ಮೈಸೂರು: ಆಷಾಢ ಮಾಸದ ಕೊನೆಯ ಶುಕ್ರವಾರಕ್ಕೆ ನಾಡದೇವತೆ ಚಾಮುಂಡೇಶ್ವರಿಗೆ [Chamundi Hills] ಸಿಂಹವಾಹಿನಿ ಅಲಂಕಾರ ಮಾಡಲಾಗಿದ್ದು, ಸಾವಿರಾರು ಭಕ್ತರು ಭಕ್ತಿ ಶ್ರದ್ಧೆಯಿಂದ ಪೂಜೆ ಸಲ್ಲಿಸಿದರು.
ಆಷಾಢ ಮಾಸದ ನಾಲ್ಕು ಶುಕ್ರವಾರಗಳಲ್ಲೂ ಚಾಮುಂಡಿ ತಾಯಿಯ ದರ್ಶನ ಮಾಡಿದರೆ ಒಳ್ಳೆಯದಾಗುತ್ತದೆ ಎಂಬ ಕಾರಣಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಚಾಮುಂಡಿ ಬೆಟ್ಟಕ್ಕೆ ಬರುತ್ತಾರೆ.
ಆಷಾಢದ ಕೊನೆಯ ಶುಕ್ರವಾರ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದ ತಾಯಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಕಮಲ, ಸೇವಂತಿ, ಮಲ್ಲಿಗೆ, ಗುಲಾಬಿ, ಜರ್ಬೆರಾ ಸೇರಿದಂತೆ ಬಗೆ ಬಗೆಯ ಹೂಗಳಿಂದ ಇಡೀ ದೇವಾಲಯವನ್ನು ಭಕ್ತರು ಶೃಂಗಾರಗೊಳಿಸಿದ್ದರು. ಹೂಗಳ ಅಲಾಂಕರದಿಂದ ಕಂಗೊಳಿಸುತ್ತಿರುವ ತಾಯಿ ಚಾಮುಂಡೇಶ್ವರಿಯನ್ನು ಭಕ್ತಾದಿಗಳು ಕಣ್ತುಂಬಿಕೊಂಡರು.
ಬೆಳಗ್ಗೆ 3.30ರಿಂದಲೇ ಅಭಿಷೇಕ ಸೇರಿ ವಿಶೇಷ ಪೂಜೆಗಳು ಆರಂಭವಾದವು. ಚಾಮುಂಡಿ ತಾಯಿ ದರ್ಶನಕ್ಕೆ ರಾತ್ರಿ 9.30ರವರೆಗೆ ಅವಕಾಶ ಮಾಡಿಕೊಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಬೆಟ್ಟದಲ್ಲಿ ಬಿಗಿ ಪೊಲೀಸ್ ಬಂದೊಬಸ್ತ್ ಮಾಡಿ, ಭಕ್ತರ ನೂಕು ನುಗ್ಗಲು ತಡೆಯಲು ಕಟ್ಟುನಿಟ್ಟಿನ ಕ್ರಮವನ್ನು ಪೊಲೀಸರು ತೆಗೆದುಕೊಂಡಿದ್ದಾರೆ. ಸರತಿ ಸಾಲಿನಲ್ಲಿ ದೇವರ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ಮಾಡಿಕೊಡಲಾಗಿದೆ.
ಇದನ್ನೂ ಓದಿ | ಆಷಾಢ ಮಾಸದ ಮೊದಲ ಶುಕ್ರವಾರ; ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತಸಾಗರ
ಚಾಮುಂಡಿ ಬೆಟ್ಟದಲ್ಲಿ ಭಕ್ತಾದಿಗಳಿಗೆ ಸುಮಾರು 250 ಬಾಣಸಿಗರಿಂದ ಪ್ರಸಾದ ತಯಾರಿಸಲಾಗಿದೆ. ಬೆಳಗ್ಗೆ 7ರಿಂದ ರಾತ್ರಿ 10 ಗಂಟೆವರೆಗೆ ಅನ್ನದಾಸೋಹ ವ್ಯವಸ್ಥೆ ಇದ್ದು, ಪೊಂಗಲ್, ಉಪ್ಪಿಟ್ಟು, ಕೇಸರಿಬಾತ್, ಅನ್ನ ಸಾಂಬಾರ್ ಮಾಡಲಾಗಿದೆ. ಈ ಬಾರಿ 40 ರಿಂದ 50 ಸಾವಿರ ಭಕ್ತಾದಿಗಳಿಗೆ ಊಟದ ವ್ಯವಸ್ಥೆ ಮಾಡಿಕೊಡಲಾಗಿದೆ.
ಮಾಜಿ ಸಚಿವ ಈಶ್ವರಪ್ಪ ಭೇಟಿ
ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕಣದಿಂದ ಇತ್ತೀಚೆಗಷ್ಟೆ ಪೊಲೀಸರಿಂದ ಕ್ಲೀನ್‌ಚಿಟ್ ಪಡೆದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದರು. ಕುಟುಂಬ ಸಮೇತ ಆಗಮಿಸಿದ್ದ ಈಶ್ವರಪ್ಪ, ವಿಶೇಷ ಪೂಜೆ ಸಲ್ಲಿಸಿದರು. ದರ್ಶನದ ಬಳಿಕ ದೇವಸ್ಥಾನ ಮುಂಭಾಗದಲ್ಲಿ ಪ್ರಸಾದ ವಿತರಿಸಿದರು.
ಇದನ್ನೂ ಓದಿ | ಆಷಾಢ ಶುಕ್ರವಾರ | ದೇವಿ ಚಾಮುಂಡೇಶ್ವರಿ ದರ್ಶನ ಪಡೆದ ಸಾವಿರಾರು ಭಕ್ತರು