ಬೆಂಗಳೂರು: ರಾಜ್ಯದ ವಿವಿಧೆಡೆ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಸೋಮವಾರ ಅದ್ಧೂರಿಯಾಗಿ ಆಚರಿಸಲಾಯಿತು. ವಿವಿಧೆಡೆ ಕೆಂಪೇಗೌಡರ ಭಾವಚಿತ್ರದ ಮೆರವಣಿಗೆಯನ್ನು ನಡೆಸಿ, ಅವರ ಕೊಡುಗೆಗಳನ್ನು ಸ್ಮರಿಸಲಾಯಿತು. ಮೆರವಣಿಗೆಯಲ್ಲಿ ಜನಪ್ರತಿನಿಧಿಗಳೇ ಕುಣಿದು ಕುಪ್ಪಳಿಸಿದರೆ, ರಾಮನಗರದಲ್ಲಿ ನಡೆದ ಕಾರ್ಯಕ್ರಮಕ್ಕೆ ಮಾಜಿ ಎಚ್.ಡಿ. ಕುಮಾರಸ್ವಾಮಿ ದಂಪತಿ ಅತಿ ತಡವಾಗಿ ಆಗಮಿಸಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಕೇಂದ್ರ ಕಚೇರಿಯಲ್ಲಿ ನಾಡಪ್ರಭು ಕೆಂಪೇಗೌಡರ 513ನೇ ಜಯಂತಿ ಹಿನ್ನೆಲೆಯಲ್ಲಿ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಬಿಬಿಎಂಪಿ ಆಡಳಿತಗಾರರಾದ ರಾಕೇಶ್ ಸಿಂಗ್ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತ್ತಿತರರು ಇದ್ದರು.
ಪಾಳೇಗಾರರಾಗಿ ಅನೇಕ ಶ್ರೇಷ್ಠ ಕೆಲಸ: ಸಂಸದ ಬಿ.ವೈ. ರಾಘವೇಂದ್ರ ಬಣ್ಣನೆ
ಶಿಕಾರಿಪುರ: ಶಿಕಾರಿಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿವಿಧ ಇಲಾಖೆಗಳು, ವಿವಿಧ ಸಂಘ-ಸಂಸ್ಥೆಗಳು ಹಾಗೂ ತಾಲೂಕು ಒಕ್ಕಲಿಗ ಸಮಾಜದ ಸಂಯುಕ್ತಾಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿದರು.
2020ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನ ವಿಮಾನ ನಿಲ್ದಾಣದ ಬಳಿ ಆರಂಭಿಸಿದ್ದ 108 ಅಡಿ ಎತ್ತರದ ಶ್ರೀ ಕೆಂಪೇಗೌಡರ ಪ್ರತಿಮೆಯ ನಿರ್ಮಾಣದ ಕೆಲಸ ಮುಕ್ತಾಯ ಹಂತಕ್ಕೆ ತಲುಪಿದೆ. ಕೆಂಪೇಗೌಡರು ಪಾಳೇಗಾರರಾಗಿ ಅನೇಕ ಶ್ರೇಷ್ಠ ಕೆಲಸವನ್ನು ಮಾಡಿದ್ದಾರೆ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಪುರಸಭೆ ಅಧ್ಯಕ್ಷೆ ರೇಖಾ ಬಾಯಿ, ಒಕ್ಕಲಿಗ ಸಮಾಜದ ತಾಲೂಕು ಅಧ್ಯಕ್ಷ ಗಣೇಶಪ್ಪ, ತಹಸೀಲ್ದಾರ್ ಕವಿರಾಜ್, ಹಾಲಪ್ಪ ಮತ್ತಿತರರು ಉಪಸ್ಥಿತರಿದ್ದರು.
ಮೈಸೂರಿನಲ್ಲಿ ಅದ್ದೂರಿ ಮೆರವಣಿಗೆ
ಮೈಸೂರು: ತೆರೆದ ಅಲಂಕೃತ ವಾಹನದಲ್ಲಿ ನಾಡಪ್ರಭು ಕೆಂಪೇಗೌಡರ ಪುತ್ಥಳಿಯ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಮೈಸೂರು ಅರಮನೆಯ ಕೋಟೆ ಆಂಜನೇಯಸ್ವಾಮಿ ದೇಗುಲದ ಬಳಿಯಿಂದ ಹೊರಟ ಮೆರವಣಿಗೆಗೆ ನಂದಿ ಧ್ವಜಕಂಬ, ವೀರಗಾಸೆ, ಡೊಳ್ಳು ಕುಣಿತ, ಗಾರುಡಿಗೊಂಬೆ, ಪೂಜಾ ಕುಣಿತ, ಕಂಸಾಳೆ, ತಮಟೆ ನಗಾರಿ ಸೇರಿದಂತೆ ಹತ್ತಾರು ಜನಪದ ಕಲಾಪ್ರಕಾರಗಳು ಮೆರುಗು ನೀಡಿದವು. ಮೆರವಣಿಗೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳ ನೃತ್ಯ ಗಮನ ಸೆಳೆಯಿತು. ಸಂಸದ ಪ್ರತಾಪ್ ಸಿಂಹ, ಶಾಸಕ ಜಿ.ಟಿ. ದೇವೇಗೌಡ ಸೇರಿ ಅನೇಕರು ಭಾಗವಹಿಸಿದ್ದರು. ಮಹಾನಗರಪಾಲಿಕೆ ಸದಸ್ಯರಾದ ಕೆ.ವಿ.ಶ್ರೀಧರ್, ಪ್ರೇಮಾ ಶಂಕರೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಮಾದೇಗೌಡರಿಂದ ಭರ್ಜರಿ ನೃತ್ಯ ಮಾಡಿದರು. ತಮಟೆ ನಗಾರಿಯ ಸದ್ದಿಗೆ ಕುಣಿದು ಕುಪ್ಪಳಿಸಿದ ಜನ ಪ್ರತಿನಿಧಿಗಳಿಗೆ ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದ ಬೆಂಬಲಿಗರು ಸಾಥ್ ನೀಡಿದರು.
ಇದನ್ನೂ ಓದಿ | Kempegowda Jayanti | ಬೆಂಗಳೂರನ್ನು ದೇಗುಲಗಳ ನಗರವನ್ನಾಗಿಸಿದ ಕೆಂಪೇಗೌಡ
ಕಾರ್ಯಕ್ರಮಕ್ಕೆ ತಡವಾಗಿ ಬಂದ ಮಾಜಿ ಸಿಎಂ ಕುಮಾರಸ್ವಾಮಿ
ರಾಮನಗರ: ನಾಡಪ್ರಭು ಕೆಂಪೇಗೌಡ ಜಯಂತಿ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಕಾರ್ಯಕ್ರಮದ ಅಧ್ಯಕ್ಷರು ಸೇರಿ ಯಾವೊಬ್ಬ ಚುನಾಯಿತ ಜನಪ್ರತಿನಿಧೀಗಳೂ ಇಲ್ಲದೆ ಕಾರ್ಯಕ್ರಮ ಜರುಗಿದ್ದು, ಮುಜುಗರಕ್ಕೆ ಎಡೆಮಾಡಿಕೊಟ್ಟಿತು.
ಕಾರ್ಯಕ್ರಮ ಬೆಳಿಗ್ಗೆ 10 ಗಂಟೆಗೆ ನಡೆಯಬೇಕಿತ್ತು. ಶಾಸಕಿ ಅನಿತಾ ಕುಮಾರಸ್ವಾಮಿ, ಶಾಸಕರಾದ ಹೆಚ್.ಡಿ ಕುಮಾರಸ್ವಾಮಿ, ಮಾಗಡಿ ಶಾಸಕ ಮುಂಜುನಾಥ್, ಕನಕಪುರ ಶಾಸಕ ಡಿ.ಕೆ ಶಿವಕುಮಾರ್ ಸೇರಿ ಯಾವ ಶಾಸಕರೂ ವೇದಿಕೆಯಲ್ಲಿ ಭಾಗವಹಿಸದೇ ಇದ್ದದ್ದು ಮುಜುಗರಕ್ಕೆ ಈಡಾಯಿತು. ಬಳಿಕ ೧೨.೩೦ಕ್ಕೆ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಆಗಮಿಸಿ ಕೆಂಪೇಗೌಡರ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿ.ಎಂ.ಹೆಚ್.ಡಿ ಕುಮಾರಸ್ವಾಮಿ, ತಮ್ಮ ನಿವಾಸ ಬಳಿ ಬೆಳಗ್ಗೆ ರಾಜ್ಯದ ನಾನಾ ಭಾಗಗಳಿಂದ ಜನರು ಸಮಸ್ಯೆ ಹೇಳಿಕೊಂಡು ಬರುತ್ತಾರೆ. ಅವರ ಅಮಸ್ಯೆ ಪರಿಹರಿಸಿ ಬರುವುದು ತಡವಾಗಿದೆ. ನಾನು ಮೊದಲೇ ತಡವಾಗಿ ಬರುವುದಾಗಿ ಹೇಳಿದ್ದೆ ಎಂದು ಸಮಜಾಯಿಷಿ ಕೊಟ್ಟರು.
ಮಹಾರಾಷ್ಟ್ರ ನಮ್ಮದು ಎಂಬ ಸಚಿವ ಅಶ್ವತ್ಥನಾರಾಯಣ ಹೇಳಿಕೆ ಕುರಿತು ಮಾತನಾಡಿದ ಕುಮಾರಸ್ವಾಮಿ, ಇಡೀ ದೇಶವೇ ನಮ್ಮ ಹಕ್ಕು. ದೇಶದಲ್ಲಿ ಸಾಮ್ರಾಜ್ಯ ಕಟ್ಟುವ ಕನಸು ಹೊತ್ತು ಮಕಾಡೆ ಮಲಗಿದ್ದಾರೆ. ಬಿಜೆಪಿಯವರು ತಾವು ಮಾಡಿದ್ದೇ ಸರಿ ಎನ್ನುವ ವರ್ತನೆಗೆ ಕಾಲವೇ ಉತ್ತರ ಕೊಡಲಿದೆ.
ದೇಶದ ರಾಜಕಾರಣದಲ್ಲಿ ತುಂಬಾ ಪಕ್ಷಗಳು ಬಂದು ಹೋಗಿವೆ. ಯಾರು ಯಾರನ್ನು ಮುಗಿಸುತ್ತಾರೋ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಯಾರೂ ಶಾಶ್ವತವಾಗಿಲ್ಲ. ಈ ದೇಶ, ವಿಶ್ವದಲ್ಲಿ ಅನೇಕ ಜನರು ಅವರದ್ದೇ ಆದಂತಹ ಸಾಮ್ರಾಜ್ಯ ಸ್ಥಾಪಿಸಲು ಹೋಗಿ ನೆಲ ಕಚ್ಚಿರುವ ಇತಿಹಾಸ ಇದೆ. ಮುಂದಿನ ದಿನಗಳಲ್ಲಿ ಬಿಜೆಪಿ ನಾಯಕರಿಗೆ ಇತಿಶ್ರೀ ಹಾಡುವ ಕಾಲ ಹತ್ತಿರವಿದೆ ಎಂದರು.
ಇದನ್ನೂ ಓದಿ | ಕೆಂಪೇಗೌಡರು ಯಾರೊಬ್ಬರ ಸ್ವತ್ತಲ್ಲ: ಮಾಜಿ ಸಿಎಂ ಎಸ್.ಎಂ. ಕೃಷ್ಣ