Site icon Vistara News

Drowned in Canal : ಕಬಿನಿ ನಾಲೆಗೆ ಇಳಿದ ವೈದ್ಯಕೀಯ ವಿದ್ಯಾರ್ಥಿ ಮೃತ್ಯು!

Medical Student Drowned in Canal

ಮೈಸೂರು: ಕಬಿನಿ ನಾಲೆಯಲ್ಲಿ (Drowned in Canal) ಈಜಾಡಲು ಹೋಗಿದ್ದ ವೈದ್ಯಕೀಯ ವಿದ್ಯಾರ್ಥಿಯೊಬ್ಬ ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಎಚ್‌.ಡಿ ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಿಶನ್ (21) ಮೃತ ದುರ್ದೈವಿ.

ಬೆಂಗಳೂರಿನ ಬಾಣಾವರ ನಿವಾಸಿ ಶೈಲೇಂದ್ರ ಎಂಬವರ ಪುತ್ರನಾಗಿರುವ ಕಿಶನ್‌ ಬೆಂಗಳೂರಿನ ಡಾ.ಬಿ.ಆರ್‌.ಅಂಬೇಡ್ಕರ್ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಸರಗೂರಿನ ವಿವೇಕಾನಂದ ಸ್ಮಾರಕ ಆಸ್ಪತ್ರೆಗೆ ತರಬೇತಿ ಪಡೆಯಲು ಕಿಶನ್‌ ಐವರು ಸಹಪಾಠಿಗಳ ಜತೆ ಬಂದಿದ್ದ.

ಭಾನುವಾರ ರಜೆ ಇದ್ದ ಕಾರಣಕ್ಕೆ ಕಿಶನ್‌ ಸ್ನೇಹಿತರೊಂದಿಗೆ ಈಜಾಡಲೆಂದು ಕಬಿನಿ ಎಡದಂಡೆ ನಾಲೆಗೆ ತೆರಳಿದ್ದ. ಆದರೆ ನೀರಿನ ಪ್ರಮಾಣ ಹೆಚ್ಚಾಗಿ ಇರುವುದು ತಿಳಿಯದೆ ಈಜಾಡಲು ಹೋಗಿ, ಮೇಲೆ ಬರಲು ಆಗದೆ ಮುಳುಗಿ ಮೃತಪಟ್ಟಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಖ್ಕೆ ಅಂತರಸಂತೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಿಶನ್ ಮೃತ ದೇಹವನ್ನು ಮೇಲಕ್ಕೆ ಎತ್ತಿ, ಮರಣೋತ್ತರ ಪರೀಕ್ಷೆಗಾಗಿ ಹೆಚ್.ಡಿ ಕೋಟೆ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿನಿಯರಿಗೆ ಲೋಫರ್ಸ್‌ ಎಂದ ಉಪನ್ಯಾಸಕರು; ಪೋಷಕರಿಂದ ಫುಲ್ ಕ್ಲಾಸ್‌

ಚಿಕ್ಕಬಳ್ಳಾಪುರ : ಮಕ್ಕಳಿಗೆ ಪಾಠ ಹೇಳಿ ಕೊಡುವ ಉಪನ್ಯಾಸಕರಿಗೆ ಇಂದು ಪೋಷಕರೇ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಪಿಯುಸಿ ವಿದ್ಯಾರ್ಥಿನಿಯರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ (Students Abuse) ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಚಿಕ್ಕಬಳ್ಳಾಪುರ‌ ನಗರದ ಶಾಂತಿನಿಕೇತನ ಪಿಯು ಕಾಲೇಜಿನ ಉಪನ್ಯಾಸಕರಾದ ನರಸಿಂಹಮೂರ್ತಿ ಹಾಗೂ ನಾಗರಾಜು ಎಂಬುವವರಿಗೆ ಪೋಷಕರು ಚಳಿ ಬಿಡಿಸಿದ್ದಾರೆ. ಈ ಇಬ್ಬರು ಉಪನ್ಯಾಸಕರು ವಿದ್ಯಾರ್ಥಿನಿಯರ ಜತೆಗೆ ಹಗುರವಾಗಿ ಮಾತನಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.

ಉಪನ್ಯಾಸಕರಿಗೆ ತರಾಟೆಗೆ ತೆಗೆದುಕೊಂಡ ಪೋಷಕರು

ವಿದ್ಯಾರ್ಥಿನಿಯರಿಗೆ ಲೋಫರ್ಸ್ ಹಾಗೂ ಥರ್ಡ್‌ ಕ್ಲಾಸ್ ಮುಂಡೆಗಳು ಎಂದು ನಿಂದನೆ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ವಿದ್ಯಾರ್ಥಿನಿಯರ ವೈಯಕ್ತಿಕ ವಿಚಾರಗಳ ಬಗ್ಗೆ ಟೀಕೆ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಮನನೊಂದ ವಿದ್ಯಾರ್ಥಿನಿಯರು ಪೋಷಕರ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ವಿದ್ಯಾರ್ಥಿನಿಯರಿಗೆ ಬರೆ ಬರುವಂತೆ ಹೊಡೆದ ಕಾರಣಕ್ಕೆ ಉಪನ್ಯಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಲೇಜು ಮುಂದೆ ಪೋಷಕರು ಹಾಗು ಆಡಳಿತ ಮಂಡಳಿ ವಾಗ್ವಾದವನ್ನೇ ನಡೆಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರ ಸಮ್ಮುಖದಲ್ಲೇ ಪ್ರಕರಣ ಇತ್ಯಾರ್ಥ ಮಾಡಿಕೊಂಡಿದ್ದಾರೆ. ಉಪನ್ಯಾಸಕರ ಪರವಾಗಿ ಆಡಳಿತ ಮಂಡಳಿ ಪೋಷಕರ ಜತೆಗೆ ಕ್ಷಮೆಯಾಚಿಸಿದ್ದಾರೆ. ಉಪನ್ಯಾಸಕರ ಜತೆ ಸಭೆ ಮಾಡಿ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version