ಬೆಳಗಾವಿ: ಜಾರಕಿಹೊಳಿ, ಕತ್ತಿ ಬ್ರದರ್ಸ್ ಭಿನ್ನಮತ, ವಾಯವ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಜಾರಕಿಹೊಳಿ ಬ್ರದರ್ಸ್ ಭೇಟಿ ಮಾಡಿ ಚರ್ಚೆ ನಡೆಸಿದರು.
ರಮೇಶ್ ಜಾರಕಿಹೊಳಿ ಕ್ಷೇತ್ರದಲ್ಲಿ ಪ್ರಚಾರ ಮಾಡಿದ ಬಳಿಕ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನಿವಾಸಕ್ಕೆ ತೆರಳಿದಾಗ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಎಂಎಲ್‌ಸಿ ಲಖನ್ ಜಾರಕಿಹೊಳಿ ಜತೆ ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಮನೆಯಲ್ಲಿಯೇ ಎಲ್ಲರೂ ಒಟ್ಟಾಗಿ ಭೋಜನ ಮಾಡಿದ್ದಾರೆ.
ಇದನ್ನೂ ಓದಿ | ಅವನ್ಯಾವನೋ ಅರುಣ್ ಶಹಾಪುರ ಅಂತಿದ್ದಾನಲ್ಲಾ ಮುಖ ತೋರ್ಸಿದ್ದಾನಾ?: ಸಿದ್ದರಾಮಯ್ಯ
ರಮೇಶ್ ಜಾರಕಿಹೊಳಿಗೆ ಶೀಘ್ರವೇ ಸಚಿವ ಸ್ಥಾನ ನೀಡುವ ಭರವಸೆ ವ್ಯಕ್ತಪಡಿಸಿರುವ ಕಟೀಲ್, ಪರಿಷತ್ ಚುನಾವಣೆ ಹಿನ್ನೆಲೆ ಸದ್ಯಕ್ಕೆ ಸಂಪುಟ ವಿಸ್ತರಣೆ ಆಗಿಲ್ಲ. ಪಕ್ಷದ ಮುಂದೆ ಈ ವಿಚಾರ ಇದ್ದು, ಆದಷ್ಟು ಬೇಗ ನಿರ್ಣಯ ಆಗುತ್ತದೆ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ಮುನ್ನವೇ ಸಂಪುಟ ವಿಸ್ತರಣೆಯಾಗುವ ನಿರೀಕ್ಷೆ ಇದೆ. ಈ ವೇಳೆ ನಿಶ್ಚಿತವಾಗಿ ಮಂತ್ರಿ ಸ್ಥಾನ ಸಿಗುತ್ತದೆ ಎಂದು ತಿಳಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಗೃಹ ಸಚಿವ ಅಮಿತ್ ಶಾ ಅವರನ್ನು ಕರೆಸಿ ದೊಡ್ಡ ಮಟ್ಟದಲ್ಲಿ ಅಹಿಂದ ಸಮಾವೇಶ ನಡೆಸಲು ರಮೇಶ್ ಜಾರಕಿಹೊಳಿ ಪ್ಲ್ಯಾನ್ ಮಾಡಿರುವುದರಿಂದ ಈ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಅಮಿತ್ ಶಾ ದಿನಾಂಕ ಫೈನಲ್ ಮಾಡಿದ ಮೇಲೆ ದೊಡ್ಡಮಟ್ಟದ ಅಹಿಂದ ಸಮಾವೇಶ ನಡೆಸಲು ಸಮ್ಮತಿ ಸೂಚಿಸಿದ್ದಾರೆ. ಜಿಲ್ಲೆಯ ನಾಯಕರ ಜತೆ ಏನೇ ಭಿನ್ನಮತ ಇದ್ದರೂ ಪಕ್ಷ ಸಂಘಟನೆಗೆ ಶ್ರಮಿಸಬೇಕು. ಬಿಜೆಪಿ ಸರ್ಕಾರ ಬರಲು ನಿಮ್ಮ ಕೊಡುಗೆ ಇದೆ. ಮುಂದಿನ ದಿನಗಳಲ್ಲಿ ನಿಶ್ಚಿತವಾಗಿ ಒಳ್ಳೆಯದಾಗುತ್ತೆ ಎಂದು ಜಾರಕಿಹೊಳಿ ಸಹೋದರರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ | ಭ್ರಷ್ಟರ, ಕ್ರಿಮಿನಲ್‌ಗಳ, ಉಗ್ರವಾದಿಗಳ ಪಾರ್ಟಿ ಕಾಂಗ್ರೆಸ್: ನಳೀನ್ ಕುಮಾರ್ ಕಟೀಲ್