ರಾಯಚೂರು: ಬಿಜೆಪಿ ಹಿರಿಯ ಮುಖಂಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಇಬ್ಬರು ಗಂಡು ಮಕ್ಕಳಿಗೆ ರಾಘವೇಂದ್ರ ಮತ್ತು ವಿಜಯೇಂದ್ರ ಎಂದು ಯಾವ ಕಾರಣಕ್ಕಾಗಿ ನಾಮಕರಣ ಮಾಡಲಾಗಿದೆ ಎಂಬ ಬಗ್ಗೆ ಗುಟ್ಟನ್ನು (Name Secret) ಬಿಟ್ಟುಕೊಟ್ಟಿದ್ದಾರೆ. ಶ್ರೀ ಗುರು ರಾಘವೇಂದ್ರ ಶ್ರೀಗಳ 351ನೇ ಆರಾಧನಾ ಮಹೋತ್ಸವ ನಿಮಿತ್ತ ಕುಟುಂಬ ಸಮೇತರಾಗಿ ಆಗಮಿಸಿದ್ದ ವೇಳೆ ಬಿಎಸ್‌ವೈ ಮನಬಿಚ್ಚಿ ಮಾತನಾಡಿದ್ದಾರೆ.
ನಾವು ಮಂತ್ರಾಲಯಕ್ಕೆ ಮೊದಲಿನಿಂದಲೂ ನಡೆದುಕೊಳ್ಳುತ್ತೇವೆ. ರಾಯರ ಅನುಗ್ರಹದಿಂದ ಜನಿಸಿದ ಮೊದಲ ಮಗನಿಗೆ ರಾಘವೇಂದ್ರ ಎಂದು ನಾಮಕರಣ ಮಾಡಿದ್ದೆವು. ಕಾರಣ, ಒಮ್ಮೆ ರಾಯರು ನಮ್ಮ ಕನಸಿನಲ್ಲಿ ಬಂದಿದ್ದರು. ಈ ಕಾರಣಕ್ಕಾಗಿ ನಾವು ದಂಪತಿ ನಿರ್ಧರಿಸಿ ರಾಘವೇಂದ್ರ ಎಂದು ಹೆಸರಿಟ್ಟೆವು ಎಂದು ಯಡಿಯೂರಪ್ಪ ಹೇಳಿದ್ದಾರೆ.
ವಿಜಯೇಂದ್ರ ನಾಮಕರಣಕ್ಕೆ ಕಾರಣ ತಿಳಿಸಿದ ಬಿಎಸ್‌ವೈ
ನಾನು ಮತ್ತು ಪತ್ನಿ ರಾಯರ ಮಠದಲ್ಲಿ 18 ದಿನ ವಾಸ್ತವ್ಯ ಹೂಡಿದ್ದೆವು. ಆ ಸಂದರ್ಭದಲ್ಲಿ ವಿಜಯ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದೆವು. ಅಲ್ಲಿಂದ ತೆರಳಿದ ಬಳಿಕ ಎರಡನೇ ಪುತ್ರ ಜನಿಸಿದ್ದು, ರಾಯರ ಮಠದ ಗುರುಪರಂಪರೆಯಲ್ಲಿ ವಿಜಯೇಂದ್ರ ತೀರ್ಥರ ಅನುಗ್ರಹವೂ ನಮ್ಮ ಮೇಲೆ ಇದ್ದರಿಂದ ಎರಡನೇ ಪುತ್ರನಿಗೆ ವಿಜಯೇಂದ್ರ ಎಂದು ನಾಮಕರಣ ಮಾಡಿದೆವು ಎಂಬ ಸ್ವಾರಸ್ಯಕರ ಸಂಗತಿಯನ್ನು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ | B. S. Yediyurappa | ಮಂತ್ರಾಲಯ ಮಠಕ್ಕೆ ಕುಟುಂಬಸ್ಥರ ಜತೆ ಆಗಮಿಸಿದ ಮಾಜಿ ಸಿಎಂ ಬಿಎಸ್‌ವೈ