Site icon Vistara News

Name uncoding | ಮೈಸೂರಿನಲ್ಲಿ ಜನಿಸಿದ ಲಕ್ಷ್ಮೀ ಪುತ್ರ ದತ್ತಾತ್ರೇಯನ ಹೆಸರಿನ ಹಿಂದಿದೆಯಾ ಕುತೂಹಲಕಾರಿ ಕಥೆ?

ರಂಗಸ್ವಾಮಿ ಎಂ.ಮಾದಾಪುರ, ವಿಸ್ತಾರ ನ್ಯೂಸ್‌ ಮೈಸೂರು
ಶ್ರೀ ದತ್ತಾತ್ರೇಯ: ಈ ಹೆಸರು ಈಗ ಸಿಕ್ಕಾಪಟ್ಟೆ ಪ್ರಸಿದ್ಧಿಯಲ್ಲಿದೆ. ಮೈಸೂರಿನ ದಸರಾ ಮಹೋತ್ಸವಕ್ಕೆ ಬಂದ ಆನೆ ಲಕ್ಷ್ಮಿ ಅರಮನೆಯ ಆವರಣದಲ್ಲೇ ಗಂಡು ಮರಿಗೆ ಜನ್ಮ ನೀಡಿದ್ದಾಳೆ. ಈ ಮರಿಗೆ ಶ್ರೀ ದತ್ತಾತ್ರೇಯ ಎಂದು ನಾಮಕಾರಣ ಮಾಡಲಾಗಿದೆ. ಆರಣ್ಯ ಇಲಾಖೆ ಕೋರಿಕೆ ಮೇರೆಗೆ ಮರಿ ಆನೆಗೆ ನಾಮಕಾರಣ ಮಾಡಿದವರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್. ಈ ಹೆಸರು ಹೇಗೆ ಹೊಳೆದಿರಬಹುದು ಎನ್ನುವ ಬಗ್ಗೆ ಮೈಸೂರಿನಲ್ಲಿ ಆಸಕ್ತಿದಾಯಕ ಕಥನಗಳ ಚರ್ಚೆ ಆಗುತ್ತಿವೆ.

ಇತ್ತೀಚೆಗೆ ಅರಮನೆ ಅಂಗಳದಲ್ಲಿ ದಸರಾ ಆನೆ ಲಕ್ಷ್ಮಿ ಗಂಡು ಮರಿಗೆ ಜನ್ಮ ನೀಡಿತ್ತು. ಇದಕ್ಕೆ ಮರುದಿನ ಮುಂಜಾನೆಯೇ ಆನೆ ಲಾಯಕ್ಕೆ ಬಂದು ನೋಡಿ ಹೋಗಿದ್ದ ಪ್ರಮೋದಾದೇವಿ ಒಡೆಯರ್, ಮಾನವ ಸಹಜವಾದ ಆಸಕ್ತಿ ತೋರಿಸಿದ್ದರು. ಪುಟಾಣಿ ಆನೆಗೆ ಸೂಕ್ತ ಹೆಸರು ಸೂಚಿಸುವಂತೆ ಅರಣ್ಯಾಧಿಕಾರಿಗಳು ಪ್ರಮೋದಾದೇವಿ ಒಡೆಯರ್ ಅವರಿಗೆ ಮನವಿ ಮಾಡಿದ್ದರು. ಅವರ ಶಿಫಾರಸ್ಸಿನಂತೆ ಶ್ರೀದತ್ತಾತ್ರೇಯ ಎಂದು ನಾಮಕಾರಣ ಮಾಡಲಾಗಿದೆ.

ಅರಣ್ಯ ಇಲಾಖೆಯ ಕ್ಯಾಂಪ್​ನಲ್ಲಿರುವ ಎಲ್ಲ ಆನೆಗಳಿಗೂ ಗೋಪಾಲಕೃಷ್ಣ, ಬಲರಾಮ, ಅರ್ಜುನ, ಅಭಿಮನ್ಯು ಹೀಗೆ ಪೌರಾಣಿಕ ಹಿನ್ನೆಲೆಯ ಹೆಸರುಗಳನ್ನೇ ಇಡುವುದು ಮಾಮೂಲು. ಅದರಂತೆ ಲಕ್ಷ್ಮಿಪುತ್ರನಿಗೂ ಶ್ರೀ ದತ್ತಾತ್ರೇಯ ಎಂಬುದು ಹಿಂದೂ ದೇವರ ಹೆಸರು ಇಡಲಾಗಿದೆ.

ಆದರೆ, ಈ ಹೆಸರನ್ನು ವಿಶ್ಲೇಷಿಸಿದಾಗ ಅದರ ಹಿಂದೆ ಹೊಸ ಕಥೆಯೊಂದು ತೆರೆದುಕೊಳ್ಳುತ್ತದೆ. ದತ್ತಾತ್ರೇಯ ಎನ್ನುವುದು ದೇವರ ಪೂರ್ಣ ಹೆಸರೇ ಆದರೂ ಇದರಲ್ಲಿ ಮೈಸೂರು ಸಂಸ್ಥಾನದ ಈ ಹಿಂದಿನ ರಾಜರಾಗಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರ ಹೆಸರಿನಲ್ಲಿರುವ ʻದತ್ತʼ ಎಂಬ ಹೆಸರೂ ಬಂದಿದೆ. ಇದರ ಇನ್ನೊಂದು ಭಾಗವಾಗಿರುವ ʻಆತ್ರೇಯʼ ಎನ್ನುವುದು ಅರಮನೆ ಕುಟುಂಬ ಸೇರಿದ ಗೋತ್ರದ ಹೆಸರು. ಶ್ರೀಕಂಠ ʻದತ್ತʼರ ಹೆಸರಿನ ದತ್ತ ಮತ್ತು ಆತ್ರೇಯ ಗೋತ್ರ ಸೇರಿ ದತ್ತಾತ್ರೇಯ ಆಗಿರುವುದು ವಿಸ್ಮಯ. ರಾಜಮಾತೆಯವರು ಇದನ್ನು ಯೋಚಿಸಿ ಹೆಸರಿಟ್ಟರೋ ಅಥವಾ ಅರಿವಿಲ್ಲದೆ ಈ ಒಳ್ಳೆಯ ಕಾಂಬಿನೇಷನ್‌ ಸೃಷ್ಟಿಯಾಗಿದೆಯಾ ಎನ್ನುವುದು ಗೊತ್ತಿಲ್ಲ. ಅಂತೂ ಹೆಸರಂತೂ ಗಮನ ಸೆಳೆದಿದೆ.

ಅರಮನೆ ಕುಟುಂಬದ ಗೋತ್ರ ಆತ್ರೇಯ ಎನ್ನುವುದನ್ನು ಇಲ್ಲಿ ಉಲ್ಲೇಖಿಸಲಾಗಿದೆ.

ಹೆಸರಿಡುವುದರಲ್ಲಿ ಎಕ್ಸ್‌ಪರ್ಟ್‌!
ಪುತ್ರ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಸೊಸೆ ತ್ರಿಷಿಕಾ ಕುಮಾರಿ ಒಡೆಯರ್ ದಂಪತಿಯ ಏಕೈಕ ಪುತ್ರ ಅಂದರೆ ತಮ್ಮ ಮೊಮ್ಮಗನಿಗೆ ಆದ್ಯವೀರ ನರಸಿಂಹರಾಜ ಒಡೆಯರ್ ಎಂಬ ಹೆಸರು ಅಂತಿಮಗೊಳಿಸಿದವರೂ ಪ್ರಮೋದಾದೇವಿ ಒಡೆಯರ್. ಮೈಸೂರು ಸಂಸ್ಥಾನದ ಮೊದಲ ರಾಜ ಆದಿ ಯದುರಾಯರ ಹೆಸರಿನಿಂದ ಆದ್ಯ, ಯದುವೀರ ಕೃಷ್ಣದತ್ತ ಹೆಸರಿನಿಂದ ವೀರ್ ಹಾಗೂ ಪತಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಹೆಸರಿನಿಂದ ನರಸಿಂಹರಾಜ ಮತ್ತು ಮನೆತನದ ಹೆಸರು ಒಡೆಯರ್ ಎಲ್ಲವನ್ನೂ ಸೇರಿಸಿ ಆದ್ಯವೀರ ನರಸಿಂಹರಾಜ ಒಡೆಯರ್ ಎಂದು ಹೆಸರು ಇಟ್ಟಿದ್ದರು.

ಪತಿಯ ಮೇಲೆ ಸದಾ ಪ್ರೀತಿ
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್(1952- 2012) ಮೈಸೂರು ಸಾಮ್ರಾಜ್ಯದ 26ನೇ ಯುವರಾಜ. ಅವರ ತಂದೆ ಜಯಚಾಮರಾಜ ಒಡೆಯರ್(1919-1974) ಅವರ ಕಾಲದಲ್ಲೇ ರಾಜಾಳ್ವಿಕೆ ಅಳಿದು ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂತು. ಜಯಚಾಮರಾಜ ಒಡೆಯರ್ ಬದುಕಿದ್ದಾಗಲೇ ಮೈಸೂರು ಸಂಸ್ಥಾನದ ಅಧಿಕಾರ ಮುಕ್ತಾಯವಾಯಿತು. ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರಿಗೆ ರಾಜನಾಗಿ ಆಳ್ವಿಕೆ ನಡೆಸುವ ಅವಕಾಶವೇ ಸಿಗಲಿಲ್ಲ. ಆದರೆ ಸಂಸದರಾಗಿ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಗಮನಾರ್ಹ ಕೆಲಸ ಮಾಡಿದರು. ಅವರ ಪತ್ನಿ ಪ್ರಮೋದಾದೇವಿ ಒಡೆಯರ್ ಅವಕಾಶ ಸಿಕ್ಕಾಗೆಲ್ಲ ಪತಿ ಮೇಲಿನ ಪ್ರೀತಿಯನ್ನು ಅಭಿವ್ಯಕ್ತಪಡಿಸುತ್ತಲೇ ಬಂದಿದ್ದಾರೆ.

ವಿಷ್ಣುವಿನ ಆರಾಧಕರಾದರೂ ಶ್ರೀಕಂಠನೆಂಬ ಹೆಸರೇಕೆ?
ಮೈಸೂರು ರಾಜವಂಶಸ್ಥರು ವಿಷ್ಣುವಿನ ಆರಾಧಕರು. ವೈಷ್ಣವ ಪರಂಪರೆಯ ಸಂಪ್ರದಾಯಗಳಂತೆಯೇ ಎಲ್ಲ ಪೂಜೆ, ಪುನಸ್ಕಾರಗಳಲ್ಲೂ ಅಳವಡಿಸಿಕೊಂಡಿದ್ದಾರೆ. ಆದಿ ಯದುರಾಯರಿಂದ ಜಯಚಾಮರಾಜ ಒಡೆಯರ್​ವರೆಗೆ ಎಲ್ಲರಿಗೂ ವೈಷ್ಣವ ಪರಂಪರೆಯ ಹೆಸರುಗಳೇ ಇರುವುದನ್ನು ಗಮನಿಸಬಹುದು. ಆದರೆ ಶ್ರೀಕಂಠ ಎಂಬುದು ಶೈವ ಪರಂಪರೆಯ ಸೂಚಕ. ಹಲವು ವರ್ಷಗಳ ಹರಕೆ, ಪೂಜೆಗಳ ಫಲವಾಗಿ ಪುತ್ರ ಸಂತಾನ ಪ್ರಾಪ್ತಿಯಾದ ಪರಿಣಾಮ, ಜಯಚಾಮರಾಜ ಒಡೆಯರ್ ಶ್ರೀತಿನೇಶ್ವರ ದೇವಾಲಯಕ್ಕೆ 11 ಕೆ.ಜಿ. ಅಪರಂಜಿ ಚಿನ್ನದ ಕೊಳಗ(ಶಿವನ ಮುಖವಾಡ) ಮಾಡಿಸಿಕೊಟ್ಟರು ಎಂಬುದು ಐತಿಹಾಸಿಕ ಪ್ರಸಂಗ.

Exit mobile version