ನವದೆಹಲಿ: ಕರ್ನಾಟಕದಲ್ಲಿ ಶೇ.64 ರಷ್ಟು ಜನ ಮಾತ್ರ ಕನ್ನಡದಲ್ಲಿ ಮಾತನಾಡುತ್ತಿದ್ದು, ಕನ್ನಡ ಶಾಲೆಗಳೂ ದುಸ್ಥಿತಿಯಲ್ಲಿವೆ. ಹಾಗಾಗಿ ಪ್ರತಿಯೊಬ್ಬ ಕನ್ನಡಿಗರೂ ಕನ್ನಡದ ರಾಯಭಾರಿಗಳಾಗಿ ಕನ್ನಡವನ್ನು ಉಳಿಸಿ ಬೆಳೆಸಬೇಕು. ಇಲ್ಲದಿದ್ದರೆ ಮುಂದಿನ ಹತ್ತು ವರ್ಷಗಳಲ್ಲಿ ಕನ್ನಡ ಶಾಲೆ ಮತ್ತು ಕನ್ನಡ ಸಾಹಿತ್ಯ ಪರಿಷತ್ ಸೇರಿ ಯಾವುದೂ ಉಳಿಯುವುದಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಕಳವಳ ವ್ಯಕ್ತಪಡಿಸಿದರು.
ದೆಹಲಿ ಕರ್ನಾಟಕ ಸಂಘದ ವಿಚಾರಸಂಕಿರಣ ಸಭಾಂಗಣದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್‌ನ ದೆಹಲಿ ಘಟಕದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ʼಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯಸಿʼ ಎಂಬ ರಾಮಾಯಣ ಮಹಾಕಾವ್ಯದಲ್ಲಿನ ವಾಕ್ಯವನ್ನು ಉಲ್ಲೇಖಿಸಿ ತಾಯಿ ಮತ್ತು ತಾಯ್ನೆಲ ಸ್ವರ್ಗಕ್ಕಿಂತಲೂ ಮಿಗಿಲು ಎಂದು ತಿಳಿಸುತ್ತ, ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಬಗ್ಗೆ ಕಾಳಜಿ ವಹಿಸುವ ಮೂಲಕ ಕನ್ನಡಿಗರ ನೋವು ನಲಿವುಗಳಿಗೆ ಸ್ಪಂದಿಸುವ ಕೆಲಸವನ್ನು ಸಾಹಿತ್ಯ ಪರಿಷತ್ ಮಾಡುತ್ತಿದೆ ಎಂದರು.
ಇದನ್ನೂ ಓದಿ | Kartavyapath | ಕರ್ತವ್ಯಪಥ ಭಾರತದ ಪ್ರಜಾಪ್ರಭುತ್ವದ ಜೀವಂತ ಆದರ್ಶ ಮಾರ್ಗ: ಮೋದಿ
ಕನ್ನಡದ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸಲು ಕರ್ನಾಟಕ ಕಾನೂನು ಆಯೋಗ ಸಮಗ್ರ ಕನ್ನಡ ಅಭಿವೃದ್ಧಿಗಾಗಿ ಕಾನೂನನ್ನು ಜಾರಿಗೆ ತರುವ ಚಿಂತನೆ ನಡೆಸುತ್ತಿದೆ. ಇದನ್ನು ಮುಂಬರುವ ಅಧಿವೇಶನದಲ್ಲಿ ಕಾನೂನನ್ನಾಗಿ ರೂಪುಗೊಳಿಸುವಂತೆ ಕ್ರಮ ಕೈಗೊಳ್ಳವಂತೆ ಮಾಡಲು ಭಗೀರಥ ಪ್ರಯತ್ನವನ್ನು ಕನ್ನಡ ಸಾಹಿತ್ಯ ಪರಿಷತ್ ಮಾಡುತ್ತಿದೆ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತನ್ನು ಸಾಹಿತಿಗಳಿಗೆ ಮಾತ್ರ ಸೀಮಿತವಾಗುವಂತೆ ಮಾಡದೆ ಕನ್ನಡ ಭಾಷೆ ಸಾಹಿತ್ಯದ ಬಗ್ಗೆ ಕಾಳಜಿ ಇರುವ ಎಲ್ಲ ಕನ್ನಡಿಗರ ಮನೆ ಬಾಗಿಲಿಗೆ ಕೊಂಡೊಯ್ದು ಕನ್ನಡ ಸಾಹಿತ್ಯ ಪರಿಷತ್‌ಗೆ ಕೋಟಿ ಸದಸ್ಯರನ್ನು ನೋಂದಣಿ ಮಾಡಿಸಬೇಕೆಂಬ ಮಹತ್ವದ ಗುರಿ ನಮ್ಮದಾಗಿದೆ. ಪ್ರತಿಯೊಬ್ಬ ಕನ್ನಡಿಗರು ಸೇರಿ ತಾಯಿ ಕನ್ನಡಾಂಬೆಯ ತೇರನ್ನು ಎಳೆಯುತ್ತಾ ಕನ್ನಡ ನಾಡು ನುಡಿ, ಭಾಷೆ ಸಂಸ್ಕೃತಿಯ ಬಗ್ಗೆ ದೇಶದ ಮೂಲೆ ಮೂಲೆಗೂ ಪರಿಚಯಿಸುವ ಕೆಲಸದಲ್ಲಿ ಸಾಹಿತ್ಯ ಪರಿಷತ್ತಿನ ಜತೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ನಂತರ ನೂತನ ಘಟಕದ ಅಧ್ಯಕ್ಷ ಸಿ.ಎಂ. ನಾಗರಾಜ, ಗೌರವ ಕಾರ್ಯದರ್ಶಿ ಚಂದ್ರಶೇಖರ ಎನ್.ಪಿ. ಹಾಗೂ ಗೌರವ ಕೋಶಾಧ್ಯಕ್ಷ ಜೆ. ಸಂತೋಷ್ ಅವರಿಗೆ ಆದೇಶ ಪತ್ರ ನೀಡಿದರು. ಬಳಿಕ ಅಧ್ಯಕ್ಷರಾದ ಸಿ.ಎಂ. ನಾಗರಾಜ ಅವರಿಗೆ ಕನ್ನಡ ಬಾವುಟ ನೀಡಿ, ದೆಹಲಿ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧಿಕೃತ ಘೋಷಣೆ ಮಾಡಿ ದೆಹಲಿ ಘಟಕದ ಪದಾಧಿಕಾರಿಗಳಿಗೆ ಕನ್ನಡದ ಕೆಲಸವನ್ನು ಮಾಡಲು ದೊಡ್ಡ ಜವಾಬ್ದಾರಿ ನೀಡಲಾಗಿದ್ದು, ಕನ್ನಡ ಕಟ್ಟುವ ಕೆಲಸವನ್ನು ಶ್ರದ್ಧೆ, ಆಸಕ್ತಿ ವಹಿಸಿ ಮಾಡಬೇಕೆಂದು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಗೌರವ ಕಾರ್ಯದರ್ಶಿ ಚಂದ್ರಶೇಖರ್, ನಿಮ್ಮ ನಿರೀಕ್ಷೆ ಹುಸಿಯಾಗದ ರೀತಿಯಲ್ಲಿ ನಾವು ಕನ್ನಡ ಸಾಹಿತ್ಯ ಪರಿಷತ್ತಿನ ಕೆಲಸಗಳನ್ನು ಕನ್ನಡ ಸೇವೆ ಎಂದು ತಿಳಿದು ಶ್ರದ್ದೆ ನಿಷ್ಠೆ ಯಿಂದ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ | Netaji Statue | ನೇತಾಜಿ ಪ್ರತಿಮೆ ಕೆತ್ತಿದ್ದು ಕನ್ನಡಿಗ ಶಿಲ್ಪಿ ಅರುಣ್ ಯೋಗಿರಾಜ್ ತಂಡ
ಕನ್ನಡ ಸಾಹಿತ್ಯ ಪರಿಷತ್ತಿನ ದೆಹಲಿಯ ನೂತನ ಘಟಕದ ಅಧ್ಯಕ್ಷ ಸಿ.ಎಂ. ನಾಗರಾಜ ಮಾತನಾಡಿ, ದೆಹಲಿಯಲ್ಲಿ ಕರ್ನಾಟಕ ಸಂಘದ ಘಟಕ ಆರಂಭದಿಂದ ಈಗಾಗಲೇ ಮಾಡಿಕೊಂಡು ಬರುತ್ತಿರುವ ಕನ್ನಡದ ಕೆಲಸಗಳಿಗೆ ಇನ್ನಷ್ಟು ಬಲ ಬಂದಂತಾಗಿದ್ದು, ಇದಕ್ಕೆ ಕಾರಣಕರ್ತರಾದ ನಾಡೋಜ ಡಾ. ಮಹೇಶ ಜೋಶಿ ಅವರು ನಿಜಕ್ಕೂ ಒಬ್ಬ ದೂರದೃಷ್ಟಿಯುಳ್ಳ ನಾಯಕ ಎಂದು ಶ್ಲಾಘಿಸಿದರು.
ಕನ್ನಡ ಸಾಹಿತ್ಯ ಪರಿಷತ್ ದೆಹಲಿ ಘಟಕವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ದೆಹಲಿ ಸರ್ಕಾರದ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಿರಿಯ ಐಎಎಸ್ ಅಧಿಕಾರಿ ಎಚ್. ರಾಜೇಶ್ ಪ್ರಸಾದ್, 1915ರಲ್ಲಿ ಮೈಸೂರಿನಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರಿಂದ ಪ್ರಾರಂಭವಾದ ಕನ್ನಡ ಸಾಹಿತ್ಯ ಪರಿಷತ್ 107 ವರ್ಷಗಳ ನಂತರ ದೆಹಲಿಯಲ್ಲಿ ತನ್ನ ಘಟಕ ತೆರೆಯುತ್ತಿದೆ. ಇದು ತಡವಾದರೂ ರಾಷ್ಟ್ರ ರಾಜಧಾನಿಯಲ್ಲಿ ನಾಡೋಜ ಡಾ. ಮಹೇಶ ಜೋಶಿ ಅವರ ಪ್ರಯತ್ನದೊಂದಿಗೆ ನೆರವೇರಿದೆ. ಈ ಶುಭ ಸಂಧರ್ಭದಲ್ಲಿ ಭಾಗಿಯಾಗಿರುವುದು ನನಗೆ ಹೆಮ್ಮೆ ಎನಿಸುತ್ತಿದೆ ಎಂದು ನುಡಿದರು.
ವಿದೇಶಾಂಗ ಇಲಾಖೆಯ ಜಂಟಿ ಕಾರ್ಯದರ್ಶಿ, ಐಎಫ್‌ಎಸ್ ಅಧಿಕಾರಿ ಮಂಜುನಾಥ್, ಅಧೀನ ಕಾರ್ಯದರ್ಶಿ ಡಾ. ನಿಖಿಲ್ ಅಧಿಕಾರಿಗಳ ವಿಶೇಷ ಕರ್ತವ್ಯಾಧಿಕಾರಿ (ಕರೋನಾ ಲಸಿಕೆ) ವೈಶಾಖ್ ನಾಗ್ ಮಾತನಾಡಿದರು.
ದೆಹಲಿಯ ಕನ್ನಡತಿಯರಾದ ಪೂಜರಾವ್, ಮಾಲಿನಿ ಪ್ರಹ್ಲಾದ್, ಶೋಭಾ ನಾಗರಾಜ್, ಹೇಮಶ್ರೀ ಚಂದ್ರಶೇಖರ್, ರೂಪಶ್ರೀ ನರಸಿಂಹ ಮೂರ್ತಿ, ನೇತ್ರಕುಮಾರ್ ಮತ್ತು ಲೀಲಾ ದೇವರಾಜ್ ಅವರು ನಾಡಗೀತೆಯನ್ನು ಪ್ರಸ್ತುತ ಪಡಿಸಿದರು. ಗೌರವ ಕೋಶಧ್ಯಕ್ಷ ಜೆ. ಸಂತೋಷ್ ವಂದನಾರ್ಪಣೆ ಮಾಡಿದರು. ದೆಹಲಿಯ ಕನ್ನಡದ ಹಿರಿಯರು, ಅಧಿಕಾರಿಗಳು ಹಾಗೂ ಮಹಿಳೆಯರು ಮಕ್ಕಳು ಸೇರಿದಂತೆ ನೂರಾರು ಕನ್ನಡಾಭಿಮಾನಿಗಳು ಇದ್ದರು.
ಇದನ್ನೂ ಓದಿ | Central Vista | ಸೆಂಟ್ರಲ್ ವಿಸ್ಟಾ ಕಾರ್ಮಿಕರ ಜತೆ ಮೋದಿ ಮಾತು, ಗಣರಾಜ್ಯೋತ್ಸವದ ಪರೇಡ್‌ಗೂ ಆಹ್ವಾನ!