Site icon Vistara News

ಹಿಂದೂ ರಾಮಯ್ಯ ಕೃತಿ ಬಿಡುಗಡೆ| ಸಕಾರಾತ್ಮಕ ಟೀಕೆಗಳಿರುವ ಬರಹವನ್ನು ಎಲ್ಲರೂ ಸ್ವೀಕರಿಸುತ್ತಾರೆ ಎಂದ ಸಿಎಂ

hindu ramaiah

ಬೆಂಗಳೂರು: ʻʻಹಿರಿಯ ಪತ್ರಕರ್ತ ಪಿ.ರಾಮಯ್ಯ ಅವರಿಗೆ ಸತ್ಯವೇ ಚಿಂತನೆ ಮತ್ತು ಆದರ್ಶವಾಗಿದೆ. ಅವರೊಬ್ಬ ಪತ್ರಿಕಾ ರಂಗದ ತಪಸ್ವಿʼʼ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು. ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಪಿ. ರಾಮಯ್ಯ ಅವರ ಅನುಭವ ಕಥನ ʻನಾನು ಹಿಂದೂ ರಾಮಯ್ಯ’ ಕೃತಿಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ರಾಮಯ್ಯ ಅವರು ಸಜ್ಜನ ಪತ್ರಕರ್ತ
ʻʻರಾಮಯ್ಯ ಅವರು ಸಜ್ಜನ ಪತ್ರಕರ್ತ, ಸತ್ಯವನ್ನು ಪ್ರಿಯವಾಗಿ ಹೇಳಿದ್ದಾರೆ. ಅವರ ಮನದಲ್ಲಿ ಇನ್ನೂ ಸಾಕಷ್ಟು ಮಾಹಿತಿ ಇದೆ. ಆದರೆ ಅದನ್ನು ಅವರು ಹೇಳಿಲ್ಲ. ಅದು ಅವರ ಸೌಜನ್ಯ. ರಾಜ್ಯದಲ್ಲಿ ನಡೆದ ಹಲವು ಘಟನೆಗಳಿಗೆ ಅವರು ಸಾಕ್ಷಿಯಾಗಿದ್ದಾರೆ. ಎರಡು ಪೀಳಿಗೆಯ ರಾಜಕಾರಣಿಗಳು ಹಾಗೂ ಮೂರು ಪೀಳಿಗೆಯ ಪತ್ರಕರ್ತರನ್ನು ನೋಡಿದ್ದಾರೆ. ಅವರು ಇದನ್ನು ರೋಚಕವಾಗಿ ಬರೆದು ಅವರು ಪ್ರಶಸ್ತಿಗೆ ಭಾಜನರಾಗಬಹುದಿತ್ತು. ಆದರೆ, ವಾಸ್ತವತೆಯನ್ನು ಮಾತ್ರ ಪುಸ್ತಕದಲ್ಲಿ ಬರೆದಿದ್ದಾರೆ. ಅವರೊಬ್ಬ ಪ್ರಾಮಾಣಿಕ ಪತ್ರಕರ್ತ. ಅವರ ಲೇಖನಗಳಲ್ಲಿ ಸತ್ಯ ಬರೆದಾಗ ಕೆಲವರಿಗೆ ನೋವಾಗಿರಬಹುದು. ಕೆಲವರು ಸಕಾರಾತ್ಮಕವಾಗಿ ಟೀಕೆ ಮಾಡಿ ಬರೆದಾಗ ಅದನ್ನು ಎಲ್ಲರೂ ಸ್ವೀಕರಿಸುತ್ತಾರೆʼʼ ಎಂದು ಹೇಳಿದರು.

ವಾಸ್ತವತೆಯನ್ನು ಬರೆಯುವುದರಲ್ಲಿ ಎಂದೂ ರಾಜಿಯಾಗಿಲ್ಲ
ಕೆಲವು ಜನರ ಚಿಂತನೆ ಮತ್ತು ವ್ಯಕ್ತಿತ್ವ ಬದಲಾಗುತ್ತವೆ. ರಾಮಯ್ಯ ಅವರ ವ್ಯಕ್ತಿತ್ವ ಬದಲಾಗಿಲ್ಲ. ಎಲ್ಲ ಮುಖ್ಯಮಂತ್ರಿಗಳ ಜೊತೆ ಆತ್ಮೀಯರು.ಮೊದಲು ನಾವು ಬಡ ಪತ್ರಕರ್ತರು ಅಂತ ಕರೆಯುತ್ತಿದ್ದೆವು, ಆದರೆ ಈಗ ಆ ಪದ ಬಳಕೆ ಮಾಡುವುದಿಲ್ಲ. ಈಗ ಕಾಲ ಬದಲಾಗಿದೆ ಎಂದರು.

ರಾಮಯ್ಯ ಅವರು ಶುದ್ಧಹಸ್ತ ಪತ್ರಕರ್ತರು
ʻʻರಾಮಯ್ಯ ಅವರು ಶುದ್ಧ ಹಸ್ತದ ಪತ್ರಕರ್ತರು. ಪರ್ತಕರ್ತರು ಮತ್ತು ಜರ್ನಲಿಸ್ಟ್ ಒಂದೇ ಅಲ್ಲ‌. ಪತ್ರಕರ್ತರು ಮತ್ತು ನ್ಯೂಸ್ ಪ್ರೊಡ್ಯೂಸರ್ಸ್‌ ಬೇರೆ. ರಾಮಯ್ಯನವರು ಅಪರೂಪದ ವ್ಯಕ್ತಿ. ನಾವು ಚಿಕ್ಕವರಿದ್ದಾಗ ಮುಗ್ಧರಾಗಿರುತ್ತೇವೆ ನಂತರ ಬದಲಾಗುತ್ತೇವೆ.‌ ರಾಮಯ್ಯ ಅವರ ಮುಗ್ಧತೆ ಈಗಲೂ ಬದಲಾಗಿಲ್ಲ. ಆತ್ಮಸಾಕ್ಷಿಯಿಂದ ಕೆಲಸ ಮಾಡಿದ್ದಾರೆ. ಅವರಿಗೆ ಸಾಕಷ್ಟು ಸವಾಲು ಎದುರಾಗಿರಬಹುದು. ಆದರೆ ವಾಸ್ತವತೆಯನ್ನು ಬರೆಯುವುದರಲ್ಲಿ ಎಂದೂ ರಾಜಿಯಾಗಿಲ್ಲʼʼ ಎಂದು ವಿವರಿಸಿದರು.

ʻʻನಮ್ಮ ತಂದೆ ಹಾಗೂ ರಾಮಕೃಷ್ಣ ಹೆಗಡೆ, ಎಂ‌.ಪಿ ಪ್ರಕಾಶ್ ಅವರೊಂದಿಗಿನ ರಾಮಯ್ಯ ಅವರ ಒಡನಾಟದ ಮಾತುಗಳನ್ನು ಕೇಳಿ ಬೆಳೆದವನು ನಾನು. ಅವರಿಂದ ನಾನು ಕಲಿತಿದ್ದೇನೆ. ಒಬ್ಬ ಪತ್ರಕರ್ತನಿಗೆ ಹಲವಾರು ಜವಾಬ್ದಾರಿಗಳಿರುತ್ತವೆ ಎಂಬುದನ್ನು ರಾಮಯ್ಯ ಅವರ ಬರಹದಿಂದ ತಿಳಿಯಬಹುದು. ಬರಹದ ಇತಿಮಿತಿ ಹಾಗೂ ಪರಿಣಾಮಗಳ ಬಗ್ಗೆ ಯೋಚಿಸುವುದು ಬಹಳ ಮುಖ್ಯ. ಪತ್ರಕರ್ತನ ಬರಹದಲ್ಲಿ ವಿಚಾರಾತ್ಮಕ ಹಾಗೂ ಸಂಯಮದಿಂದ ಚಿಂತನೆ ಇರಬೇಕಾಗುತ್ತದೆʼʼ ಎಂದರು.

ರಾಮಯ್ಯ ಅವರು ಕರ್ನಾಟಕದ ಆಸ್ತಿ
ರಾಮಯ್ಯ ಅವರು ನಮ್ಮ ಕರ್ನಾಟಕದ ಆಸ್ತಿ, ಅವರ ಬರಹದಿಂದ ಸಾಕಷ್ಟು ಕಲಿಯುವುದಿದೆ. ರಾಮಯ್ಯನವರು ಸಮಾಜಮುಖಿಯಾಗಿ ಕೆಲಸ ಮಾಡಿದ್ದಾರೆ ಎಂದ ಬೊಮ್ಮಾಯಿ, ʻʻನಿಮ್ಮ ಪುಸ್ತಕ ಸಮಕಾಲೀನ ರಾಜಕಾರಣ ಮತ್ತು ಜನರ ಬದುಕು, ಸಮಾಜದ ಪರಿಸ್ಥಿತಿಯನ್ನು ಬಿಂಬಿಸುತ್ತಿದೆʼʼ ಎಂದು ಶ್ಲಾಘಿಸಿದರು.

ಸಮಾರಂಭದಲ್ಲಿ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೆ ಪಿ. ಕೃಷ್ಣ, ಕೃತಿಯ ಲೇಖಕ ಪಿ. ರಾಮಯ್ಯ, ಅಭಿಮಾನಿ ಪ್ರಕಾಶನದ ಟಿ. ವೆಂಕಟೇಶ್, ಹಿರಿಯ ಪತ್ರಕರ್ತ ಹುಣಸವಾಡಿ ರಾಜನ್, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಶ್ರೀಧರ್, ವಾರ್ತಾ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಎಚ್.ಬಿ. ದಿನೇಶ್ ಮತ್ತು ಇತರ ಗಣ್ಯರು ಹಾಜರಿದ್ದರು.

Exit mobile version