Site icon Vistara News

Bike Wheeling : ಮಗನ ವ್ಹೀಲಿಂಗ್‌ ಶೋಕಿಗೆ ಪಿಎಸ್‌ಐ ವರ್ಗಾವಣೆ; ವೃದ್ಧನ ಜೀವ ತೆಗೆದವನು ಸೆರೆ

PSI Yasmin Taj and Her son Syadh taj

ಮೈಸೂರು: ಮಹಿಳಾ ಪಿಎಸ್ಐ ಪುತ್ರನ ವ್ಹೀಲಿಂಗ್ (Bike Wheeling) ಪುಂಡಾಟಕ್ಕೆ ನಿನ್ನೆ ಶನಿವಾರ (ಸೆ.16)‌ ಅಮಾಯಕ‌ ವೃದ್ಧ ಬಲಿಯಾಗಿದ್ದರು. ಇದೀಗ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‌ಐ ಪುತ್ರ ಸೈಯದ್‌ ಐವನ್‌ನ್ನು ಪೊಲೀಸರು ಬಂಧಸಿದ್ದಾರೆ. ಮಾತ್ರವಲ್ಲದೆ ಮಗನಿಗೆ ಕುಮ್ಮಕ್ಕು ನೀಡಿದ ಪಿಎಸ್‌ಐ ಯಾಸ್ಮಿನ್‌ ತಾಜ್‌ಗೆ ವರ್ಗಾವಣೆ ಶಿಕ್ಷೆ ನೀಡಲಾಗಿದೆ.

ಮಗನ ಶೋಕಿಗೆ ಕುಮ್ಮಕ್ಕು ನೀಡಿದ ಪಿಎಸ್‌ಐ ಎತ್ತಂಗಡಿ

ಮಗ ಮಾಡಿದ ತಪ್ಪಿಗೆ ನಂಜನಗೂಡು ಸಂಚಾರ ವಿಭಾಗದ ಪಿಎಸ್‌ಐ ಯಾಸ್ಮಿನ್ ತಾಜ್‌ಗೆ ವರ್ಗಾವಣೆ ಶಿಕ್ಷೆ ನೀಡಲಾಗಿದೆ. ಜಿಲ್ಲಾ ಅಪರಾಧ ದಾಖಲೆಗಳ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದ್ದು, ಭಾನುವಾರ (ಸೆ.17) ಮಧ್ಯಾಹ್ನ ಡಿಸಿಆರ್‌ಬಿ ಡಿವೈಎಸ್ಪಿ ಬಳಿ ವರದಿ ಮಾಡಿಕೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಆದೇಶಿಸಿದ್ದಾರೆ.

ಪೊಲೀಸ್ ಇಲಾಖೆ ವಿರುದ್ಧವೇ ಕಿಡಿಕಾರಿದ ಯಾಸ್ಮಿನ್ ತಾಜ್

ತನ್ನನ್ನು ವರ್ಗಾವಣೆ ಮಾಡಿದ ಇಲಾಖೆಯ ವಿರುದ್ಧವೇ ಯಾಸ್ಮಿನ್‌ ತಾಜ್‌ ಕಿಡಿಕಾರಿದರು. ʻʻThis is what I get from my lovely deportment hats off” ಎಂದು ವರ್ಗಾವಣೆ ಆದೇಶಕ್ಕೆ ವಾಟ್ಸ್‌ ಆ್ಯಪ್ ಸ್ಟೇಟಸ್‌ ಹಾಕುವ ಮೂಲಕ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ ಪೆಟ್ಟು ತಿಂದಿದ್ದಕ್ಕೆ ಕಲ್ಲು ವಿಗ್ರಹವಾಯಿತು. ಆದರೆ ಪೆಟ್ಟು ಕೊಟ್ಟ ಸುತ್ತಿಗೆ ಸುತ್ತಿಗೆಯಾಗಿಯೇ ಉಳಿಯಿತು. ನೋವು ಕೊಟ್ಟವರು ಹಾಗೆಯೇ ಉಳಿಯುತ್ತಾರೆ. ನೋವನ್ನು ಉಂಡವರು ಜೀವನದಲ್ಲಿ ಗೆಲ್ಲುವ ಸಾಮರ್ಥ್ಯ ಹೊಂದುತ್ತಾರೆ ಎಂದು ಬರೆದುಕೊಂಡಿದ್ದಾರೆ.

ಶವ ಸ್ವೀಕರಿಸಿದೆ ಕುಟುಂಬಸ್ಥರ ಪ್ರತಿಭಟನೆ

ಗುರುಸ್ವಾಮಿ ಮೃತದೇಹವನ್ನು ಸ್ವೀಕರಿಸದೇ ಕೆ.ಆರ್.ಆಸ್ಪತ್ರೆಯ ಶವಾಗಾರದ ಮುಂದೆ ಹಿಮ್ಮಾವು ಗ್ರಾಮಸ್ಥರು ಪ್ರತಿಭಟನೆಯನ್ನು ನಡೆಸಿದರು. ನಾವು ಯಾವುದೇ ಕಾರಣಕ್ಕೂ ಶವ ತೆಗೆದುಕೊಂಡು‌ ಹೋಗಲ್ಲ. ಪಿಎಸ್ಐ ಯಾಸ್ಮಿನ್ ತಾಜ್‌ರನ್ನೂ ಅಮಾನತ್ತು ಮಾಡಿ, ಮಗ ಯಾಸ್ಮಿತ್ ತಾಜ್‌ನನ್ನು‌ ಬಂಧಿಸಬೇಕೆಂದು ಪಟ್ಟು ಹಿಡಿದರು.

ಇದನ್ನೂ ಓದಿ: Chaitra Kundapura : 10 ರೂಪಾಯಿ ಹರಿದ ನೋಟೇ ಕೋಡ್‌ವರ್ಡ್‌! ಚೈತ್ರಾಗೆ ತಲುಪಿದ್ದು ಎಷ್ಟು ಕೋಟಿ?

10 ದಿನಗಳ ಗಡುವು ನೀಡಿದ ಎಎಸ್‌ಪಿ

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್‌ಪಿ ಗೋವಿಂದರಾಜು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಈ ವೇಳೆ ಗ್ರಾಮಸ್ಥರು ಅವರನ್ನೇ ತರಾಟೆಗೆ ತೆಗೆದುಕೊಂಡರು. 4 ವರ್ಷದಿಂದ ಯುವಕ ವ್ಹೀಲಿಂಗ್ ಮಾಡುತ್ತಿರುವುದು ಇಲಾಖೆಗೂ ಮಾಹಿತಿ ಇತ್ತು. ಸಾರ್ವಜನಿಕರ ಮಕ್ಕಳಾದರೆ ಕ್ರಮ ಕೈಗೊಳ್ಳುತ್ತೀರಿ. ಪಿಎಸ್‌ಐ ಮಗನ ಮೇಲೆ ಯಾಕೆ ಕ್ರಮಗೊಂಡಿಲ್ಲ? ಎಂದು ಪ್ರಶ್ನಿಸಿದರು.

ಅಪ್ರಾಪ್ತನಿಗೆ ಬೈಕ್ ಕೊಡಿಸಿರುವ ಪೋಷಕರ ಮೇಲೆ ಯಾವುದೇ ಕ್ರಮಕೊಂಡಿಲ್ಲ. ಇದಕ್ಕೆ ಮೇಲಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಕಿಡಿಕಾರಿದರು. ಇದಕ್ಕೆ ಉತ್ತರ ನೀಡಲಾಗದೆ ಡಿವೈಎಸ್‌ಪಿ ಮೌನಕ್ಕೆ ಜಾರಿದರು. ಬಳಿಕ ಘಟನೆ ಸಂಭವಿಸಿದ ತಕ್ಷಣ ಕ್ರಮ ಕೈಗೊಂಡಿದ್ದೇವೆ. ನೀವು ಕೊಟ್ಟ ದೂರಿ‌ನ ಅನುಸಾರ ಎಫ್‌ಐಆರ್ ದಾಖಲಿಸಿದ್ದೇವೆ. ಯುವಕನ ಮೇಲೆ ಸಿದ್ದಾರ್ಥನಗರ, ನಂಜನಗೂಡು ಸಂಚಾರ ಠಾಣೆಯಲ್ಲಿ ಎಫ್‌ಐಆರ್ ಆಗಿದೆ. ಎರಡೂ ಕೇಸ್‌ನಲ್ಲಿ ಕ್ರಮ ತೆಗೆದುಕೊಂಡು, ಆರೋಪಿಯನ್ನು ಬಂಧಿಸಿದ್ದೇವೆ. ಯಾಸ್ಮಿನ್ ತಾಜ್ ಅವರನ್ನು ವರ್ಗಾವಣೆ ಮಾಡಿದ್ದೇವೆ. ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.

ಯಾರ ಮಾತಿಗೂ ಜಗ್ಗದೆ ಇದ್ದಾಗ ದೂರವಾಣಿ ಮೂಲಕ ಎಎಸ್‌ಪಿ ನಂದಿನಿ ಮನವೊಲಿಸಿದರು. ಈ ಹಿನ್ನೆಲೆಯಲ್ಲಿ ರೈತರು ಹಾಗೂ ಕುಟುಂಬಸ್ಥರು ಪ್ರತಿಭಟನೆಯನ್ನು ಕೈ ಬಿಟ್ಟರು. ಕೆ.ಆರ್.ಆಸ್ಪತ್ರೆ ಶವಗಾರದಿಂದ ಮೃತದೇಹವನ್ನು ಕೊಂಡೊಯ್ದರು. ಪಿಎಸ್ಐ ಅಮಾನತು ಮಾಡುವ ಭರವಸೆಯನ್ನು ನಂದಿನಿ ಅವರು ನೀಡಿದ್ದಾರೆ. ಇದಕ್ಕಾಗಿ ಗ್ರಾಮಸ್ಥರು 10 ದಿನಗಳ ಗಡುವು ನೀಡಿದ್ದರಿಂದ ಪ್ರತಿಭಟನೆಯನ್ನು ಅಂತ್ಯಗೊಳ್ಳಿಸಿದ್ದಾರೆ.

ಇದನ್ನೂ ಓದಿ: Electric Shock : ಡಿಟಿಎಚ್‌ ಅಳವಡಿಸುವಾಗ ಕರೆಂಟ್‌ ಶಾಕ್‌; ಚಿಕಿತ್ಸೆ ಫಲಿಸದೇ ನರಳಾಡಿ ಯುವಕ ಸಾವು

ಸೈಯದ್‌ನನ್ನು ಜೈಲಿಗಟ್ಟಿದ ಪೊಲೀಸರು

ವ್ಹೀಲಿಂಗ್‌ ಮಾಡಿ ಗಾಯಗೊಂಡು ಕೆ.ಆರ್.ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದ ಸೈಯದ್‌ನನ್ನು ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ನಿನ್ನೆ ತಡರಾತ್ರಿಯೇ (ಸೆ.16) ನಂಜನಗೂಡು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮೃತ ಗುರುಸ್ವಾಮಿ ಪುತ್ರ ಮಹದೇವಸ್ವಾಮಿ ಅವರು ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಪಾಯಕಾರಿಯಾಗಿ ಬೈಕ್ ಓಡಿಸಿ ನನ್ನ ತಂದೆ ಸಾವಿಗೆ ಕಾರಣರಾಗಿದ್ದಾರೆ. ಹೀಗಾಗಿ ಕಾನೂನು ರೀತ್ಯಾಕ್ರಮ ಕೈಗೊಳ್ಳುವಂತೆ ದೂರಲ್ಲಿ ಉಲ್ಲೇಖಿಸಿದ್ದಾರೆ. ನಂಬರ್ ಪ್ಲೇಟ್ ಇಲ್ಲದ ಬೈಕ್‌ನಲ್ಲಿ ವ್ಹೀಲಿಂಗ್ ಮಾಡಿರುವುದು ಕಂಡು ಬಂದಿದೆ. ಅಪಘಾತದ ಸ್ಥಳದಲ್ಲಿದ್ದ ಬಜಾಜ್ ಪ್ಲಾಟಿನ ಬೈಕ್‌ ಅನ್ನು ನಂಜನಗೂಡು ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಏನಿದು ಘಟನೆ?

ನಂಜನಗೂಡು ತಾಲೂಕಿನ ಹಿಮ್ಮಾವು ಬಳಿ ಹಸುಗಳನ್ನು ಮೇಯಿಸಿ ಮನೆಗೆ ವಾಪಸ್‌ ತೆರಳುತ್ತಿದ್ದ ವೇಳೆ, ಸೈಯದ್‌ ವ್ಹೀಲಿಂಗ್ ಮಾಡಿಕೊಂಡು ಬಂದು ವೃದ್ಧ ಗುರುಸ್ವಾಮಿಗೆ ಡಿಕ್ಕಿ ಹೊಡೆದಿದ್ದ. ಗುರುಸ್ವಾಮಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದರು. ಈ ವೇಳೆ ಗಾಯಗೊಂಡ ಸೈಯದ್‌ನನ್ನು ವೃದ್ಧನ ಕುಟುಂಬಸ್ಥರೇ ಆಸ್ಪತ್ರೆಗೆ ದಾಖಲಿಸಿದ್ದರು. ಇದೇ ವೇಳೆ ತಮಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದರು.

ಬೈಕ್‌ ವ್ಹೀಲಿಂಗ್‌ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಇತ್ತೀಚೆಗೆ ನಂಜನಗೂಡು ಸಂಚಾರ ಪೊಲೀಸ್ ಠಾಣೆ ಪಿಎಸ್‌ಐ ಪುತ್ರ ಸೈಯದ್‌ ಐಮಾನ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ದಂಡ ವಿಧಿಸಿದ್ದರು. ಇಷ್ಟದರೂ ಬುದ್ಧ ಕಲಿಯದ ಸೈಯದ್‌ ಮತ್ತೆ ವ್ಹೀಲಿಂಗ್‌ ಮಾಡಲು ರಸ್ತೆಗಿಳಿದಿದ್ದ. ಇದೀಗ ಈತನ ಹುಚ್ಚಾಟಕ್ಕೆ ವೃದ್ಧ ಬಲಿಯಾಗಿದ್ದಾರೆ.

ವ್ಹೀಲಿಂಗ್ ಮಾಡಿ ಸಿಕ್ಕಿಬಿದ್ದಿದ್ದ ಐಮಾನ್

ಅಪಾಯಕಾರಿ ವ್ಹೀಲಿಂಗ್ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಸೈಯದ್ ಐಮಾನ್‌ನನ್ನು ಸಿದ್ಧಾರ್ಥ ಸಂಚಾರ ಠಾಣೆ ಪೊಲೀಸರು ವಶಕ್ಕೆ ಪಡೆದು, ಬೈಕ್‌ ಜಪ್ತಿ ಮಾಡಿದ್ದರು. ಮೈಸೂರಿನ ರಿಂಗ್ ರಸ್ತೆ ಹಾಗೂ ರಾಜೀವ್ ನಗರದಲ್ಲಿ ವ್ಹೀಲಿಂಗ್ ಮಾಡುತ್ತಿದ್ದ. ಬಳಿಕ ವಿಡಿಯೊಗಳನ್ನು ಸಾಮಾಜಿಕ ಜಾಲಾತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದ. ರೀಲ್ಸ್‌ ಆಧರಿಸಿ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ: Murder Case : ಪರ ಪುರುಷನ ಮೋಹಿಸಿದವಳ ಕತ್ತು ಸೀಳಿದ ಪತಿ!

ಕಳ್ಳತನದ ಆರೋಪ

ವ್ಹೀಲಿಂಗ್‌ ಮಾಡಿ ಸಿಕ್ಕಿಬಿದ್ದಿದ್ದ ನಂಜನಗೂಡು ಸಂಚಾರ ಪಿಎಸ್‌ಐ ಯಾಸ್ಮಿನ್ ತಾಜ್ ಅವರ ಮಗ ಸೈಯದ್ ಐಮಾನ್‌ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿತ್ತು. ಬೈಕ್ ಕಳ್ಳತನ (Theft Case) ಮಾಡಿದ್ದಾನೆ ಎಂದು ಆರೋಪಿಸಿ ಐಮಾನ್ ವಿರುದ್ಧ ಮಹಿಳೆಯೊಬ್ಬರು ನಜರ್‌ಬಾದ್ ಠಾಣೆಗೆ ದೂರು ನೀಡಿದ್ದರು.

ಏಪ್ರಿಲ್ 26ರಂದು ಕೆಟಿಎಂ ಬೈಕ್ ಕಳ್ಳತನವಾಗಿತ್ತು. ಪಿಎಸ್‌ಐ ಯಾಸ್ಮಿನ್ ತಾಜ್ ಪುತ್ರ ಐಮಾನ್, ಸ್ನೇಹಿತರಾದ ಫರ್ಹಾನ್, ತೌಸಿಫ್ ಹಾಗೂ ಜುಬಾನ್ ಸೇರಿ ಕಳ್ಳತನ ಮಾಡಿದ್ದರು ಎನ್ನಲಾಗಿದೆ. ಕಳ್ಳತನದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ಈ ಬಗ್ಗೆ ಗಾಯತ್ರಿಪುರಂ ನಿವಾಸಿ ಭಾರತಿ ಎಂಬುವವರು ನಜರ್‌ಬಾದ್ ಠಾಣೆಗೆ ದೂರು ನೀಡಿದ್ದಾರೆ.

ದೂರು ಕೊಟ್ಟ ಒಂದು ತಿಂಗಳ ನಂತರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ, ಎಫ್‌ಐಆರ್‌ನಲ್ಲಿ ಐಮಾನ್ ಹೆಸರು ಉಲ್ಲೇಖಿಸಿಲ್ಲ. ನಂತರ ಪೊಲೀಸ್ ಕಮಿಷನರ್‌ಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಐಮಾನ್ ತಾಯಿ ಇಲಾಖೆಯಲ್ಲಿ ಇರುವುದರಿಂದ ಕಳ್ಳನ ರಕ್ಷಣೆಗೆ ಪೊಲೀಸರು ನಿಂತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version