ಮೈಸೂರು: ಹುಲಿ ದಾಳಿಯಿಂದಾಗಿ ಮೇಕೆಗಾಹಿ ಮಹಿಳೆ ಮೃತಪಟ್ಟಿರುವ ಘಟನೆ ಮೈಸೂರಿನ ಮೂರ್ಬಾಂದ್ ಬೆಟ್ಟದ ಸಮೀಪ (Tiger Attack) ನಡೆದಿದೆ. ಚಿಕ್ಕಿ (48) ಹುಲಿ ದಾಳಿಗೆ ಸಿಲುಕಿ ಮೃತಪಟ್ಟ ನತದೃಷ್ಟ ಮಹಿಳೆ. ಮೇ 25ರ ಶನಿವಾರ ಸಂಜೆ ಮೇಕೆ ಮೇಯಿಸುತ್ತಿದ್ದಾಗ ಹುಲಿಯೊಂದು ಹಠಾತ್ ದಾಳಿ ನಡೆಸಿ, ಮಹಿಳೆಯನ್ನು ಹೊತ್ತೊಯ್ದಿದೆ.
ಚಿಕ್ಕಿ ಎಚ್‌ಡಿ ಕೋಟೆ ತಾಲೂಕಿನ ಎನ್.ಬೇಗೂರು ಸಮೀಪದ ಮಾಳದ ಹಾಡಿ ನಿವಾಸಿಯಾಗಿದ್ದರು. ಘಟನಾ ಸ್ಥಳಕ್ಕೆ ಎನ್.ಬೇಗೂರು ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಎಚ್‌ಡಿ ಕೋಟೆ ತಾಲೂಕಿನ ಅಂತರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕೊಡಗಿನಲ್ಲಿ ಹುಲಿ ದಾಳಿಗೆ ವಿದೇಶಿ ತಳಿಯ 2 ನಾಯಿಗಳು ಬಲಿ
ಕೊಡಗಿನಲ್ಲಿ ಹುಲಿ ದಾಳಿ ಮುಂದುವರಿದಿದೆ. ಹುಲಿ ದಾಳಿಗೆ ವಿದೇಶಿ ತಳಿಯ 2 ನಾಯಿಗಳು ಬಲಿಯಾಗಿದೆ. ಕೊಡಗಿನ ವಿರಾಜಪೇಟೆ ಹೊರವಲಯದ ಕುಟ್ಟಂದಿ ಬಳಿ ಘಟನೆ ನಡೆದಿದೆ. ಕುಟ್ಟಂದಿಯ ಕೆ.ಕೆ. ಗ್ರೂಪ್ ಎಸ್ಟೇಟ್‌ನಲ್ಲಿದ್ದ ಹಸ್ಕಿ ಮತ್ತು ಫಿಟ್ ಬುಲ್ ತಳಿಯ 2 ನಾಯಿಗಳು ಮೃತಪಟ್ಟಿವೆ.
ತೋಟದ ಮಾಲೀಕರು ಹುಲಿ ಹೆಜ್ಜೆಯನ್ನು ಪತ್ತೆ ಹಚ್ಚಿದ್ದಾರೆ. ಇಷ್ಟು ದಿನ ದನ ಕರುಗಳ ಮೇಲೆ ಅಟ್ಯಾಕ್ ಮಾಡುತ್ತಿದ್ದ ಹುಲಿ ಇದೀಗ ನಾಯಿ ಮೇಲೆ ದಾಳಿ ಮಾಡುತ್ತಿದೆ. ಹುಲಿ ಸುದ್ದಿ ಕೇಳಿ ಗ್ರಾಮದ ಸುತ್ತ ಮುತ್ತ ಆತಂಕದ ವಾತವರಣ ನಿರ್ಮಾಣವಾಗಿದೆ. ಹುಲಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ತೋಟದ ಮಾಲೀಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Road Accident : ಬಸ್‌ಗೆ ಸ್ಕೂಟರ್ ಡಿಕ್ಕಿ; ಸವಾರನ ಪ್ರಾಣವನ್ನೇ ಕಸಿದ ಅತಿ ವೇಗ ಚಾಲನೆ
ಕೊಡಗಿನಲ್ಲಿ ಕಾಡಾನೆ ಸಾವು
ಸಂಶಯಾಸ್ಪದ ರೀತಿಯಲ್ಲಿ ಕಾಡಾನೆಯ ಮೃತದೇಹ ಪತ್ತೆಯಾದ ಘಟನೆ ಕೊಡಗು ಜಿಲ್ಲೆ ಸಿದ್ದಾಪುರ ಸಮೀಪದ ವಾಲ್ನೂರು ತ್ಯಾಗತ್ತೂರು ಗ್ರಾಮದಲ್ಲಿ ನಡೆದಿದೆ. ತ್ಯಾಗತ್ತೂರು ಗ್ರಾಮದ ಎಂಎಂ ಗಿರೀಶ್ ಎಂಬುವರ ಕಾಫಿ ತೋಟದ ಒಳಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ದುರ್ವಾಸನೆ ಬರುತ್ತಿತ್ತು.
ಈ ಹಿನ್ನೆಲೆಯಲ್ಲಿ ತೋಟದ ಒಳಭಾಗದಲ್ಲಿ ಪರಿಶೀಲಿಸಿದಾಗ ಕೊಳೆತ ಸ್ಥಿತಿಯಲ್ಲಿ ಕಾಡಾನೆಯ ಮೃತದೇಹ ಪತ್ತೆಯಾಗಿದೆ. ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಪರಿಶೀಲಿಸಿ, ಕಾಡಾನೆಗಳ ನಡುವಿನ ಕಾದಾಟದಲ್ಲಿ ಅಂದಾಜು 18 ರಿಂದ 20 ವರ್ಷ ಪ್ರಾಯದ ಗಂಡಾನೆ ಸಾವನ್ನಪ್ಪಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.
ಒಂದು ವಾರಗಳ ಹಿಂದೆ ಸಾವನ್ನಪ್ಪಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಡಿಸಿಎಫ್ ಶಂಕರ, ಎಸಿಎಫ್ ಎ ಎ ಗೋಪಾಲ್, ವಲಯ ಅರಣ್ಯ ಅಧಿಕಾರಿ ರತನ್ ಕುಮಾರ್ ಹಾಗೂ ವೈದ್ಯಾಧಿಕಾರಿ ಚಿಟ್ಟಿಯಪ್ಪ ಇನ್ನಿತರ ಸಿಬ್ಬಂದಿಗಳು ಭೇಟಿ ನೀಡಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಕಳೆ ಬರಹಗಳನ್ನು ಸ್ಥಳದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ