Site icon Vistara News

Namma Clinic | ಡಿ.14ರಂದು 114 ‘ನಮ್ಮ ಕ್ಲಿನಿಕ್‌’ ಉದ್ಘಾಟನೆ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌

K Sudhakar

ಬೆಂಗಳೂರು: ನಗರ ಪ್ರದೇಶದ ಬಡ ಜನರ ಆರೋಗ್ಯ ಸಂಜೀವಿನಿಯಾಗಿ ಕಾರ್ಯನಿರ್ವಹಿಸುವ ನಮ್ಮ ಕ್ಲಿನಿಕ್‌ಗಳು (Namma Clinic) ಡಿಸೆಂಬರ್‌ 14ರಂದು ಬೆಳಗ್ಗೆ 11 ಗಂಟೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಲೋಕಾರ್ಪಣೆಯಾಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಮ್ಮ ಕ್ಲಿನಿಕ್‌ಗಳನ್ನು ಉದ್ಘಾಟಿಸಲಿದ್ದಾರೆ. ಆರಂಭದಲ್ಲಿ 114 ಕ್ಲಿನಿಕ್‌ಗಳು ಏಕ ಕಾಲಕ್ಕೆ ಲೋಕಾರ್ಪಣೆಯಾಗಲಿವೆ. ರಾಜ್ಯದಲ್ಲಿ ಒಟ್ಟು 438 ನಮ್ಮ ಕ್ಲಿನಿಕ್‌ಗಳನ್ನು ಆರಂಭಿಸಲು ಸರ್ಕಾರ ಯೋಜನೆ ರೂಪಿಸಿದ್ದು, ಜನವರಿ ಅಂತ್ಯಕ್ಕೆ ಎಲ್ಲವೂ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 243 ನಮ್ಮ ಕ್ಲಿನಿಕ್‌ಗಳು ಕಾರ್ಯಚರಣೆ ಮಾಡಲಿದ್ದು, ಜನವರಿ ಎರಡನೇ ವಾರದೊಳಗೆ ಇವುಗಳು ಜನ ಸೇವೆಗೆ ಲಭ್ಯವಾಗುವಂತೆ ಕೆಲಸ ನಡೆಯುತ್ತಿದೆ. ಕನಿಷ್ಠ 150 ಕ್ಲಿನಿಕ್‌ಗಳು ಜನರ ಸೇವೆಗೆ ಲಭ್ಯವಿರುವುದು ಖಚಿತ. ಈ ಕ್ಲಿನಿಕ್‌ಗಳಿಂದ ದುರ್ಬಲ ವರ್ಗ, ಶ್ರಮಕರು, ಕೂಲಿ ಕಾರ್ಮಿಕರು ಸೇರಿ ಹಲವರಿಗೆ ಆರೋಗ್ಯ ಸೇವೆ ಸಿಗಲಿದೆ. 10 ರಿಂದ 20 ಸಾವಿರ ಜನಸಂಖ್ಯೆಗೆ ಒಂದರಂತೆ ನಮ್ಮ ಕ್ಲಿನಿಕ್‌ಗಳು ಆರಂಭವಾಗಲಿದೆ ಎಂದು ಹೇಳಿದರು.

ಇದನ್ನೂ ಓದಿ | Zika virus | ರಾಜ್ಯದಲ್ಲಿ ಮೊದಲ ಝಿಕಾ ವೈರಸ್ ರಾಯಚೂರಿನಲ್ಲಿ ಪತ್ತೆ; 5 ವರ್ಷದ ಬಾಲಕಿಗೆ ಪಾಸಿಟಿವ್‌

ನಮ್ಮ ಕ್ಲಿನಿಕ್‌ಗಳಲ್ಲಿ 12 ರೀತಿಯ ಆರೋಗ್ಯ ಸೇವೆಗಳು ಲಭ್ಯವಿರುತ್ತವೆ. ತಲಾ ಒಬ್ಬ ವೈದ್ಯಾಧಿಕಾರಿ, ನರ್ಸಿಂಗ್‌ ಸ್ಟಾಫ್‌, ಲ್ಯಾಬ್‌ ಟೆಕ್ನಿಷಿಯನ್‌, ಡಿ ದರ್ಜೆ ನೌಕರರು ಇಲ್ಲಿ ಇರಲಿದ್ದಾರೆ. ಗರ್ಭಿಣಿ ಮತ್ತು ಜನನ ಸಮಯದ ಆರೈಕೆ, ನವಜಾತ ಶಿಶುವಿನ ಸಮಗ್ರ ಆರೈಕೆ, ಬಾಲ್ಯ ಮತ್ತು ಹದಿಹರೆಯದವರಿಗೆ ಸೇವೆಗಳು, ಸಾರ್ವತ್ರಿಕ ಲಸಿಕಾಕರಣದ ಸೇವೆಗಳು, ಕುಟುಂಬ ಕಲ್ಯಾಣ ಗರ್ಭ ನಿರೋಧಕ ಸೇವೆಗಳು, ಸಾಂಕ್ರಾಮಿಕ ರೋಗಗಳ ನಿರ್ವಹಣೆ, ಸಾಮಾನ್ಯ ಮತ್ತು ಸಣ್ಣ ಪ್ರಮಾಣದ ಕಾಯಿಲೆಗಳಿಗೆ ಸೇವೆ, ಮಧುಮೇಹ, ರಕ್ತದೊತ್ತಡಕ್ಕೆ ಚಿಕಿತ್ಸೆ , ಸಕ್ಕರೆ ಕಾಯಿಲೆ, ದೀರ್ಘಾವಧಿ ಕಾಯಿಲೆಗಳು, ಬಾಯಿ, ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್‌, ಬಾಯಿಯ ಆರೋಗ್ಯ ಸಮಸ್ಯೆಗಳು ಮತ್ತು ಸೇವೆಗಳು, ಕಣ್ಣಿನ ತಪಾಸಣೆ, ಮೆಂಟಲ್‌ ಹೆಲ್ತ್‌ಗೆ ಸಂಬಂಧಿಸಿದ ಮೂಲಭೂತ ಸೇವೆಗಳು ಸೇರಿದಂತೆ ಬೇರೆ ಆಸ್ಪತ್ರೆಗಳಿಗೆ ರೆಫರಲ್‌ ಸೇವೆಗಳು ಇಲ್ಲಿ ಲಭ್ಯವಾಗಲಿದೆ ಎಂದರು.

ವೃದ್ಧಾಪ್ಯ ಆರೈಕೆ, ತುರ್ತು ವೈದ್ಯಕೀಯ ಸೇವೆಗಳು, ಉಚಿತ ಆರೋಗ್ಯ ತಪಾಸಣೆ ಸೇರಿ ಔಷಧಗಳು ಸಂಪೂರ್ಣ ಉಚಿತವಾಗಿರಲಿದೆ. 14 ಪ್ರಯೋಗ ಶಾಲಾ ಪರೀಕ್ಷೆಗಳು ಇಲ್ಲಿ ಲಭ್ಯವಿದ್ದು, ಟೆಲಿ ಕನ್ಸಲ್ಟೇಷನ್‌ ಸರ್ವೀಸಸ್‌, ಕ್ಷೇಮ ಚಟುವಟಿಕೆಗಳು ಕೂಡ ಉಚಿತವಾಗಿವೆ. ಸೋಮವಾರದಿಂದ ಶನಿವಾರದ ತನಕ ಬೆಳಗ್ಗೆ 9 ರಿಂದ ಸಂಜೆ 4.30ರ ತನಕ ಈ ಸೇವೆ ಲಭ್ಯವಿದ್ದು, ಭಾನುವಾರ ರಜೆ ಇರಲಿದೆ. ಬಡಾವಣೆಯ ವ್ಯಾಪ್ತಿಯಲ್ಲಿ ಈ ಕ್ಲಿನಿಕ್‌ಗಳು ತಲೆ ಎತ್ತುವುದರಿಂದ ಸುಲಭವಾಗಿ ಆರೋಗ್ಯ ಸೇವೆ ಸಿಗಲಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಒಂದೇ ಸಮಯದಲ್ಲಿ 100ಕ್ಕೂ ಹೆಚ್ಚು ಕ್ಲಿನಿಕ್‌ಗಳು ಉದ್ಘಾಟನೆ ಆಗುತ್ತಿರುವುದು ಸಾರ್ವಕಾಲಿಕ ದಾಖಲೆಯಾಗಲಿದೆ ಎಂದರು.

ಒಟ್ಟು 150 ಕೋಟಿ ರೂಪಾಯಿ ಮೊತ್ತದ ಯೋಜನೆ ಇದಾಗಿದ್ದು, ಬಹುತೇಕ ಕ್ಲಿನಿಕ್‌ಗಳು ಸರ್ಕಾರಿ ಕಟ್ಟಡಗಳಲ್ಲೇ ಕಾರ್ಯ ಆರಂಭಿಸಲಿದೆ. ಈಗಾಗಲೇ 300 ವೈದ್ಯರ ನೇಮಕವಾಗಿದ್ದು, ಕೆಲವೆಡೆ ವೈದ್ಯರ ಕೊರತೆ ಇದೆ. ಅಂತಹ ಕಡೆ ಪರ್ಯಾಯ ವ್ಯವಸ್ಥೆ ಮಾಡಲಾಗಿದ್ದು, ಕಡ್ಡಾಯ ಗ್ರಾಮೀಣ ಸೇವೆಯಲ್ಲಿರುವ 80-100 ವೈದ್ಯರನ್ನು ಅಲ್ಲಿಗೆ ನೇಮಿಸಲಾಗಿದೆ ಎಂದು ತಿಳಿಸಿದರು.

ಎಲ್ಲಿ, ಎಷ್ಟು ಕ್ಲಿನಿಕ್‌ಗಳು?
ಬಾಗಲಕೋಟೆ 18, ಬಳ್ಳಾರಿ 11, ವಿಜಯನಗರ 6, ಬೆಳಗಾವಿ 21, ಬೆಂಗಳೂರು ಗ್ರಾಮಾಂತರ 9, ಬೀದರ್‌ 6, ಚಾಮರಾಜನಗರ 3, ಚಿಕ್ಕಬಳ್ಳಾಪುರ 3, ಚಿಕ್ಕಮಗಳೂರು 4, ಚಿತ್ರದುರ್ಗ 1, ದಕ್ಷಿಣ ಕನ್ನಡ 12, ದಾವಣಗೆರೆ 1, ಧಾರವಾಡ 6, ಗದಗ 11, ಹಾಸನ 5, ಹಾವೇರಿ 5, ಕಲಬುರ್ಗಿ 11, ಕೊಡಗು 1, ಕೋಲಾರ 3, ಕೊಪ್ಪಳ 3, ಮಂಡ್ಯ 4, ಮೈಸೂರು 6, ರಾಯಚೂರು 8, ರಾಮನಗರ 3, ತುಮಕೂರು 10, ಉಡುಪಿ 10, ಉತ್ತರ ಕನ್ನಡ 10, ವಿಜಯಪುರ 10, ಯಾದಗಿರಿ 3, ಬಿಬಿಎಂಪಿ ವ್ಯಾಪ್ತಿಯಲ್ಲಿ 243

ಇದನ್ನೂ ಓದಿ | Cyclone Mandous | ಶೀತಗಾಳಿ, ಮಳೆಯಿಂದಾಗಿ ಮಕ್ಕಳು, ವೃದ್ಧರಿಗೆ ತೊಂದರೆ; ಎಚ್ಚರ ವಹಿಸಲು ಆರೋಗ್ಯ ಸಚಿವರ ಸಲಹೆ

Exit mobile version