Site icon Vistara News

Namma Metro | ನಮ್ಮ ಮೆಟ್ರೋ ಮತ್ತಷ್ಟು ಸ್ಮಾರ್ಟ್‌; ಟೋಕನ್‌ಗಾಗಿ ನಿಲ್ಲಬೇಕಿಲ್ಲ ಕ್ಯೂ, ಮೊಬೈಲ್‌ನಲ್ಲೇ ಟಿಕೆಟ್‌ ಬುಕ್ಕಿಂಗ್‌

namma metro

ಬೆಂಗಳೂರು: ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನವೆಂಬರ್ 1 ರಿಂದ ಬಿಎಂಆರ್‌ಸಿಎಲ್‌ ನಿಗಮವು ನಮ್ಮ ಮೆಟ್ರೋದ (Namma Metro) ಪ್ರಯಾಣಿಕರಿಗೆ ಹೆಚ್ಚುವರಿ ಅನುಕೂಲಗಳನ್ನು ಕಲ್ಪಿಸುತ್ತಿದೆ. ಸ್ಮಾರ್ಟ್ ಫೋನ್ ಹೊಂದಿರುವ ಮೆಟ್ರೋ ಪ್ರಯಾಣಿಕರು ಟೋಕನ್ ಖರೀದಿಸಲು ಟಿಕೆಟ್‌ ಕೌಂಟರ್‌ಗಳ ಮುಂದೆ ನಿಲ್ಲುವ ಅಗತ್ಯವಿರುವುದಿಲ್ಲ. ಏಕೆಂದರೆ ನಮ್ಮ ಮೆಟ್ರೋ ಮತ್ತಷ್ಟು ಸ್ಮಾರ್ಟ್‌ ಆಗುತ್ತಿದ್ದು, QR ಮೂಲಕ ಟಿಕೆಟ್‌ ಪಡೆಯಬಹುದಾಗಿದೆ.

ಏಕ ಪ್ರಯಾಣದ QR ಟಿಕೆಟ್‌ಗಳು
ಒಂದೇ ಪ್ರಯಾಣದ QR ಟಿಕೆಟ್‌ಗಳನ್ನು ಆನ್‌ಲೈನ್‌ ಮೂಲಕ ಖರೀದಿಸಲು ಪ್ರಯಾಣಿಕರು ಸ್ಮಾರ್ಟ್‌ ಫೋನ್‌ ಅನ್ನು ಹೊಂದಿರಬೇಕು. ಕ್ಯೂಆರ್ ಟಿಕೆಟ್‌ಗಳನ್ನು ಖರೀದಿಸಲು ಪ್ರಯಾಣಿಕರು ಆ್ಯಂಡ್ರಾಯ್ಡ್ ಓಎಸ್ ಹೊಂದಿರುವ ಮೊಬೈಲ್‌ನಿಂದ ಪ್ಲೇಸ್ಟೋರ್‌ನಿಂದ ನಮ್ಮ ಮೆಟ್ರೋ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ನೋಂದಾಯಿಸಿಕೊಳ್ಳಬಹುದು.

ವಾಟ್ಸ್‌ಆ್ಯಪ್‌ನಲ್ಲೂ ಟಿಕೆಟ್‌ ಬುಕ್‌ ಮಾಡಿ
ಅಧಿಕೃತ ಬಿಎಂಆರ್‌ಸಿಎಲ್‌ನ WhatsApp ಚಾಟ್‌ಬಾಟ್ ಮೊಬೈಲ್ ಸಂಖ್ಯೆ- 8105556677 ಅನ್ನು ಸೇವ್ ಮಾಡಿಕೊಂಡು ಆ ಸಂಖ್ಯೆಗೆ “ಹಾಯ್” ಎಂಬ ಸಂದೇಶವನ್ನು ಕಳುಹಿಸುವ ಮೂಲಕ QR ಟಿಕೆಟ್‌ಗಳನ್ನು ಖರೀದಿಸಬಹುದು. ಆ್ಯಂಡ್ರಾಯ್ಡ್ ಮತ್ತು ಐಓಸ್ ಮೊಬೈಲ್ ಬಳಕೆದಾರರಿಗೆ ಚಾಟ್‌ಬಾಟ್ (Chatbot) ಕನ್ನಡ ಮತ್ತು ಆಂಗ್ಲ ಎರಡೂ ಭಾಷೆಗಳಲ್ಲಿ ಲಭ್ಯವಿದೆ. ಬಿಎಂಆರ್‌ಸಿಎಲ್ ಗ್ಲೋಬಲ್‌ ಟ್ರಾನ್ಸಿಟ್ ಸ್ಪೇಸ್‌ ವ್ಯವಸ್ಥೆಯಡಿ ವಾಟ್ಸ್‌ಆ್ಯಪ್‌ (WhatsApp) ನಲ್ಲಿ ಎಂಡ್-ಟು-ಎಂಡ್ ಟಿಕೆಟ್‌ ಬುಕ್ಕಿಂಗ್‌ ವ್ಯವಸ್ಥೆಯನ್ನು ಪರಿಚಯಿಸಿದ ಮೊದಲ ಮೆಟ್ರೋ ಇದಾಗಿದೆ.

ವಾಟ್ಸ್‌ಆ್ಯಪ್‌ನ ಚಾಟ್‌ಬಾಟ್ (Chatbot) ನಲ್ಲಿ ಲಭ್ಯವಿರುವ ವೈಶಿಷ್ಟ್ಯಗಳು
ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಸಂವಹನ ಮಾಡುವ ಆಯ್ಕೆಗಳು ಇದ್ದು, QR ಟಿಕೆಟ್‌ಗಳ ಖರೀದಿ, ಮೆಟ್ರೋ ಸ್ಮಾರ್ಟ್ ಕಾರ್ಡ್‌ಗಳ ರೀಚಾರ್ಜ್‌ ಮಾಡಬಹುದು. ಜತೆಗೆ ಮೆಟ್ರೋ ನಿಲ್ದಾಣದ ಮಾಹಿತಿ, ವಿವಿಧ ನಿಲ್ದಾಣಗಳಲ್ಲಿ ರೈಲು ಹೊರಡುವ ಸಮಯದ ಮಾಹಿತಿ ಹಾಗೂ ಯಾವುದೇ ಎರಡು ನಿಲ್ದಾಣಗಳ ನಡುವಿನ ದರದ ಮಾಹಿತಿ ಲಭ್ಯವಿರಲಿದೆ.

QR ಟಿಕೆಟ್ ಹೇಗೆ ಬಳಸುವುದು?
ಪ್ರಯಾಣಿಕರು ದಿನದ ಪ್ರವೇಶ ಮತ್ತು ನಿರ್ಗಮನದ ನಿಲ್ದಾಣವನ್ನು ನಿರ್ದಿಷ್ಟಪಡಿಸಿಕೊಂಡು ನಮ್ಮ ಮೆಟ್ರೋ ಅಪ್ಲಿಕೇಶನ್ ಅಥವಾ WhatsApp ನಲ್ಲಿ QR ಟಿಕೆಟ್ ಪಡೆಯಬಹುದು. ನಿಲ್ದಾಣಗಳಲ್ಲಿನ ಸ್ವಯಂಚಾಲಿತ ಗೇಟ್‌ಗಳಲ್ಲಿ ಅಳವಡಿಸಿರುವ ಕ್ಯೂಆ‌ರ್‌ ರೀಡರ್‌ಗಳಿಗೆ ಮೊಬೈಲ್ ಫೋನ್‌ನಲ್ಲಿರುವ QR ಟಿಕೆಟ್‌ಗಳನ್ನು ತೋರಿಸಿ ಸ್ಕ್ಯಾನ್‌ ಮಾಡುವ ಮೂಲಕ ಪ್ರವೇಶ ಮತ್ತು ನಿರ್ಗಮನವನ್ನು ಸುಲಲಿತವಾಗಿ ಮಾಡಬಹುದು.

ಮೊಬೈಲ್ ಮೂಲಕ ಟಿಕೆಟ್‌ ಖರೀದಿಸಿ ಪ್ರಯಾಣ ಮಾಡದಿದ್ದರೆ, ಅದೇ ದಿನದಂದು ಟಿಕೆಟ್ ರದ್ದು ಮಾಡಿ, ಹಣವನ್ನು ಸಹ ವಾಪಸ್‌ ಪಡೆಯಬಹುದು. QR ಟಿಕೆಟ್‌ಗಳನ್ನು ಟೋಕನ್ ದರಕ್ಕಿಂತ 5% ರಿಯಾಯಿತಿಯಲ್ಲಿ ನೀಡಲಾಗುತ್ತಿದೆ. ಹೀಗಾಗಿ ಒಮ್ಮೆ ಬುಕ್ಕಿಂಗ್‌ ಮಾಡಿದ ಟಿಕೆಟ್‌ಗೆ ಒಂದು ದಿನ ವ್ಯಾಲಿಡಿಟಿ ಇರಲಿದೆ.

ಇದನ್ನೂ ಓದಿ | ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಯೋಜನೆಗೆ 9,000 ಮರಗಳಿಗೆ ಕೊಡಲಿ

Exit mobile version