಲ. ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯ ಮದ್ಯಪಾನಕ್ಕೆ ಅನುಮತಿ ನೀಡಿದರೆ ಸುಂಕದ ರೂಪದಲ್ಲಿ ಸಂಪನ್ಮೂಲ ಕ್ರೋಢೀಕರಣವಾಗುತ್ತದೆ ಎನ್ನುವ ಸಲಹೆ ಕೊಟ್ಟಿದ್ದರು. ಆದರೆ ಜನರ ಆರೋಗ್ಯ, ಆರ್ಥಿಕತೆ ಮತ್ತು ಕೌಟುಂಬಿಕ ಶೋಷಣೆಗಳ ಅಂದಾಜಿದ್ದ ನಾಲ್ವಡಿ ಸೇಂದಿ ಸಾರಾಯಿಗೆ ಅವಕಾಶ ಕೊಡಲಿಲ್ಲ. ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಗಿರಿವಿ ಇಟ್ಟು ಅಣೆಕಟ್ಟು ನಿರ್ಮಿಸಲು ಅಗತ್ಯವಾಗಿದ್ದ ಹಣ ಹೊಂದಿಸಿದ್ದರು. ಆದ್ದರಿಂದಲೇ ಈಗಲೂ ಮಂಡ್ಯದ ಜನ ಊರೂರಲ್ಲೂ ಹೆಬ್ಬಾಗಿಲು ಬಳಿ ನಾಲ್ವಡಿ ಪ್ರತಿಮೆ ಸ್ಥಾಪಿಸಿ ಪೂಜೆ ಮಾಡುತ್ತಾರೆ.
ನಾಲ್ವಡಿ ಕಾಲದ ಮೇರು ಸಾಧನೆಗಳು
ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಗ್ರಾಮ ನಿರ್ಮಲೀಕರಣ, ವೈದ್ಯ ಸಹಾಯ, ವಿದ್ಯಾ ಪ್ರಚಾರ, ನೀರಿನ ಸೌಕರ್ಯ, ಪ್ರಯಾಣ ಸೌಲಭ್ಯ ಮುಂತಾದ ಕ್ಷೇತ್ರಗಳು ಸ್ವಯಮಾಡಳಿತ ಸಂಸ್ಥೆಗಳಾದವು.
1907 ರಲ್ಲಿ ‘ವಾಣೀವಿಲಾಸ ಸಾಗರʼ(ಮಾರಿ ಕಣಿವೆ) ಕಟ್ಟಲ್ಪಟ್ಟಿತು. 1911ರಲ್ಲಿ ಆರಂಭವಾದ ‘ಕೃಷ್ಣರಾಜ ಸಾಗರ’ ಭಾರತದ ಮೊಟ್ಟ ಮೊದಲ ಬೃಹತ್ ಜಲಾಶಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತದ, ಏಷ್ಯಾದ ಅತ್ಯಂತ ಹಳೆಯ ಅಣೆಕಟ್ಟುಗಳಲ್ಲಿ ಒಂದಾಗಿರುವ ಕೃಷ್ಣರಾಜಸಾಗರ ನಿರ್ಮಾಣದ ಕೀರ್ತಿ ನಾಲ್ವಡಿಯರಿಗೆ ಸಲ್ಲುತ್ತದೆ. 1932ರಲ್ಲಿ ಅಣೆಕಟ್ಟು ನಿರ್ಮಾಣದ ಕಾರ್ಯ ಪುರ್ಣಗೊಂಡಿತು. 1900ರಲ್ಲಿಯೇ ಶಿವನ ಸಮುದ್ರದ ಬಳಿ ಕಾವೇರಿ ನದಿಯಿಂದ ಜಲ ವಿದ್ಯುತ್ ಕೇಂದ್ರ ಆರಂಭಿಸಲಾಯಿತು. ಇದು ಭಾರತದ ಮೊದಲ ಜಲ ವಿದ್ಯುತ್ ಕೇಂದ್ರ. ಏಷ್ಯಾ ಖಂಡದಲ್ಲೇ ಮೊದಲ ಜಲ ವಿದ್ಯುತ್ ಯೋಜನೆಯನ್ನು ಪ್ರಾರಂಭಿಸಿದ ಕೀರ್ತಿ ನಾಲ್ವಡಿಯವರದು. ಇದರ ಫಲಿತಾಂಶವಾಗಿ 1905 ಆಗಸ್ಟ್ 3 ರಂದು ಪ್ರಥಮವಾಗಿ ಬೆಂಗಳೂರಿನಲ್ಲಿ ದೀಪಗಳು ಬೆಳಗಿದವು.
1914ರಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಸ್ಕೂಲನ್ನು ಆರಂಭಿಸಲಾಯಿತು. ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಬೆಂಗಳೂರಿನ ಸಾಬೂನು ಕಾರ್ಖಾನೆ, ಮೈಸೂರಿನ ಗಂಧದೆಣ್ಣೆ ಕಾರ್ಖಾನೆ, ಸಿಮೆಂಟ್ ಕಾರ್ಖಾನೆ, 1934 – ಮಂಡ್ಯದಲ್ಲಿ ಮೈಸೂರು ಸಕ್ಕರೆ ಕಂಪೆನಿ, 1936 ರಲ್ಲಿ ಮೈಸೂರು ಪೇಪರ್ ಮಿಲ್ಸ್, ಮಂಗಳೂರು ಹೆಂಚು ಕಾರ್ಖಾನೆ, ಷಹಬಾದಿನ ಸಿಮೆಂಟ್ ಕಾರ್ಖಾನೆ, ಮೈಸೂರಿನ ಅರಗು ಮತ್ತು ಬಣ್ಣದ ಕಾರ್ಖಾನೆ, ಕೊಡಗಿನ ಕಾಫಿ ಸಂಶೋಧನಾ ಕೇಂದ್ರಗಳು ಪ್ರಾರಂಭಗೊಂಡವು.
ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ ದೊರೆ
ನಾಲ್ವಡಿ ಒಡೆಯರ್ ಆಡಳಿತ ಕಾಲದಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು, ಉಚಿತವಾಗಿ ಮತ್ತು ಕಡ್ಡಾಯವಾಗಿ ಆರಂಭಿಸಲಾಯಿತು. ದೇಶದಲ್ಲೇ ಮೊಟ್ಟಮೊದಲ ವಿಶ್ವವಿದ್ಯಾನಿಲಯವನ್ನು ಮೈಸೂರಿನಲ್ಲಿ ತೆರೆದು ದಾಖಲೆ ನಿರ್ಮಿಸಿದ ಕೀರ್ತಿ ನಾಲ್ವಡಿಯವರಿಗೆ ಸಲ್ಲುತ್ತದೆ. ಅವರ ಕಾಲದಲ್ಲಿ ರಾಜ್ಯದ ನಾನಾ ಭಾಗಗಳಲ್ಲಿ 270 ಉಚಿತ ಆಸ್ಪತ್ರೆಗಳು ಕಾರ್ಯಾರಂಭ ಮಾಡಿದವು.
ಬೆಂಗಳೂರಿನ ಮಿಂಟೊ ಕಣ್ಣಾಸ್ಪತ್ರೆ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿತ್ತು. ಮೈಸೂರಿನ ಕ್ಷಯರೋಗ ಆಸ್ಪತ್ರೆ ಉತ್ತಮಗೊಂಡಿತು. ವಾಣಿಜ್ಯ ಕ್ಷೇತ್ರದಲ್ಲಿ ಮೈಸೂರು ಬ್ಯಾಂಕ್ ಖಾಸಗೀ ಸಹಭಾಗಿತ್ವದೊಡನೆ ಕಾರ್ಯಾರಂಭ ಮಾಡಿತು. 1906 ರಲ್ಲಿಯೇ ಸಹಕಾರ ಸಂಘಗಳನ್ನು ಸ್ಥಾಪಿಸಲಾಯಿತು. ರೈತರಿಗಾಗಿ ಜಮೀನು ಅಡಮಾನ ಬ್ಯಾಂಕುಗಳು ಆರಂಭವಾದವು.
ಕ್ರಾಂತಿಕಾರಕ ಕಾನೂನುಗಳ ಜಾರಿ
1909ರಲ್ಲಿ ದೇವದಾಸಿ ಪದ್ಧತಿ ನಿಷೇಧ, 1910ರಲ್ಲಿ ಬಸವಿ ಪದ್ಧತಿ ರದ್ಧತಿ, 1910ರಲ್ಲಿ ಗೆಜ್ಜೆಪೂಜೆ ಪದ್ಧತಿ ಸಂಪೂರ್ಣ ನಿರ್ಮೂಲನೆ, 1936 ಜುಲೈ 14ರಂದು ವೇಶ್ಯಾವೃತ್ತಿ ತಡೆಗಟ್ಟುವ ಕಾಯ್ದೆ ಜಾರಿ, 1936 ಜುಲೈ 7ರಂದು ವಿಧವೆಯರಿಗೆ ಮರುವಿವಾಹ ಮಾಡಿಕೊಳ್ಳುವ ಕಾಯ್ದೆಯ ಜಾರಿ, 1936 ಜುಲೈ 7ರಂದು ಸ್ತ್ರೀಯರಿಗೆ ಕಡ್ಡಾಯ ಶಿಕ್ಷಣ ಜಾರಿ, 1914ರಲ್ಲಿ ಶಾಲಾ ಪ್ರವೇಶಕ್ಕೆ ಜಾತಿ ಪರಿಗಣನೆಯ ನಿಷೇಧ, 1919ರಲ್ಲಿ ಮಾಧ್ಯಮಿಕ ಶಾಲಾ ಮಟ್ಟದಲ್ಲಿ ಶಿಕ್ಷಣ ಶುಲ್ಕ ರದ್ಧತಿ 1927ರಲ್ಲಿ ಸ್ತ್ರೀಯರಿಗೆ ಮತದಾನದ ಹಕ್ಕನ್ನು ಮೊಟ್ಟಮೊದಲ ಬಾರಿಗೆ ಕಲ್ಪಿಸಿಕೊಟ್ಟರು.
1905ರಲ್ಲಿ ಸಹಕಾರಿ ಕಾರ್ಮಿಕ ಪರಿಹಾರ ಕಾಯ್ದೆಯನ್ನು ಜಾರಿಗೆ ತಂದರು, 1913ರಲ್ಲಿ ಮೈಸೂರು ಗ್ರಾಮ ನ್ಯಾಯಾಲಯ ಕಾಯ್ದೆಯನ್ನು ಜಾರಿ ಮಾಡಿದರು, 1918ರಲ್ಲಿ ಗ್ರಾಮ ಪಂಚಾಯ್ತಿಗಳ ಕಾಯ್ದೆಯನ್ನು ಜಾರಿಗೆ ತಂದರು.
ರೈಲು ಸಂಚಾರಕ್ಕೆ ಉತ್ತೇಜನ
ಆ ಕಾಲದಲ್ಲಿಯೇ ರೈಲು ಸಂಚಾರದ ಲಾಭವನ್ನು ಅರಿತಿದ್ದ ನಾಲ್ವಡಿ ಒಡೆಯರ್ ಅನೇಕ ಹೊಸ ರೈಲು ಮಾರ್ಗಗಳ ನಿರ್ಮಾಣಕ್ಕೆ ಕ್ರಮ ತೆಗೆದುಕೊಂಡಿದ್ದರು. ಮೈಸೂರು – ಅರಸೀಕೆರೆ, ಬೆಂಗಳೂರು– ಚಿಕ್ಕಬಳ್ಳಾಪುರ, ಚಿಕ್ಕಜಾಜೂರು – ಚಿತ್ರದುರ್ಗ, ನಂಜನಗೂಡು – ಚಾಮರಾಜನಗರ, ತರೀಕೆರೆ – ನರಸಿಂಹರಾಜಪುರ, ಶಿವಮೊಗ್ಗ– ಆನಂದಪುರ ಈ ಎಲ್ಲ ರೈಲು ಮಾರ್ಗಗಳನ್ನು 1931ರ ವೇಳೆಗೆ ಪೂರೈಸಲಾಗಿತ್ತು.
ಇದನ್ನೂ ಓದಿ | ಪಾರಂಪರಿಕ ಕಟ್ಟಡಗಳ ಉಳಿವಿಗೆ ಟೆಂಡರ್ ಪ್ರಕ್ರಿಯೆ ಬದಲಾಗಲಿ: ಯದುವೀರ ಒಡೆಯರ್