Site icon Vistara News

New Parliament Building: ಸಂಸತ್ ಭವನ ಉದ್ಘಾಟನೆ ಬಹಿಷ್ಕಾರ ನಾಚಿಕೆಗೇಡಿನ ಸಂಗತಿ: ಎನ್. ರವಿಕುಮಾರ್‌

MLA N Ravikumar

ಬೆಂಗಳೂರು: ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಶುಭ ಸಂದರ್ಭದಲ್ಲಿ ಮೇ 28ರಂದು ನವದೆಹಲಿಯಲ್ಲಿ ನೂತನ ಸಂಸತ್ ಭವನವನ್ನು ಕೇಂದ್ರ ಸರ್ಕಾರವು ಉದ್ಘಾಟನೆ (New Parliament Building) ಮಾಡುತ್ತಿದೆ. ಆದರೆ, ರಾಷ್ಟ್ರಪತಿಯವರನ್ನು ಆಹ್ವಾನಿಸಿಲ್ಲವೆಂದು ಆರೋಪ ಮಾಡುತ್ತಾ ಕಾಂಗ್ರೆಸ್‌ ಸೇರಿ ಕೆಲ ವಿರೋಧ ಪಕ್ಷಗಳು ರಾಜಕೀಯ ದ್ವೇಷ ಸಾಧಿಸುತ್ತಿರುವುದು ಸರಿಯಲ್ಲ. ಇದು ನಾಚಿಕೆಗೇಡಿನ ಸಂಗತಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಎಂಎಲ್‌ಸಿ ಎನ್.ರವಿಕುಮಾರ್ ತಿಳಿಸಿದ್ದಾರೆ.

ಅಲ್ಲದೇ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ ಅವರ ಜನ್ಮದಿನದಂದು ನೂತನ ಸಂಸತ್ ಉದ್ಘಾಟನೆಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಸ್ವಾತಂತ್ರ್ಯ ನಂತರ ಭಾರತದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಹಲವು ನಾಯಕರು ಸಂಸತ್ತಿನಲ್ಲಿ ಕುಳಿತು ದೇಶವನ್ನು ಮುನ್ನಡೆಸಬೇಕಿತ್ತು, ವಿಪರ್ಯಾಸವೆಂದರೆ ನೆಹರು ಕುಟುಂಬಸ್ಥರು ಇಡೀ ದೇಶವನ್ನೇ ತಮ್ಮ ಕುಟುಂಬದ ಸುಪರ್ದಿಗೆ ನೀಡುವ ಮೂಲಕ ಸಂಸತ್ತನ್ನು ತಮ್ಮ ಕುಟುಂಬಕ್ಕೆ ಸೀಮಿತ ಮಾಡಿಬಿಟ್ಟರು ಎಂದು ಕಿಡಿ ಕಾರಿದ್ದಾರೆ.

ಕೇಂದ್ರ ಸರ್ಕಾರದ ಪ್ರತಿಯೊಂದು ಯೋಜನೆಯ ಬಗ್ಗೆ ಕಾಲು ಕೆರೆದುಕೊಂಡು ಜಗಳಕ್ಕೆ ನಿಲ್ಲುವ ಕಾಂಗ್ರೆಸ್, ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುತ್ತಿದೆ. ನೂತನ ಸಂಸತ್ ಭವನದ ಉದ್ಘಾಟನೆಗೆ ರಾಷ್ಟ್ರಪತಿಯವರನ್ನು ಆಹ್ವಾನಿಸಿಲ್ಲವೆಂದು ಆರೋಪ ಮಾಡುತ್ತಾ ರಾಜಕೀಯ ದ್ವೇಷ ಸಾಧಿಸುತ್ತಿರುವುದು ಸರಿಯಲ್ಲ. ಈ ಹಿಂದೆ 1987ರಲ್ಲಿ ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಸಂಸತ್ತಿನ ನೂತನ ಗ್ರಂಥಾಲಯ ಉದ್ಘಾಟನೆಯನ್ನು ಅವರೇ ಮಾಡಿದ್ದರು, ಅಂದಿನ ರಾಷ್ಟ್ರಪತಿಗಳಿಗೆ ಕೂಡ ಆಹ್ವಾನವಿರಲಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | New Parliament Building: ರಾಜಸ್ಥಾನದ ಶಿಲೆ, ಮಹಾರಾಷ್ಟ್ರದ ತೇಗದ ಮರ; ವೈವಿಧ್ಯತೆಯಲ್ಲಿ ಏಕತೆಯ ಸಂಕೇತ ಈ ಸಂಸತ್‌ ಭವನ

ಇನ್ನು 2010ರಲ್ಲಿ ಸೋನಿಯಾ ಗಾಂಧಿ ಅವರು ‘ಅಟಲ್ ಟನೆಲ್’ಗೆ ಭೂಮಿ ಪೂಜೆ ಮಾಡಿದ್ದರು. ಕೇಂದ್ರ ಸರ್ಕಾರದ ಯೋಜನೆಯೊಂದಕ್ಕೆ ಭೂಮಿ ಪೂಜೆ ಮಾಡಲು ಸೋನಿಯಾ ಗಾಂಧಿ ಯಾಕೆ ಬರಬೇಕಿತ್ತು? 2009ರಲ್ಲಿ ಮುಂಬೈ ನಗರದ ‘ಬಾಂದ್ರಾ ಮತ್ತು ವರ್ಲಿ’ ಸೀ ಲಿಂಕ್ ಉದ್ಘಾಟನೆಯನ್ನು ಸೋನಿಯಾ ಗಾಂಧಿ ಅವರು ಮಾಡಿದ್ದರು. ತನ್ನ ಅಧಿಕಾರಾವಧಿಯಲ್ಲಿ ಜಾರಿಗೆ ತಂದಿರುವ ಅಷ್ಟೂ ಯೋಜನೆಗಳಿಗೆ ತಮ್ಮ ಕುಟುಂಬ ಸದಸ್ಯರ ಹೆಸರನ್ನೇ ಬಳಸಿಕೊಂಡಿರುವ ನೆಹರು ಕುಟುಂಬದ ಕುಡಿಗಳು ಈಗ ಸೆಂಟ್ರಲ್ ವಿಸ್ಟಾ ಬಗ್ಗೆ ಈಗ ಮಾತನಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.

ಅಲ್ಲದೇ ಪಕ್ಕದ ರಾಜ್ಯವಾದ ತೆಲಂಗಾಣದಲ್ಲಿ ಸಿಎಂ ಚಂದ್ರಶೇಖರ್ ರಾವ್ ಅವರು ಹೈದರಾಬಾದ್‌ನಲ್ಲಿ ನೂತನ ಸಚಿವಾಲಯ ಉದ್ಘಾಟನೆಗೆ ತೆಲಂಗಾಣದ ‘ರಾಜ್ಯಪಾಲ’ರನ್ನೂ ಆಹ್ವಾನಿಸಿರಲಿಲ್ಲ, ಆದರೆ ಈಗ ಸೆಂಟ್ರಲ್ ವಿಸ್ಟಾ ಉದ್ಘಾಟನೆಗೆ ರಾಷ್ಟ್ರಪತಿಗಳು ಬರದಿರುವುದರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

1947 ರಲ್ಲಿ ಬ್ರಿಟಿಷರು ಭಾರತಕ್ಕೆ ಅಧಿಕಾರ ಹಸ್ತಾಂತರಿಸಿದ ಸಂದರ್ಭದಲ್ಲಿ ಮೊದಲ ಪ್ರಧಾನಮಂತ್ರಿಯಾಗಿದ್ದ ನೆಹರು ಅವರಿಗೆ ನೀಡಿದ್ದ ತಮಿಳುನಾಡಿನ ‘ಸೆಂಗೋಲ್’ ಅನ್ನು ನೂತನ ಸಂಸತ್ತಿನಲ್ಲಿ ಸ್ಪೀಕರ್ ಕುರ್ಚಿ ಬಳಿ ಇಡುತ್ತಿರುವುದು ಮತ್ತೊಂದು ವಿಶೇಷ. ಬ್ರಿಟಿಷರಿಂದ ಅಧಿಕಾರ ಹಸ್ತಾಂತರವಾಗಿದ್ದರೂ ಅವರು ಕಟ್ಟಿಸಿದ್ದ ಸಂಸತ್ತಿನಿಂದ ನಾವು ಹೊರಬಂದಿರಲಿಲ್ಲ. ಬ್ರಿಟಿಷರ ಮನಸ್ಥಿತಿಯನ್ನೇ ತೋರುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಭಾರತೀಯರೇ ನಿರ್ಮಾಣ ಮಾಡಿರುವ ನೂತನ ಸಂಸತ್ ಕಟ್ಟಡ ಇಷ್ಟವಿಲ್ಲ ಎಂದು ಆರೋಪಿಸಿದರು.

ಇದನ್ನೂ ಓದಿ | New Parliament Building: ಸೆಂಗೋಲ್‌ ಎಂಬ ರಾಜದಂಡ ಸ್ವಾತಂತ್ರ್ಯದ ಸಂಕೇತ; ಪ್ರತಿಷ್ಠಾಪನೆಗೆ ಕಾರಣ ತಿಳಿಸಿದ ಮೋದಿ

ನೂತನ ಸಂಸತ್ ಭವನದ ಉದ್ಘಟನಾ ಸಮಾರಂಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಭಾಗವಹಿಸುತ್ತಿರುವುದು ಸಂತೋಷದ ಸಂಗತಿ. ಆದರೆ ಇಲ್ಲಸಲ್ಲದ ನೆಪವೊಡ್ಡಿ ಸೆಂಟ್ರಲ್ ವಿಸ್ಟಾ ಉದ್ಘಾಟನೆಯ ಕಾರ್ಯಕ್ರಮವನ್ನು ಕೆಲ ವಿರೋಧ ಪಕ್ಷಗಳು ಬಹಿಷ್ಕರಿಸುವುದಾಗಿ ಹೇಳಿರುವುದು ಸರಿಯಲ್ಲ. ಸಂಸತ್ ಭವನ ಕೇವಲ ಕಟ್ಟಡವಲ್ಲಿ ಅದು ದೇಶದ ಪ್ರಜಾಪ್ರಭುತ್ವ ಎಂಬುದನ್ನು ವಿರೋಧಪಕ್ಷಗಳು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.‌

Exit mobile version