ಮೈಸೂರು: ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಉಳಿಕೆ ಮತಗಳಿಂದ ಎರಡನೇ ಅಭ್ಯರ್ಥಿ ಗೆಲುವು ಸಾಧ್ಯ ಇಲ್ಲ. ಹೀಗಾಗಿ ಜೆಡಿಎಸ್ ಎರಡನೇ ಪ್ರಾಶಸ್ತ್ಯ ಕೊಟ್ಟರೂ ಪ್ರಯೋಜನ ಆಗುವುದಿಲ್ಲ ಎಂದಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷಕ್ಕೆ ಓಪನ್ ಆಫರ್ ನೀಡಿದ್ದಾರೆ. ಕಾಂಗ್ರೆಸ್‌ನ ಎರಡನೇ ಪ್ರಾಶಸ್ತ್ಯದ ಮತಗಳನ್ನು ಜೆಡಿಎಸ್‌ಗೆ ನೀಡಿ ಎಂದು ಕಾಂಗ್ರೆಸ್ ಪಕ್ಷವನ್ನು ಆಗ್ರಹಿಸಿದ್ದಾರೆ.
ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ಜಿಲ್ಲೆಗೆ ಚಾಮುಂಡಿ ಬೆಟ್ಟಕ್ಕೆ ಮಂಗಳವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮೈತ್ರಿ ಬೇಕಿದ್ದರೆ ಕಾಂಗ್ರೆಸ್‌ನವರು ಮೊದಲೇ ಮಾತನಾಡಬೇಕಿತ್ತು. ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ರಣದೀಪ್‌ಸಿಂಗ್ ಸುರ್ಜೇವಾಲಾ ಅವರು ಕರೆ ಮಾಡಿ, ನಮ್ಮ ಪಕ್ಷದ ಎರಡನೇ ಪ್ರಾಶಸ್ತ್ಯದ ಮತಗಳನ್ನು ತಮಗೆ ನೀಡುವಂತೆ ಕೇಳಿದ್ದಾರೆ. ನಮ್ಮ ಬಳಿ 32 ಮತಗಳಿವೆ, ಕಾಂಗ್ರೆಸ್ ಬಳಿ ನಮಗಿಂತ ಕಡಿಮೆ ಮತಗಳಿವೆ. ಕಾಂಗ್ರೆಸ್‌ಗಿಂತ ಜೆಡಿಎಸ್ ಅಭ್ಯರ್ಥಿಗೆ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ. ಬೇಕಿದ್ದರೆ ನಮ್ಮ ಪಕ್ಷದ 2ನೇ ಪ್ರಾಶಸ್ತ್ಯದ ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿಗೆ ನೀಡುತ್ತೇವೆ. ಕಾಂಗ್ರೆಸ್ ಪಕ್ಷದ ಎರಡನೇ ಪ್ರಾಶಸ್ತ್ಯದ ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ನೀಡಲಿ ಎಂದು ಹೊಸ ಆಫರ್ ಮುಂದಿಟ್ಟರು.
ಜೆಡಿಎಸ್ ಅಭ್ಯರ್ಥಿ ನಿವೃತ್ತಿ ಪಡೆಯಲಿ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ಬಿಜೆಪಿ ಸೋಲಬೇಕು ಎನ್ನುವ ಉದ್ದೇಶ ಇದ್ದರೆ ಅವರು ಜೆಡಿಎಸ್ ಜತೆ ಚರ್ಚೆ ಮಾಡುತ್ತಿದ್ದರು. ನನ್ನ ಜತೆಗೆ ಅಲ್ಲದಿದ್ದರೂ ಅವರೊಂದಿಗೆ ಚೆನ್ನಾಗಿರುವವರೊಂದಿಗೆ ಚರ್ಚೆ ಮಾಡಬಹುದಿತ್ತು. ಬಿಜೆಪಿ ಅಭ್ಯರ್ಥಿ ಸೋಲಿಸಲು ಜೆಡಿಎಸ್ ಅಭ್ಯರ್ಥಿ ಹಾಕಬೇಡಿ ಅಂತ ಯಾರೂ ಕೇಳಲಿಲ್ಲ. ಕಾಂಗ್ರೆಸ್‌ನ 23 ಮತ ಉಳಿಯುತ್ತವೆ, ಆದ್ದರಿಂದ ದೇವೇಗೌಡರು ಸೋನಿಯಾ ಗಾಂಧಿ ಅವರೊಂದಿಗೆ ಮಾತನಾಡಿದ್ದಾರೆ. ಕುಪೇಂದ್ರ ರೆಡ್ಡಿ ಕಾಂಗ್ರೆಸ್ ಜತೆ ನಿಕಟವಾಗಿ ಕೆಲಸ ಮಾಡಿದ್ದಾರೆ ಎಂದರು.
ಜೆಡಿಎಸ್‌ನಿಂದ 8-10 ಮತ ಒಡೆಯುತ್ತೇವೆ ಎಂದು ಮನವೊಲಿಸಿ ಕಾಂಗ್ರೆಸ್‌ನವರು ಎರಡನೇ ಅಭ್ಯರ್ಥಿ ಹಾಕಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಎರಡನೇ ಅಭ್ಯರ್ಥಿ ಹಾಕದೆ ಇದ್ದರೆ ಬಿಜೆಪಿ ಮೂರನೇ ಅಭ್ಯರ್ಥಿ ಹಾಕುತ್ತಿರಲಿಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಸಾ.ರಾ.ಮಹೇಶ್, ಬಂಡೆಪ್ಪ ಕಾಶಂಪೂರ್, ಅಶ್ವಿನ್ ಕುಮಾರ್, ಕೆ.ಟಿ.ಶ್ರೀಕಂಠೇಗೌಡ, ಸಿ.ಎನ್. ಮಂಜೇಗೌಡ ಮುಂತಾದವರು ಇದ್ದರು.
ಇದನ್ನೂ ಓದಿ | ರಾಜ್ಯಸಭೆ ಚುನಾವಣೆ | ಕೇಂದ್ರ ಸಚಿವ ಕಿಶನ್ ರೆಡ್ಡಿ ಉಸ್ತುವಾರಿ: ಎಲ್ಲರ ಅರ್ಜಿ ಊರ್ಜಿತ