ಮೈಸೂರು: ಮೈಸೂರಿನ ಡಿ.ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು (Contaminated Water) ಹಲವರು ಅಸ್ವಸ್ಥಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದ್ದಂತೆ, ಚಿಕಿತ್ಸೆ ಫಲಕಾರಿಯಾಗದೆ ಕನಕರಾಜ್ (20) ಎಂಬಾತ ಮೃತಪಟ್ಟಿದ್ದಾನೆ. ಚಾಮುಂಡೇಶ್ವರಿ ಕ್ಷೇತ್ರದ ಡಿ.ಸಾಲುಂಡಿ ಗ್ರಾಮದ ಕನಕರಾಜ್ ನಿನ್ನೆ ಸೋಮವಾರ ತೀವ್ರ ವಾಂತಿ- ಭೇದಿಯಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ಕನಕರಾಜ್ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ (ಮೇ 21) ಮೃತಪಟ್ಟಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಕಾಮಾಕ್ಷಿ ಆಸ್ಪತ್ರೆಗೆ ಆಗಮಿಸಿ, ಮೃತ ಕನಕರಾಜ್ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಪ್ರಕರಣದ ಕುರಿತು ವೈದ್ಯರ ಬಳಿ ಮಾಹಿತಿ ಕಲೆ ಹಾಕಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಳೆದ ಎರಡು ದಿನಗಳ ಹಿಂದೆ ಕಲುಷಿತ ನೀರು ಸೇವನೆಯಿಂದ 48 ಜನರಿಗೆ ವಾಂತಿ- ಭೇದಿ ಶುರುವಾಗಿದೆ. ಅಸ್ವಸ್ಥಗೊಂಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದರು.
ನೀರು ಕಲುಷಿತಗೊಂಡ ಕಾರಣ ಈ ಘಟನೆ ನಡೆದಿದೆ. ಈಗಾಗಲೇ ಜಿಲ್ಲಾಧಿಕಾರಿಗೆ ಸೂಚನೆ ಕೊಟ್ಟಿದ್ದೇನೆ. 5 ಜನ ವೈದ್ಯರು ಸಾಲುಂಡಿ ಗ್ರಾಮದಲ್ಲಿ ಕ್ಯಾಂಪ್ ಮಾಡಿದ್ದಾರೆ. 75 ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡಿದ್ದು, ಮತ್ತೊಬ್ಬರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: Dog Attack: ಆಟವಾಡುತ್ತಿದ್ದವಳ ಕಿತ್ತು ತಿಂದ ಬೀದಿ ನಾಯಿ; ರಕ್ತಸ್ರಾವವಾಗಿ 4 ವರ್ಷದ ಬಾಲಕಿ ಸಾವು
ನಗರಾಭಿವೃದ್ಧಿ ಪಾಧಿಕಾರದಲ್ಲಿ ಯುಜಿಡಿ ಮಾಡುವಾಗ ಟ್ಯಾಂಕ್ ಮಾಡಿಲ್ಲ. ಯುವಕನ ಸಾವಿಗೆ ಮುಡಾ ಅಧಿಕಾರಿಗಳೇ ಕಾರಣ ಎಂದು ಶಾಸಕ ಜಿ.ಟಿ.ದೇವೇಗೌಡ ಗಂಭೀರ ಆರೋಪ ಮಾಡಿದರು. ಆಸ್ಪತ್ರೆ ಎಲ್ಲಾ ಚಿಕಿತ್ಸಾ ವೆಚ್ಚವನ್ನು ನಾನೇ ಭರಿಸುತ್ತೇನೆ. ಮೃತ ಕುಟುಂಬಕ್ಕೆ ಸಿಎಂ ಪರಿಹಾರ ನೀಡಬೇಕು. ಇಲ್ಲಿನ ಜನರು ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿಕೊಂಡು ಬಂದಿದ್ದಾರೆ. ಕುಟುಂಬಕ್ಕೆ ಪರಿಹಾರ ಕೊಡುವಂತೆ ಸಿಎಂಗೆ ಮನವಿ ಮಾಡುತ್ತೇನೆ. ಸಿಎಂ ಸಿದ್ದರಾಮಯ್ಯ ಈಗಾಲಾದರೂ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಯುಜಿಡಿ ಕೆಲಸಗಳನ್ನು ಶೀಘ್ರವಾಗಿ ಕೆಲಸ ಮಾಡುವಂತೆ ಸೂಚನೆ ನೀಡಬೇಕು. ಯುಜಿಡಿ ಕೆಲಸಕ್ಕೆ ಸರ್ಕಾರ ಹಣ ಕೊಡಬೇಕೆಂದು ಶಾಸಕ ಜಿ.ಟಿ ದೇವೇಗೌಡ ಮಾತಾನಾಡಿದರು.
ಬೆಡ್ ಕಾಯ್ದಿರಿಸಲು ಸಿಎಂ ಸೂಚನೆ
ಕಲುಷಿತ ನೀರು ಸೇವಿಸಿ ಯುವಕ ಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಿಂದ ಮೊಬೈಲ್ ಕರೆ ಮಾಡಿ ಸಿಎಂ ಸಿದ್ದರಾಮಯ್ಯ ಮಾಹಿತಿ ಪಡೆದರು. ಇದೇ ವೇಳೆ ಜಿಲ್ಲಾಸ್ಪತ್ರೆ ಹಾಗೂ ಕೆ.ಆರ್.ಆಸ್ಪತ್ರೆಯಲ್ಲಿ ತಲಾ 25 ಬೆಡ್ ಕಾಯ್ದಿರಿಸಲು ಸೂಚನೆ ನೀಡಿದರು. ಭೇದಿ ಕಾಣಿಸಿಕೊಂಡವರಲ್ಲಿ ಮೂರಿಂದ ನಾಲ್ಕು ಜನರಿಗೆ ಕಾಲರ ಲಕ್ಷಣ ಸಾಧ್ಯತೆ ಇದೆ. ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಎಚ್‌ಓ ಮಾಹಿತಿ ನೀಡಿದರು.
ನೀರು ಪೂರೈಕೆಗೆ ಪರ್ಯಾಯ ವ್ಯವಸ್ಥೆ
ಕಲುಷಿತಗೊಂಡಿರುವ ನೀರನ್ನು ಸದ್ಯಕ್ಕೆ ನಿಲ್ಲಿಸಿದ್ದೇವೆ ಎಂದು ವಿಸ್ತಾರ ನ್ಯೂಸ್‌ಗೆ ಡಿಎಚ್‌ಒ ಡಾ.ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ. ನೀರಿನ ಮಾದರಿ ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಿದ್ದೇವೆ. ಸಾಲುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 5 ವೈದ್ಯರು, 25 ನರ್ಸಿಂಗ್ ಸಿಬ್ಬಂದಿ ನಿಯೋಜಿಸಿದ್ದೇವೆ. ಶಾಲೆಯನ್ನು ಆರೋಗ್ಯ ಶಿಬಿರವಾಗಿ ಮಾಡಿದ್ದೇವೆ. ಮನೆ ಮನೆಗೂ ಹೋಗಿ ಜಾಗೃತಿ ಮೂಡಿಸುತ್ತಿದ್ದೇವೆ. ಆರೋಗ್ಯ ಇಲಾಖೆ ಕೂಡಲೇ ಎಚ್ಚೆತ್ತುಕೊಂಡಿದೆ. ಅದರ ಪರಿಣಾಮವಾಗಿಯೇ ಸಾವು, ನೋವು ಕಡಿಮೆ ಆಗಿದೆ ಎಂದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ