ಕೊಪ್ಪಳ: ವೇತನ ಹೆಚ್ಚಳ ಮಾಡಬೇಕು (7th Pay Commission) ಮತ್ತು ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದರೂ ರಾಜ್ಯ ಬಜೆಟ್‌ನಲ್ಲಿ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಸಾರ್ವಜನಿಕರಿಗೆ ತೊಂದರೆಯಾದರೂ ಹೋರಾಟ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ನಾಗರಾಜ ಜುಮ್ಮಣ್ಣನವರ ಹೇಳಿದ್ದಾರೆ.
ಮಾರ್ಚ್ 1 ರಿಂದ ಸರ್ಕಾರಿ ನೌಕರರ ಮುಷ್ಕರ ವಿಚಾರಕ್ಕೆ ನಗರದಲ್ಲಿ “ವಿಸ್ತಾರ ನ್ಯೂಸ್ʼʼಗೆ ಪ್ರತಿಕ್ರಿಯಿಸಿರುವ ಅವರು, ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆ ಪರಿಷ್ಕರಣೆಯಾಗಿ ಐದು ವರ್ಷಗಳು ಕಳೆದಿವೆ. ಹೀಗಾಗಿ 2022ರ ಜುಲೈ 1ಕ್ಕೆ ಪರಿಷ್ಕರಣೆ ಮಾಡಬೇಕಿತ್ತು. ಅದರ ಜತೆಗೆ ಅವೈಜ್ಞಾನಿಕ ಎನ್‌ಪಿಎಸ್ ರದ್ದುಪಡಿಸಿ ಒಪಿಎಸ್ ಜಾರಿ ಮಾಡಲು ಹಲವು ಬಾರಿ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಎರಡು ಪ್ರಮುಖ ಬೇಡಿಕೆಗಳನ್ನು ಫೆ.28ರೊಳಗೆ ಈಡೇರಸದಿದ್ದಲ್ಲಿ ಮಾರ್ಚ್ 1 ರಿಂದ ಕರ್ತವ್ಯಕ್ಕೆ ಗೈರಾಗುವ ಮೂಲಕ ಮುಷ್ಕರ ನಡೆಸುವುದಾಗಿ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಮಾರ್ಚ್ ತಿಂಗಳಲ್ಲಿ ಬೇಡಿಕೆಗಳನ್ನು ಈಡೇರಿಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸದನದಲ್ಲಿ ತಿಳಿಸಿದ್ದಾರೆ. ಆದರೆ, ಮಾರ್ಚ್ ತಿಂಗಳು ಬಂದರೆ ಚುನಾವಣೆ ನೀತಿ ಸಂಹಿತೆ ಜಾರಿಯಾಗುತ್ತದೆ. ಹೀಗಾಗಿ ಸರ್ಕಾರ ಇನ್ನೆರಡು ದಿನಗಳಲ್ಲಿ ಬೇಡಿಕೆಗಳಿಕೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಹೋರಾಟ ಮಾಡುತ್ತೇವೆ. ಹೀಗಾಗಿ ನಮ್ಮ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ | 7th pay commission : ಸರ್ಕಾರಕ್ಕೆ ಎಚ್ಚರಿಕೆ ನೀಡಲ್ಲ, ಡೆಡ್‌ಲೈನ್ ಕೊಡಲ್ಲ, ಹೋರಾಟದಿಂದ ಹಿಂದೆ ಸರಿಯಲ್ಲ ಎಂದ ಸಿ.ಎಸ್. ಷಡಾಕ್ಷರಿ
ಈ ಮುಷ್ಕರ ಬಹಳ ಗಂಭೀರತೆಯಿಂದ ಕೂಡಿದೆ. ರಾಜ್ಯದಲ್ಲಿ 5.20 ಲಕ್ಷ ಸರ್ಕಾರಿ ನೌಕರರು ಭಾಗವಹಿಸುತ್ತಾರೆ. ವೈದ್ಯಕೀಯ ಸೇವಾ ಸಿಬ್ಬಂದಿಯೂ ಈ ಹೋರಾಟದಲ್ಲಿ ಭಾಗವಹಿಸುತ್ತಿದ್ದು, ತುರ್ತು ಸೇವೆಗಳಲ್ಲಿ ನೌಕರರು ಕಪ್ಪು ಪಟ್ಟಿ ಧರಿಸಿ ಕಾರ್ಯನಿರ್ವಹಿಸಲಿದ್ದಾರೆ. ಎಲ್ಲಾ ನೌಕರರು ಮುಷ್ಕರದಲ್ಲಿ ಭಾಗವಹಿಸುತ್ತಾರೆ. ಇದಕ್ಕೆ ಬಿಬಿಎಂಪಿ, ಜೆಸ್ಕಾಂ, ನಗರಸಭೆಗಳ ಪೌರಕಾರ್ಮಿಕರು ಕೂಡ ನಮ್ಮ ಹೋರಾಟಕ್ಕೆ ಬೆಂಬಲ ಕೊಟ್ಟಿದ್ದಾರೆ. ಒಟ್ಟಾರೆಯಾಗಿ ಸುಮಾರು 11 ಲಕ್ಷ ನೌಕರರು ಹೋರಾಟದಲ್ಲಿ ಮುಷ್ಕರದಲ್ಲಿ ಭಾಗಿಯಾಗುತ್ತಾರೆ ಎಂದು ಹೇಳಿದ್ದಾರೆ.
ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬುವುದು ಗೊತ್ತಿದೆ. ಹೀಗಿದ್ದರೂ ನಾವು ಏಕಾಏಕಿ ಮುಷ್ಕರದ ನಿರ್ಧಾರ ಮಾಡಿಲ್ಲ. ಹೀಗಾಗಿ ನಮ್ಮ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ಸರ್ಕಾರಿ ಸೇವೆಗಳಲ್ಲಿ ವ್ಯತ್ಯಯವಾಗಲಿದೆ ಎಂದ ಅವರು, ಹಣಕಾಸು ಇಲಾಖೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ. ಆದರೆ, ಅಧಿಕೃತವಾಗಿ ಸಂಘದವರನ್ನು ಚರ್ಚೆಗೆ ಆಹ್ವಾನಿಸಿಲ್ಲ ಎಂದು ಅಸಮಾಧಾನ ಹೊರಹಾಕಿದರು.