Site icon Vistara News

15 ವರ್ಷ ಪೂರೈಸಿದ ಸ್ಪ್ಲೆಂಡರ್ಸ್ ಆಫ್ ರಾಯಲ್‌ ಮೈಸೂರ್ ಪುಸ್ತಕಕ್ಕೆ ಹೊಸ ಮೆರಗು

Splendours of Royal Mysore book

ಮೈಸೂರು/ಬೆಂಗಳೂರು: ಮೈಸೂರು ಸಂಸ್ಥಾನದ ಗತ ವೈಭವವನ್ನು ಸಾರುವ ಸ್ಪ್ಲೆಂಡರ್ಸ್ ಆಫ್ ರಾಯಲ್‌ ಮೈಸೂರ್ (Splendours of Royal Mysore) ದಿ ಅನ್‌ಟೋಲ್ಡ್‌ ಸ್ಟೋರಿ ಆಫ್‌ ದಿ ಒಡೆಯರ್ಸ್‌ ಎಂಬ ಪುಸ್ತಕ ಪ್ರಕಟಣೆಗೊಂಡು 15 ವರ್ಷಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ನಗರದ ಖಾಸಗಿ ಹೋಟೆಲ್‌ನಲ್ಲಿ ಡಬ್ಲ್ಯೂಎಂಜಿ ಹಾಗೂ ಎಂಬಸ್ಸಿ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸ್ಪ್ಲೆಂಡರ್ಸ್ ಆಫ್ ಮೈಸೂರ್ ಪುಸ್ತಕದ ಕರ್ತೃ ವಿಕ್ರಂ ಸಂಪತ್ ಸೇರಿ ಹಲವು ಮಂದಿ ಗಣ್ಯರು ಭಾಗಿ ಆಗಿದ್ದರು. ಕನ್ನಡ ನಾಡು ನುಡಿ ವಿಚಾರವಾಗಿ ಮೈಸೂರು ಸಂಸ್ಥಾನ ನೀಡಿದ ಕೊಡುಗೆಯನ್ನು ಸಾರುವ ಸ್ಪ್ಲೆಂಡರ್ಸ್ ಆಫ್ ಮೈಸೂರ್ ಪುಸ್ತಕದಲ್ಲಿ ಮೈಸೂರು ರಾಜ ವಂಶಸ್ಥರ ಕುರಿತಾಗಿ ವಿಸ್ತೃತ ಮಾಹಿತಿಯನ್ನು ನೀಡಲಾಗಿದೆ.

ವಿಕ್ರಮ್ ಸಂಪತ್ ಅವರ “ಸ್ಪ್ಲೆಂಡರ್ಸ್ ಆಫ್ ರಾಯಲ್ ಮೈಸೂರು” ಒಂದು ಭವ್ಯವಾದ ಮತ್ತು ದೃಷ್ಟಿಗೋಚರವಾಗಿ ಅದ್ಭುತವಾದ ಪುಸ್ತಕವಾಗಿದೆ. ವೈಭವದ ಮೈಸೂರಿನ ಸಾರವನ್ನು ಸೆರೆ ಹಿಡಿದಿದೆ. ನಗರದ ರಾಜಮನೆತನದ ಗತಕಾಲದ ಬಗ್ಗೆ ಸಂಶೋಧನೆ ಮತ್ತು ಮಾಹಿತಿಯನ್ನು ಸಂಗ್ರಹಿಸುವ ಗಮನಾರ್ಹ ಕೆಲಸವನ್ನು ಮಾಡಿದ್ದಾರೆ. ಜತೆಗೆ ಮೈಸೂರು ನಗರದ ಅನೇಕ ಗುಪ್ತ ರತ್ನಗಳನ್ನು ಬಹಿರಂಗಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಯದುವೀರ್‌, ಆಧುನಿಕ ಕಾಲಕ್ಕೆ ಮೈಸೂರು ಅರಸರ ಇತಿಹಾಸದ ಬಗ್ಗೆ ತಿಳಿಯಬೇಕಾದರೆ ಈ ಪುಸ್ತಕವನ್ನು ಓದಬಹುದು. ಕನ್ನಡದಲ್ಲಿ ಮೈಸೂರು ಸಂಬಂಧ ಹಲವಾರು ಪುಸ್ತಕಗಳಿವೆ. ಆದರೆ ಇಂಗ್ಲೀಷ್‌ ಭಾಷೆಯಲ್ಲಿ ಯಾವುದೇ ಪುಸ್ತಕ ಇರಲಿಲ್ಲ. ಇತಿಹಾಸ ಸದಾ ಎಲ್ಲರಿಗೂ ಲಭ್ಯವಿರಲಿ ಎಂದರು.

ಬಳಿಕ ಮಾತನಾಡಿದ ಲೇಖಕ ವಿಕ್ರಂ ಸಂಪತ್, ಸ್ಪ್ಲೆಂಡರ್ಸ್ ಆಫ್ ರಾಯಲ್‌ ಮೈಸೂರ್ ಪುಸ್ತಕವನ್ನು ಸತತ 10 ವರ್ಷಗಳ ಸಂಶೋಧನೆ ನಡೆಸಿ ಬರೆಯಲಾಗಿದೆ. 2008ರಲ್ಲಿ ಮೊದಲ ಬಾರಿ ಪ್ರಕಟಿಸಲಾಯಿತು. ಈ ಪುಸ್ತಕದಲ್ಲಿ ಮೈಸೂರಿನ 600 ವರ್ಷದ ರಾಜವಂಶಸ್ಥರ ಇತಿಹಾಸ, ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕವಾಗಿ ಹೇಗೆ ಬೆಳೆಯಿತು ಎಂಬುದನ್ನು ತಿಳಿಸಲಾಗಿದೆ. ಕರ್ನಾಟಕ ಹೊರತು ಪಡಿಸಿ ಹೊರಗಿನವರು ಓದಲು ಇಂಗ್ಲಿಷ್‌ ಭಾಷೆಯಲ್ಲಿ ಯಾವುದೇ ಪುಸ್ತಕ ಇರಲಿಲ್ಲ. ಅದನ್ನೂ ಈಗ ಕೆಲವು ಬದಲಾವಣೆಗಳೊಂದಿಗೆ ಮರುಮುದ್ರಿಸಲಾಗಿದೆ ಎಂದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version