ವಿಜಯಪುರ: ಕಾಂಗ್ರೆಸ್ ನಾಯಕನಿಲ್ಲ ಪಕ್ಷ. ಅದು ಸಮಾಜ ಒಡೆಯುವ ಪಕ್ಷ ಕಾಂಗ್ರೆಸ್. ಬಿಜೆಪಿ ಎಲ್ಲರನ್ನೂ ತೆಗೆದುಕೊಂಡು ಹೋಗುವ ಪಕ್ಷ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದರು.… ವಿಜಯಪುರದ ಸಿಂದಗಿ ಚೌಧರಿ ಲೇ ಔಟ್‌ನಲ್ಲಿ ನಡೆದ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸದಸ್ಯತ್ವ ಅಭಿಯಾನಕ್ಕೂ ಅವರು ಚಾಲನೆ ನೀಡಿದರು.
ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಇದು ಬಿಜೆಪಿಯ ಮಂತ್ರ. ಇದು ಸಣ್ಣ ಮಂತ್ರ ಅಲ್ಲ ಎಂದು ಹೇಳಿದ ಜೆ.ಪಿ. ನಡ್ಡಾ, ಕಾಂಗ್ರೆಸ್ಸನ್ನು ಮತ್ತೆ ಮನೆಯಲ್ಲೇ ಕೂರಿಸಲು ಕರ್ನಾಟಕದ ಜನರು ನಿರ್ಧರಿಸಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದೇಶ್ವರ ಶ್ರೀಗಳ ಆಶ್ರಮಕ್ಕೆ ಹೋಗಲು ನನಗೆ ಅವಕಾಶ ಸಿಕ್ಕಿರುವುದು ಧನ್ಯತೆಯ ಕ್ಷಣ. ಇಂತಹ ಪುಣ್ಯ ಭೂಮಿಗೆ ನಾನು ನಮಿಸುತ್ತೇನೆ ಎಂದು ಮಾತು ಆರಂಭಿಸಿದ ಅವರು, ದೇಶದ ಅಭಿವೃದ್ಧಿಯಲ್ಲಿ ಕರ್ನಾಟಕದ ಪಾತ್ರವನ್ನು ನಾವು ಯಾರೂ ಮರೆಯುವ ಹಾಗಿಲ್ಲ ಎಂದರು.
ಅಭಿವೃದ್ಧಿ, ಜನಪರ, ಭ್ರಷ್ಟಾಚಾರರಹಿತ ಪಕ್ಷ ಬಿಜೆಪಿ. ಭ್ರಷ್ಟಾಚಾರ, ಕುಟುಂಬ ವಾದ ಮತ್ತು ಜಾತಿವಾದ ಎಂದರೆ ಕಾಂಗ್ರೆಸ್. ಕುರ್ಚಿಗಾಗಿ ಕಾಂಗ್ರೆಸ್ ಕನಸು ಕಾಣುತ್ತಿದೆ. ಕಾಂಗ್ರೆಸ್ಸಿಗರು ಜಗಳ ಮಾಡುತ್ತಿರಲಿ. ಆಡಳಿತ ಮಾಡುವ ಕೆಲಸವನ್ನು ಬಿಜೆಪಿಗೆ ವಹಿಸಿ ಎಂದು ಮನವಿ ಮಾಡಿದರು ನಡ್ಡಾ.
ದೇಶದ ಮತ್ತು ಕರ್ನಾಟಕದ ಅಭಿವೃದ್ಧಿಗೆ ಗರಿಷ್ಠ ಯೋಜನೆಗಳನ್ನು ಬಿಜೆಪಿ ಸರಕಾರಗಳು ನೀಡಿವೆ. ಕಾಂಗ್ರೆಸ್ಸಿಗರು ಕರ್ನಾಟಕಕ್ಕಾಗಿ ಏನಾದರೂ ಅಭಿವೃದ್ಧಿ ಯೋಜನೆ ಜಾರಿಗೊಳಿಸಿದ್ದಾರಾ? ಒಂದಾದರೂ ಯೋಜನೆಯನ್ನು ಅವರಿಂದ ಹೆಸರಿಸಲು ಸಾಧ್ಯವೇ ಎಂದು ಸವಾಲು ಹಾಕಿದರು.
ಪ್ರಧಾನಿಯವರು ಕಲ್ಬುರ್ಗಿಗೆ ಭೇಟಿ ನೀಡಿದ್ದು, ಲಂಬಾಣಿ ಜನಾಂಗದವರಿಗೆ ಹಕ್ಕುಪತ್ರ ನೀಡಿದ್ದನ್ನು ವಿವರಿಸಿದ ಅವರು, ವಂದೇ ಭಾರತ್ ರೈಲಿನ ಮೂಲಕ ಭಾರತದ ನಕ್ಷೆ ಸಂಪೂರ್ಣ ಬದಲಾಗಲಿದೆ ಎಂದು ನುಡಿದರು. ನಾಡಪ್ರಭು ಕೆಂಪೇಗೌಡರಿಗೆ ಗೌರವ ನೀಡಿದ್ದನ್ನು ವಿವರಿಸಿದ ಅವರು, ಮಂಗಳೂರು ರಿಫೈನರೀಸ್‍ಗೆ, ಹೆದ್ದಾರಿಗಳ ನಿರ್ಮಾಣಕ್ಕೆ ಗರಿಷ್ಠ ಬಂಡವಾಳ ಹೂಡಿದ್ದನ್ನು ಮತ್ತು ಇದರಿಂದ ಸಮಗ್ರ ವಿಕಾಸದ ಕುರಿತು ತಿಳಿಸಿದರು.
ಬೆಂಗಳೂರು ಸುತ್ತಮುತ್ತ ಗರಿಷ್ಠ ಬಂಡವಾಳ ಹೂಡಿಕೆ ಆಗುತ್ತಿದೆ. ಮುಖ್ಯಮಂತ್ರಿ ರೈತ ವಿದ್ಯಾನಿಧಿಯಿಂದ ರೈತರು, ನೇಕಾರರು ಸೇರಿ ಹಲವು ಸಮುದಾಯದವರಿಗೆ ಲಾಭ ಸಿಗುತ್ತಿದೆ ಎಂದರಲ್ಲದೆ, ಮೀಸಲಾತಿ ಹೆಚ್ಚಿಸಿದ್ದರಿಂದ ಆಗಿರುವ ಲಾಭವನ್ನೂ ವಿವರಿಸಿದರು. ನಮ್ಮ ದೇಶದ ಅರ್ಥವ್ಯವಸ್ಥೆ ಜಗತ್ತಿನಲ್ಲಿ 10ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಏರಿದೆ. ಕರ್ನಾಟಕದ ಅರ್ಥವ್ಯವಸ್ಥೆಯೂ ಅತ್ಯಂತ ಸದೃಢವಾಗಿದೆ ಎಂದು ವಿವರಿಸಿದರು. ನಿನ್ನೆ 70 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕೊಡಲಾಗಿದೆ ಎಂದು ತಿಳಿಸಿದರು
ಸುರಕ್ಷಾ ಚಕ್ರ ನೀಡಿದ ಮೋದಿ
ಭಾರತದಲ್ಲಿ ಕೋವಿಡ್ ವಿರುದ್ಧ ಶೇ 100 ಲಸಿಕೆ ನೀಡಲಾಗಿದೆ. ಬೂಸ್ಟರ್ ಡೋಸ್ ಕೊಡಲಾಗಿದೆ. ಅಮೇರಿಕಾ, ಯುರೋಪ್‍ನಲ್ಲಿ ಲಸಿಕೆ ವಿಚಾರದಲ್ಲಿ ಸಮಸ್ಯೆ ಇದೆ. ಚೀನಾ ಈ ವಿಚಾರದಲ್ಲಿ ಅತ್ಯಂತ ಹಿಂದುಳಿದಿದೆ. ಮೋದಿಜಿ ನಮಗೆಲ್ಲರಿಗೆ ಸುರಕ್ಷಾ ಚಕ್ರ ನೀಡಿದ್ದಾರೆ ಎಂದರು.
ಭಾರತವೀಗ ನೆರವು ಕೇಳುವ ರಾಷ್ಟ್ರವಾಗಿ ಉಳಿದಿಲ್ಲ. ಕೋವಿಡ್ ಲಸಿಕೆ ಸೇರಿ ವಿವಿಧ ಸೌಲಭ್ಯಗಳನ್ನು ಇತರ ದೇಶಗಳಿಗೆ ಕೊಡುವ ದೇಶವಾಗಿ ಹೊರಹೊಮ್ಮಿದೆ ಎಂದರಲ್ಲದೆ, ರಷ್ಯಾ- ಉಕ್ರೇನ್ ಯುದ್ಧದ ವೇಳೆ ಭಾರತದ ವಿದ್ಯಾರ್ಥಿಗಳನ್ನು ತಕ್ಷಣ ಕರೆತರಲು ಜವಾಬ್ದಾರಿಯಿಂದ ನಮ್ಮ ಪ್ರಧಾನಿಯವರು ಕಾರ್ಯ ನಿರ್ವಹಿಸಿದ್ದನ್ನು ಉಲ್ಲೇಖಿಸಿದರು.
ರಾಹುಲ್ ಗಾಂಧಿ ಅವರ ಹಿರಿಯರು ಭಾರತ್ ಥೋಡೋ ಮಾಡಿದವರು. ಅವರು ಭಾರತ ಜೋಡಿಸುವ ಯಾತ್ರೆ ಮಾಡುತ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಹಣಬಲ, ತೋಳ ಬಲ ತೋರುವ ಕಾಂಗ್ರೆಸ್ ಪಕ್ಷದಲ್ಲಿ ಸಮರ್ಥ ನಾಯಕರೇ ಇಲ್ಲ. ಜನರಲ್ಲಿ ಗಲಭೆ ಎಬ್ಬಿಸುವ ಪಕ್ಷ ಅದು. ಬಿಜೆಪಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮೂಲಮಂತ್ರದೊಂದಿಗೆ ಮುನ್ನಡೆದಿದೆ ಎಂದು ಅವರು ವಿಶ್ಲೇಷಿಸಿದರು.
ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಮತ್ತು ಇತರರು ಉಪಸ್ಥಿತದ್ದರು.
ಇದನ್ನೂ ಓದಿ | Basanagowda pateel yatnal | ಸಿಂದಗಿ ಬಿಜೆಪಿ ಸಮಾವೇಶಕ್ಕೆ ಯತ್ನಾಳ್ ಗೈರು: ಜೆ.ಪಿ. ನಡ್ಡಾ ಬಂದರೂ ಅಂತರ ಕಾಯ್ದುಕೊಂಡ ಶಾಸಕ