ಗದಗ: ಬೆಂಗಳೂರಿನಲ್ಲಿ ನಡೆದ ಮೆಟ್ರೊ ಪಿಲ್ಲರ್ ದುರಂತದಲ್ಲಿ (Namma Metro Pillar) ನೋವನುಭವಿಸುತ್ತಿರುವ ಲೋಹಿತ್ ಕುಮಾರ್ ಕುಟುಂಬದ ಮೂಲ ಮನೆ ಇರುವುದು ಗದಗ ನಗರದ ಸಿದ್ದರಾಮೇಶ್ವರದಲ್ಲಿ. ಅಲ್ಲಿ ಜನ ಲೋಹಿತ್ ಅವರ ಕುಟುಂಬ ಸಂಕಟವನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ.
ಲೋಹಿತ್, ಅವರ ಪತ್ನಿ ತೇಜಸ್ವಿನಿ ಅವರು ಇಬ್ಬರು ಪುಟ್ಟ ಮಕ್ಕಳೊಂದಿಗೆ ಸಾಗುತ್ತಿದ್ದಾಗ ಅವರ ಬೈಕ್ ಮೇಲೆ ಬೆಂಗಳೂರಿನ ನಾಗವಾರ ಬಳಿ ಮೆಟ್ರೋ ಪಿಲ್ಲರ್ ಉರುಳಿ ತೇಜಸ್ವಿನಿ ಮತ್ತು ಒಂದು ಮಗು ಮೃತಪಟ್ಟಿದೆ. ಇದು ಸಿದ್ದರಾಮೇಶ್ವರದ ಅವರ ಮನೆ ಪರಿಸರದವರನ್ನು ಕಂಗೆಡಿಸಿದೆ.
ಲೋಹಿತ್ ಅವರ ತಂದೆ ವಿಜಯ ಕುಮಾರ್ ಮತ್ತು ತಾಯಿ ಕಳೆದ ಅದೆಷ್ಟೋ ವರ್ಷಗಳಿಂದ ಇಲ್ಲಿ ವಾಸವಾಗಿದ್ದಾರೆ. ವಿಜಯ ಕುಮಾರ್ ಅವರು ಮಹಾನಗರ ಪಾಲಿಕೆ ಉದ್ಯೋಗಿಯಾಗಿದ್ದರೆ ತಾಯಿ ನೀರಾವರಿ ಇಲಾಖೆಯಲ್ಲಿ ಟೈಪಿಸ್ಟ್ ಆಗಿದ್ದರು. ಕಳೆದ ಏಳು ವರ್ಷಗಳಿಂದ ಅವರು ಬೆಂಗಳೂರಿನಲ್ಲಿ ವಾಸವಾಗಿದ್ದು ಆಗಾಗ ಬಂದು ಹೋಗುತ್ತಾರೆ. ಲೋಹಿತ್ ಅವರಿಗೆ ಒಬ್ಬ ತಮ್ಮ ಇದ್ದು ಆತ ಬೆಂಗಳೂರಿನಲ್ಲಿ ಓದುತ್ತಾನೆ.
ಲೋಹಿತ್ ಮತ್ತು ಕುಟುಂಬ ತುಂಬಾ ಸಭ್ಯವಾಗಿದ್ದು, ಎಲ್ಲರ ಜತೆ ಉತ್ತಮ ಒಡನಾಟ ಹೊಂದಿತ್ತು. ಕೇವಲ ೧೫ ದಿನಗಳ ಹಿಂದಷ್ಟೇ ಅವರೆಲ್ಲ ಇಲ್ಲಿನ ಮನೆಗೆ ಬಂದು ಹೋಗಿದ್ದರು. ಮಕ್ಕಳು ಕೂಡಾ ಇಲ್ಲಿ ಆಟವಾಡುತ್ತಿದ್ದರು. ದೇವರು ಈ ರೀತಿ ಕ್ರೂರಿ ಆಗಬಾರದಿತ್ತು ಎಂದು ಇಲ್ಲಿನ ಜನರು ಕಣ್ಣೀರು ತೋಡಿಕೊಂಡರು.
ದುರಂತ ನಡೆದಿದ್ದು ಹೀಗೆ..
ಮೂಲತಃ ಗದಗ ನಿವಾಸಿಗಳಾದ ಲೋಹಿತ್, ತೇಜಸ್ವಿನಿ (೨೮) ದಂಪತಿಗೆ ಅವಳಿ ಜವಳಿ ಮಕ್ಕಳಿದ್ದು, ಕಳೆದ 10 ವರ್ಷಗಳಿಂದ ಬೆಂಗಳೂರಿನ ಕಲ್ಕೆರೆಯ ಡಿಎಕ್ಸ್ ಮ್ಯಾಕ್ಸ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದಾರೆ. ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಮೋಟರೋಲಾದಲ್ಲಿ ಎಂಜಿನಿಯರ್ ಆಗಿರುವ ತೇಜಸ್ವಿನಿ ಅವರನ್ನು ಪತಿ ಲೋಹಿತ್ ಎಂದಿನಂತೆ ಕಚೇರಿಗೆ ಬಿಟ್ಟು ಇಬ್ಬರು ಮಕ್ಕಳನ್ನು ಬೇಬಿ ಸಿಟ್ಟಿಂಗ್ ಬಿಡಲು ತೆರಳುತ್ತಿದ್ದರು. ಆದರೆ ಯಮಸ್ವರೂಪಿಯಾಗಿ ಕಾದು ನಿಂತಿದ್ದ ಮೆಟ್ರೋ ಪಿಲ್ಲರ್‌ಗಳು ಏಕಾಏಕಿ ಮರಕ್ಕೆ ಉರುಳಿ, ಆ ಮರವು ಬೈಕ್‌ನಲ್ಲಿ ಬರುತ್ತಿದ್ದ ತೇಜಸ್ವಿನಿಯ ತಲೆ ಮೇಲೆ ಹಾಗೂ ಎರಡೂವರೆ ವರ್ಷದ ವಿಹಾನ್‌ನ ಬಲಭಾಗದ ಮೇಲೆ ಬಿದ್ದಿದೆ.
ಇದನ್ನೂ ಓದಿ | Nagavara Metro Pillar | ಮೆಟ್ರೋ ಪಿಲ್ಲರ್ ರೂಪದಲ್ಲಿ ಕಾದು ಕುಳಿತಿತ್ತು ಮೃತ್ಯು; ಛಿದ್ರವಾಯಿತು ಸುಂದರ ಸಂಸಾರ