Site icon Vistara News

Commission Politics: 40% ಕಮಿಷನ್ ತನಿಖೆಗಾಗಿ ನಾಗಮೋಹನ್ ದಾಸ್ ಸಮಿತಿ; ಯಾವ ಅಂಶಗಳ ಬಗ್ಗೆ ನಡೆಯಲಿದೆ ತನಿಖೆ?

Retired High Court Judge Nagamohan Das

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದ್ದ 40 ಪರ್ಸೆಂಟ್‌ ಕಮಿಷನ್‌ ದಂಧೆ (Commission Politics) ಕುರಿತಂತೆ ತನಿಖೆ ನಡೆಸಲು ರಾಜ್ಯ ಸರ್ಕಾರವು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಿದೆ. ಈ ಬಗ್ಗೆ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿರುವ ರಾಜ್ಯ ಸರ್ಕಾರ, 3 ತಿಂಗಳೊಳಗೆ ತನಿಖಾ ವರದಿ ಸಲ್ಲಿಸಬೇಕು ಎಂದು ತನಿಖಾ ಸಮಿತಿಗೆ ಸೂಚಿಸಿದ್ದು, ಯಾವ ಅಂಶಗಳ ಬಗ್ಗೆ ಪರಾಮರ್ಶನೆ ಮಾಡಬೇಕು ಎಂಬ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಿದೆ.

ತನಿಖಾ ಸಮಿತಿ ವಿಚಾರಣೆ ವ್ಯಾಪ್ತಿಗೆ ವಹಿಸಿರುವ ಅಂಶಗಳು

1. ಹೆಚ್ಚಿನ ಪ್ರಮಾಣದಲ್ಲಿ ಕಾಮಗಾರಿಗಳನ್ನು ನಡೆಸುವ ಇಲಾಖೆಗಳಿಂದ ಲೋಕೋಪಯೋ ಇಲಾಖೆ, ಜಲಸಂಪನ್ಮೂಲ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆಗಳಲ್ಲಿ ಟೆಂಡರ್ ಪ್ರಕ್ರಿಯೆ, ಪ್ಯಾಕೇಜ್ ಪದ್ಧತಿ, ಪುನರ್ ಅಂದಾಜು (Revised Estimate), ಬಾಕಿ ಮೊತ್ತ ಬಿಡುಗಡೆ ಇತ್ಯಾದಿ ವಿಷಯಗಳಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ಸ್ಥಳ ಹಾಗೂ ದಾಖಲಾತಿಗಳ ಪರಿಶೀಲನೆಯೊಂದಿಗೆ ವಿವರವಾದ ತನಿಖೆಯನ್ನು ನಡೆಸಿ, ಲೋಪ-ದೋಷಗಳ ಮಾಹಿತಿ ಹಾಗೂ ಸಂಬಂಧಿತ ಆರೋಪಿತರ ಸ್ಪಷ್ಟ ಗುರುತಿಸುವಿಕೆಯ ಸಹಿತ ಪರಿಪೂರ್ಣ ತನಿಖೆಯನ್ನು ನಡೆಸುವುದು.

2. ಮಾನ್ಯ ಆಯೋಗವು ಮೇಲಿನ ಕಾರ್ಯ ವ್ಯಾಪ್ತಿಯ ಜತೆಗೆ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರ ಮನವಿ, ದೂರು ಅರ್ಜಿಗಳಲ್ಲಿನ ಎಲ್ಲಾ ಅಂಶಗಳನ್ನೂ ಸಹ ಸವಿವರವಾಗಿ ತನಿಖಾ ವ್ಯಾಪ್ತಿಯಲ್ಲಿ ಪರಿಶೀಲಿಸಲು ಸೂಚಿಸಿದೆ.

3. ಅಲ್ಲದೆ ತನಿಖೆಯ ವ್ಯಾಪ್ತಿಯಲ್ಲಿ ಪ್ರಮುಖ ಕೆಳಕಂಡ ಅಂಶಗಳನ್ನೂ ಪರಾಮರ್ಶಿಸುವುದು.

ಎ) ಯೋಜನಕಾಮಗಾರಿಗಳಿಗೆ ನಿಯಮಾನುಸಾರ ಆಡಳಿತಾತ್ಮಕ ಅನುಮೋದನೆ ನೀಡಿರುವ ಬಗ್ಗೆ
ಬಿ) ಅನುಷ್ಠಾನಗೊಳಿಸಲಾದ ಕಾಮಗಾರಿ, ಯೋಜನೆಗಳ ಗುಣಮಟ್ಟ
ಸಿ) ಕಾಮಗಾರಿಗಳ ಅಂದಾಜುಗಳನ್ನು ನಿಯಮಗಳ ಪ್ರಚಲಿತ ಅನುಸೂಚಿ ದರಗಳ ಅನುಸಾರವಾಗಿ ತಯಾರಿಸಿರುವ ಬಗ್ಗೆ.
ಡಿ) ಕಾಮಗಾರಿಗಳ ಅಂದಾಜಿನಲ್ಲಿನ ಪರಿಮಾಣ ವಾಸ್ತವಿಕವಾಗಿದೆಯೇ ಅಥವಾ ಕೃತಕವಾಗಿ ಹೆಚ್ಚಿಸಲಾಗಿದೆಯೆ? ಹೆಚ್ಚಿಸಿದಲ್ಲಿ ಅವುಗಳ ಪ್ರಮಾಣ ಮತ್ತು ಹಣಕಾಸಿನ ಬದ್ಧತೆಯ ಜತೆಗೆ ಯಾವ ಹಂತದಲ್ಲಿ ಹೆಚ್ಚಿಸಲಾಗಿದೆ
ಎಂಬುದನ್ನು ಪರೀಕ್ಷಿಸುವುದು.
ಇ) ಕಾಮಗಾರಿಗಳ ಅನುಷ್ಠಾನದ ವೇಳೆ ಉಂಟಾಗಿರುವ ಹೆಚ್ಚುವರಿ ವ್ಯತ್ಯಾಸದ ಅನಿವಾರ್ಯತೆ ಮತ್ತು ಅಗತ್ಯತೆ ಅನಿವಾರ್ಯವಾಗಿದ್ದಲ್ಲಿ, ಮೂಲ ಅಂದಾಜಿನಲ್ಲಿ ಕೈಬಿಡಲು ಕಾರಣಗಳು ಹಾಗೂ ಇವುಗಳಿಗೆ ಸಕ್ಷಮ ಪ್ರಾಧಿಕಾರವು ಅನುಮೋದನೆ ನೀಡಿರುವ ಬಗ್ಗೆ.
ಎಫ್‌) ಯಾವುದಾದರೂ ಕಾಮಗಾರಿಗಳನ್ನು ನಿರ್ವಹಿಸದೆಯೇ ಬಿಲ್ ಪಾವತಿ ಮಾಡಲಾಗಿದೆಯೇ ಅಥವಾ ಅನುಷ್ಠಾನವಾದ ಕಾಮಗಾರಿಗಳ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಬಿಲ್‌ ಪಾವತಿಸಲಾಗಿದೆಯೇ?
ಜಿ) ಕಾಮಗಾರಿಗಳ ಟೆಂಡ‌ರ್‌ಗಳನ್ನು ಕರೆಯುವಾಗ ಕೆಲವೇ ಗುತ್ತಿಗೆದಾರರಿಗೆ ಪ್ರಕ್ರಿಯೆಗಳಲ್ಲಿ ಅನುಕೂಲವಾಗುವಂತೆ ಹಾಗೂ ಉಳಿದ ಗುತ್ತಿಗೆದಾರರು ಭಾಗವಹಿಸದಂತೆ ಷರತ್ತುಗಳನ್ನು ರೂಪಿಸಲಾಗಿತ್ತೇ ಎಂಬ ಅಂಶಗಳ ಬಗ್ಗೆ.
ಎಚ್‌) ಕಾಮಗಾರಿಗಳನ್ನು ಪ್ರಾರಂಭಿಸುವ ಮೊದಲು ಸಾಮಗ್ರಿ, ಉಪಕರಣಗಳು ಇತ್ಯಾದಿಗಳ ಗುಣಮಟ್ಟ ಪರೀಕ್ಷೆಯನ್ನು ನಿರ್ದಿಷ್ಟಪಡಿಸಿ ಅಧಿಕೃತ ಏಜೆನ್ಸಿಗಳಿಂದ ಮಾಡಿಸಲಾಗಿದೆಯೇ?
ಐ) ಒಟ್ಟಾರೆ ಕಾಮಗಾರಿಗಳ ಕುರಿತಾದ ಟೆಂಡರ್ ಪ್ರಕ್ರಿಯೆ ಮತ್ತು ಅನುಸ್ಕಾನ ಪ್ರಕ್ರಿಯೆಗಳಲ್ಲಿ ಉಂಟಾಗಿರಬಹುದಾದ ಇತರೆ ಯಾವುದಾದರೂ ಲೋಪ-ದೋಷಗಳು.
ಜೆ) ಪರಿಶೀಲನೆಯ ಸಂದರ್ಭದಲ್ಲಿ ಆಯೋಗದ ಗಮನಕ್ಕೆ ಬರುವ ಇನ್ನಾವುದೇ ಗಂಭೀರ ವಿಷಯಗಳನ್ನು ವಿಚಾರಣಾ ಆಯೋಗವು ವರಾಮರ್ಶಿಸುವುದು

ಇದನ್ನೂ ಓದಿ | Lok Sabha Election 2024: ಮತ್ತೆ ಬಿಜೆಪಿಗೆ ಹೋಗ್ತಾರಾ ಜಗದೀಶ್‌ ಶೆಟ್ಟರ್;‌ ಅಮಿತ್‌ ಶಾ ಕರೆ ಬಗ್ಗೆ ಹೇಳಿದ್ದೇನು?

ಗುಣಮಟ್ಟ ಪರೀಕ್ಷೆಗೆ 3ನೇ ಸ್ವತಂತ್ರ ಸಂಸ್ಥೆ ನೇಮಕಕ್ಕೂ ಅವಕಾಶ

ತನಿಖಾ ಸಮಿತಿಗೆ ಸಂಬಂಧಪಟ್ಟಂತೆ ಆಯಾ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳು ಸಮಿತಿಯು ಕಾಲಾನುಕಾಲಕ್ಕೆ ತನಿಖೆಗಾಗಿ ಅಪೇಕ್ಷಿಸುವ ಎಲ್ಲ ಕಡತಗಳು/ ದಾಖಲಾತಿಗಳು/ ವಹಿಗಳು ಇತ್ಯಾದಿಗಳನ್ನು ಒದಗಿಸತಕ್ಕದ್ದು ಹಾಗೂ ಸ್ಥಳ ತನಿಖೆ ಸಂದರ್ಭದಲ್ಲಿ ಖುದ್ದು ಹಾಜರಿದ್ದು, ತನಿಖಾ ಸಮಿತಿಯೊಂದಿಗೆ ಸಂಪೂರ್ಣವಾಗಿ ಸಹಕರಿಸತಕ್ಕದ್ದು. ತನಿಖಾ ಸಮಿತಿಗೆ ಅಗತ್ಯವಿರುವ ಸಿಬ್ಬಂದಿ, ಸಾಮಗ್ರಿಗಳು, ವಾಹನಗಳ ವ್ಯವಸ್ಥೆ ಹಾಗೂ ಕಚೇರಿ ಮತ್ತು ಅಗತ್ಯ ಸಲಕರಣೆಗಳನ್ನು ಒದಗಿಸತಕ್ಕದ್ದು. ಸಮಿತಿಗೆ ಭತ್ಯೆ, ಸೌಲಭ್ಯಗಳನ್ನು ನಿಯಮಾನುಸಾರ ಕಲ್ಪಿಸುವುದು. ಸದರಿ ತನಿಖಾ ಸಮಿತಿಗೆ ಅಗತ್ಯವಿದ್ದಲ್ಲಿ, ಅಧ್ಯಕ್ಷರ ಕೋರಿಕೆಯ ಮೇರೆಗೆ ಗುಣಮಟ್ಟ ಪರೀಕ್ಷೆಗೆ ನೋಂದಾಯಿತ 3ನೇ ಸ್ವತಂತ್ರ ಸಂಸ್ಥೆಯ (3rd Party Assistance) ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮ ವಹಿಸುವುದು ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ | Operation Hasta: ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರಲ್ಲ ಎಂದ ರೇಣುಕಾಚಾರ್ಯ

ಮೇಲ್ಕಂಡ ಅಂಶಗಳ ಕುರಿತು ವಿಚಾರಣಾ ಆಯೋಗವು ತನಿಖೆ ನಡೆಸಲು ಎಲ್ಲಾ ಅಧಿಕಾರವನ್ನು ಹೊಂದಿರುತ್ತದೆ ಹಾಗೂ ತನಿಖೆಯನ್ನು 3 ತಿಂಗಳೊಳಗೆ ಪೂರ್ಣಗೊಳಿಸಿ ವರದಿಯನ್ನು ಸಲ್ಲಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Exit mobile version