ಮೈಸೂರು: ಹಾಡಹಗಲಲ್ಲೇ ಬರ್ಬರವಾಗಿ ಹತ್ಯೆಯಾಗಿದ್ದ ರೌಡಿಶೀಟರ್ ಚಂದ್ರಶೇಖರ್ ಅಲಿಯಾಸ್ ಚಂದುವನ್ನು ಹಂತಕರು ಕೊಂದಿರುವ (Mysuru Murder Case) ದೃಶ್ಯಗಳುಳ್ಳ ಸಿಸಿಟಿವಿ ಫೂಟೇಜ್ಗಳು ಲಭ್ಯವಾಗಿವೆ. ಹಂತಕರ ಗುರುತೂ ಪತ್ತೆಯಾಗಿದೆ. ಒಂಟಿಕೊಪ್ಪಲಿನ ನಿವಾಸಿಯಾಗಿದ್ದ ಚಂದು ಜೋಡಿಕೊಲೆ ಕೇಸ್ನಲ್ಲಿ ಜೈಲಿನಲ್ಲಿ ಇದ್ದವನು ಇತ್ತೀಚೆಗೆ ಬಿಡುಗಡೆಯಾಗಿ ಬಂದಿದ್ದ. ಹಾಗೇ ಬಂದವನೇ ತನ್ನ ವಿರೋಧಿ ಗುಂಪಿನ ಗ್ಯಾಂಗ್ಸ್ಟರ್ಗಳಿಗೆ ಬಲಿಯಾಗಿದ್ದ.
ಇದೀಗ ಈ ಹತ್ಯೆ ನಡೆದ ಹೊತ್ತಿನ ಸಿಸಿಟಿವಿ ಫೂಟೇಜ್ಗಳು ಲಭ್ಯವಾಗಿವೆ. ಚಂದುವನ್ನು ಕೊಲ್ಲಲು ಹಂತಕರು ನಾಲ್ಕು ದ್ವಿಚಕ್ರವಾಹನಗಳಲ್ಲಿ, ತಲಾ ಮೂರು ಜನ ಬಂದಿದ್ದರು. ಚಂದುವಿನತ್ತ ಮಚ್ಚು ಬೀಸಿದ್ದರು. 5 ಸೆಕೆಂಡ್ಗಳಲ್ಲಿ ಆತನ ಪ್ರಾಣ ಹೋಗಿತ್ತು. ಹಗಲಲ್ಲೇ, ರಾಜಾರೋಷವಾಗಿ ಹತ್ಯೆ ಮಾಡಿ ವಾಪಸ್ ಹೋಗಿದ್ದಾರೆ. ಈ ಹತ್ಯೆ ಕೇಸ್ನಲ್ಲಿ ಒಟ್ಟು 8 ಮಂದಿ ಈಗಾಗಲೇ ಪೊಲೀಸರಿಗೆ ಶರಣಾಗಿದ್ದಾರೆ.
ಇದನ್ನೂ ಓದಿ: Murder Case: ಮೈಸೂರಲ್ಲಿ ರೌಡಿಶೀಟರ್ ಮರ್ಡರ್; ಮುಖ್ಯರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ
ಇನ್ನು ಚಂದು, ಮಹಾನಗರ ಪಾಲಿಕೆ ಮಾಜಿ ಸದಸ್ಯ ಮಹದೇಶ ಅಲಿಯಾಸ್ ಅವ್ವ ಮಾದೇಶ್ನ ಆಪ್ತನಾಗಿದ್ದ. ಹುಣಸೂರಲ್ಲಿ ನಡೆದ ಒಂದು ಜೋಡಿಕೊಲೆ ಮತ್ತು ಪಡುವಾರಳ್ಳಿಯ ದೇವು ಎಂಬಾತನ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಜೈಲನ್ನೂ ಸೇರಿದ್ದ. ಆದರೆ ಇತ್ತೀಚೆಗೆ ವಾಪಸ್ ಬಂದಿದ್ದ. ಈಗ ಪಡುವಾರಳ್ಳಿ ದೇವು ಹತ್ಯೆಗೆ ಗ್ಯಾಂಗ್ಸ್ಟರ್ಗಳು ಪ್ರತೀಕಾರ ತೀರಿಸಿಕೊಂಡಿದ್ದಾರೆ. ಈ ಗ್ಯಾಂಗ್ನ ಹಲವರು ಜೈಲಲ್ಲಿಯೇ ಇದ್ದರು. ಆದರೆ ಅಲ್ಲೇ ಇದ್ದುಕೊಂಡು ಚಂದು ಕೊಲೆಗೆ ಸಂಚು ರೂಪಿಸಿದ್ದರು.